Thursday 18th, April 2024
canara news

ಸಾಮಾಜಿಕ - ಸಾಂಸ್ಕೃತಿಕ ಕ್ಷೇತ್ರದ ಸಾಧಕ ಬಹ್ರೈನ್ ಕನ್ನಡಿಗ ಲೀಲಾಧರ್ ಬೈಕಂಪಾಡಿಗೆ ‘ಕರ್ನಾಟಕ ಸೌರಭ’ ಪ್ರಶಸ್ತಿಯ ಗೌರವ

Published On : 27 Nov 2016   |  Reported By : Canaranews Network


ಮಂಗಳೂರು: ಅತಿ ಎಳವೆಯಿಂದ ಆರಂಭಿಸಿ ದೇಶ - ಪರದೇಶದಲ್ಲಿ ತಾನು ನಿರಂತರವಾಗಿ ಗೈಯುತ್ತಾ ಬಂದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಂಘಿಕ ಸೇವೆ ಹಾಗೂ ಸಾಧನೆಗಳಿಗಾಗಿ ಬಹ್ರೈನ್ ಕನ್ನಡಿಗ ಲೀಲಾಧರ್ ಬೈಕಂಪಾಡಿಯವರು ಇತ್ತೀಚೆಗೆ ‘ಕರ್ನಾಟಕ ಸೌರಭ’ ಪ್ರಶಸ್ತಿಯೊಂದಿಗೆ ಪುರಸ್ಕೃತರಾದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ಮಂಗಳೂರು ಈ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಸಂಪನ್ನಗೊಂಡ ‘ತುಳು - ಕನ್ನಡ ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮದಲ್ಲಿ ಇವರಿಗೆ ಈ ಗೌರವವನ್ನು ನೀಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾದ ಜಾನಕಿ ಬ್ರಹ್ಮಾವರ ಸಹಿತವಾಗಿ ವಿವಿಧ ಗಣ್ಯರು ಉಪಸ್ಥಿತರಿದ್ದರು.

ತುಳು - ಕನ್ನಡ ಕವಿಗೋಷ್ಠಿ ಹಾಗೂ ವಿವಿಧ ಪ್ರತಿಭಾ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆಯನ್ನೂ ಹಮ್ಮಿಕೊಳ್ಳಲಾಗಿದ್ದ ಈ ವೈಶಿಷ್ಠ್ಯಪೂರ್ಣ ಕಾರ್ಯಕ್ರಮವು ಇತ್ತೀಚೆಗೆ ಮಂಗಳೂರಿನ ‘ತುಳು ಚಾವಡಿ’ ಭವನದ ‘ಸಿರಿ ಚಾವಡಿ’ ಸಭಾಗೃಹದಲ್ಲಿ ಜರಗಿತು.

ತನ್ನ ಬಹುಮುಖ ಸೇವೆ ಮತ್ತು ಸಾಧನೆಗಳಿಗಾಗಿ ಹಾಗೂ ಸಾಂಘಿಕ ಚಟುವಟಿಕೆಗಳಿಗಾಗಿ ಲೀಲಾಧರ್ ಬೈಕಂಪಾಡಿಯವರು ಈಗಾಗಲೇ ರಾಷ್ಟ್ರೀಯ ಭೂಷಣ ಪ್ರಶಸ್ತಿ [ಬೆಂಗಳೂರು], ರಾಷ್ಟ್ರೀಯ ಏಕತಾ ಪುರಸ್ಕಾರ [ನವ ದೆಹಲಿ], ಸಮಾಜ ರತ್ನ ರಾಷ್ಟ್ರೀಯ ಪ್ರಶಸ್ತಿ [ಬೆಂಗಳೂರು] ಮತ್ತು ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ [ಬೆಂಗಳೂರು] ಮುಂತಾದ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಗತ 19 ವರ್ಷಗಳಿಂದ ಉದ್ಯೋಗ ನಿಮಿತ್ತ ಕೊಲ್ಲಿಯ ಬಹ್ರೈನ್ ದೇಶದಲ್ಲಿ ವಾಸ್ತವ್ಯವಿರುವ ಇವರು ಅಲ್ಲಿನ ಖಾಸಗಿ ಕಂಪನಿ ಸಮೂಹವೊಂದರ ವಿತ್ತ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಹ್ರೈನ್ನಲ್ಲಿದ್ದುಕೊಂಡೇ ಇವರು ನಾಡು ಮತ್ತು ಹೊರನಾಡಿನ ವಿವಿಧ ಸಮೂಹ ಮತ್ತು ಸಂಘಟನೆಗಳ ಮೂಲಕ ತುಳುವರು, ಕನ್ನಡಿಗರು ಹಾಗೂ ಭಾರತೀಯರಿಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ, ಸಾಂಘಿಕ, ಸಾಹಿತ್ಯಕ ಹಾಗೂ ಜನಪರ ಸೇವಾ ಕಾರ್ಯಚಟುವಟಿಕೆಗಳಲ್ಲಿ ಸದಾ ನಿರತರಾಗಿದ್ದಾರೆ. ಈ ಕಾರಣದಿಂದಾಗಿ ಇವರೋರ್ವ ಚತುರ ಸಂಘಟಕ, ಸಮಾಜ ಸೇವಾ ಕಾರ್ಯಕರ್ತ, ಪ್ರಶಸ್ತಿ ವಿಜೇತ ರಂಗ ಕಲಾವಿದ, ಯುವ ಸಾಹಿತಿ, ಸಮಾಜಮುಖಿ ಚಿಂತನೆಯ ತಥಾ ಪ್ರಗತಿಪರ ವಿಚಾರಧಾರೆಯ ಯುವ ಸಾಮಾಜಿಕ ಮುಂದಾಳುವಾಗಿ ನಾಡಿನ ಮತ್ತು ಹೊರನಾಡಿನ ತುಳುವರು, ಕನ್ನಡಿಗರು ಹಾಗೂ ಭಾರತೀಯರ ಮಧ್ಯೆ ಬಹಳವಾಗಿ ಗುರುತಿಸಿಕೊಂಡವರಾಗಿದ್ದಾರೆ.

ಬಹ್ರೈನ್ನಲ್ಲಿ ಇಂಡಿಯನ್ ಕ್ಲಬ್, ಕರ್ನಾಟಕ ಸೋಶಿಯಲ್ ಕ್ಲಬ್, ಮಹಾರಾಷ್ಟ್ರ ಕಲ್ಚರಲ್ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ಇವರು ಸದ್ಯ ಮೊಗವೀರ್ಸ್ ಬಹ್ರೈನ್ ಸಂಸ್ಥೆಯ ದ್ವಿತೀಯ ಅವಧಿಯ ಅಧ್ಯಕ್ಷರಾಗಿಯೂ ಸದಾ ಸಕ್ರಿಯರಾಗಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here