Thursday 18th, April 2024
canara news

ಹೆದ್ದಾರಿ ಬದಿಯಿಂದ ಗ್ರಾಮೀಣ ಪ್ರದೇಶಕ್ಕೆ ತೆವಳಿದ ಡಕ್ಕೆಬಲಿ...ಗುರುಪುರದಲ್ಲಿ ವಿಜೃಂಭಣೆಯ ಪೂಜಾ ಕೈಂಕರ್ಯ

Published On : 24 Jan 2017   |  Reported By : Rons Bantwal


ಮುಂಬಯಿ (ಗುರುಪುರ), ಜ.23: ನಾಗಾರಾಧನೆಯಲ್ಲಿ ಒಂದು ಪೂಜಾ ವಿಧಾನ `ಡಕ್ಕೆಬಲಿ'ಯಾಗಿದೆ. ಸರ್ಪ ಸಂಸ್ಕಾರ, ಬ್ರಹ್ಮಪೂಜೆ, ನಾಗಮಂಡಲ, ನಾಗದರ್ಶನ ಎಂಬಿತ್ಯಾದಿ ನಾಗಾರಾಧನೆಯಲ್ಲಿ ಡಕ್ಕೆಬಲಿಗೆ ವಿಶೇಷ ಮಹತ್ವವಿದೆ. ಆದರೆ ಇದು ತುಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಈವರೆಗೂ ನಡೆದಿಲ್ಲ. ಧಾರ್ಮಿಕ ಪೂಜಾ ಕಾರ್ಯಕ್ರಮ ಏರ್ಪಡಿಸುವಿಕೆಯಲ್ಲಿ ಸಾರ್ವಜನಿಕರ ಭಾವನೆಗಳಿಗೆ ಎಳ್ಳಷ್ಟೂ ನೋವಾಗದಂದತೆ ಕಳೆದ ಒಂದೆರಡು ವರ್ಷದಿಂದ ಧಾರ್ಮಿಕ ಕಟ್ಟುಪಾಡಿನೊಳಗೆ ವಿಶೇಷ `ಧರ್ಮವಿಧಿ' ಸೇವಾ ಕೈಂಕರ್ಯ ನಡೆಸಿಕೊಂಡು ಬಂದಿರುವ ಯಶಸ್ಸು ಗುರುಪುರ ಗೋಳಿದಡಿಗುತ್ತು ವರ್ಧಮಾನ ಯಾನೆ ದುರ್ಗಾಪ್ರಸಾದ್ ಶೆಟ್ಟಿಗೆ ಸಲ್ಲುತ್ತದೆ.

ಹಿಂದಿನ ವರ್ಷ ಇಲ್ಲಿ ಶಾಸ್ತ್ರೋಕ್ತ ನಾಗಮಂಡಲ ಆಯೋಜಿಸಲಾಗಿದ್ದರೆ, ಈ ಬಾರಿ ಡಕ್ಕೆಬಲಿ ಪ್ರಾಯೋಜಿಸಲಾಗಿದೆ. ಬಹುತೇಕ ಪಡುಬಿದ್ರಿ ಮತ್ತು ಉಡುಪಿ-ಕುಂದಾಪುರ ಆಸುಪಾಸಿನ ಹೆದ್ದಾರಿ ಬದಿಯಲ್ಲಿ ಎರಡು ಮೂರು ವರ್ಷಗಳಿಗೊಮ್ಮೆ ನಡೆಯುವಂತಹ ಡಕ್ಕೆಬಲಿ ಈ ಬಾರಿ ಗುರುಪುರದ ಫಲ್ಗುಣಿ ನದಿ ತೀರದಲ್ಲಿ ನಡೆಯುವುದರೊಂದಿಗೆ ಈ ಧರ್ಮ ವಿಧಿಯ ಸೊಬಗನ್ನು ಗ್ರಾಮೀಣ ಭಾಗದ ಭಕ್ತ ಮಹಾಶಯರು ಮತ್ತು ಕುತೂಹಲಿಗರು ಸವಿಯುವಂತಾಯಿತು. ಇಲ್ಲಿನ ಮಂದಿಗೆ ಇದು ಅಪೂರ್ವವಾಗಿತ್ತು. ಸರಿಸುಮಾರು ನಾಗಂಮಂಡಲವನ್ನೇ ಹೋಲುವ ಡಕ್ಕೆಬಲಿಯಲ್ಲಿ ಒಂದಷ್ಟು ಭಿನ್ನ ಪೂಜಾ ವಿಧಿ-ವಿಧಾನಗಳಿವೆ. ಗ್ರಾಮದ ಭೂತಕಾಲೀನ ಸಮಸ್ಯೆ ಗುರುತಿಸಿ, ಅದಕ್ಕೆ ಪರಿಹಾರ ಸೂಚಿಸಲು ನಾಗಮಂಡಲದಂತೆ ಡಕ್ಕೆಬಲಿಯೂ ಅತ್ಯಂತ ಪ್ರಭಾವಿ ಧಾರ್ಮಿಕ ಆಚರಣೆಯಾಗಿದೆ. ಈ ಮೂಲಕ ನಾಗಬ್ರಹ್ಮನ ಆರಾಧನೆ ಸಾಧ್ಯವೆಂದು ಅಧ್ಯಯನಕಾರರು ಹೇಳುತ್ತಾರೆ.

ಡಕ್ಕೆಬಲಿ ಆಯೋಜಿಸಿದರೆ ಊರಿಗೆ ಸುಭಿಕ್ಷೆ ಎಂಬ ದೃಷ್ಟಾಂತ ನಾಗಪುರಾಣಗಳಲ್ಲಿ ಉಲ್ಲೇಖಗೊಂಡಿದೆ ಎಂಬುದು ಪ್ರಾಜ್ಞರ ಅಭಿಮತ. ಹಾಗಾಗಿಯೇ ಈ ಧಾರ್ಮಿಕ ಪೂಜಾವಿಧಿಯ ಫಲ ಮಾಡಿಸಿದವರಿಗೆ, ಕೇಳಿದವರು ಮತ್ತು ನೋಡಿದವರಿಗೆ ಲಭಿಸುತ್ತದೆ ಎಂಬ ಮಾತೊಂದಿದೆ. ಈ ದೃಷ್ಟಿಯಿಂದಲೇ ಡಕ್ಕೆಬಲಿ ಆರಂಭಕ್ಕೆ ಮುಂಚೆ ಸಾರ್ವಜನಿಕ ಭಾಗಿತ್ವದ `ಸಂಕಲ್ಪ' ವಿಧಿಕ್ರಿಯೆಗಳು ನಡೆಯುತ್ತವೆ.

ಎರಡು ದಿನಗಳ ಧಾರ್ಮಿಕ ಪೂಜಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಈ ವರ್ಷವೂ ವಿಶೇಷ ಮತ್ತು ಅಪೂರ್ವವೆನ್ನಬಹುದಾದ ಕಾರ್ಯಕ್ರಮಗಳು ನಡೆದವು. ಗೀತನಾಟಕ, ಜಾನಪದ-ಭಾವಲಹರಿ ಪ್ರೇಕ್ಷಕರಿಗೆ ಮುದ ನೀಡಿದ್ದಲ್ಲದೆ, ಕಳೆದ ಏಳು ವರ್ಷದಂತೆ ಈ ವರ್ಷವೂ ಠಾಕೂರ್‍ದಾಸ್ `ರಫಿ' ರಸಮಂಜರಿ ಎಲ್ಲ ಜಾತಿಮತ ಬಾಂಧವರನ್ನು ಒಂದೆಡೆ ಕಲೆಹಾಕುವಲ್ಲಿ ದಾಖಲೆ ನಿರ್ಮಿಸಿತು. ಎರಡು ದಿನಗಳಲ್ಲಿ ನಿರಂತರ ಅನ್ನಸಂತರ್ಪಣೆಯೊಂದಿಗೆ ಪ್ರತಿಯೊಬ್ಬರಿಗೆ ಒಂದೊಂದು ಕಲ್ಲಂಗಡಿ, ಸಿಹಿ ಪಾನ್, ಬಳೆ(ಮಹಿಳೆಯರಿಗೆ) ಹಾಗೂ ಕಬ್ಬಿನಹಾಲು ವಿತರಿಸಿದ್ದು ಈ ವರ್ಷದ ವಿಶೇಷತೆಯಾಗಿದೆ.

ಇದೊಂದು ಪ್ರತಿಷ್ಠೆಯ ಕಾರ್ಯಕ್ರಮವಾಗಿದ್ದರೂ ಡಕ್ಕೆಬಲಿ, ನಾಗಮಂಡಲದಂತಹ ಧಾರ್ಮಿಕ ಆಚರಣೆ, ಭಕ್ತರ ಆಶೋತ್ತರ ಈಡೇರಿಸುವ ಸಾರ್ವತ್ರಿಕ ಪೂಜೆ ಎಂದು ಅಧ್ಯಯನ ಪರಿಗಣಿಸಿ ಹೇಳುವುದಾದರೆ, ಇಲ್ಲಿ ಒಬ್ಬರ ಪ್ರತಿಷ್ಠೆಗಿಂತಲೂ ಸಾರ್ವಜನಿಕರ ಅಭಿಲಾಷೆ ಈಡೇರುದೆಂಬ ನಂಬಿಕೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಪ್ರಾಚೀನ ನಾಗಾರಾಧನೆಯ ಆಳಅಗಲಕ್ಕೆ ಇಳಿದಾಗ ಮಾತ್ರ ಈ ವಿಷಯ ಮನದಟ್ಟಾಗುವುದು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here