Saturday 20th, April 2024
canara news

ಮೌಢ್ಯ ಪ್ರಸಾರ ಮಾಡುವ ಚಾನೆಲ್ಲುಗಳು -ವಿಲ್ಸನ್, ಕಟೀಲ್

Published On : 31 Aug 2014


ಇಂದಿನ ಕಾಲದಲ್ಲಿ ಟಿ.ವಿ. ನೋಡದವರು ಯಾರೂ ಇಲ್ಲವೆಂದೇ ಹೇಳಬಹುದು. ಈ ನೋಡುಗರ ಪೈಕಿ ಹೆಚ್ಚಿನವರು ಆದ್ಯೆತೆ ನೀಡುವುದು ಮನರಂಜನೆಗಷ್ಟೆ. ಇದರಲ್ಲೇನೂ ತಕರಾರಿಲ್ಲ ಬಿಡಿ. ದಿನವಿಡೀ ಶ್ರಮ ಪಡುವವರಿಗೆ ಮನರಂಜನೆ ಬೇಕೇಬೇಕು. ಆದರೆ ಮನರಂಜನೆಯ ನೆಪದಲ್ಲಿ ಟಿ.ವಿ. ಚಾನೆಲ್ಲುಗಳಿಂದ ಜನರ ಮನಸ್ಸಲ್ಲಿ ಬಿತ್ತಲ್ಪಡುವ ಮೌಢ್ಯತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ.

ದಿನ ಬೆಳಗಾದರೆ ಜ್ಯೋತಿಶ್ಯ, ಸಂಖ್ಯಾಜ್ಯೋತಿಶ್ಯ, ದಿನಭವಿಶ್ಯ ಇವೇ ಮುಂತಾದ ಕಾರ್ಯಕ್ರಮಗಳ ಮೂಲಕ ಮೌಢ್ಯವು ಪ್ರಸಾರಗೊಳ್ಳಲು ಸಹಕರಿಸುವ ಚಾನೆಲ್ಲುಗಳು ದಿನವಿಡೀ ತಂತಮ್ಮ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಇದನ್ನೇ ಮುಂದುವರೆಸುತ್ತವೆ. ಕನ್ನಡ ಚಾನೆಲ್ಲುಗಳಲ್ಲಂತೂ ಇದರ ಬಾಧೆ ಹೇಳತೀರದು.

ಇಂತಹ ಹೆಚ್ಚಿನ ಅವೈಜ್ನಾನಿಕ ಕಾರ್ಯಕ್ರಮಗಳಲ್ಲಿ ವಿಜ್ನಾನದ ಹೆಸರನ್ನೂ ಅನೈತಿಕವಾಗಿ ಬಳಸಲಾಗುತ್ತದೆ. ತಮ್ಮ ಓಬಿರಾಯನ ಕಾಲದ ಮೌಢ್ಯವನ್ನು ಪ್ರಸಾರ ಮಾಡಲು ಅದ್ಯಾವನೋ ಒಬ್ಬ ಗುರೂಜಿ ಎಂದು ಕಾರ್ಯಕ್ರಮದ ನಿರ್ವಾಹಕರಿಂದ ಬಾಯಿತುಂಬ ಹೊಗಳಲ್ಪಡುವವನು ನಿನ್ನೆ ಮೊನ್ನೆಯಶ್ಟೇ ಖರೀದಿಸಿದ ಲ್ಯಾಪ್ ಟಾಪನ್ನು ಬಳಸಿದರೆ ಅವನು ವೈಜ್ನಾನಿಕ ಜ್ಯೋತಿಶಿಯೆ! ನಡುನಡುವೆ ಭೌತವಿಜ್ನಾನದ ಪದಪುಂಜಗಳನ್ನು ಬಳಸಿದರಂತೂ ಅವನು ವಿಜ್ನಾನಿಗೂ ಮಿಗಿಲಾದ ಜ್ಯೋತಿಶಿಯೆ!

