Thursday 18th, April 2024
canara news

ಥಳಿಸಿ ಕೊಲೆ ಮಾಡಿದ ಪ್ರಕರಣ : ಆರೋಪಿಗೆ ನಾಲ್ಕು ವರ್ಷ ಸಜೆ

Published On : 09 Jun 2016   |  Reported By : Canaranews Network


ಮಂಗಳೂರು: ಸಾಕು ನಾಯಿಗಳ ಕುರಿತು ನಡೆದ ಜಗಳದಲ್ಲಿ ನಾಯಿಯ ಮಾಲಕನನ್ನು ತೀವ್ರವಾಗಿ ಥಳಿಸಿ ಕೊಲೆ ಮಾಡಿದ ಆರೋಪಿಗೆ ಮಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ 30,000 ರೂ. ದಂಡ ವಿಧಿಸಿದೆ. ಮಂಗಳೂರಿನ ಶಕ್ತಿನಗರದ ರಾಜೀವ ನಗರ ಆಶ್ರಯ ಕಾಲನಿಯ ನಿವಾಸಿ ಗಣೇಶ ( 34) ಶಿಕ್ಷೆಗೊಳಗಾದ ಅಪರಾಧಿ. ನಾಯಿಯ ಮಾಲಕ ನರಸಿಂಹ (65) ಅವರನ್ನು ಆತ ಕಬ್ಬಿಣದ ಸರಳಿನಿಂದ ಥಳಿಸಿ ಹತ್ಯೆ ಮಾಡಿದ್ದ.ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾಗಿದ್ದ ಆತನ ತಾಯಿ ಶಾಂತಮ್ಮ ( 58 ) ಅವರನ್ನು ಸಾಕ್ಷಾÂಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದ ವಿವರ
ಆರೋಪಿ ಗಣೇಶ ಹಾಗೂ ನರಸಿಂಹ ಅವರು ಶಕ್ತಿನಗರದ ರಾಜೀವ ನಗರ ಆಶ್ರಯ ಕಾಲನಿಯ ನಿವಾಸಿಗಳಾಗಿದ್ದು ಅಕ್ಕಪಕ್ಕದ ಮನೆಯವರು. ನರಸಿಂಹ ಅವರು ನಾಯಿಗಳನ್ನು ಸಾಕುತ್ತಿದ್ದು ತಮ್ಮ ಮನೆಯ ಎದುರಿನ ಮಾರ್ಗದಲ್ಲಿ ಮಲಮೂತ್ರ ಮಾಡಿಸುತ್ತಿದ್ದಾರೆ ಎಂಬ ಬಗ್ಗೆ ಗಣೇಶನಿಗೆ ಅವರ ಮೇಲೆ ದ್ವೇಷವಿತ್ತು. 2012ರ ಜನವರಿ 18 ರಂದು ರಾತ್ರಿ ಸುಮಾರು 10.20ರ ವೇಳೆಗೆ ನರಸಿಂಹ ಅವರ ಪತ್ನಿ ಮೀನಾಕ್ಷಿ ಅವರು ಎಂದಿನಂತೆ ನಾಯಿಗಳನ್ನು ಮೂತ್ರ ವಿಸರ್ಜನೆಗೆ ಕರೆದುಕೊಂಡು ಹೋದಾಗ ಗಣೇಶ ಹಾಗೂ ಶಾಂತಮ್ಮ ಅವರು ಕಲ್ಲು ಎಸೆದು ನೀರು ಎರಚಿದರು. ಅವರ ಗಲಾಟೆ ಕೇಳಿ ಅಲ್ಲಿಗೆ ಬಂದ ನರಸಿಂಹ ಜತೆ ಜಗಳಕ್ಕಿಳಿದ ಗಣೇಶ. ಬಳಿಕ ಅವರನ್ನು ದೂಡಿ ಹಾಕಿ ಕಬ್ಬಿಣದ ರಾಡ್ನಿಂದ ಎದೆ ಹಾಗೂ ಹೊಟ್ಟೆಗೆ ಗಂಭೀರ ಹಲ್ಲೆ ನಡೆಸಿದ್ದು ಶಾಂತಮ್ಮ ಕೂಡಾ ಭಾಗಿಯಾಗಿದ್ದರು. ಹಲ್ಲೆಯಿಂದ ತೀವ್ರಗಾಯಗೊಂಡ ನರಸಿಂಹ ಮೃತಪಟ್ಟಿದ್ದರು.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಗ ಪೊಲೀಸ್ ಉಪನಿರೀಕ್ಷಕ ರಾಗಿದ್ದ ಮುನಿಸ್ವಾಮಿ ನೀಲಕಂಠ ಪೊಲೀಸ್ ನಿರೀಕ್ಷಕರಾಗಿದ್ದ ರವೀಶ್ ಎಸ್. ನಾಯಕ್ ಅವರು ಪ್ರಕರಣ ತನಿಖೆ ನಡೆಸಿ ಗಣೇಶ್ ಹಾಗೂ ಶಾಂತಮ್ಮ ಅವರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ. ಜೋಶಿ ಅವರು ಆರೋಪ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ಆರೋಪಿಗೆ ಐಪಿಸಿ ಕಲಂ 304/2ರ ಅನ್ವಯ 4 ವರ್ಷ ಕಠಿನ ಸಜೆ , 30,000 ರೂ.ದಂಡ, ದಂಡ ತರಲು ತಪ್ಪಿದಲ್ಲಿ 9 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಆತ 2012ರ ಜ.19 ರಿಂದ ಜೂ.20 ರವರೆಗೆ ಅರೋಪಿಯು ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯನ್ನು ಶಿಕ್ಷೆಯ ಅವಧಿಯಲ್ಲಿ ಕಡಿತಗೊಳಿಸಲಾಗಿದೆ.

ಕಲಂ 357ರ ಪ್ರಕಾರ ಆಪರಾಧಿಗೆ ವಿಧಿಸಿದ ದಂಡದ ಮೊತ್ತದಲ್ಲಿ 25 ಸಾವಿರ ರೂ. ಮೃತ ನರಸಿಂಹ ಅವರ ಪತ್ನಿ ಮೀನಾಕ್ಷಿ ಅವರಿಗೆ ನೀಡಬೇಕು , ಕಲಂ 357 ಎ( 2) ಪ್ರಕಾರ ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ಪಡೆಯಲು ಪತ್ನಿ ಅರ್ಹರು ಎಂದು ತೀರ್ಪಿನಲ್ಲಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಪುಷ್ಪರಾಜ ಅಡ್ಯಂತಾಯ ಹಾಗೂ ರಾಜು ಪೂಜಾರಿ ವಾದಿಸಿದ್ದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here