ಗುರುಪುರ, ಮೇ. 1 : ಇಲ್ಲಿನ ಕಾರಮೊಗರಿನ ಫಲ್ಗುಣಿ ತಟದಲ್ಲಿ ಭವ್ಯ ಹಾಗೂ ಶಿಲಾಮಯವಾಗಿ ನಿರ್ಮಿಸಲಾದ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಿಕ್ಕಮಗಳೂರಿನ ವಿದ್ವಾನ್ ಕೆ ಎಸ್ ನಿತ್ಯಾನಂದರ ನೇತೃತ್ವದಲ್ಲಿ ಮೇ 8ರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೇ 10ರಂದು ಶ್ರೀ ಅಗ್ನಿದುರ್ಗಾ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ನೆರವೇರಲಿದೆ.
ಮೇ 8ರಂದು ಬೆಳಿಗ್ಗೆ 8ರಿಂದ ತೋರಣಪೂಜೆ, ಗ್ರಾಮದೇವತಾ ಪ್ರಾರ್ಥನೆ ಗಣಹೋಮ, ನವಗ್ರಹ ಹೋಮ ಮೊದಲಾದ ಪೂಜಾ ವಿಧಿವಿಧಾನದೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಂಜೆ 6ಕ್ಕೆ ಸುಧೀರ್ ಕಾಮತ್ ಗುರುಪುರ ಸಂಯೋಜನೆಯಲ್ಲಿ ಗಾನ ಸುಧಾ ಲಹರಿ ಜರುಗಲಿದೆ.
ಮೇ 9ರಂದು ಬೆಳಿಗ್ಗೆ 8ರಿಂದ ಕಲಶ ಸ್ಥಾಪನೆ, ಪೀಠ ಪ್ರತಿಷ್ಠೆ ಜರುಗಲಿದೆ. ಸಂಜೆ 6ರಿಂದ ಯಕ್ಷಕಲಾ ಪೊಳಲಿ ಮಹಿಳಾ ಸದಸ್ಯೆಯರಿಂದ `ಮೇಧಿನ ನಿರ್ಮಾಣ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಮೇ. 10ರಂದು ಬೆಳಿಗ್ಗೆ 8ರಿಂದ ಅಷ್ಟಬಂಧದೊಂದಿಗೆ ಬ್ರಹ್ಮಕಲಶಾಭಿಷೇಕ, ಚಂಡಿಕಾ ಹೋಮ ಜರುಗಲಿದೆ. ಮಧ್ಯಾಹ್ನ 2ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದ ಕೂಡುವಿಕೆಯಲ್ಲಿ `ಭೀಷ್ಮ ವಿಜಯ' ತಾಳಮದ್ದಳೆ ಸಾದರಗೊಳ್ಳಲಿದೆ. ಮೂರೂ ದಿನ ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಲಿದೆ. ಅಂದು ಸಂಜೆ 6ಕ್ಕೆ ಕೆ ಎಸ್ ನಿತ್ಯಾನಂದ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಕಟೀಲು ಅನಂತಪದ್ಮನಾಭ ಆಸ್ರಣ್ಣ ಮತ್ತು ಶ್ರೀಕ್ಷೇತ್ರ ಪಡ್ಯಾರಬೆಟ್ಟಿವಿನ ರಾಮದಾಸ ಆಸ್ರಣ್ಣ ಆಶೀರ್ವಚನ ನೀಡುವರು. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುಣೆ ಎಸ್‍ಎಲ್‍ಎಸ್ ನಿರ್ದೇಶಕಿ ಹಾಗೂ ಡೀನ್ ಡಾ ಶಶಿಕಲಾ ಗುರುಪುರ ಆಶಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ರಮಾನಾಥ್ ರೈ, ಶಾಸಕ ಮೊೈದಿನ್ ಬಾವ, ಶಾಸಕ ಅಭಯಚಂದ್ರ ಜೈನ್, ಎಂಐಟಿ ಮಣಿಪಾಲ ಜಂಟಿ ನಿರ್ದೇಶಕ ಡಾ ಬಿ ಎಚ್ ವಿ ಪೈ, ಬಂಟರ್ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ, ಉದ್ಯಮಿಗಳಾದ ಯತಿರಾಜ್ ಶೆಟ್ಟಿ, ಸದಾನಂದ ಶೆಟ್ಟಿ, ಸುಧಾಕರ ಅಡಪ, ದಾಮೋದರ ನಿಸರ್ಗ, ರಾಜೇಶ್ ನಾಯ್ಕ್, ದಿನೇಶ್ ಜಿ ಡಿ, ಜಿತೇಂದ್ರ ಎಸ್ ಕೊಟ್ಟಾರಿ ಮತ್ತು ಬಳ್ಕೂರು ಡಾ ಗೋಪಾಲ ಆಚಾರ್ಯ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ ರವಿರಾಜ್ ಶೆಟ್ಟಿ ಪ್ರಕಟಣೆಯೊಂದು ತಿಳಿಸಿದೆ.