ಕೆಲ ತಿಂಗಳ ಹಿಂದೆಯಶ್ಟೆ ಒಂದು ಕನ್ನಡ ಚಾನೆಲ್ಲು ಒಬ್ಬನ ತಲೆಗೆ ಕಾಗೆ ಕುಟುಕಿದ್ದನ್ನೇ ಚರ್ಚಾ ವಿಶಯವನ್ನಾಗಿಸಿ ಗಂಟೆಗಟ್ಟಲೆ ಕಾರ್ಯಕ್ರಮವನ್ನು ಭಿತ್ತರಿಸಿತ್ತು; ಅದೂ ಒಬ್ಬ "ವೈಜ್ನಾನಿಕ ಜ್ಯೋತಿಶಿ"ಯನ್ನು ಕರೆದು ಸ್ಟುಡಿಯೋದಲ್ಲಿ ಕುಳ್ಳಿರಿಸಿ. ಈ ಪುಣ್ಯಾತ್ಮ ಜ್ಯೋತಿಶಿ ಆ ಪಾಪದ ಕಾಗೆಗೆ ಅದ್ಯಾರದ್ದೋ ಸತ್ತು ಮಣ್ಣಲ್ಲಿ ಮಣ್ಣಾದವರ ಆತ್ಮಗಳನ್ನು ಆರೋಪಿಸಿ ಅದೇನೇನೋ ಪರಿಹಾರಗಳನ್ನು ಸೂಚಿಸಿದ. ಈವಯ್ಯನ ಮಾತುಗಳನ್ನು ಕೇಳಿ, ಅರ್ಥೈಸಿಕೊಳ್ಳುವ ಶಕ್ತಿ ಇದ್ದಿದ್ದರೆ ಆ ಬಡ ಕಾಗೆ ಎಲ್ಲಿಯಾದರೂ ಹೋಗಿ ಆತ್ಮಹತ್ಯೆ ಮಾಡುತ್ತಿತ್ತೋ ಏನೊ! ಇನ್ನೊಬ್ಬ ಸದಾ ಬೆಳಿಗ್ಗೆ ವಕ್ಕರಿಸುವ ಸಂಖ್ಯಾ ಜ್ಯೋತಿಶಿಯೊಬ್ಬ ತನ್ನೊಡನೆ ಹೆಚ್ಚಿನವರು ಹೇಳಿಕೊಳ್ಳುವ ಸಮಸ್ಯೆಗಳ ನಿವಾರಣೆಗೆ ಕಾಳುಗಳನ್ನು ನೆನೆಹಾಕಲು ಸಲಹೆ ಕೊಡುತ್ತಾನೆ! ಮೊನ್ನೆ ಮೊನ್ನೆಯಶ್ಟೆ ಯಾವನೋ ಒಬ್ಬ ಸತ್ತವನ ಆತ್ಮ ಮಂಗನ ದೇಹದಲ್ಲಿ ಸೇರಿಕೊಂಡು ಅದು ಅವನು ಕೆಲಸಕ್ಕಿದ್ದ ಹೋಟೆಲ್ಲಿಗೇ ಬಂದು ಆ ಸತ್ತವನಿಗೆ ಇಶ್ಟವಾದ ತಿಂಡಿಯನ್ನೇ ತಿನ್ನುತ್ತಿತ್ತಂತೆ! ಈ ಬಗ್ಗೆಯೂ ಚಾನೆಲ್ಲಿನಲ್ಲಿ ಅದೆಶ್ಟೋ ಹೊತ್ತು ಚರ್ಚೆಯಾಗಿತ್ತು! ಇನ್ನು ಕೆಲವು ತಿಂಗಳ ಹಿಂದೆ ಅಮಾಯಕರನ್ನು ಮಲಗಿಸಿ ಅದೇನೇನನ್ನೋ ಹೇಳಿ, ಅವರ ತಲೆ ತಿಂದು, ಅವರಿಗೆ ಕೆಲವು ಜನ್ಮಗಳ ಹಿಂದಕ್ಕೆ ಮಾನಸಿಕ ಪ್ರಯಾಣ ಬೆಳೆಸಿ ಆ ಜನ್ಮದಲ್ಲಿ ಹೇಗೆ ಸತ್ತನೆಂದು ಹೇಳುತ್ತಿದ್ದ ಗುರೂಜಿಯೊಬ್ಬ ಪ್ರಸ್ತುತ ಇಂದು ಇನ್ನೊಂದು ಚಾನೆಲ್ಲಿನಲ್ಲಿ ಮದ್ಯಾಹ್ನದ ಅಡುಗೆ ಹೇಳಿ ಕೊಡುತ್ತಿದ್ದಾನೆ!


