ಕುಂದಾಪುರ: ಆಟವೇ ಪ್ರಧಾನವಾಗಿರುವ ಪುಟಾಣಿಗಳಿಗೆ ಪಾಠಗಳು ಮತ್ತು ಶಿಸ್ತಿನ ಪ್ರಥಮ ಪರಿಚಯ ಆಗುವುದೇ ಅಂಗನವಾಡಿಗಳಲ್ಲಿ. ಭವಿಷ್ಯದ ನಾಗರಿಕರನ್ನು ರೂಪಿಸುವಲ್ಲಿ ಆರಂಭಿಕ ಕಾರ್ಯಗಳನ್ನು ನಡೆಸುವ ಅಂಗನವಾಡಿ ಕಾರ್ಯಕರ್ತೆಯರ ಸಾಧನೆ ಮಹತ್ವ ಪೂರ್ಣವಾದುದು ಎಂದು ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಯು. ರಮೇಶ್ ಕಾರಂತ ಹೇಳಿದರು.
ಉಪ್ಪಿನಕುದ್ರು ಶ್ರೀ ಸಿದ್ಧಿವಿನಾತಕ ದೇವಳ ರಥೋತ್ಸವದ ಸಂದರ್ಭದಲ್ಲಿ ಸ್ಥಳೀಯ ವಾಸುದೇವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ರಾಜ್ಯ ಪ್ರಶಸ್ತಿ ಪುರಸ್ಕ್ರತೆ ಪೇಮಲತಾ ಗಣೇಶ್ ಅವರಿಗೆ ‘ಶ್ರೀ ಸಿದ್ಧಿವಿನಾಯಕ ಅನುಗ್ರಹ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ದೇವಳದ ಅರ್ಚಕ ಯು. ವೆಂಕಟರಮಣ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ವಾರ್ಷಿಕ ರಥೋತ್ಸವದ ಸಂದರ್ಭದಲ್ಲಿ ಸ್ಥಳೀಯವಾಗಿ ಸಾಧನೆಗೈದವರನ್ನು ಗುರುತಿಸಿ ದೇವಳದ ವತಿಯಿಂದ ಸಮ್ಮಾನಿಸುವ ಸಂಪ್ರದಾಯವಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಸ್ಥಾಪಿಸಿ, ಅದರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಗಳಿಗಾಗಿ ಪ್ರತಿಷ್ಠಿತ ರಾಜ್ಯಪ್ರಶಸ್ತಿ ಪಡೆದ ಪ್ರೇಮೆಲತಾ ಗೆಣೇಶರವರನ್ನು ಗೌರವಿಸಲಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೇಮಲತಾ ಅಂಗನವಾಡಿ ಕೇಂದ್ರದ ಸಮಗ್ರ ಅಭಿವೃದ್ಧಿಗೆ ನೆರವು ನೀಡಿದ ವಿವಿಧ ಇಲಾಖೆಗಳಿಗೂ ದಾನಿಗಳಿಗೂ ಕತಜ್ಞತೆ ಸಲ್ಲಿಸಿದರು.
ದೇವಳದ ಆಡಳಿತಾಧಿಕಾರಿ ವಸಂತ ಕುಮಾರ್, ಸುರೇಖಾ ಕಾರಂತ, ಕೆ.ಜಿ.ವೈದ್ಯ, ದೇವಳದ ಸ್ಥಾಪಕ ಅರ್ಚಕ ಕುಟುಂಬ ಸದಸ್ಯ ವೇದಮೂರ್ತಿ ನಾರಾಯಣ ಐತಾಳ ಸಜಿಪ ಮುನ್ನೂರು, ಸುಷೇಣ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಪ್ರೇಮಲತಾ ಗಣೇಶ್ ರವರ ಸಾಧನೆ: ಬಡಕುಟುಂಬದಲ್ಲಿ ಜನಿಸಿದ ಪ್ರೇಮಲತಾ ಪರಿಶ್ರಮದಿಂದ ಯಶಸ್ಸು ಕಂಡ ದಿಟ್ಟ ಮಹಿಳೆ. ಸರಸ್ವತಿ ಮತ್ತು ರಾಮಯ್ಯ ಹೋಬಳಿದಾರ್ ಸಂಪತಿಯ ಪತ್ರಿಯಾದ ಈಕೆ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸಾವನ್ನು ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲೂ, ಬೈಂದೂರಿನ ರತ್ತೂಭಾಯಿ ಜನತಾ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭಾಸವನ್ನು ನಡೆಸಿದರು. 1966ರಲ್ಲಿ ಉಪ್ಪಿನಕುದ್ರು ಗಣೇಶ್ ರವರನ್ನು ವರಿಸಿದರು. ಓರ್ವ ಪುತ್ರ, ಮೂವರು ಪುತ್ರಿಯರ ಜೊತೆ ತುಂಬು ಸಂಸಾರ ಸಾಗುತ್ತಿರುವಾಗಲೆ ಪತಿಯ ಅಗಲುವಿಕೆಯಿಂದ ಕಂಗೆಟ್ಟರು.
