Saturday 20th, April 2024
canara news

ಅಧಿಕಾರವಿಲ್ಲದೆಯೂ ಜನಪರ ಕೆಲಸ ಸಾಧ್ಯ : ಬೈಂದೂರು ಜ.ಪ್ರ.ವೇ ಸಭೆಯಲ್ಲಿ ಜಯಪ್ರಕಾಶ್ ಹೆಗ್ಡೆ

Published On : 27 Sep 2016   |  Reported By : Bernard J Costa


ಇಂದು ಹೆದ್ದಾರಿ ಸಮಸ್ಯೆ, ಮರಳು ಸಮಸ್ಯೆ 9/11ರ ಸಮಸ್ಯೆ, ಸಿಆರ್‍ಝಡ್ ಸಮಸ್ಯೆ, ಕುಮ್ಕಿ ಹಕ್ಕಿನ ಕುರಿತ ಸಮಸ್ಯೆ, ಕಸ್ತೂರಿ ರಂಗನ್ ವರದಿ ಜಾರಿ ಕುರಿತಾದ ಸಮಸ್ಯೆ ಮುಂತಾದ ಹಲವಾರು ಜ್ವಲಂತ ಸಮಸ್ಯೆಗಳು ಜನರ ನಿದ್ರೆಯನ್ನು ಕೆಡಿಸಿದೆ. ಆದರೆ ಈ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಸ್ಪಂದಿಸುತ್ತಿಲ್ಲ. ಸಮಸ್ಯೆ ಪರಿಹಾರದ ಕುರಿತಾಗಿ ಸದನದಲ್ಲಿ ಚರ್ಚೆ ನಡೆಸುತ್ತಿಲ್ಲ, ಮಾಧ್ಯಮದ ಮಂದಿ ಈ ಕುರಿತು ಪ್ರಶ್ನಿಸಿದರೆ ಹಾರಿಕೆಯ ಅಥವಾ ಗೊಂದಲ ಹುಟ್ಟಿಸುವ ಉತ್ತರಗಳನ್ನು ನೀಡುತ್ತಿದ್ದಾರೆ. ಕೆಲಸ ಮಾಡಬೇಕೆನ್ನುವ ಇಚ್ಛಾಶಕ್ತಿಯಿದ್ದರೆ ಅಧಿಕಾರ ಇಲ್ಲದೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡಿ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ, ಆ ಕೆಲಸ ಜ.ಪ್ರ.ವೇದಿಕೆಯ ಅಡಿಯಲ್ಲಿ ನಾವು ಇದೀಗ ಮಾಡುತ್ತಿದ್ದೇವೆ, ಇದೇ ರೀತಿಯಾಗಿ ನಮ್ಮ ಯುವಜನತೆ ಉತ್ತಮ ಉದ್ದೇಶವನ್ನಿಟ್ಟುಕೊಂಡು ಸಂಘಟಿತರಾಗುತ್ತಾ ಹೋದಲ್ಲಿ ಬದಲಾವಣೆ ಸಾಧ್ಯವಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಅವರು ಆದಿತ್ಯವಾರ ಸಂಜೆ ಬೈಂದೂರಿನ ಶ್ರೀ ಸೀತಾರಾಮಚಂದ್ರ ಕಲ್ಯಾಣಮಂಟಪದಲ್ಲಿ ನಡೆದ ಜನಪರ ಪ್ರಗತಿಪರ ವೇದಿಕೆಯ ಬೈಂದೂರು ಘಟಕ ಸ್ಥಾಪನೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಚುನಾವಣೆಯ ಸಮಯದಲ್ಲಿ ಹಣವನ್ನು ನೀರಿನಂತೆ ಚೆಲ್ಲಿ ಆಯ್ಕೆಯಾದ ಕೆಲವು ಜನಪ್ರತಿನಿಧಿಗಳು ಇಂದು ಗುತ್ತಿಗೆದಾರರ ಕೈಗೊಂಬೆಗಳಾಗಿ ಕ್ಷೇತ್ರದ ಜನರ ಮೂಲಭೂತ ಸಮಸ್ಯೆಗಳನ್ನು ಮರೆತಿದ್ದಾರೆ. ಅದೇ ರೀತಿಯಾಗಿ ಮತದಾರರು ಸ್ಪರ್ಧಾಕಣದಲ್ಲಿ ಇರುವವರಲ್ಲೇ ಹೆಚ್ಚು ಯೋಗ್ಯ ಎಂಬಂತಹ ಅಭ್ಯರ್ಥಿಗೆ ತನ್ನ ಮತವನ್ನು ದಾನ ಮಾಡಬೇಕೇ ಹೊರತು ಭೃಷ್ಟ ಅಭ್ಯರ್ಥಿಗೆ ಆ ಮತವನ್ನು ಮಾರಾಟ ಮಾಡಬಾರದು, ನಾವು ಒಮ್ಮೆ ಭ್ರಷ್ಟ ಅಭ್ಯರ್ಥಿಯೊಬ್ಬನಿಗೆ ಮತ ಮಾರಾಟ ಮಾಡಿದರೆ ಹಾಗೆ ಆಯ್ಕೆಯಾದ ನಮ್ಮ ಆ ಪ್ರತಿನಿಧಿ ಮೊದಲಿನಂತೆಯೇ ಭ್ರಷ್ಟನಾಗಿ ಅಥವಾ ಜನಸೇವೆಯಲ್ಲಿ ನಿಷ್ಕ್ರೀಯನಾಗಿ ಕೇವಲ ತನ್ನ ಸ್ವಾರ್ಥ ಸಾಧನೆಯಲ್ಲಿ ತೊಡಗಿಕೊಳ್ಳುತ್ತಾನೆಯೇ ಹೊರತು ಓರ್ವ ಯೋಗ್ಯ ಜನಪ್ರತಿನಿಧಿಯಾಗಿ ಹೊರಹೊಮ್ಮಲು ಸಾಧ್ಯವಿಲ್ಲ. ಆದ ಕಾರಣ ಈ ಕುರಿತು ನಮ್ಮ ಪ್ರಜ್ಞಾವಂತ ಮತದಾರರು ಆಳವಾಗಿ ಯೋಚಿಸಿ ಮತದಾನ ಮಾಡಿದಲ್ಲಿ ತಮ್ಮ ಮುಂದಿನ ಆಯ್ಕೆಯಾದರೂ ಒಂದು ಉತ್ತಮವಾದ ಆಯ್ಕೆಯಾದೀತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕ, ತಾ.ಪಂ. ಮಾಜಿ ಸದಸ್ಯ ಶ್ರೀ ರಾಮ ಸೋಡಿತಾರ್‍ರವರು ಪ್ರಾಸ್ತಾವಿಕವಾಗಿ ಮಾತನಾಡಿ ನಮಗೆ ಜಯಪ್ರಕಾಶ್ ಹೆಗ್ಡೆಯವರಂತಹ ಓರ್ವ ಸಮರ್ಥ ನಾಯಕನ ಮುಂದಾಳತ್ವ ಬೇಕು ಎಂಬ ಬೈಂದೂರು ಕ್ಷೇತ್ರದ ಸಮಾನ ಮನಸ್ಕ ಸ್ನೇಹಿತರ ಅಭಿಪ್ರಾಯದ ಮೇರೆಗೆ ಜ.ಪ್ರ.ವೇ ಸ್ಥಾಪನೆಯ ಕುರಿತಾಗಿ ಒಮ್ಮತದ ಅಭಿಪ್ರಾಯಕ್ಕೆ ಬಂದು ಆನಂತರ ಮಾನ್ಯ ಹೆಗ್ಡೆಯವರನ್ನು ಸಂಪರ್ಕಿಸಿ ಚರ್ಚಿಸಿ ಈ ಸಭೆ ಕರೆದಿರುವುದಾಗಿ ವಿವರಿಸಿದರು. ಬೈಂದೂರಿನ ಯುವ ಮುಖಂಡರಾದ ಸುಕುಮಾರ್ ಶೆಟ್ಟಿ, ರಾಜೇಶ ತೊಂಡೆಮಕ್ಕಿ ಮತ್ತಿತರರು ಜ.ಪ್ರ.ವೇ ಸ್ಥಾಪನೆಗೆ ಪೂರಕವಾಗಿ ಸಭಿಕರ ಪರವಾದ ಅಭಿಪ್ರಾಯಗಳನ್ನು ಮಂಡಿಸಿದರು.

ವೇದಿಕೆಯಲ್ಲಿ ಜ.ಪ್ರ.ವೇ ಕುಂದಾಪುರ ಘಟಕದ ಸಹಸಂಚಾಲಕ ರಾಮಕೃಷ್ಣ ಹೇರ್ಳೆ, ಕೋಟ ಘಟಕದ ಮುಖಂಡ ಗೋಪಾಲ ಬಂಗೇರ, ಕರ್ನಾಟಕ ವಿದ್ಯಾರ್ಥಿ ಪರಿಷತ್‍ನ ಉಡುಪಿ ಜಿಲ್ಲಾ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ, ಕುಂದಾಪುರ ವಲಯ ಸಂಚಾಲಕ ಗಿರೀಶ್ ಜಿ.ಕೆ, ಕಾರ್ಕಳ ವಲಯ ಮುಖಂಡ ರಜತ್ ರಾಮ್‍ಮೋಹನ್, ಚಂದ್ರಶೇಖರ ಶೆಟ್ಟಿ, ಮುಜಾಹಿದ್ ಗಂಗೊಳ್ಳಿ, ದೀಪಕ್ ಕುಮಾರ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಮೊಳಹಳ್ಳಿ ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here