ಈ ಬಗ್ಗೆ ಪ್ರಶ್ನಿಸಿದರೆ ಯಾರಾದರೂ "ನಿಮಗೆ ಇಶ್ಟವಿದ್ದರೆ ನೋಡಿ. ಇಲ್ಲದಿದ್ದರೆ ಬೇರೆ ಚಾನೆಲ್ಲು ನೋಡಿ" ಎಂದು ಈ ಮೌಢ್ಯಪ್ರಸಾರಗಳನ್ನು ಸಮರ್ಥಿಸಬಹುದು. ಆದರೆ ಹೀಗೆ ಕೇಳುವವರು ಒಂದು ವಿಷಯ ಗಮನದಲ್ಲಿಡಬೇಕು. ಇಂತಹ ಕಾರ್ಯಕ್ರಮಗಳು ಧಾರ್ಮಿಕ ಚಾನೆಲ್ಲುಗಳಲ್ಲೂ ಪ್ರಸಾರವಾಗುವುದಿಲ್ಲ; ಬದಲಾಗಿ ಇವು ಪ್ರಸಾರವಾಗುತ್ತಿರುವುದು ಕರ್ನಾಟಕದ ಪ್ರತಿಶ್ಟಿತ ನೀವ್ಸ್ ಚಾನೆಲ್ಲುಗಳಲ್ಲಿ. ಇದನ್ನು ಸಾಮಾಜಿಕ ಕಳಕಳಿ ಇರುವವರು ಪ್ರಶ್ನಿಸಲೇಬೇಕಾಗಿದೆ. ಜ್ಯೋತಿಶ್ಯ, ಭವಿಶ್ಯದ ನೆಪದಲ್ಲಿ ಈ ಚಾನೆಲ್ಲುಗಳು ಯಾರೋ ಹೇಳ ಹೆಸರಿಲ್ಲದವರನ್ನು ದಿನ ಬೆಳ್ಗಾಗುವುದರೊಳಗೆ ಇಡಿ ಬ್ರಹ್ಮಾಂಡವನ್ನರಿತ "ಗುರೂಜಿ" ಗಳೆಂಬ ಪಟ್ಟ ಕಟ್ಟಲಿಲ್ಲವೆ? ಈ ಮೂಲಕ ಅವರಿಗೆ ಪುಕ್ಸಟ್ಟೆ ಪ್ರಚಾರ ಕೊಟ್ಟು ಎದೆಷ್ಟೋ ಅಮಾಯಕರನ್ನು ನಂಬುವಂತೆ ಮಾಡಿ ಯಾಮಾರಿಸಲಿಲ್ಲವೆ? ಇವರು "ಮಹಾ ಗುರೂಜಿ" ಗಳೆಂದು ಬಿಂಬಿಸಿದವರಲ್ಲಿ ಕೆಲವರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ, ಸಿಕ್ಕಿಬಿದ್ದು ನಂಬಿದ ಭಕ್ತಾದಿಗಳಿಂದಲೇ ಮಂಗಳಾರತಿ ಮಾಡಿಸಲಿಲ್ಲವೆ? ಮೌಢ್ಯವನ್ನು ಪ್ರಸಾರ ಮಾಡುವುದರಲ್ಲಿ ಒಂದೊಂದು ಚಾನೆಲ್ಲಿಗೂ ಇಂತಹ ಒಬ್ಬೊಬ್ಬ "ಬ್ರಾಂಡ್ ಅಂಬಾಸ್ಸಿಡರ್" ಗುರೂಜಿ ಇದ್ದಾನೆ. ಹಾಗಿರುವಾಗ ಜನರು ಯಾರನ್ನೋ ನಂಬಿ ಮೂರ್ಖರಾಗುವುದರಲ್ಲಿ, ಯಾಮಾರಿಸಲ್ಪಡುವುದರಲ್ಲಿ ಚಾನೆಲ್ಲುಗಳ ಪಾತ್ರ ಕಿಂಚಿತ್ತೂ ಇಲ್ಲವೆ? ಖಂಡಿತವಾಗಿಯೂ ಇದೆ.

ಧಾರವಾಹಿಗಳಲ್ಲಂತೂ ಕಾಣದ ಶಕ್ತಿಗಳ ಕೈವಾಡ ಇನ್ನೂ ವಿಪರೀತ. ಕುಂಕುಮ ಚೆಲ್ಲುವುದು, ದೀಪ ಆರುವುದು ಇವೇ ಮುಂತಾದ ಅಪಶಖುನಗಳೆಂಬ ಓಬಿರಾಯನ ಕಾಲದ ಮೂಢನಂಬಿಕೆಗಳು ವಿಪರೀತವಾಗಿ ವಿಜ್ರಂಭಿಸುತ್ತಿರುತ್ತವೆ. ಕಾಣದ ಶಕ್ತಿಗಳ ಮೊರೆ ಹೋಗದೆ ಯಾವ ಪಾತ್ರಕ್ಕೂ ಇಲ್ಲಿ ಕಳೆದುಹೋದ ಪ್ರಜ್ನೆ ಮರುಕಳಿಸುವುದಿಲ್ಲ. ಅದೂ ಇಂತಹವನ್ನೇ ಎಪಿಸೋಡುಗಟ್ಟಲೆ ತೋರಿಸಿ ಪ್ರೇಕ್ಶಕರ ಕಣ್ಣಲ್ಲಿ ಕಾರಂಜಿ ಚಿಮ್ಮಿಸುತ್ತಾರೆ.

