Thursday 8th, June 2023
canara news

`ರಂಗ್‍ದ ಕಲಾವಿದೆರ್ ಗುರುಪುರ' ಉದ್ಘಾಟನೆ:`ಬದ್ಕೆರಾಪುಚಿ'ಗೆ ಮುಹೂರ್ತ

Published On : 15 Mar 2017   |  Reported By : Rons Bantwal


ಗುರುಪುರ, ಮಾ.14: ಗುರುಪುರ ವೈವಿಧ್ಯತೆಗಳಿಂದ ಕೂಡಿದ ಒಂದು ಪುಟ್ಟಪೇಟೆ. ಇದು ಹಲವು ಧರ್ಮ ಕ್ಷೇತ್ರಗಳು, ಮಠಗಳು ಮತ್ತು ಹಲವು ಧರ್ಮೀಯರ ಸಾಮರಸ್ಯದ ನೆಲೆವೀಡು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಇಲ್ಲಿನ ಮಂದಿ ಮುಂಚೂಣಿಯಲ್ಲಿದ್ದರೂ, ರಂಗಭೂಮಿಯಲ್ಲಿ ಸಕ್ರಿಯರಾಗಿರುವವರ ಕೊರತೆ ಮರೆಯಲಾಗದು. ಸ್ಥಳೀಯ ಹಾಗೂ ಆಸುಪಾಸಿನ ಯುವ ಮನಸ್ಸುಗಳ ಕಲಾಸಕ್ತಿಯೊಂದಿಗೆ ರೂಪುಗೊಂಡಿರುವ ಕಲಾ ತಂಡವೊಂದರ `ಉದಿಪನ'ಕ್ಕೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಉತ್ತೇಜನ ನೀಡುವುದರೊಂದಿಗೆ ಬಹು ಸಮಯದ ಈವೊಂದು ಕೊರತೆ ನೀಗಿಸುವಲ್ಲಿ ಹಾಗೂ ರಂಗ ಕಲಾಕ್ಷೇತ್ರದಲ್ಲೂ ಗುರುಪುರದ ಹೆಸರು ದಾಖಲಿಸಲು ನೆರವಾಗಿರುವುದು ನಿಜಕ್ಕೂ ಹೆಮ್ಮೆಯ, ಅವಿಸ್ಮರಣೀಯ ಸಂಗತಿ. ಇದೀಗ ಉದ್ಘಾಟನೆ ಗೊಂಡಿರುವ `ರಂಗ್‍ದ ಕಲಾವಿದೆರ್ ಗುರುಪುರ' ತಂಡವೇ ಇದಕ್ಕೆ ಸಾಕ್ಷ್ಯಿಯಾಗಿದೆ.

ವಜ್ರದೇಹಿ ಮಠದಲ್ಲಿ ಮಾ.12ರಂದು ನಡೆದ ಸರಳ ಸಮಾರಂಭವೊಂದರಲ್ಲಿ ಗುರುಪುರಕ್ಕೇ ಪ್ರಥಮವೆನ್ನಲಾದ ಈ ತಂಡ ಸ್ವಾಮೀಜಿಯ ಹಿತವಚನದೊಂದಿಗೆ ರಂಗ ಚಟುವಟಿಕೆಗೆ ಅಡಿಯಿಟ್ಟಿದೆ. ಜೊತೆಗೆ ತಂಡದ ಹೊಸ ಕಾಣ್ಕೆಯಾದ `ಬದ್ಕೆರಾಪುಜಿ' ನಾಟಕದ ಮುಹೂರ್ತವೂ ನಡೆಯಿತು.

ಹೊಸ ವರ್ಷದ ಆರಂಭದಲ್ಲಿ ಹೊಸ ಹುರುಪಿನೊಂದಿಗೆ ರೂಪುಗೊಂಡ ಈ ಯುವ ತಂಡಕ್ಕೆ ಸ್ವಾಮೀಜಿ ಧೈರ್ಯ ಮತ್ತು ಕೆಲವು ಧ್ಯೇಯೋಕ್ತಿ ಉಸುರಿದರು. ``ಕಲಾ ತಂಡವು ಉತ್ತಮ ಆಲೋಚನೆಯೊಂದಿಗೆ ಉತ್ತಮ ನಾಟಕ ನೀಡುವಂತಾಗಬೇಕು. ನಾಟಕವು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಮತ್ತು ಇದು ನಿಂತ ನೀರಾಗದೆ, ಬೆಳೆದು ನಾಲ್ದೆಸೆಗೆ ಪಸರುವಂತಾಗಬೇಕು'' ಎಂದು ಸ್ವಾಮೀಜಿ ಆಶಿಸಿದರು.

