Thursday 25th, April 2024
canara news

ತುಳುನಾಡಿನಲ್ಲೊಬ್ಬ ಅಕ್ಷರ ಯೋಗಿ-ಪ್ರಕಾಶ್ ಅಂಚನ್ ಬಂಟ್ವಾಳ

Published On : 22 Mar 2017


ಬರಹ: ಹೇಮಂತ್ ಅರಳ-ಬಂಟ್ವಾಳ
ಜನನಿ ಜನ್ಮಭೂಮಿಯು ಸ್ವರ್ಗಕ್ಕಿಂತ ಪ್ರಿಯವಾದುದು ಎಂಬುದೊಂದು ಮಾತಿದೆ, ಹಾಗಯೇ ನಾವು ಹುಟ್ಟಿದ ನಾಡಿಗೆ ಅಥವಾ ದೇಶಕ್ಕೆ ನಮ್ಮಿಂದಾದ ಸತ್ಕರ್ಮಗಳನ್ನು ಮಾಡಬೇಕು ಎನ್ನುವ ಆಸೆ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ, ಆದರೆ ಇದಕ್ಕೆ ದೈವ ಬಲವು ಬೇಕು. ನಾವು ಬೆಳಗ್ಗೆ ಎದ್ದು ದೇವರಿಗೆ ಕೈ ಮುಗಿಯುತ್ತಾ, ದೇವರೇ ವಿಧ್ಯಾ-ಬುದ್ಧಿ ಕರುಣಿಸಪ್ಪಾ ಎಂದು ಪ್ರಾರ್ಥಿಸುತ್ತೇವೆ, ಏಕೆಂದರೆ ಮನುಷ್ಯನಾದವನಿಗೆ ತನ್ನ ಜೀವನದಲ್ಲಿ ವಿಧ್ಯೆ ಮತ್ತು ಬುದ್ಧಿ ಮಹತ್ತರವಾದ ಬೆಳವಣಿಗೆಯನ್ನು ಹಾಗೂ ಸ್ಥಾನ ಮಾನವನ್ನು ಕಲ್ಪಿಸುತ್ತದೆ.ಒಂದು ಕಾಲದಲ್ಲಿ ಬಡವನಾಗಿ ಹುಟ್ಟಿದವನಿಗೆ ವಿಧ್ಯೆಯೆಂಬುವುದು ಕನಸಿನ ಮಾತಾಗಿತ್ತು, ಬಡವರಿಗೆ ವಿಧ್ಯೆಯ ಮಹತ್ವವೇ ತಿಳಿಯದ ಕಾಲವೊಂದಿತ್ತು, ಕಾಲ ಬದಲಾಗುತ್ತಾ ಶಿಕ್ಷಣ ಪದ್ದತಿಯು ಬದಲಾಯಿತು.

ಅಂಥಾ ಒಂದು ಬಡ ಕುಟುಂಬದಲ್ಲಿ ಜನಿಸಿ ಶಿಕ್ಷಣದಿಂದ ವಂಚಿತರಾಗಿ ತನ್ನ ಚಿಕ್ಕ ವಯಸ್ಸಿನಲ್ಲೇ ಹೊಟ್ಟೆಪಾಡಿಗಾಗಿ ದೂರದ ಮುಂಬಾಯಿಗೆ ಹೋಗಿ ಅಲ್ಲಿ ಹೊಟೇಲು ಕೆಲಸಕ್ಕೆ ತನ್ನನ್ನ ತೊಡಗಿಸಿಕೊಂಡು, ಮುಂದೆ ಹಂತ ಹಂತವಾಗಿ ತನ್ನ ಸ್ವಂತ ಸಾಮಾರ್ಥ್ಯದಿಂದ ಬೆಳೆದು ಈಗ ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯಲ್ಲಿ ಬೃಹತ್ತಾದ ಬಟ್ಟೆ ಮಳಿಗೆಯೊಂದನ್ನು ಸ್ಥಾಪಿಸಿ, ಊರಿನ ಅದೆಷ್ಟೋ ಬಡ ಯುವಕ ಯುವತಿಯರಿಗೆ ಕೆಲಸ ದೊರಕಿಸಿರುವ ಅಂಚನ್ ಗಾರ್ಮೆಟಿನ ಮಾಲಕರಾದ ಪ್ರಕಾಶ್ ಅಂಚನ್ ಅವರೂ ಒಬ್ಬರಾಗಿರುತ್ತಾರೆ. ತನ್ನ ಸಹೋದರರೊಂದಿಗೆ ವ್ಯವಹಾರದ ವಹಿವಾಟು ನೋಡಿಕೊಳ್ಳುತ್ತ, ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾ, ತನಗೆ ದೇವರು ಕೊಟ್ಟ ಬಿಕ್ಷೆಯಲ್ಲಿ ಒಂದಿಷ್ಟನ್ನು ಸಮಾಜಮುಖಿ ಕೆಲಸಗಳಿಗೆ ತೊಡಗಿಸಿಕೊಂಡಿರುವರು.

ಹಿಂದೂ ಸಂಪ್ರದಾಯ ಹಾಗೂ, ದೈವ-ದೇವರಲ್ಲಿ ಅಪಾರವಾದ ನಂಬಿಕೆಯನ್ನಿಟ್ಟುಕೊಂಡಿರುವ ಇವರು ಅಜೀರ್ಣಾವಸ್ಥೆಯಲ್ಲಿದ್ದ ಅದೆಷ್ಟೋ ದೈವ-ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವರು, ಅಂತೆಯೇ ಜೀರ್ಣೋದ್ಧಾರಗೊಂಡ ದೈವ-ದೇವಸ್ಥಾನಗಳಲ್ಲಿ ವರ್ಷಂಪ್ರತಿ ನಡೆಯುವ ಪರ್ವ ಹಾಗೂ ಜಾತ್ರಾ ಮಹೋತ್ಸವವು ಇವರ ಮುಂದಳುತ್ವದಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯುತ್ತಿದೆ. ತನ್ನಿಂದಾದ ಸೇವೆಯನ್ನು ಈ ಸಮಾಜಕ್ಕೆ ಒದಗಿಸಬೇಕು ಎಂಬ ಸದುದ್ದೇಶದಿಂದ ತನ್ನ ಸ್ವಗ್ರಾಮವಾದ ಕರೆಂಕಿ ಎಂಬಲ್ಲಿ ಕರೆಂಕಿ ಶ್ರೀದುರ್ಗಾ ಪ್ರೆಂಡ್ಸ್ ಕ್ಲಬ್ ಎಂಬ ಸಂಸ್ಥೆಯನ್ನು ಆರಂಬಿಸಿ ಅದರ ಅಧ್ಯಕ್ಷತೆಯನ್ನು ತಾವೇ ವಹಿಸಿಕೊಂಡು ಸಂಸ್ಥೆಯನ್ನು ಯಶಸ್ವಿಯ ಉತ್ತುಂಗಕ್ಕೇರಿಸುವಲ್ಲಿ ಅಹರ್ನಿಶಿ ದುಡಿಯುತ್ತಿದ್ದಾರೆ..

 

