Thursday 25th, April 2024
canara news

ಮತ್ತೆ ತವರೂರ ಗದ್ದೆಯಲ್ಲಿ ಕೃಷಿಗಿಳಿದ ಹರೀಶ್ ಶೆಟ್ಟಿ ಎರ್ಮಾಳು

Published On : 05 Jul 2016   |  Reported By : Rons Bantwal


ಮುಂಬಯಿ, ಜುಲೈ 05 : ಕೃಷಿ ಯಾವಾಗಲೂ ಪ್ರಕೃತಿಯನ್ನು ಮತ್ತು ಕೃಷಿ ಕಾರ್ಮಿಕರನ್ನು ನಂಬಿ ನಡೆಯುವಂತದ್ದು. ಪ್ರಕೃತಿ ಎಂದೂ ಕೈ ಕೊಟ್ಟಿಲ್ಲ. ಆದರೆ ರೈತ ನಿರಾಸಕ್ತನಾಗಿದ್ದಾನೆ. ಕೃಷಿ ಕಾರ್ಮಿಕರ ಸಂಖ್ಯೆ ವಿರಳವಾಗುತ್ತಿದೆ. ಹಾಗಾಗಿ ಕೃಷಿ ಲಾಭದಾಯಕವಲ್ಲ ಎಂದು ಪರಿಗಣಿಸಿ ಅವಗಣಿಸಲ್ಪಟ್ಟಿದ್ದು ಕರಾವಳಿಯಲ್ಲಿ ಕೃಷಿ ಕ್ಷೀಣಿಸುತ್ತಿದೆ. ಇಂತಹ ಕಾಲಕ್ಕೆ ಯಾವುದೇ ವಿಧದಲ್ಲಾದರೂ ಕೃಷಿಗೆ ಮರು ಜೀವ ತುಂಬ ಬೇಕಾದ ಅವಶ್ಯಕತೆ ಬಹಳಷ್ಟಿದೆ. ಆ ನಿಟ್ಟಿನಲ್ಲಿ ಮುಂಬೈ ಮಹಾನಗರಿಯ ಹೋಟೇಲು ಉದ್ಯಮಿ ಉಡುಪಿ ಜಿಲ್ಲೆಯ ಎರ್ಮಾಳು ಹರೀಶ್ ಶೆಟ್ಟಿ ಅವರು ಕೃಷಿ ಕಾರ್ಮಿಕರು, ತನ್ನ ಮಕ್ಕಳ ಜೊತೆ ಗದ್ದೆಗಿಳಿದು ಉಣ್ಣುವ ಅಕ್ಕಿ ಬೆಳೆಯುವ ಕಾಯಕವನ್ನು ನಡೆಸುವ ಮೂಲಕ ಪಟ್ಟಣದ ಮಕ್ಕಳ ಅಕ್ಕಿ ಬೆಳೆಯುವ ಮರ ಯಾವುದೆಂಬ ಪ್ರಶ್ನೆಗೆ ಪ್ರತ್ಯಕ್ಷವಾಗಿ ಉತ್ತರ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಜೊತೆಗೆ ತಾನೂ ಕೃಷಿ ಗದ್ದೆಯಲ್ಲಿ ಕೃಷಿ ಚಟುವಟಿಕೆ ನಡೆಸುವ ಮೂಲಕ ಮರಳಿ ಹಳ್ಳಿಯ ರೈತನಾಗಿ ಕೃಷಿ ಪ್ರೇಮವನ್ನು ಮೆರೆದಿದ್ದಾರೆ.