ಸ್ಪರ್ಧೆಗೆ ಬಿದ್ದಂತೆ ಇಂತಹ ಮೌಢ್ಯದ ಪ್ರಸಾರಕ್ಕಿಳಿವ ಚಾನೆಲ್ಲುಗಳು ಅದೆಶ್ಟು ವೈಜ್ನಾನಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ? ಇವರ ಕಾರ್ಯಕ್ರಮಗಳನ್ನು ನೋಡಿದರೆ ವಿಚಾರವಂತರು, ವಿಜ್ನಾನಿಗಳು ಈ ಚಾನೆಲ್ಲುಗಳನ್ನು ನೋಡುವುದೇ ಇಲ್ಲವೆಂದು ತಿಳಿದುಕೊಂಡ ಹಾಗಿದೆ. ಅಪರೂಪಕ್ಕೊಮ್ಮೆ ವೈಜ್ನಾನಿಕ ಚರ್ಚೆ ಏರ್ಪಡಿಸಿದರೂ ಆ ಚರ್ಚೆಯಲ್ಲಿ ಭಾಗವಹಿಸಲು ಆಮಂತ್ರಿತರಾಗುವುದು ಒಬ್ಬ ಅಥವಾ ಇಬ್ಬರು ವಿಚಾರವಂತರು. ಆದರೆ ಇವರನ್ನು ಮಾತಾಡಗೊಡದೆ ನಿರಂತರವಾಗಿ ಮಾತಿನ ಹಲ್ಲೆಗೈಯಲು ಐದಾರು ಮೌಢ್ಯ ಪ್ರಸಾರಕರಿರುತ್ತಾರಲ್ಲಿ.

ಮನುಷ್ಯನ ಅಸ್ತಿತ್ವವಾದವನ್ನೇ ನಿರಾಕರಿಸುವಂತಹ ಇಂತಹ ಕಾರ್ಯಕ್ರಮಗಳಿಂದ ಮನುಜ ಕುಲ ಉದ್ಧಾರವಾಗಬಲ್ಲುದೆ? ಉದ್ಧಾರವಾಗುವುದು ಬಿಡಿ, ಕನಿಷ್ಟ ಪಕ್ಷ ವಿದ್ಯಾವಂತರಾಗಬಲ್ಲುದೆ? ಜನಸಾಮಾನ್ಯರ ದೈನಂದಿನ ಬದುಕನ್ನೇ ನಿಯಂತ್ರಿಸುವ ಮಟ್ಟಕ್ಕಿಂದು ಟಿವಿ. ಮಾದ್ಯಮ ತಲುಪಿರುವಾಗ ಅವುಗಳಿಗೆ ಕಿಂಚಿತ್ತಾದರೂ ಸಾಮಾಜಿಕ ಜವಾಬ್ದಾರಿ ಬೇಡವೆ?

ದೂರವಾಣಿ, ದೂರದರ್ಶನ ಸೇರಿದಂತೆ ಅದೆಶ್ಟೋ ವೈಜ್ನಾನಿಕ ಸಂಶೋಧನೆಯ ಪ್ರತಿಫಲಗಳನ್ನು ಉಪಯೋಗಿಸಿ ವ್ಯವಸ್ಥಿತವಾಗಿ ಇಂದು ಮೌಢ್ಯ ಪ್ರಸಾರ ನಡೆಯುತ್ತಿದೆ. ವಿಜ್ನಾನದ ಈ ಕೊಡುಗೆಗಳು ವೈಜ್ನಾನಿಕ ಮನೋಧರ್ಮದ ಪ್ರಸಾರಕ್ಕೇ ಕಂಟಕ ಪ್ರಾಯವಾಗುತ್ತಿರುವುದು ದುರಂತವೇ ಸರಿ.

-ವಿಲ್ಸನ್, ಕಟೀಲ್




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here