Friday 29th, March 2024
canara news

ಮಂಗಳೂರು-ಬೆಂಗಳೂರು ಗ್ಯಾಸ್‌ ಪೈಪ್‌ಲೈನ್‌ ನವೆಂಬರ್‌ನಲ್ಲಿ ಪೂರ್ಣ

Published On : 27 Apr 2016   |  Reported By : Canaranews Network


ಮಂಗಳೂರು: ಮಂಗಳೂರು -ಹಾಸನ-ಮೈಸೂರು-ಸೋಲೂರು ದ್ರವೀಕೃತ ಪೆಟ್ರೋಲಿಯಂ ಅನಿಲ ಕೊಳವೆ ಯೋಜನೆ ಕಾಮಗಾರಿ ವೇಗ ಪಡೆಯುತ್ತಿದ್ದು, ಮುಂದಿನ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. 2017-18ರಿಂದ ಬೆಂಗಳೂರಿಗೆ ಪೈಪ್‌ಲೈನ್‌ ಮೂಲಕ ಗ್ಯಾಸ್‌ ಪೂರೈಕೆಯಾಗುವ ನಿರೀಕ್ಷೆ ಇದೆ.

ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ. (ಎಚ್‌ಪಿಸಿಎಲ್‌) ಈ ಮಹತ್ವದ ಯೋಜನೆ ಹಮ್ಮಿಕೊಂಡಿದೆ.

397 ಕಿ.ಮೀ. ಉದ್ದದ ಗ್ಯಾಸ್‌ ಪೈಪ್‌ಲೈನ್‌ ಮಂಗಳೂರು-ನೆರಿಯ-ಹಾಸನ, ಹಾಸನ-ಯಡಿಯೂರು, ಯಡಿಯೂರು-ಸೋಲೂರು ಹಾಗೂ ಹಾಸನ-ಮೈಸೂರು ವರೆಗೆ ಸಾಗಲಿದೆ. ಮಂಗಳೂರಿನಿಂದ ನೆರಿಯಾ ವರೆಗೆ ಪೈಪ್‌ಲೈನ್‌ ಅಳವಡಿಕೆ ಪೂರ್ಣವಾಗಿದ್ದು, ನೆರಿಯದಲ್ಲಿ ಪಂಪಿಂಗ್‌ ಕೇಂದ್ರ ನಿರ್ಮಾಣ ಕೊನೆ ಹಂತದಲ್ಲಿದೆ. ನೆರಿಯಾದಿಂದ ಹಾಸನ, ಹಾಸನದಿಂದ ಸೋಲೂರು ವರೆಗಿನ ಕಾಮಗಾರಿಯೂ ಬಹುತೇಕ ಅಂತಿಮ ಹಂತದಲ್ಲಿದೆ.

ಈ ಯೋಜನೆ ಪೈಪ್‌ಲೈನ್‌ ಅಳವಡಿಕೆಗೆ ಪಶ್ಚಿಮಘಟ್ಟದಲ್ಲಿ ಅರಣ್ಯ ಇಲಾಖೆಯಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆಯಿಂದ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯೂ ಯೋಜನೆಗೆ ಶರತ್ತಿನ ಒಪ್ಪಿಗೆ ನೀಡಿರುವುದರಿಂದ ಕಾಮಗಾರಿ ವೇಗ ಪಡೆದಿದೆ.

ಯಾವುದೇ ನೂತನ ಕೊಳವೆ ಮಾರ್ಗದ ಅಳವಡಿಕೆ ಸಂದರ್ಭ 18 ಮೀ. ಅಗಲದ ಭೂಮಿ ಅವಶ್ಯಕತೆ ಇರುತ್ತದೆ. ಪೆಟ್ರೋನೆಟ್‌ ಕೊಳವೆ ಮಾರ್ಗಕ್ಕೆ ಈಗಾಗಲೇ ಈ ಮಾರ್ಗದಲ್ಲಿ 18 ಮೀ. ಅಗಲಕ್ಕೆ ಭೂ ಬಳಕೆಯ ಹಕ್ಕು ಲಭ್ಯವಿದ್ದ ಹಿನ್ನೆಲೆಯಲ್ಲಿ ಇದರ ಪಕ್ಕದಲ್ಲಿ ಕೊಳವೆ ಮಾರ್ಗಕ್ಕೆ ಹೆಚ್ಚುವರಿಯಾಗಿ ಕನಿಷ್ಠ 6 ಮೀ. ಅಗಲದ ಭೂಮಿ ಬಳಸಲಾಗಿದೆ.

ಭದ್ರತೆಗೆ ಹೆಚ್ಚಿನ ಒತ್ತು
ಸಂಪೂರ್ಣ ವಿಸ್ತರಣೆಯ ಕೊಳವೆಯನ್ನು ಕನಿಷ್ಠ 1.2 ಮೀ. ಆಳ ಭೂಗತ ಮಾಡಿ ಹಾಕಲಾಗಿದೆ. ಪೈಪ್‌ಲೈನ್‌ನನ್ನು 1.25 ಬಾರಿ ವಿನ್ಯಾಸ ಒತ್ತಡದಲ್ಲಿ ದ್ರವಸ್ಥಿತಿ ಪರೀಕ್ಷೆ ಮಾಡಲಾಗುತ್ತದೆ. ಜಿಪಿಎಸ್‌ ಆಧಾರದ ಮೂಲಕ ಪೈಪ್‌ಲೈನ್‌ ತಪಾಸಣೆ ಮಾಡಲಾಗುತ್ತದೆ. ಎಲ್ಲ ಪ್ರಮುಖ ನದಿ ದಾಟುವಿಕೆಗಳಲ್ಲಿ ಹೆಚ್ಚಿನ ದಪ್ಪದ ಹಾಗೂ ಕಾಂಕ್ರೀಟ್‌ ಕೋಟೆಡ್‌ ಪೈಪ್ಸ್‌ ಬಳಸಲ್ಪಡುತ್ತದೆ. ಪೈಪ್‌ಲೈನ್‌ ಸಂಪೂರ್ಣವಾಗಿ ಮೂರು ಪದರ ಆವರಿಸಿದ ಪಿಇ ಕೋಟಿಂಗ್‌ನಿಂದ ಕೂಡಿರುತ್ತದೆ. ಇದರಿಂದ ತುಕ್ಕು ಹಿಡಿಯುವಿಕೆಯಿಂದ ರಕ್ಷಣೆ ಸಿಗಲಿದೆ. ಹೆಚ್ಚುವರಿ ಮಾಧ್ಯಮವಾಗಿ ಕೆಥೊಡಿಕ್‌ ಪ್ರೊಟೆಕ್ಷನ್‌ ಕೂಡ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here