ಮೊದಲಿನಿಂದಲೂ ಸಮಾಜ ಸೇವೆಯ ಹಂಬಲವಿದ್ದ ಪ್ರೇಮಲತಾರಿಗೆ ಈ ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಪ್ರಾರಂಭಿಸಿ ವಿದ್ಯಾದಾನ ಮಾಡುವ ಯೋಚನೆ ಗರಿಗೆದರಿತು. 2004ರಲ್ಲಿ ಉಪ್ಪಿನಕುದ್ರು ಗದ್ದೆ ಬೈಲಿನ ತಾತ್ಕಾಲಿಕ ಶೆಡ್‍ನಲ್ಲಿ ವಾಸುದೇವ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಿದರು. ಈ ಪ್ರದೇಶಕ್ಕೆ ತೀರಾ ಅಗತ್ಯವಾಗಿದ್ದ ಅಂಗನವಾಡಿ ಬಹು ಬೇಗನೆ ಸ್ಥಳೀಯ ಜನದ ಮನಗೆದ್ದಿತು. ಮಳೆಗಾಲದಲ್ಲಿ ಈ ಕೇಂದ್ರ ಉಪ್ಪಿನಕುದ್ರು ಶ್ರೀ ಸಿದ್ಧಿವಿನಾಯಕ ದೇವಾಲಯದ ದಕ್ಷಿಣ ಪೌಳಿಗೆ ಸ್ಥಳಾಂತರಗೊಂಡಿತು.
ಪ್ರೇಮಲತಾರ ಮನವಿಗೆ ಸ್ಪಂದಿಸಿದ ದಾನಿಗಳು ಅಂಗನವಾಡಿ ಕೇಂದ್ರಕ್ಕೆ 3 ಸೆಂಟ್ಸ್ ಸ್ಥಳವನ್ನು ನೀಡಿದರು. ಸ್ಥಳೀಯ ಗ್ರಾಮ ಪಂಚಾಯತ್, ವಿವಿಧ ಇಲಾಖೆಗಳು ಹಾಗೂ ದಾನಿಗಳ ನೆರವಿನಿಂದ ಆ ಜಾಗದಲ್ಲಿ ಅಂಗನವಾಡಿಯ ಕಟ್ಟಡವನ್ನು ನಿರ್ಮಿಸಲಾಯಿತು. ಪರಿಶ್ರಮದಿಂದ ಅದನ್ನು ಮಾದರಿ ಅಂಗನವಾಡಿಯಾಗಿ ರೂಪಿಸಿದ ಕೀರ್ತಿ ಪ್ರೇಮಲತಾ ಗಣೇಶ್‍ರಿಗೆ ಸಲ್ಲುತದೆ. ಅವರ ಈ ಎಲ್ಲಾ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿದ ಸರ್ಕಾರ ಪ್ರೇಮಲತಾ ಗಣೇಶ್‍ರಿಗೆ ಪ್ರತಿಷ್ಠಿತ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರಿಗೆ ರಾಷ್ಟ್ರ ಪಶಸ್ತಿಯೂ ಒಲಿದಿದ್ದು, ಸರ್ಕಾರಿ ಆದೇಶ ಬರಬೇಕಾಗಿದೆ. ಇದೀಗ ಇವರಿಗೆ ವಿಘ್ನನಿವಾರಕ ಸಿದ್ಧಿ ವ್ವಿನಾಯಕನ ಅನುಗ್ರಹವೆಂಬಂತೆ ದೇವಳ ಕೊಡಮಾಡುವ ‘ಶ್ರೀ ಸಿದ್ಧಿವಿನಾಯಕ ಅನುಗ್ರಹ’ ಪ್ರಶಸ್ತಿಯೂ ಮುಡಿಗೇರಿದೆ.