ಇದರ ಮೊದಲ ಹಂತವಾಗಿ ಕರೆಂಕಿ ಶ್ರೀದುರ್ಗಾ ಪ್ರೆಂಡ್ಸ್ ಕ್ಲಬ್ ವತಿಯಿಂದ ದೇಶದಲ್ಲಿ ಸಮಾನ ಶಿಕ್ಷಣ ಜಾರಿ, ರಾಜ್ಯಭಾಷಾ ಶಿಕ್ಷಣಕ್ಕೆ ಮೊದಲ ಆಧ್ಯತೆಯೊಂದಿಗೆ ಸರಕಾರಿ ಶಾಲೆಗಳನ್ನು ಉಳಿಸಿ,ಬೆಳೆಸಿ ಎಂಬ ಶಿಕ್ಷಣ ಅಭಿಯಾನ ಆಂಧೋಲನವನ್ನು ಆರಂಬಿಸಿರುತ್ತಾರೆ, ಅಲ್ಲದೆ ತನ್ನ ಊರಾದ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಶಾಲೆಯ ವಿಚಾರವಾಗಿ ದೀರ್ಘ ಅಧ್ಯಯನ ಮಾಡಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆಯನ್ನು ದತ್ತುಸ್ವೀಕರಿಸಿರುತ್ತಾರೆ. ಮೊದಲಿಗೆ ಕೇವಲ 40 ವಿಧ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಈಗ ಸುಮಾರು 230 ವಿಧ್ಯಾರ್ಥಿಗಳಿದ್ದು ಎಲ್ಲ ವ್ಯವಸ್ಥೆಯೊಂದಿಗೆ ಮಧ್ಯಾಹ್ನದ ಬಸಿಯೂಟದ ವ್ಯವಸ್ಥೆಯನ್ನು ಇವರ ಸ್ವಂತ ಖರ್ಚಿನಿಂದಲೆ ನೆರವೇರಿಸುತ್ತಿದ್ದಾರೆ. ಶಾಲೆಯನ್ನು ಇನ್ನೂ ಉತ್ತಮಗೊಳಿಸುವ ಉದ್ದೇಶದೊಂದಿಗೆ ಸುಮಾರು ರೂಪಾಯಿ1.5ಕೋಟಿ ವೆಚ್ಚದಲ್ಲಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.

 

ಇವರ ಈ ಮಹಾನ್ ಸಾಹಸಕ್ಕೆ ಕೆಲವು ಸಂಘ ಸಂಸ್ಥೆಗಳು ಕೈ ಜೋಡಿಸಿದ್ದು ಆರ್ಥಿಕ ಸಹಾಯದ ಭರವಸೆ ನೀಡಿರುತ್ತಾರೆ. ಯಾರಲ್ಲಿಯೂ ಕೈ ಚಾಚದೆ ತನ್ನ ಸಾಮರ್ಥ್ಯದಿಂದಲೆ ಕೆಲಸವನ್ನು ಆರಂಭಿಸಿರುವ ಇವರು ಆರ್ಥಿಕ ಸಹಾಯ ನೀಡಿದಲ್ಲಿ ಮನ:ಪೂರ್ವಕ ಸ್ವೀಕರಿಸುವ ಮನೋಭಾವ ಹೊಂದಿರುತ್ತಾರೆ. ದೇಶವ್ಯಾಪ್ತಿ ಸಮಾನ ಶಿಕ್ಷಣ ಜಾರಿ ಅಭಿಯಾನ ಆಂಧೋಲನವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಆರಂಭಿಸಿ ಅದನ್ನು ಹೊರ ರಾಜ್ಯಗಳಾದ ಕೇರಳ ಹಾಗೂ ತಮಿಳು ನಾಡು ರಾಜ್ಯಗಳಿಗೆ ವಿಸ್ತರಿಸಿ ಅಲ್ಲಿಯ ಸರಕಾರಿ ಶಾಲೆಗಳಿಗೆ ಮುಖ:ತ ಬೇಟಿಕೊಟ್ಟು, ಅಲ್ಲಿನ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಶಾಲೆಗಳ ಅಧ್ಯಯನ ಮಾಡಿ ಬಂದಿರುತ್ತಾರೆ . ಅಲ್ಲದೆ ಅಲ್ಲಿನ ಶಾಲೆಗಳಲ್ಲಿ ಶಿಕ್ಷಣ ಜಾಗೃತಿಯ ಕಂಪನ್ನು ಪಸರಿಸಿರುತ್ತಾರೆ.

