Friday 29th, March 2024
canara news

ದ.ಕ. ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಗ್ರಾಹಕ ಜಾಗೃತಿ ಕುರಿತು ತರಬೇತಿ

Published On : 13 Mar 2016


ದ.ಕ.ಜಿಲ್ಲಾ ಆಡಳಿತ, ಜಿಲ್ಲಾ ತರಬೇತಿ ಸಂಸ್ಥೆ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ಮಾಹಿತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಮಾಹಿತಿ ಕೇಂದ್ರದ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿಯನ್ನು ಮಂಗಳೂರು ಕುಲಶೇಖರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಆಶಾ ಶೆಟ್ಟಿಯವರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಬಹಳ ಪುಣ್ಯದಿಂದ ಲಭಿಸಿದ ನೌಕರಿಯಲ್ಲಿ ಸಾಮಾನ್ಯನಿಗೆ ಸಾಧ್ಯವಿದ್ದಷ್ಟು ಸಹಾಯ ಮಾಡುವ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು. ಗ್ರಾಹಕರೇ ನಮ್ಮ ಸಂಪತ್ತು, ಆತನಿಲ್ಲದಿದ್ದಲ್ಲಿ ನಾವೂ ಇರಲಾರೆವು. ಆದ್ದರಿಂದ ಯಾರೂ ಪ್ರಶ್ನೆ ಮಾಡದ ಹಂತಕ್ಕೆ ನಮ್ಮ ಸೇವೆ ಬೆಳೆಯ ಬೇಕು ಎಂದು ಎಲ್ಲ ಅಧಿಕಾರಿಗಳಲ್ಲಿ ಕೇಳಿಕೊಂಡರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಜೆ.ಸಾಲಿಯಾನ್‍ರವರು ಮಾತನಾಡಿ ಒಕ್ಕೂಟವು 60 ಶಾಲೆಗಳಲ್ಲಿ ವಿದ್ಯಾರ್ಥಿ ಗ್ರಾಹಕ ಕ್ಲಬ್‍ಗಳನ್ನು ನಡೆಸುತ್ತಾ, 5 ಕಾಲೇಜಿನ ವಿದ್ಯಾರ್ಥಿಗಳಿಗೆ ಬಹಳ ಯೋಗ್ಯ ರೀತಿಯಲ್ಲಿ ವಿಶ್ವ ವಿದ್ಯಾಲಯ ಮಟ್ಟಕ್ಕೆ ಅನುಸಾರವಾಗಿ ಗ್ರಾಹಕ ಸರ್ಟಿಫಿಕೇಟ್ ಕೋರ್ಸನ್ನು ನಡೆಸುತ್ತಿದೆ. ಅಲ್ಲದೆ ಹಲವಾರು ಕಾರ್ಯಕ್ರಮಗಳ ಮೂಲಕ ಸ್ರ್ತೀಶಕ್ತಿ ಗುಂಪು, ನಾಗರಿಕರು, ಹೆತ್ತವರಿಗೆ ಗ್ರಾಹಕ ಜಾಗೃತಿಯನ್ನು ಉಂಟು ಮಾಡುತ್ತಿದ್ದೇವೆ ಎಂದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಶ್ರೀಮತಿ ಪ್ರಮೀಳಾ ಎನ. ಕೆ. ಅಧ್ಯಕ್ಷತೆ ವಹಿಸಿದ್ದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಡಾ| ದಾಸೇಗೌಡರವರು ಸ್ವಾಗತಿಸಿದರು. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಜತೆ ಕಾರ್ಯದರ್ಶಿ ರಾಯೀ ರಾಜಕುಮಾರರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ವಿಷ್ಣು ನಾಯಕ್ ವಂದಿಸಿದರು.

ತರುವಾಯ ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಆರು ಉಪನ್ಯಾಸಗಳು ಮೂಡಿಬಂದವು. ಮಂಗಳೂರು ಡೀಡ್ಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ತುಕಾರಾಮ ಎಕ್ಕಾರುರವರು ಮಾಹಿತಿ ಹಕ್ಕುಗಳ ಬಗೆಗೆ ಸವಿವರ ಪ್ರಸ್ತುತ ಪಡಿಸಿದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗೆಗೆ ಜಿಲ್ಲಾ ಅಂಕಿತ ಅಧಿಕಾರಿ ಡಾ| ರಾಜು, ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯದ ಪ್ರಕಾಶ್ ಚೌಹಾಣ್‍ರವರು ಮಾಹಿತಿ ಇತ್ತರು. ಮಂಗಳೂರು ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಉಪನ್ಯಾಸಕ ಅಶೋಕ್‍ಕಾಮತ್‍ರವರು ಸಕಾಲದ ಮಾಹಿತಿ ನೀಡಿದರು. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಜತೆ ಕಾರ್ಯದರ್ಶಿ ರಾಯೀ ರಾಜಕುಮಾರರು ಗ್ರಾಹಕ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಫಲಕಯುಕ್ತ ಸಂಪೂರ್ಣ ವಿವರಣೆಯನ್ನು ಪ್ರಸ್ತುತ ಪಡಿಸಿದರು. ಕಾರ್ಯದರ್ಶಿ ವಿಷ್ಣು ನಾಯಕ್‍ರವರು ಗ್ರಾಹಕ ವೇದಿಕೆಗಳ ಕಾರ್ಯ, ಶಾಲಾ ಗ್ರಾಹಕಕ್ಲಬ್ ಗಳ ನಿರ್ವಹಣೆಯ ಮಾಹಿತಿ ನೀಡಿದರು. ಕೊನೇಯಲ್ಲಿ ಜಿಲ್ಲಾ ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ತಿಮ್ಮರಾಯಪ್ಪರವರು ತೂಕ ಮತ್ತು ಅಳತೆಯಲ್ಲಿ ನಡೆಯುವ ಮೋಸದ ವಿವರಣೆಯನ್ನು ನೀಡಿದರು.

ಜಿಲ್ಲೆಯ ವಿವಿಧ ಇಲಾಖೆಗಳ ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿ ಗ್ರಾಹಕನಿಗೆ ಉತ್ತಮರೀತಿಯಲ್ಲಿ ಹೇಗೆ ಸೇವೆ ನೀಡಲು ಸಾದ್ಯವಿದೆ ಎನ್ನುವುದರ ಬಗೆಗೆ ಮಾಹಿತಿಯನ್ನು ಪಡೆದುಕೊಂಡರು. ಮಾತ್ರವಲ್ಲ ಇಂತಹ ಕಾರ್ಯಕ್ರಮಗಳಿಂದ ಅಧಿಕಾರಿಗಳು, ಸಿಬ್ಬಂದಿಗಳು ಸಾಕಷ್ಟು ತಿಳಿದುಕೊಳ್ಳಲು ಸಾಧ್ಯವಿದೆ. ಎಲ್ಲಾ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ ಈ ರೀತಿಯ ಮಾಹಿತಿ ದೊರಕಿದರೆ ಹೆಚ್ಚಿನ ಪ್ರಯೋಜನ ಜನರಿಗೂ, ತರಬೇತಿದಾರರಿಗೂ ಸಿಗಲು ಸಾಧ್ಯ ಎಂದು ತಮ್ಮ ಅಭಿಪ್ರಾಯವನ್ನುತರಬೇತಿ ಪಡೆದವರು ಹೇಳುತ್ತಿದ್ದರು. ಅಂತೂ ಆಹಾರ ಇಲಾಖೆಯ ಶ್ರಮ ಸಾರ್ಥಕವಾಗಿತ್ತು.

ಲೇಖನ :ರಾಯೀ ರಾಜಕುಮಾರ, ಮೂಡುಬಿದಿರೆ

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here