Saturday 20th, April 2024
canara news

ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ನಾಲ್ವರು ಯುವಕರು ಸಮುದ್ರಪಾಲು

Published On : 15 Feb 2016   |  Reported By : Canaranews Network   |  Pic On: Photo credit : The Hindu


ಮಂಗಳೂರು: ಮಂಗಳೂರು ಹೊರವಲಯದ ಸೋಮೇಶ್ವರ ಸಮುದ್ರ ಕಿನಾರೆಗೆ ರವಿವಾರ ಅಪರಾಹ್ನ ವಿಹಾರಕ್ಕೆಂದು ಬಂದ ಹಾಸನ ಮೂಲದ ಆರು ಮಂದಿ ಸ್ನೇಹಿತರಲ್ಲಿ ನಾಲ್ವರು ಸಮುದ್ರಪಾಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ಹಾಸನ ಹುಣಸಿಕೆರೆ ರಸ್ತೆಯ ಮಿರ್ಜಾ ಮೊಹಲ್ಲಾದ 2ನೇ ಕ್ರಾಸ್‌ ನಿವಾಸಿಗಳಾದ ಇಮ್ರಾನ್‌ ಪಾಷಾ (19), ಮಹಮ್ಮದ್‌ ಶಿಯಾಬ್‌ (19), ಮಹಮ್ಮದ್‌ ಹನೀಫ್‌ (20), ಸಯ್ಯದ್‌ ಖಲೀಲ್‌ (19) ನೀರುಪಾಲಾದವರು. ಸಕಲೆಮ್‌ ಸಾಹಿಲ್‌ (18) ಮತ್ತು ಸಾದಿಕ್‌ ಪಾಷಾ (20) ಪಾರಾಗಿದ್ದಾರೆ. ಇವರೆಲ್ಲರೂ ಒಂದೇ ಮೊಹಲ್ಲಾದ ನಿವಾಸಿಗಳಾಗಿದ್ದು, ಬಾಲ್ಯಸ್ನೇಹಿತರಾಗಿದ್ದರು.ಸಮುದ್ರಪಾಲಾದವರ ಕುಟುಂಬಗಳಿಗೆ ಮಾಹಿತಿ ನೀಡಿದ್ದು, ಎಲ್ಲರ ಮನೆಯವರು ರವಿವಾರ ರಾತ್ರಿ ಹಾಸನದಿಂದ ಉಳ್ಳಾಲಕ್ಕೆ ಆಗಮಿಸಿದ್ದಾರೆ.

ಸಮುದ್ರ ಪಾಲಾದವರಲ್ಲಿ ಇಮ್ರಾನ್‌ ಪಾಷಾ ಹಾಸನದ ಯಮಾಹಾ ಶೋರೂಂನಲ್ಲಿ ಮೆಕ್ಯಾನಿಕ್‌ ಆಗಿ ಸೇವೆ ಸಲ್ಲಿಸುತ್ತಿದ್ದು ಏಕೈಕ ಪುತ್ರ, ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮಹಮ್ಮದ್‌ ಶಿಯಾಬ್‌ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದು ತಂದೆ, ತಾಯಿ, ಸಹೋದರ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮಹಮ್ಮದ್‌ ಹನೀಫ್‌ ಕಾರು ಮೆಕ್ಯಾನಿಕ್‌ ಆಗಿದ್ದು, ತಂದೆ, ತಾಯಿ, ಮೂವರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಖಲೀಲ್‌ ತರಕಾರಿ ಅಂಗಡಿಯಲ್ಲಿ ಮೇಲ್ವಿಚಾರಕನಾಗಿದ್ದು, ತಂದೆ, ತಾಯಿ, ಸಹೋದರ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ರವಿವಾರ ಸೋಮೇಶ್ವರ ಸಮುದ್ರ ತೀರಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಪಣಂಬೂರು ಬೀಚ್‌ ಅಭಿವೃದ್ಧಿ ಸಂಸ್ಥೆಯ ಜೀವರಕ್ಷಕ ಈಜುಗಾರ ಅಶೋಕ್‌ ನೇತೃತ್ವದ ತಂಡ ಸಮುದ್ರ ಕಾವಲು ನಡೆಸುವುದು ಸಾಮಾನ್ಯ. ಆದರೆ ಸೋಮೇಶ್ವರ ರುದ್ರಪಾದೆಯ ಬಳಿ ಹೆಚ್ಚು ಪ್ರವಾಸಿಗರು ಬರುವುದರಿಂದ ಅಲ್ಲೇ ಹೆಚ್ಚಿನ ರಕ್ಷಣಾ ಕಾರ್ಯ ನಡೆಸುತ್ತಿದ್ದರು. ಆದರೆ, ಈ ಪ್ರವಾಸಿಗರು ರುದ್ರಪಾದೆಯಿಂದ ಸುಮಾರು 200 ಮೀ. ದೂರದ ಸೋಮೇಶ್ವರ ಉಚ್ಚಿಲ ಬೀಚ್‌ ಬಳಿ ಸಮುದ್ರಕ್ಕೆ ಇಳಿದಿರುವುದು ಜೀವರಕ್ಷಕರ ತಂಡದ ಅರಿವಿಗೆ ಬಂದಿರಲಿಲ್ಲ.

ಕಮಿಷನರ್‌ ಭೇಟಿ
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಚಂದ್ರಶೇಖರ್‌ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಎಸಿಪಿ ಕಲ್ಯಾಣ್‌ ಶೆಟ್ಟಿ, ಎಸ್‌ಐಧಿಗಳಾದ ಭಾರತಿ, ರಾಜೇಂದ್ರ ಸ್ಥಳದಲ್ಲಿದ್ದು, ಸ್ಥಳೀಯರಾದ ಅಶೋಕ್‌ ನೇತೃತ್ವದಲ್ಲಿ ಮೋಹನ್‌, ದಿನೇಶ್‌, ಉಮಾನಾಥ್‌, ಸುಜಿತ್‌ ಸೇರಿದಂತೆ ಈಜುಗಾರರ ತಂಡ, ಕೋಸ್ಟ್‌ಗಾರ್ಡ್‌ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here