Saturday 20th, April 2024
canara news

ಗಂಗೊಳ್ಳಿ ಕುಂದಾಪುರ ಸೇತುವೆ ನಿರ್ಮಾಣ; ಒಗ್ಗಟ್ಟಿನಿಂದ ಹೋರಾಟ ನಡೆಸಲು ನಿರ್ಣಯ

Published On : 28 Mar 2016   |  Reported By : Bernard J Costa


ಗಂಗೊಳ್ಳಿ ಕುಂದಾಪುರದ ನಡುವೆ ಪಂಚಗಂಗಾವಳಿ ನದಿಗೆ ಸೇತುವೆ ನಿರ್ಮಾಣಗೊಂಡರೆ ಕರಾವಳಿಯ ಈ ಭಾಗದ ಲಕ್ಷಾಂತರ ಮಂದಿಗೆ ಅನುಕೂಲವಾಗುವುದಲ್ಲದೇ ಕೋಟ್ಯಾಂತರ ರೂಪಾಯಿ ಉಳಿತಾಯವಾಗುತ್ತದೆ, ಉದ್ಯಮ, ವ್ಯವಹಾರದಲ್ಲೂ ಪ್ರಗತಿಯಾಗುತ್ತದೆ, ಹಲವು ಗ್ರಾಮಗಳ ಅಭಿವೃದ್ಧಿಗೂ ಕಾರಣವಾಗುತ್ತದೆ. ಹಾಗಾಗಿ ಈ ಸೇತುವೆ ನಿರ್ಮಾಣಕ್ಕಾಗಿ ಎಲ್ಲರ ಸಹಕಾರ ಪಡೆದು ಹೋರಾಟ ನಡೆಸೋಣ ಎಂದು ಗಂಗೊಳ್ಳಿಯಲ್ಲಿ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ದಿನಾಂಕ 6 ರಂದು ಗಂಗೊಳ್ಳಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ನೀಡುವುದು ಸೇರಿದಂತೆ ಮುಂದೆ ಈ ಬಗ್ಗೆ ನಿರ್ವಹಿಸಬೇಕಾದ ಜವಾಬ್ದಾರಿಗಾಗಿ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕುಂದಾಪುರ ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಹಿರಿಯ ಪತ್ರಕರ್ತ ಎಸ್.ಜನಾರ್ಧನ್, ಜಿ.ಪಂ.ಸದಸ್ಯೆ ಶೋಭಾ ಜಿ.ಪುತ್ರನ್, ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ರೇಶ್ಮಾ ಆರ್ ಖಾರ್ವಿ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ಟಾ, ದುರ್ಗರಾಜ್ ಪೂಜಾರಿ, ಗ್ರಾ.ಪಂ.ಸದಸ್ಯ ಯೂನಸ್ ಸಾಹೇಬ್ ಮಾತನಾಡಿ ಗಂಗೊಳ್ಳಿ ಹಾಗೂ ಪರಿಸರ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಈ ಸೇತುವೆ ಆಗಲೇಬೇಕಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕುಂದಾಪುರ ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ ಕುಂದಾಪುರ ಪುರಸಭೆಯಿಂದ ಈ ಯೋಜನೆ ಮಂಜೂರಾತಿಗಾಗಿ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ಈ ಯೋಜನೆ ಕಾರ್ಯಗತ ಮಾಡುವುದು ಅಷ್ಟು ಸುಲಭವಲ್ಲ, ಇದಕ್ಕಾಗಿ ವಿಧಾನಸೌಧದಲ್ಲೂ, ಗಂಗೊಳ್ಳಿ ಕುಂದಾಪುರದಲ್ಲೂ ಬಹಳಷ್ಟು ಹೋರಾಟ ನಡೆಸಬೇಕಾಗುತ್ತದೆ. ಶಾಸಕರ, ಸಂಸದರ ಸಹಕಾರ ಪಡೆದು ನಿರಂತರ ಬೆನ್ನು ಹತ್ತಬೇಕಾಗುತ್ತದೆ. ಈ ಬಗ್ಗೆ ಕೆಲಸ ಮಾಡುವವರಿಗೆ ಎಲ್ಲಾ ನಾಗರಿಕರ ಸಂಪೂರ್ಣ ಬೆಂಬಲ ಅಗತ್ಯವಿದೆ ಎಂದರು.

ಗಂಗೊಳ್ಳಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ನಾಗಖಾರ್ವಿ, ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್, ಆನಂದ, ಸತೀಶ್ ಜಿ ಸಾರ್ವಜನಿಕರ ಪರವಾಗಿ ಮಾತನಾಡಿ ತಮ್ಮ ಬೆಂಬಲ ವ್ಯಕ್ತಪಡಿ ಸಿದರು. ಗುತ್ತಿಗೆದಾರ ಜಿ.ಡಿ.ರಾಘವೇಂದ್ರ ತಾಂತ್ರಿಕ ಮಾಹಿತಿ ನೀಡಿದರು.

ವಿಜಯಖಾರ್ವಿ ಪ್ರಾರ್ಥಿಸಿದರು. ಕುಂದಾಪುರ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್‍ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಸ್ವಾಗತಿಸಿದರು. ‘ಕುಂದಪ್ರಭ’ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ ಗುರುಜ್ಯೋತಿ ಸ್ಪೋರ್ಟ್‍ಕ್ಲಬ್‍ನ ಅಧ್ಯಕ್ಷ ರಾಘವೇಂದ್ರ ಖಾರ್ವಿ , ಸಂಚಾಲಕ ಲೋಕೇಶ್ ಖಾರ್ವಿಅತಿಥಿಗಳನ್ನು ಗೌರವಿಸಿದರು. ಗುರುಜ್ಯೋತಿಯ ಸೂರ್ಯಕಾಂತ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಶಾಲೆಟ್ ಲೋಬೋ ವಂದಿಸಿದರು.