ಪೇಟೆ ಹೈದ ಹಳ್ಳಿಗೆ ಬಂದ ಎಂಬಂತೆ ಎರ್ಮಾಳು ಹರೀಶ್ ಶೆಟ್ಟಿ ಅವರು ಮುಂಬೈಯಿಂದ ಈ ಕೃಷಿ ಚಟುವಟಿಕೆ ನಡೆಸಲೋಸುಗವಾಗಿ ಹುಟ್ಟೂರಾದ ಎರ್ಮಾಳಿಗೆ ಬಂದಿದ್ದಾರೆ. ಇಲ್ಲಿನ ತನ್ನ ಹಿರಿಯರ ಸುಮಾರು 5 ಎಕರೆಗೂ ಮಿಕ್ಕಿದ ಕೃಷಿ ಜಮೀನಿನಲ್ಲಿ ಈ ಬಾರಿಯ ಮುಂಗಾರು ಮಳೆಗೆ ಭತ್ತದ ಕೃಷಿ ಬೆಳೆಯಲು ಎಲ್ಲಾ ಕೃಷಿ ಕಾರ್ಯಚಟುವಟಿಕೆಗಳನ್ನು ನಡೆಸಿದ್ದಾರೆ. ಕಳೆದ 30 ವರ್ಷಗಳಿಂದ ಹಡೀಲು ಬಿಟ್ಟಿದ್ದ ಕೃಷಿ ಗದ್ದೆ ಇದೀಗ ಮತ್ತೆ ಭತ್ತದ ಪೈರಿನ ನಾಟಿ ನಡೆಸುವ ಮೂಲಕ ಭೂಮಿತಾಯಿ ಹಚ್ಚನೆ ಹಸುರಾಗಿ ನಳನಳಿಸುವಂತೆ ಮಾಡಿದ್ದು, ಕೃಷಿಯ ಒಂದು ಹಂತ ಪೂರೈಸಲಾಗಿದೆ.

ಮರಳಿ ಮಣ್ಣಿಗೆ : ಹಿರಿಯರಿಂದ ವಂಶವಾಹಿನಿಯಲ್ಲಿ ಹರಿದು ಬಂದಿರುವ ಕೃಷಿ ಸಂಸ್ಕøತಿಯೇ ಹರೀಶ್ ಶೆಟ್ಟಿ ಅವರನ್ನು ಮರಳಿ ಕೃಷಿಯತ್ತ ಆಕರ್ಷಿಸುವಂತೆ ಮಾಡಿತ್ತು. 3 ದಶಕಗಳ ನಂತರದ ಬೇಸಾಯವಾಗಿದ್ದರಿಂದ ಯಾಂತ್ರೀಕೃತ ಕೃಷಿಗೆ ಮೊರೆ ಹೋಗಿರುವ ಹರೀಶ್ ಶೆಟ್ಟಿ ಅವರು, ಉಳುಮೆ ಯಂತ್ರದ ಸಹಾಯದಿಂದ ಹಟ್ಟಿ ಗೊಬ್ಬರ ಮತ್ತು ಸರ್ಕಾರಿ ಗೊಬ್ಬರ ಬಳಸಿಯೇ 3 ಬಾರಿ ಗದ್ದೆಯ ಉಳುಮೆಯನ್ನು ನಡೆಸಿದ್ದು, ಸ್ವತಃ ತಾನೇ ಹಾರೆ ಹಿಡಿದುಕೊಂಡು ಗದ್ದೆಯ ಬದಿಗಳನ್ನು ಕಡಿಯುವ ಕೆಲಸ ಮಾಡಿ ಮರಳಿ ಮಣ್ಣಿನ ಪ್ರೀತಿಯ ಮೂಲಕ ಹೋಟೇಲು ಮಾಲಿಕ ಅಪ್ಪಟ ಕೃಷಿಕನಾಗಿದ್ದಾರೆ. ಪರವೂರುಗಳಲ್ಲಿ ನೆಲೆಸಿ ಊರಿನಲ್ಲಿದ್ದ ಕೃಷಿ ಭೂಮಿಯನ್ನು ಮಾರಾಟ ಮಾಡುವ, ಹಡೀಲು ಬಿಡುವ ಮಂದಿಗೆ ಮಾದರಿಯಾಗಿದ್ದಾರೆ.