ಕ್ಷೇತ್ರದ ಹಿನ್ನೆಲೆ :
ಮಂಗಳೂರು-ಮೂಡಬಿದ್ರೆ ಹೆದ್ದಾರಿ ಮಧ್ಯೆ ಗುರುಪುರದಲ್ಲಿ ಹರಿಯುವ ಫಲ್ಗುಣಿ ನದಿಯ ಕಾರಮೊಗರು ತಟದಲ್ಲಿ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಾಲಯ ನಿರ್ಮಾಣಗೊಂಡಿದೆ. ಇದಕ್ಕೊಂದು ಪುರಾಣ ಹಿನ್ನೆಲೆಯಿದ್ದು, ದೇವಮಂಗಳ ಪ್ರಶ್ನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಸಾವಿರಾರು ವರ್ಷಗಳ ಹಿಂದೆ ಋಷಿಮುನಿಯೊಬ್ಬರು ದೇವಿಶಕ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆಗ ಇಲ್ಲಿ ವನದುರ್ಗೆ, ಗೋಪಾಲಕೃಷ್ಣ, ವಜ್ರೇಶ್ವರಿ, ಧರ್ಮದೇವತೆ, ಸತ್ಯದೇವತೆ, ಅಣ್ಣಪ್ಪ ಪಂಜುರ್ಲಿ ಹಾಗೂ ನಾಗಬ್ರಹ್ಮ ಸಾನಿಧ್ಯವಿತ್ತು. ಇಲ್ಲಿ 600 ವರ್ಷಗಳ ಹಿಂದಿನವರೆಗೂ ಪೂಜೆ ನಡೆಯುತ್ತಿತ್ತು. ಕ್ರಮೇಣ ಶಿಥಿಲಾವಸ್ಥೆ ಹೊಂದಿ, ಇಲ್ಲಿಗೆ ದೇವ-ದೈವಶಕ್ತಿ ಅಡಕವಾಗಿರುವುದು ತಿಳದು ಬಂದಿದೆ. ನಂತರ ವ್ಯಾಪಾರಿಯೊಬ್ಬನ ನಾವೆ ಇಲ್ಲಿ ಮುಂದೆ ಚಲಿಸದಾಗ ಇಲ್ಲಿ ಶ್ರೀದೇವಿಯ ತೊಡಕಿರುವುದು ಗೊತ್ತಾಯಿತು ಮತ್ತು ಆತ ದೇವಿಯನ್ನು ಪೂಜಿಸಲಾಗಿ ನಾವೆ ಮುಂದಕ್ಕೆ ಚಲಿಸುವುದು. ನಂತರ ಈ ಕ್ಷೇತ್ರ ಪುನರ್ ನಿರ್ಮಾಣಗೊಂಡಿದ್ದು, 400 ವರ್ಷಗಳವರೆಗೂ ಗ್ರಾಮ ದೇವತೆಯಾಗಿ ಪೂಜಿಸಲ್ಪಡುತ್ತಿದ್ದಳು. 185 ವರ್ಷಗಳ ಹಿಂದೆ ಪ್ರಕೃತಿ ವಿಪತ್ತಿನಿಂದ ಈ ಕ್ಷೇತ್ರ ಪುನಾ ನಾಮಾಶೇಷಗೊಂಡಿದು, ಈ ವಿಷಯ ದೇವಮಂಗಲ ಪ್ರಶ್ನೆಯಲ್ಲಿ ತಿಳಿದು ಬಂತು. ಆ ಅದರಂತೆ ಗುತ್ತಿನವರು, ಗ್ರಾಮಸ್ಥರನ್ನು ಒಟ್ಟು ಸೇರಿಸಿ ನಿರ್ಮಿಸಲಾದ ಕ್ಷೇತ್ರವೇ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಂದಿರವಾಗಿದೆ.