Thursday 8th, June 2023
canara news

ಮಿತ್ರಾ ವೆಂಕಟ್ರಾಜ್ ಅವರಿಗೆ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ

Published On : 11 Mar 2017   |  Reported By : Rons Bantwal


ಮುಂಬಯಿ, ಮಾ.11: ಅಕ್ಷಯ' ಪತ್ರಿಕೆಯ ಮಾಜಿ ಗೌ| ಪ್ರ| ಸಂಪಾದಕರಾದ ಶ್ರೀ ಎಂ. ಬಿ. ಕುಕ್ಯಾನ್ ಅವರು ಪ್ರಾಯೋಜಿಸಿ ಬಿಲ್ಲವರ ಎಸೋಸಿಯೇಶನ್ ಸಂಯೋಜಿಸುತ್ತಿರುವ 2016ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗೆ ಮುಂಬಯಿಯ ಹಿರಿಯ ಸಾಹಿತಿ ಶ್ರೀಮತಿ ಮಿತ್ರಾ ವೆಂಕಟ್ರಾಜ್ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 25000/ ರೂ. ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನೊಳಗೊಂಡಿದೆ. ಹಿರಿಯ ಸಾಹಿತಿಗಳಾದ ಶ್ರೀ ವಿ.ಗ. ನಾಯಕ ಹಾಗೂ ಡಾ| ಸುನೀತಾ ಶೆಟ್ಟಿಯವರನ್ನೊಳಗೊಂಡ ಸಾಹಿತ್ಯ ಪ್ರಶಸ್ತಿ ನಿರ್ಣಾಯಕ ಸಮಿತಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದೆ. ಈ ಪ್ರಶಸ್ತಿಯನ್ನು ಶ್ರೀಮತಿ ಮಿತ್ರಾ ವೆಂಕಟ್ರಾಜ್‍ರವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.

ಕುಂದಾಪುರದ ಹಲ್ಸನಾಡು ಮನೆತನದಲ್ಲಿ ಹುಟ್ಟಿದ ಮಿತ್ರಾ ವೆಂಕಟ್ರಾಜ್ ಮದುವೆಯ ನಂತರ ಮುಂಬಯಿಯಲ್ಲಿ ನೆಲೆಸಿದರು. ಕುಂದಾಪುರದಲ್ಲಿರುವಾಗಲೇ ಕತೆಗಳನ್ನು ಬರೆಯಲು ಆರಂಭಿಸಿದ್ದರೂ, ಇವರ ಹೆಚ್ಚಿನ ಕತೆಗಳು ರೂಪುಗೊಂಡದ್ದು ಮುಂಬಯಿಗೆ ಬಂದ ನಂತರ.ಕನ್ನಡದ ಉತ್ತಮ ಸಣ್ಣ ಕಥಾ ಲೇಖಕರಲ್ಲಿ ಒಬ್ಬರಾದ ಇವರು- ರುಕುಮಾಯಿ, ಹಕ್ಕಿ ಮತ್ತು ಅವಳು ಮತ್ತು ಮಾಯಕದ ಸತ್ಯ ಎಂಬ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಸಣ್ಣ ಕತೆ ಒಂದು ಒಸಗೆ ಒಯ್ಯುವುದಿತ್ತು ಕತೆಗೆ 1993 ರಲ್ಲಿ ದಿಲ್ಲಿಯ ಪ್ರತಿಷ್ಠಿತ ಕಥಾ ಪ್ರಶಸ್ತಿಯು ಲಭಿಸಿತ್ತು. ಹಕ್ಕಿ ಮತ್ತು ಅವಳು ಸಂಕಲನವು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯಪುಸ್ತಕವಾಗಿತ್ತು ಹಾಗೂ ಅದು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಸಾವಿತ್ರಮ್ಮ ಪ್ರಶಸ್ತಿ, ಧಾರವಾಡದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಕಾಂತಾವರ ಕನ್ನಡ ಸಂಘದ ವರ್ಧಮಾನ ಪ್ರಶಸ್ತಿಗಳನ್ನು ಪಡೆದಿದೆ.