ರೈತರ ಆತ್ಮಹತ್ಯೆ - ಉತ್ತರ : ಒಟ್ಟು 5 ಗಂಟೆಗಳ ಕಾಲ ಉಳುಮೆಗೆ ಯಂತ್ರದ ಬಳಕೆಯಾಗಿರುತ್ತದೆ. ಒಂದು ಗದ್ದೆಯಲ್ಲಿ ನೇಜಿ(ಭತ್ತದ ಸಸಿ)ಗಳನ್ನು ಸಿದ್ಧಪಡಿಸಲಾಗಿದ್ದು, 22 ಕೃಷಿ ಕೂಲಿಯಾಳುಗಳನ್ನು ಬಳಸಿಕೊಂಡು 5 ಎಕರೆ ಹೊಲದಲ್ಲಿ 5 ದಿನಗಳ ಕಾಲ ನಾಟಿ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆ 22 ಕೂಲಿಯಾಳುಗಳ ಜೊತೆ ಹರೀಶ ಶೆಟ್ಟಿ ಅವರ ಇಬ್ಬರು ಹೆಣ್ಣು ಮಕ್ಕಳೂ ಕೂಡಾ ನೇಜಿ ಸಾಗಿಸಿ ನೆಡುವಲ್ಲಿ ಕೈ ಜೋಡಿಸಿದ್ದು, ಸಾಂಪ್ರದಾಯಿಕ ನಾಟಿ ನಡೆಸುವ ಮೂಲಕ ಕೃಷಿಯ ಅಭಿರುಚಿಯನ್ನು ತೋರ್ಪಡಿಸಿದ್ದಾರೆ. ಇದರೊಂದಿಗೆ ರೈತರ ಆತ್ಮಹತ್ಯೆಯಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ ಎಂದು ಹರೀಶ್ ಶೆಟ್ಟಿ ತಿಳಿಸುತ್ತಾರೆ.

ಮುಂದಿನ ಪೀಳಿಗೆಗೆ ಕೃಷಿ : ಯುವ ಜನಾಂಗ ಕೃಷಿಯಿಂದ ವಿಮುಖರಾಗುವ ಇಂದಿನ ದಿನಗಳಲ್ಲಿ ಹರೀಶ್ ಶೆಟ್ಟಿ ಅವರು ತನ್ನ ಹೆಣ್ಣು ಮಕ್ಕಳಿಬ್ಬರನ್ನೂ ಮುಂಬೈಯಿಂದ ತನ್ನ ಜೊತೆಗೆ ಕರೆದುಕೊಂಡು ಬಂದು ಈ ಕೃಷಿ ಕಾರ್ಯಚಟುವಟಿಕೆಯ ಕಿಚ್ಚು ಹಚ್ಚಿಸಿರುವುದು ಕೃಷಿ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಯತ್ನವೂ ಕೃಷಿ ಚಟುವಟಿಕೆಯ ಬೆಳವಣಿಗೆಯಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಬಹಳಷ್ಟು ಲೆಕ್ಕಾಚಾರ ಇರಿಸಿಕೊಂಡು ಕಾಸು ಕಾಸಿಗೂ ಲೆಕ್ಕವಿರಿಸಿಕೊಂಡು ಕೃಷಿ ಚಟುವಟಿಕೆ ನಡೆಸಿರುವ ಎರ್ಮಾಳು ಹರೀಶ್ ಶೆಟ್ಟಿ ಅವರು ಇನ್ನು ಮಳೆಯಾಧಾರಿತವಾಗಿ 90 ಅಥವಾ 110 ದಿನಗಳ ನಂತರ ಕಟಾವು ಯಂತ್ರ ಬಳಸಿ ತೆನೆಭರಿತ ಪೈರನ್ನು ಕಟಾವು ನಡೆಸುವ ಯೋಜನೆ ಹಾಕಿಕೊಂಡಿರುತ್ತಾರೆ.