ವರದಿ, ಸಮೀಕ್ಷೆ ಉತ್ತಮವಾಗಿರಬೇಕು
ಗಂಗೊಳ್ಳಿ -ಕುಂದಾಪುರ ಸೇತುವೆ ನಿರ್ಮಾಣದಲ್ಲಿ ಮುಖ್ಯವಾಗಿ ನಾವು ನೀಡುವ ವರದಿ, ಸಮೀಕ್ಷೆ ಉತ್ತಮವಾಗಿರಬೇಕು. ಎಷ್ಟು ಜನರಿಗೆ ಇದರಿಂದ ಉಪಯೋಗ, ಎಷ್ಟು ಇಂಧನ ಉಳಿತಾಯ, ಭವಿಷ್ಯದಲ್ಲಿ ಇದರಿಂದಾಗಿ ಪ್ರಯೋಜವೇನು ಮುಂತಾದ ವಿವರ ನೀಡಬೇಕು. ಲೋಕೋಪಯೋಗಿ ಇಲಾಖೆಯವರಿಗೆ ಸಮೀಕ್ಷೆ ನಡೆಸಿ, ಶಿಫಾರಸು ಮಾಡಲು ಸರಕಾರ ಒಪ್ಪಿಗೆ, ಆದೇಶ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕದಲ್ಲಿರಬೇಕು.- ಜಿ.ಡಿ.ರಾಘವೇಂದ್ರ, ಗುತ್ತಿಗೆದಾರರು


ಗಂಗೊಳ್ಳಿ ವೈಭವ ಮರುಕಳಿಸಲಿ
ಗಂಗೊಳ್ಳಿ ಇತಿಹಾಸದ ಪ್ರಸಿದ್ಧ ಪ್ರದೇಶ, ಪ್ರಾಕೃತಿಕವಾಗಿ ಸುಂದರವಾಗಿರುವುದು ಮಾತ್ರವಲ್ಲ ಉದ್ಯಮ, ವ್ಯವಹಾರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ವೈಭವ ಹೊಂದಿತ್ತು. ಈ ವೈಭವ ಮರುಕಳಿಸುವಂತೆ ಮಾಡಲು ಗಂಗೊಳ್ಳಿ ಕುಂದಾಪುರ ಸೇತುವೆ ನಿರ್ಮಾಣ ಅಗತ್ಯವಿದೆ. ವ್ಯವಹಾರ ಅಭಿವೃದ್ಧಿ, ಉಳಿತಾಯ, ಉದ್ಯೋಗ ಸೃಷ್ಟಿ ಎಲ್ಲ ದೃಷ್ಟಿಯಲ್ಲೂ ಇದು ಕರಾವಳಿಯಲ್ಲಿ ಬದಲಾವಣೆ ತರಲಿದೆ. ಈ ಕನಸು ನನಸಾಗಿಸಲು ಶಾಸಕರ, ಸಂಸದರ, ಸಚಿವರ ಅಧಿಕಾರಿಗಳ ಸಹಕಾರ ಬೇಕು. – ಯು.ಎಸ್.ಶೆಣೈ , ಅಧ್ಯಕ್ಷರು, ಹೋರಾಟ ಸಮಿತಿ

ಹೋರಾಟ ಉನ್ನತ ಮಟ್ಟದ್ದಾಗಿರಬೇಕು
ಗಂಗೊಳ್ಳಿ ಕುಂದಾಪುರ ಬಾಂಧÀವ್ಯ ಇಂದು ನಿನ್ನೆಯದಲ್ಲ. ಎರಡೂ ಪ್ರದೇಶಗಳ ನಾಗರಿಕರು ವ್ಯಾವಹಾರಿಕ, ಸಾಂಸ್ಕøತಿಕ ಎಲ್ಲಾ ದೃಷ್ಟಿಯಲ್ಲೂ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ. ಈ ಬಾಂಧವ್ಯಕ್ಕೆ ಹೆಚ್ಚು ಶಕ್ತಿ ಬರಲು ಗಂಗೊಳ್ಳಿ -ಕುಂದಾಪುರ ಸೇತುವೆ ನಿರ್ಮಾಣ ಅಗತ್ಯವಾಗಿದೆ. ಆದರೆ ಇದು ಸುಲಭವಾಗಿ ಆಗುವುದಿಲ್ಲ. ಮನವಿ ಕೊಟ್ಟರೆ ಕೆಲಸ ಆಗುವುದಿಲ್ಲ. ಇಲ್ಲ ಬಗೆಯ ಹೋರಾಟ ಸಂಘಟಿಸಬೇಕಾಗುತ್ತದೆ. ಹೋರಾಟ ಉನ್ನತ ಮಟ್ಟದ್ದಾಗಿರಬೇಕು, ಎಲ್ಲಾ ನಾಗರಿಕರು ಹೋರಾಟಕ್ಕೆ ಒಮ್ಮತದಿಂದ ಸ್ಪಂದಿಸಬೇಕು- ರಾಜೇಶ್ ಕಾವೇರಿ




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here