2010ರಲ್ಲಿ ಅವರ ಚೊಚ್ಚಲ ಕಾದಂಬರಿ `ಪಾಚಿ ಕಟ್ಟಿದ ಪಾಗಾರ'ವು ಪ್ರಕಟವಾಯಿತು. ಈ ಕಾದಂಬರಿಗೆ ಶಾಂತಾರಾಮ್ ಪ್ರಶಸ್ತಿ ಹಾಗೂ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿಗಳು ಲಭಿಸಿವೆ. ಈ ಕಾದಂಬರಿಯನ್ನು ಅವರ ಪತಿ ವೆಂಕಟ್ರಾಜ್ ರಾವ್ ಇಂಗ್ಲೀಷಿಗೆ ಭಾಷಾಂತರಿಸಿದ್ದು, ಅದು 'A Warped Space ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಹಾಗೆಯೇ ಇಂಗ್ಲೀಷಿಗೆ ಅನುವಾದಗೊಂಡ ಇವರ ಕೆಲವು ಸಣ್ಣಕತೆಗಳು  'White Chiffon Sari'  ಎಂಬ ಹೆಸರಿನಲ್ಲಿ ಪ್ರಕಟಗೊಂಡಿವೆ.


ಮಿತ್ರಾ ವೆಂಕಟ್ರಾಜರ ಕತೆಗಳು ಸಾಹಿತ್ಯ ಅಕಾಡೆಮಿಯ ಕಥಾ ಸಂಗ್ರಹ ಹಾಗೂ ಇನ್ನಿತರ ಕೆಲವು ಪ್ರಾತಿನಿಧಿಕ ಕಥಾಸಂಕಲನಗಳಲ್ಲಿ ಪ್ರಕಟವಾಗಿವೆ. ಮಾನವೀಯ ಸಂಬಂಧಗಳನ್ನು ಎಲ್ಲ ಸಂಕೀರ್ಣತೆಗಳೊಂದಿಗೆ ಸೂಕ್ಷ ್ಮವಾಗಿ, ಮನಸ್ಸಿಗೆ ತಟ್ಟುವಂತೆ ಬರೆಯಬಲ್ಲ ಮಿತ್ರಾ ಅವರ ಕತೆಗಳಲ್ಲಿ ಬದುಕಿನ ಏಳುಬೀಳುಗಳ ಬಗೆಗಿನ ಅನುಭೂತಿ- ಅವಲೋಕನಗಳಿವೆ. ಕಣ್ಣಿಗೆ ಕಟ್ಟುವ ಪಾತ್ರ ಚಿತ್ರಣ, ತಿಳಿಹಾಸ್ಯದ ಲೇಪ, ಲವಲವಿಕೆಯ ವಿವರಣೆ, ಕಾಲದೇಶಗಳನ್ನು ಹಿಡಿದಿಡುವ ಪರಿ- ಇವು ಮಿತ್ರಾರ ಬರಹಗಳಲ್ಲಿ ಎದ್ದು ಕಾಣುವ ಅಂಶಗಳು.
ಬಿಲ್ಲವ ಭವನದಲ್ಲಿ 21-03-2017ರಂದು ಸಮಯ ಸಂಜೆ 6.00 ಗಂಟೆಗೆ ಜರಗಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಶ್ರೀಮತಿ ಮಿತ್ರಾ ವೆಂಕಟ್ರಾಜ್‍ರವರಿಗೆ ಪ್ರದಾನಿಸಲಾಗುವುದು. ಈ ಸಮಾರಂಭಕ್ಕೆ ಅತಿಥಿಗಳಾಗಿ ಡಾ| ವಿಶ್ವನಾಥ್ ಕಾರ್ನಾಡ್, ಡಾ| ಸುನೀತಾ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಬಿಲ್ಲವರ ಎಸೋಸಿಯೇಶನಿನ ಮುಂದಾಳು, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಜಯ ಸಿ. ಸುವರ್ಣರವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ ಎಸೋಸಿಯೇಶನಿನ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಡಿ. ಕೋಟ್ಯಾನ್‍ರವರು ವಹಿಸಲಿದ್ದಾರೆ. ಪ್ರಶಸ್ತಿ ಪ್ರಾಯೋಜಕರಾಗಿರುವ ಹಿರಿಯ ಸಾಹಿತಿ ಶ್ರೀ ಎಂ.ಬಿ. ಕುಕ್ಯಾನ್‍ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿರುವ ಈ ಸಮಾರಂಭಕ್ಕೆ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕಾಗಿ ವಿನಂತಿ.
More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here