ಒಬ್ಬ ಸಮರ್ಥ ಕಲಾವಿದನಾಗಬೇಕಿದ್ದರೆ, ಆತ ಅನುಕರಣೆಯಿಂದ ಹೊರಬಂದು ಸ್ವಂತಿಕೆಗೆ ಹೆಚ್ಚು ಒತ್ತು ನೀಡಬೇಕು. ಆಗ ಮಾತ್ರ ಆತ ಬೆಳೆಯುತ್ತಾನೆ ಮತ್ತು ಎಲ್ಲೆಡೆ ತನ್ನದೇ ಆದ ಛಾಪು ಒತ್ತುತ್ತಾನೆ. ಈ ಮಧ್ಯೆ ಹಲವು ಎಡರು-ತೊಡರುಗಳು ಬಂದರೂ ಕಲಾವಿದನಾಗಿ ಆತ ಧೈರ್ಯಗೆಡದೆ ಮುನ್ನುಗ್ಗಬೇಕು. ಅಂತಹ ಸಾಹಸಮಯ ಕೆಲಸಕ್ಕೆ ಇಳಿದಿರುವ ಗುರುಪುರದ ರಂಗ ಕಲಾಸಕ್ತ ಯುವ ತಂಡ ಹಾಗೂ ಇವರಿಗೆ ಪ್ರೋತ್ಸಾಹ ನೀಡುತ್ತಿರುವ ಸ್ವಾಮೀಜಿಯ ಕೆಲಸ ಮೆಚ್ಚತಕ್ಕದ್ದು ಎಂದು ತುಳು ರಂಗಭೂಮಿ ಕಲಾವಿದ ನವೀನ್ ಶೆಟ್ಟಿ ಅಳಕೆ ಅಭಿಪ್ರಾಯ ವ್ಯಕ್ತಪಡಿಸಿದರು.

ರಂಗ್‍ದ ಕಲಾವಿದೆರ್ ಗುರುಪುರಕ್ಕೆ ಉಜ್ವಲ ಭವಿಷ್ಯ ಸಿಗಲಿ ಎಂದು ಉದ್ಯಮಿ ಪ್ರವೀಣ್ ಶೆಟ್ಟಿ ಹೇಳಿದರು. ವೇದಿಕೆಯಲ್ಲಿ ವಿಹಿಂಪ ಮುಖಂಡ ವಿಷ್ಣು ಕಾಮತ್, ಕತೆ-ಸಂಭಾಷಣೆಗಾರ ಪ್ರಶಾಂತ್ ಗುರುಪುರ, ನಿರ್ದೇಶಕ ಪ್ರಶಾಂತ್(ಪಚ್ಚು) ಕೈಕಂಬ ಹಾಗೂ ವರದರಾಜ್ ಉಪ್ಪುಗೂಡು ಇದ್ದರು.

ತಂಡದ ಸಂಕ್ಷಿಪ್ತ ಪರಿಚಯ : ಗುರುಪುರದಲ್ಲಿ ಹಿಂದೆ ಯುವಕ ಸಂಘದ/ಹಳೆ ವಿದ್ಯಾರ್ಥಿ ವಾರ್ಷಿಕೋತ್ಸವಕ್ಕೆ ಮಾತ್ರ ಸೀಮಿತವಾಗಿದ್ದ ವರ್ಷಕ್ಕೊಂದು ಬಾರಿಯ ನಾಟಕದ ಮೂಲಕ ಶ್ರೇಷ್ಠ ಕಲಾವಿದರಾಗಿ ಹೆಸರು ಗಳಿಸಿರುವ ಕೆಲವರ (ಗೋಪಾಲ ಶೆಟ್ಟಿ, ಟೈಲರ್, ಸುರೇಶ್ ರಾವ್-ನಿವೃತ್ತ ಶಿಕ್ಷಕ, ಮಾಧವ ಮಾಸ್ತರ್, ಚಿದಾನಂದ ಪೂಜಾರಿ ಬಡಕರೆ, ಶೇಖರ್ ಶೆಟ್ಟಿ ಕಲ್ಲಕಲಂಬಿ, ರಮೇಶ್ ಕಾವ, ಚಂದ್ರಹಾಸ ಕಾವ, ನೋಣಯ್ಯ ಜಿ ಕೆ...) ಕಲಾ ನೈಪುಣ್ಯತೆಯನ್ನು ಈಗಲೂ ಸ್ಮರಿಸಿಕೊಳ್ಳುವ ಮಂದಿ ಗುರುಪುರದಲ್ಲಿದ್ದಾರೆ. ಆದರೆ ಇಲ್ಲಿ ಇದುವರೆಗೂ ರಂಗ ಚಟುವಟಿಕೆಗೆ ಸಾಂಘಿಕ ಚಾಲನೆ ನೀಡಬೇಕೆಂದು ಯಾರೂ ದಿಟ್ಟ ಹೆಜ್ಜೆ ಇಟ್ಟಂತಿಲ್ಲ. ಆದರೆ ವಜ್ರದೇಹಿ ಸ್ವಾಮಿಯ ದೂರಾಲೋಚನೆಯಿಂದ ಆ ಕೆಲಸವೊಂದು ಸಾಕಾರಗೊಂಡಿದೆ. ಪ್ರಸಕ್ತ ಗುರುಪುರ ತಂಡದಲ್ಲಿ ಯುವ-ಉತ್ಸಾಹಿ ಕಲಾವಿದರಿದ್ದು, ಇವರಿಂದ ರಂಗಭೂಮಿ ಕ್ಷೇತ್ರದಲ್ಲಿ ಗುರುಪುರದ ಹೆಸರು ದಾಖಲಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಯಾಕೆಂದರೆ, ಅಂತಹ ನುರಿತ ಹಾಗೂ ಸೂಕ್ಷ್ಮ ಮನಸ್ಸುಗಳ ಸಂಗಮ ರಂಗ್‍ದ ಕಲಾವಿದೆರ್ ಗುರುಪುರ ತಂಡಲ್ಲಿದ್ದಾರೆ.

ತಂಡದ ಕಲಾವಿದರು : ಪ್ರಶಾಂತ್ ಗುರುಪುರ(ತಂಡದ ಸಾರಥ್ಯ), ಶ್ರೀ ಜಿ ಎಸ್ ಗುರುಪುರ(ಸಾಹಿತ್ಯ), ಪ್ರಶಾಂತ್ ಯಾನೆ ಪಚ್ಚು, ಕೈಕಂಬ(ನಿರ್ದೇಶಕ), ಸಚಿನ್ ಗುರುಪುರ, ಶಮಿತ್ ಎಡಪದವು, ಅಭಿಜಿತ್ ಪಚ್ಚಿನಡ್ಕ, ವರ್ಷಾ(ಮಣೇಲ್), ರಮ್ಯಾ(ಕೈಕಂಬ), ತೇಜಸ್ವಿನಿ(ಕೈಕಂಬ), ಯಕ್ಷಿತಾ, ಉಮೇಶ್ ವಾಮದಪದವು, ಉತ್ಸವ ವಾಮಂಜೂರು, ಭರತ್ ಗುರುಪುರ, ಜೀವನ್ ಗುರುಪುರ, ಸುಕೇಶ್ ಗುರುಪುರ ಮತ್ತು ಸುಪ್ರೀತಾ.

``ಹಣವಂತರು, ಅಧಿಕಾರವಿರುವವರೆದುರು ಬಡವರ ಜೀವನ ದುರ್ಲಬವಾಗಿರುತ್ತದೆ ಎಂಬ ಕತಾಸಾರವಿರುವ, ಹಾಸ್ಯಭರಿತ ಸಾಮಾಜಿಕ ಕಳಕಳಿಯ ನಾಟಕ `ಬದ್ಕೆರಾಪುಚಿ'. ಇದು ಮೇ 8ರಂದು ವಜ್ರದೇಹಿ ಮಠದಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ'' ಎಂದು ಕೃತಿಕಾರ ಪ್ರಶಾಂತ್ ಗುರುಪುರ ಮತ್ತು ಶ್ರೀ ಜಿ ಎಸ್ ಗುರುಪುರ ತಿಳಿಸಿದರು.

 

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here