ಕೃಷಿಯ ಮೂಲ ಉದ್ದೇಶ :
ಸಮಗ್ರವಾಗಿ ಸಮಸ್ತ ಸಮಾಜವೇ ಕೃಷಿಯನ್ನು ಅವಲಂಭಿಸಿ ಬದುಕು ಕಟ್ಟಿಕೊಳ್ಳುವ ಭರವಸೆ ಹೊಂದಿತ್ತು. ಒಂದು ಮನೆ ಮಾತ್ರವಲ್ಲ, ಹತ್ತಾರು ಮನೆಗಳವರು ಸೇರಿ ಒಂದು ಕೃಷಿ. ಕೊಡು-ಕೊಳ್ಳುವ ವಿಧಾನ ರೂಢಿಯಲ್ಲಿತ್ತು. ಉಳುಮೆ, ನಾಟಿಗಳಲ್ಲಿ ಸಮಷ್ಟಿಯು ಎದ್ದು ಕಾಣುತ್ತಿತ್ತು. ಅದ್ಯಾವಾಗ ಅವಿಭಕ್ತ ಕುಟುಂಬ ಪದ್ಧತಿ ಹರಿದು ಕುಟುಂಬ ಸದಸ್ಯರ ಸಂಖ್ಯೆ ಕಡಿಮೆಗೊಂಡಿತು. ಆ ಸಂದರ್ಭದಲ್ಲಿ ಕೃಷಿಯನ್ನೇ ನಂಬಿ ಬಾಳುವ ಭರವಸೆ ಕಡಿಮೆಯಾಯಿತು. ಪೂರಕವಲ್ಲದ ಕೃಷಿ ಲಾಭ ರಹಿತವಾಯಿತು.

ಒಟ್ಟಾರೆಯಾಗಿ ಇದೀಗ ಮುಂಬೈ ಮಹಾನಗರಿ ಬೊರಿವಿಲಿಯಲ್ಲಿನ ಹೋಟೇಲು ಉದ್ಯಮಿ ಪುನಃ ಮಣ್ಣಿನ ಬಾಂಧವ್ಯವನ್ನು ಬೆಸೆಯುವ ಇರಾದೆಯೊಂದಿಗೆ ಭಾರತದ ಕೃಷಿ ಸಂಸ್ಕøತಿಯತ್ತ ಮತ್ತೆ ಮುಖ ಮಾಡುತ್ತಿರುವುದು ಕರಾವಳಿ ಭಾಗದಲ್ಲಿ ಇದೇ ಮೊದಲು ಎಂಬಂತಿದೆ.

