Friday 19th, April 2024
canara news

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ನಾಳೆ ರಾಜ್ಯಾದ್ಯಂತ ಬಿಡುಗಡೆ

Published On : 25 Aug 2018   |  Reported By : Rons Bantwal


ಕಿರಿಕ್ ಪಾರ್ಟಿ ಖ್ಯಾತಿಯ ಯುವ ಸಿನಿಮಾ ನಿರ್ದೇಶಕ, ಕರಾವಳಿ ಮೂಲದ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ರಾಮಣ್ಣ ರೈ ಕೊಡುಗೆ' ಸಿನಿಮಾವು ಆಗಸ್ಟ್ 24ರಿಂದ ರಾಜ್ಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನಲ್ಲಿ ಭಾರತ್ ಸಿನೆಮಾಸ್, ಪಿವಿಆರ್, ಸಿನೆಪೊಲೀಸ್, ಉಡುಪಿಯಲ್ಲಿ ಅಲಂಕಾರ್, ಐನಾಕ್ಸ್, ಕುಂದಾ ಪುರದಲ್ಲಿ ವಿನಾಯಕ, ಕಾಸರಗೋಡಿನಲ್ಲಿ ಮೂವಿ ಮ್ಯಾಕ್ಸ್, ಕಾರ್ನಿವಾಲ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಸಿನೆಮಾವನ್ನು ರಿಷಬ್ ಶೆಟ್ಟಿ, ಬಿವಿ ರವಿ ರೈ ಕಳಶ, ಅಕ್ಷತಾ ಶೆಟ್ಟಿ, ಜಯರಾಮ್ ಬಿ. ಶೆಟ್ಟಿ ನಿರ್ಮಿಸಿದ್ದಾರೆ. ವೆಂಕಟೇಶ್ ಹಂಗೂರಾಜ್ ಅವರ ಛಾಯಾ ಗ್ರಹಣವಿದೆ. ವಾಸುಕಿ ವೈಭವ್ ಸಂಗೀತ ಒದಗಿಸಿದ್ದಾರೆ. ಕಲೆ ವಸಂತ ಕುಲಕರ್ಣಿ, ಸಂಭಾಷಣೆ ಅಭಿಜಿತ್ ಮಹೇಶ್, ರಾಜ್ ಬಿ ಶೆಟ್ಟಿ, ಸಾಹಿತ್ಯ ಕೆ. ಕಲ್ಯಾಣ್, ತ್ರಿಲೋಕ್, ತ್ರಿವಿಕ್ರಮ್, ಅವಿನಾಶ್ ಬಲೆಕ್ಕಳ, ವೀರೇಶ್ ಶಿವಮೂರ್ತಿ. ಈ ಸಿನೆಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ.

 

ಇಲ್ಲಿ ಬಳಸಲಾಗುತ್ತಿರುವ ಭಾಷೆ ಕೂಡ ಕಾಸರಗೋಡಿನ ಜನರ ಭಾಷೆಯೇ ಆಗಿದ್ದು, ಅದು ವಾಸ್ತವ ಮತ್ತು ನೈಜತೆಗೆ ವಿಶೇಷವಾಗಿ ಸಹಕರಿಸುತ್ತಿದೆ. ಈ ಸಿನಿಮಾವನ್ನು ಕಾಸರಗೋಡು, ಮಂಜೇಶ್ವರ, ಕುಂಬಳೆ, ಉಪ್ಪಳ ಹಾಗೂ ಬಂಟ್ವಾಳದ ಕೈರಂಗಳ ಮತ್ತು ಮಂಗಳೂರು ಮುಂತಾದೆಡೆ ಸುಮಾರು 68 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಸುಮಾರು 134 ವರ್ಷಗಳ ಪುರಾತನ ಶಾಲೆಯೊಂ ದನ್ನು ಕೂಡ ಆರಿಸಿ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ.

ಇದೊಂದು ನಾಯಕ ನಾಯಕಿಯರಿಲ್ಲದ ಚಿತ್ರ. ಇದರಲ್ಲಿ ಮಕ್ಕಳೇ ಪ್ರಬುದ್ಧ ಅಭಿನಯ ನೀಡಿದ್ದಾರೆ. ಜತೆಗೆ ಕನ್ನಡದ ಹಿರಿಯ ನಟ ಅನಂತನಾಗ್ ಅವರು ವಿಶೇಷ ಪಾತ್ರದಲ್ಲಿನಟಿಸಿದ್ದಾರೆ. ಖ್ಯಾತ ರಂಗಭೂಮಿ ಕಲಾವಿದ, ಗಾಯಕ, ಪ್ರಕಾಶ್ ತೂಮಿನಾಡು, ಲಕ್ಷ್ಮಣ್ ಕುಮಾರ್ ಮಲ್ಲೂರು ಅವರು ಕೂಡ ಈ ಚಿತ್ರದಲ್ಲಿ ಪ್ರಧಾನ ಪಾತ್ರ ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರದೀಪ್ ಆಳ್ವಾ ಕದ್ರಿ, ಚೇತನ್ ಜಿ. ಪಿಲಾರ್, ಚಂದ್ರಹಾಸ್ ಶೆಟ್ಟಿ, ಶಶಿರಾಜ್ ಕಾವೂರ್ ಸಹಿತ ರಂಗಭೂಮಿಯ ಬಹುತೇಕ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಹಾಡಾಗಿರುವ ದಡ್ಡ ದಡ್ಡ ಈಗ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ.

ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕ ಸಮಸ್ಯೆ ಜೀವಂತವಿರುವ ಹೊತ್ತಿನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ಹೆಚ್ಚು ಮಹತ್ವ ಪಡೆಯುತ್ತಿದೆ.

ಈ ಸಿನಿಮಾದಲ್ಲಿ ಗಣಿತ ತರಗತಿಗೆ ಮಲಯಾಳಿ ಮೇಸ್ಟ್ರು ಬರುವುದರಿಂದ ಆಗುವ ಸಮಸ್ಯೆ ಕುರಿತು ತಿಳಿಸಲಾಗಿದೆ. ಈಗ ಕಾಸರಗೋಡಿನ ಮಂಗಲ್ಪಾಡಿ ಶಾಲೆಯಲ್ಲಿ ಇಂಥದ್ದೇ ಸಮಸ್ಯೆ ಎದುರಾಗಿದೆ. ಇದು ಕಾಕತಾಳೀಯವೋ ಏನೋ.

ಕಾಸರಗೋಡಿನ ಕನ್ನಡಿಗರ ಸಮಸ್ಯೆಯನ್ನು ಅರಿತು ಮತ್ತು ಅದಕ್ಕೆ ಏನಾದರೂ ಸಹಾಯ ಮಾಡುವ ನಿಟ್ಟಿನಲ್ಲಿ ಈ ಸಿನಿಮಾ ಮಾಡಿದ್ದೇನೆ ಎಂದು ರಿಷಬ್ ಶೆಟ್ಟಿ ಹೇಳುತ್ತಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here