Friday 29th, March 2024
canara news

ಉಡುಪಿ ಜಿಲ್ಲಾ ಯುವ ಕವಿ ಸಮ್ಮೇಳನ ವಿಷ್ಣುಪ್ರಸಾದ್ ಕೊಡಿಬೆಟ್ಟು ಅವರಿಗೆ ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿ ಪ್ರದಾನ

Published On : 08 Dec 2016   |  Reported By : Bernard J Costa


ಕುಂದಪ್ರಭ ಸಂಸ್ಥೆ , ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ) ಮಂಗಳೂರು, ಆಕಾಶವಾಣಿ ಮಂಗಳೂರು, ಹಾಗೂ ಸರಕಾರಿ ಪ.ಪೂ.ಕಾಲೇಜು ಕುಂದಾಪುರ ಇವರ ಸಹಯೋಗದಲ್ಲಿ ಕುಂದಾಪುರ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಉಡುಪಿ ಜಿಲ್ಲಾ ಯುವ ಕವಿ ಸಮ್ಮೇಳನ ಹಾಗೂ ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ಮಧ್ಯಾಹ್ನ ಜರಗಿತು.

ಈ ಯುವಕವಿ ಸಮ್ಮೇಳನದಲ್ಲಿ ಆಯ್ಕೆಗೊಂಡ ಹತ್ತು ಮಂದಿ ಕವಿಗಳು ತಾವು ರಚಿಸಿದ ಕವಿತೆಯನ್ನು ವಾಚಿಸಿದ್ದು, ವಿಷ್ಣುಪ್ರಸಾದ್ ಕೊಡಿಬೆಟ್ಟು ಅವರು ರಚಿಸಿದ ಕವನಗಳು ಅತ್ಯುತ್ತಮ ಎಂದು ಆಯ್ಕೆಗೊಂಡು ಅವರಿಗೆ ಯುವಕವಿ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕವಿ ಸಮ್ಮೇಳನ ಉದ್ಘಾಟನೆ :
ಉಡುಪಿ ಜಿಲ್ಲಾ ಯುವ ಕವಿ ಸಮ್ಮೇಳನವನ್ನು ಮಂಗಳೂರು ಆಕಾಶವಾಣಿಯ ಡಾ| ವಸಂತ ಕುಮಾರ್ ಪೆರ್ಲ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಜ್ಞಾನವನ್ನು ಬೆಳೆಸಿಕೊಳ್ಳಲು ಸಾಧ್ಯ. ಇದರಿಂದ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಂದಿನ ಸ್ಪರ್ಧಾತ್ಮ ಜಗತ್ತಿನಲ್ಲಿ ಬದುಕನ್ನು ರೂಪಿಸಿಕೊಳ್ಳಲು ಶಿಕ್ಷಣದೊಂದಿಗೆ ಸಾಹಿತ್ಯ ಹಾಗೂ ಸಂಸ್ಕøತಿಯನ್ನು ಮೂಡಿಸಿಕೊಂಡರೆ ಉತ್ತಮ. ಸೃಜನಶೀಲ ಸಾಹಿತ್ಯಗಳನ್ನು ಓದಿದರೆ ಆ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಾ|ಅಣ್ಣಯ್ಯ ಕುಲಾಲ್ ಮಂಗಳೂರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ್ರಶಸ್ತಿ ಪ್ರದಾನ ಮಾಡಿದ ನಾಗರಿಕ ಪತ್ರಿಕೆ ಹೊನ್ನಾವರದ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ "ವೃತ್ತಿಯಾಗಲಿ , ಬರೆಯುವ ಕೃತಿಯಲ್ಲಾಗಲಿ ನಾವು ಅದರೊಳಗೆ ಇದ್ದರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಯುವ ಸಾಹಿತಿಗಳು ತಮ್ಮ ಅನುಭವಗಳನ್ನು ಹೆಚ್ಚಿಸಿಕೊಳ್ಳುತ್ತಾ ಕೃತಿಗಳನ್ನು ರಚಿಸಬೇಕು. ಎಂದಿಗೂ ತನ್ನದು ಶ್ರೇಷ್ಠ ಎಂದು ತಿಳಿಯದೇ ಬರೆಯಬೇಕು. ಬರವಣಿಗೆಯನ್ನು ಪ್ರೀತಿಸಬೇಕು. ವೃತ್ತಿಯಲ್ಲಿಯೂ ವಿದ್ಯಾರ್ಥಿಗಳು ಯುವಕರು ಯಾವುದೇ ಉದ್ಯೋಗ ಮಾಡಿದರೂ ಅದನ್ನು ಪ್ರೀತಿಯಿಂದ ಮಾಡಬೇಕು. ತಮ್ಮ ತನವನ್ನು ತೋರ್ಪಡಿಸಬೇಕು" ಎಂದರು. ಉಪನ್ಯಾಸಕ ರಾಜೀವ ನಾಯ್ಕ ಉಪಸ್ಥಿತರಿದ್ದರು.

ಕವಿತಾ ವಾಚನ : ಈ ಕವಿ ಸಮ್ಮೇಳನದಲ್ಲಿ ಹತ್ತು ಕವಿಗಳು ವಿವಿಧ ಕವಿತೆಗಳನ್ನು ವಾಚಿಸಿದರು. ವಿಷ್ಣುಪ್ರಸಾದ್ ಕೊಡಿಬೆಟ್ಟು ಅವರು ನಡುರಾತ್ರಿಯಲ್ಲಿ ರಾಘವೇಂದ್ರ ಆಲೂರು, ತ್ಯಾಗಮಯಿಯ ಕೊನೆಯ ಕ್ಷಣ, ನಮಿತಾ ಅವರು ಇರುವುದೊಂದೇ ಭೂಮಿ, ದೀಪಾ ಯಡಿಯಾಳ್ ಅವರು ಗರ್ಭಗುಡಿಯ ಕತ್ತಲೆಯ ಮಸುಕಿನೊಳಗೆ , ಪ್ರತಿಮಾ ಪ್ರೀತಿಯ ಗುಬ್ಬಚ್ಚಿ ,ಸುಕನ್ಯಾ ಕಾಮತ್ ನಮ್ಮ ಹೆಮ್ಮೆಯ ಆಲಯ ಕರ್ನಾಟಕ , ಶ್ರೀಮತಿ ನಾಯಕ್ ಕವಲುದಾರಿ, ಪೂರ್ಣಿಮಾ ಆಚಾರ್ಯ ನನ್ನ ಕವಿತೆ, ಅನುಷಾ ಆರ್, ನಾಯಕ್ ನಿತ್ಯ ಚೇತನ ಹಾಗೂ ವಿನಯಾ ಶೆಟ್ಟಿ ಕಟುಸತ್ಯ ಕವನ ವಾಚಿಸಿದರು.

ಸಮಾರಂಭದ ಅಧ್ಯಕ್ಷರಾಗಿ ಮಾತನಾಡಿದ ಡಾ.ಅಣ್ಣಯ್ಯ ಕುಲಾಲ್ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 5ನೇ ವರ್ಷ ಯುವಕವಿ ಸಮ್ಮೇಳನ ನಡೆಸುತ್ತಿದ್ದೇವೆ. ಈಗ ನಮ್ಮ ಪ್ರತಿಷ್ಠಾನದಿಂದ ಕಥಾ ಸ್ಪರ್ಧೆಯನ್ನು ಕಳೆದ ವರ್ಷದಿಂದ ನಡೆಸುತ್ತಿದ್ದೇವೆ. ಅದರಲ್ಲೂ ಯುವ ಕವಿಗಳು ಭಾಗವಹಿಸಬಹುದು. ಮುಖ್ಯವಾಗಿ ಕನ್ನಡದ ಪ್ರತಿಭೆಗೆ ಪೂರಕ ಸ್ಫೂರ್ತಿ ನೀಡುವ ದೃಷ್ಠಿಯಿಂದ ನಾವು ಮಾಡುವ ಚಟುವಟಿಕೆಗೆ ಯುವಜನತೆಯ ಸ್ಪಂದನ ಉತ್ತಮವಾದರೆ ಖುಶಿಯಾಗುತ್ತದೆ ಎಂದರು.

ಕಾರ್ಯಕ್ರಮದ ಸಂಯೋಜಕ ಕುಂದಪ್ರಭದ ಯು.ಎಸ್.ಶೆಣೈ ಸ್ವಾಗತಿಸಿದರು. ಕೋ.ಶಿವಾನಂದ ಕಾರಂತ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಎಚ್.ಸೋಮಶೇಖರ ಶೆಟ್ಟಿ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಲೇಖಕ ಪಿ.ಜಯವಂತ ಪೈ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here