ಕೃಷಿ ಜ್ವರದ ಕಾವು ಏರಲಿ: ಮುಂದೊಂದು ದಿನ ಇವರು ಯಶಸ್ವೀ ಕೃಷಿ ಉದ್ಯಮಿಯಾಗಿ ಬೆಳೆದು ಬಂದರೂ ಅಚ್ಚರಿಯಾಗಲಾರದು. ಏಕೆಂದರೆ ಇನ್ನು ಮುಂದಿನ ವರ್ಷದಲ್ಲಿ ಅಕ್ಕಪಕ್ಕದ ಸುಮಾರು 50 ಎಕರೆ ಪ್ರದೇಶದ ಎಲ್ಲಾ ಗದ್ದೆಗಳಲ್ಲೂ ಭತ್ತದ ಬೇಸಾಯವನ್ನು ಮಾಡಲೇ ಬೇಕೆಂಬ ಮಹೋನ್ನತ ಗುರಿಯನ್ನು ಇರಿಸಿಕೊಂಡು ಈ ಬಾರಿಯ ಕೃಷಿ ಚಟುವಟಿಕೆಗೆ ಅಲ್ಪವಿರಾಮವನ್ನಿತ್ತು ಮುಂಬೈಗೆ ಪ್ರಯಾಣ ಬೆಳೆಸಿರುತ್ತಾರೆ. ಅಭ್ಯಾಸ ರಹಿತ, ನಿರಂತರ ಮಳೆಯ ನಡುವಿನ ಕೃಷಿ ಚಟುವಟಿಕೆಯಿಂದ 5 ದಿನಗಳ ಕಾಲ ಜ್ವರದಿಂದ ಬಳಲಿದ್ದು, ಎರ್ಮಾಳು ಹರೀಶ್ ಶೆಟ್ಟಿಯಂತಹವರಿಗೆ ಮುಂಬರುವ ದಿನಗಳಲ್ಲಿ ಕೃಷಿ ಜ್ವರದ ಕಾವು ಮತ್ತಷ್ಟು ಏರುವಂತಾಗಲಿ. ಹೀಗೆ ಕೆಸರಿನಿಂದ ದೂರವಾದವರು, ಲಾಭದಾಯಕವಲ್ಲದ ಕೃಷಿಯಿಂದ ವಿಮುಖರಾದವರು, ಎರ್ಮಾಳು ಹರೀಶ್ ಶೆಟ್ಟಿ ಅವರಂತೆ ಪುನಃ ಕೃಷಿಯತ್ತ ಆಕರ್ಷಿತರಾದರೆ ಕೃಷಿ ಸಮೃದ್ಧಿಯ ಜೊತೆ ಸರ್ವ ಸಂಸ್ಕøತಿ ಸಮೃದ್ಧಿಯಾದೀತು.

ನಾಟಿಯ ಸಂದರ್ಭ ಮಕ್ಕಳ ಸಹಿತವಾಗಿ ಎಲ್ಲಾ 22 ಕೃಷಿ ಚಟುವಟಿಕೆ ನಿರತ ಹೆಂಗಸರು ಜೊತೆಗೆ ಇಬ್ಬರು ಗಂಡಸರು ಚಹಾ ಕುಡಿಯಲು ಗದ್ದೆಯಿಂದ ಮೇಲಕ್ಕೆ ಬಂದಿದ್ದರು. ಅದೇ ಸಂದರ್ಭ ಓರ್ವ ನೇಜಿಗೆ ಕೈ ಹಾಕಿದ್ದು ಕರೆಂಟ್ ಹೊಡೆದಂತಾಗಿ ಎದ್ದು ಬಿದ್ದು ಓಡಿ ಬಂದಿದ್ದ. ನಂತರ ಗಮನಿಸಿದಾಗ ವಿದ್ಯುತ್ ತಂತಿ ಗದ್ದೆಯಲ್ಲಿ ಕಡಿದು ಬಿದ್ದಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ಲೈನ್‍ಮ್ಯಾನ್ ನವರಿಗೆ ಫೋನಾಯಿಸಿ ಸುರಕ್ಷಾ ಕ್ರಮ ನಡೆಸಲಾಯಿತು. ಒಂದು ವೇಳೆ ಪರಿಸ್ಥಿತಿ ಕೈ ಮೀರುತ್ತಿದ್ದರೆ ಮೊದಲ ಕೃಷಿ ಚಟುವಟಿಕೆ ಕರಾಳ ಕೃಷಿಯಾಗುವ ಸಂಭವವಿತ್ತು. ಇನ್ನು ಮುಂದಾದರೂ ಬಹಳಷ್ಟು ವಿಶಾಲವಾದ ಗದ್ದೆಯ ಪ್ರದೇಶದ ನಡುವೆ ಹಾದು ಹೋಗುವ ವಿದ್ಯುತ್ ತಂತಿಗಳು, ವಿದ್ಯುತ್ ಕಂಬಗಳು, ಕೃಷಿ ಗದ್ದೆ ತೋಟಗಳಲ್ಲಿ ಹಾದು ಹೋಗುವ ಬದಲಿಗೆ, ಸುರಕ್ಷಿತವಾದ ಬದಲಿ ವ್ಯವಸ್ಥೆ ಆಗಬೇಕು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here