ತನ್ನ ಈ ಯಶಸ್ವಿ ಹೋರಾಟದಿಂದ ಸ್ಪೂರ್ತಿಗೊಂಡು ರಾಜಸ್ಥಾನದ ಇವರ ಕೆಲವು ಮಿತ್ರರು "ನಮ್ಮ ರಾಜ್ಯದಲ್ಲಿ ಶಿಕ್ಷಣವು ಬಡವರ ಮರೀಚಿಕೆಯಾಗಿದೆ, ನಮ್ಮ ಹಳ್ಳಿಗಳಲ್ಲಿ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ, ಶಿಕ್ಷಣ ಪದ್ಧತಿಯು ಸರಿಯಾಗಿಲ್ಲ, ಸರಕಾರಿ ಶಾಲೆಗಳಿದ್ದರೂ ಅಲ್ಲಿ ವ್ಯವಸ್ಥಿತವಾದ ಶಿಕ್ಷಣ ದೊರೆಯುತ್ತಿಲ್ಲ, ನಮ್ಮ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ನೀವು ನಮ್ಮೂರಿಗೆ ಬಂದು, ನಿಮ್ಮ ಶಿಕ್ಷಣ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಮ್ಮೂರಿಗೂ ವಿಸ್ತರಿಸಿ ಅದರ ಪ್ರಯೋಜನವನ್ನು ನಮ್ಮ ಜನರೂ ಪಡೆದಂತಾಗಬೇಕು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾವೇ ಮಾಡಿಕೊಡುತ್ತೇವೆ" ಎಂದು ಕೇಳಿಕೊಂಡಾಗ ಪ್ರಕಾಶ್ ಅಂಚನ್ರು ಯಾವುದೇ ಎದುರು ಮಾತಾಡದೇ ಒಂದು ದಿನವನ್ನು ನಗದಿ ಪಡಿಸಿ ರಾಜಸ್ಥಾನಕ್ಕೆ ಹಕ್ಕಿಯಂತೆ ಹಾರಿಯೇ ಬಿಟ್ಟರು.

ಕಳೆದ ಪೆಬ್ರವರಿಯಲ್ಲಿ ರಾಜಸ್ಥಾನದ ಜಾಲೋರ್ ಗ್ರಾಮದಲ್ಲಿ 5 ದಿನಗಳ ಸಮಾನ ಶಿಕ್ಷಣ ಜಾರಿ ಹಾಗೂ ಸರಕಾರಿ ಶಾಲೆ ಉಳಿಸಿ, ಬೆಳಸಿ ಅಭಿಯಾನ ಆಂಧೋಲನವನ್ನು ಯಶಸ್ವಿಯಾಗಿ ನೆರವೇರಿಸಿ ಬಂದಿರುವರು.ಅಲ್ಲದೆ ಅಲ್ಲಿನ ಶಾಲೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅಲ್ಲಿಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಭರವಸೆಯಿತ್ತಿದ್ದಾರೆ. ಅದರಂತೆ ಉತ್ತರ ರಾಜ್ಯಕ್ಕೂ ತನ್ನ ಅಭಿಯಾನ ಆಂಧೋಲನವನ್ನು ವಿಸ್ತರಿಸಿ ಅಲ್ಲಿಯ ಜನರಲ್ಲಿ ತಮ್ಮ ಮಕ್ಕಳಿಗೆ ಶ್ರೇಷ್ಠ ಶಿಕ್ಷಣ ಒದಗುವ ಆಶಾಭಾವನೆ ಮೂಡಿಸಿರುವರು. ಇವರ ಈ ಮಹಾನ್ ಸತ್ಕಾರ್ಯವನ್ನು ಗುರಿತಿಸಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅನೇಕ ಸನ್ಮಾನ ಸಮಾಂಭಗಳು ಇವರನ್ನು ವಿಜ್ರಂಭಿಸಿದೆ.

ಇವರ ಬಗ್ಗೆ ತಿಳಿಸಲು ಹೋದರೆ ಇನ್ನೂ ಅನೇಕ ವಿಚಾರಗಳಿವೆ. ಇವರಿಂದ ಇನ್ನೂ ಉತ್ತಮ ಕಾರ್ಯಗಳು ನಡೆಯಲಿ, ಇಂತಹ ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಶಕ್ತಿಯನ್ನು ದೇವರು ಇವರಿಗೆ ಕರುಣಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆನು..




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here