Friday 29th, March 2024
canara news

ಹಿರಿಯ ರಂಗನಟ ಮತ್ತು ಚಲನಚಿತ್ರ ನಟ ಭವಾನಿ ಶಂಕರ್ ಶೆಟ್ಟಿ ನಿಧನ

Published On : 15 Oct 2018   |  Reported By : Rons Bantwal


ಮುಂಬಯಿ, ಅ.14: ಮುಂಬಯಿ ಹವ್ಯಾಸಿರಂಗ ಕಂಡ ಓರ್ವ ಚಿರಪರಿಚಿತ ಕಲಾವಿದ. ಖಳ ನಾಯಕ ನಟನಾಗಿ ಪಾತ್ರದಲ್ಲಿ ಕಲಾಭಿಮಾನಿಗಳ ಗಮನ ಸೆಳೆದ ಭವಾನಿ ಶಂಕರ್ ಶೆಟ್ಟಿ (63.) ಇಂದಿಲ್ಲಿ ಭಾನುವಾರ ಅಲ್ಪಕಾಲದ ಅನಾರೋಗ್ಯದಿಂದ ವಿೂರಾರೋಡ್ ಅಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಲಾ ಜಗತ್ತು ಸಂಸ್ಥೆಯ ಸ್ಥಾಕಪರಲ್ಲೋರ್ವರಾದ ಭವಾನಿ ಶಂಕರ್ ಅವರು ವರನಟ ಡಾ| ರಾಜ್‍ಕುಮಾರ್ ಅವರೊಂದಿಗೆ ಶಬ್ಧವೇದಿ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿ ಭಾರೀ ಜನನ್ನಣೆಗೆ ಪಾತ್ರರಾಗಿದ್ದರು. ಅಂತೆಯೇ ಆ್ಯಂಕರ್ ಕಲ್ಚರಲ್ ಗ್ರೂಪ್ ಮುಂಬಯಿ ತಂಡವು ಕೃಷ್ಣರಾಜ್ ಶೆಟ್ಟಿ ಮುಂಡ್ಕೂರು ನಿರ್ದೇಶಕತ್ವದಲ್ಲಿ ನಾಟಕಕಾರ, ನಿರ್ದೇಶಕ ಅರವಿಂದ್ ಶೆಟ್ಟಿ ಕೊಜಕೊಳಿ ರಚಿಸಿ ಪ್ರದರ್ಶಿಸಿದ `ಕಾಲಾಯ ತಸ್ಮೈ ನಮಃ' ತುಳು ನಾಟಕ ಹಿರಿಯ ರಂಗನಟ ಭವಾನಿ ಶಂಕರ್ ಶೆಟ್ಟಿ (ಅಶೋಕ್ ಪಾತ್ರದಲ್ಲಿ) ಅಭಿನಯಿಸಿದ್ದರು.

ಕಲಾ ಜಗತ್ತು ಬಳಗದಲ್ಲಿ ಪಳಗಿದ ಭವಾನಿ ಹಲವಾರು ನಾಟಕಗಳಲ್ಲಿ ಅಲ್ಲದೆ ಚಲನಚಿತ್ರಗಳಲ್ಲೂ ನಟಿಸಿ ಹೆಗ್ಗಳಿಕೆಗೆ ಪಾತ್ರರಾದ ಮುಂಬಯಿ ರಂಗ ಕಲಾವಿದ. ಸರ್ವೋದಯ ನಾಟಕ ಸಂಘ ಕಿನ್ನಿಗೋಳಿ ಇದರ ಬಯ್ಯಮಲ್ಲಿಗೆ ನಾಟಕದಲ್ಲಿ ಅಭಿನಯಿಸಿದವರು. ಕಲಾ ಜಗತ್ತು ನಾಟಕ ಬಳಗವು ಸಾದರ ಪಡಿಸಿದ ಈ ನಲಿಕೆ ದಾಯೆ ಎಂಬ ನಾಟಕದಲ್ಲಿ ಖಳನಾಯಕ ಶಿವನ ಪಾತ್ರ ನಿಭಾಯಿಸಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದದ್ದರು, ಅಲ್ಲದೆ ಊರ್ದ ಮಾರಿ, ಬರ್ಸ, ಬೊಲ್ಲ ಬದಿ, ಈರಪ್ಪೆ ಮುಂತಾದ ನಾಟಕಗಳಲ್ಲಿ ವಿಭಿನ್ನ ಶೈಲಿಯ ಪಾತ್ರಗಳಿಂದ ಮಿಂಚಿ, ವಿಜಯಕುಮಾರ್ ಶೆಟ್ಟಿ ಅವರ ನಿರ್ದೇಶನದ ನಾವಿಲ್ಲದಾಗ, ಊರೆಲ್ಲಾ ಹೇಳ್ಬೇಡಿ ಮುಂತಾದ ನಾಟಕಗಳಲ್ಲಿ ಉತ್ತಮ ರೀತಿಯ ಅಭಿನಯವಿತ್ತರು. ಪತ್ರಿಕಾ ಬಳಗ ಅಯೋಜಿಸಿದ ನಾಟಕ ಸ್ಪರ್ಧೆಯಲ್ಲಿ ಊರ್‍ದ ಮಾರಿ ನಾಟಕದ ಭೋಜರಾಜ ಹೆಗ್ಡೆ ಪಾತ್ರಕ್ಕಾಗಿ ಉತ್ತಮ ಖಳನಾಯಕ ಪ್ರಶಸ್ತಿ ಪಡೆದಿದ್ದಾರೆ. ಪುರುಷ್, ಗಿಡಪುನಕ್ಲುಲ ಬಲಿಪುನಕ್ಲುಲ ನಾಟಕದಲ್ಲಿ ತ್ರಿಪಾತ್ರ ಅಭಿನಯ. ಕನ್ನಡ ನಾಟಕಗಳಾದ ಯಾರು ಹಿತವರು ಈ ಸಂಸಾರದೊಳಗೆ, ಕರ್ಮ ಬಂಧನ ಮೊದಲಾದ ನಾಟಕಗಳು.

ಕನ್ನಡ, ತುಳು ನಾಟಕವಲ್ಲದೆ ಕನ್ನಡ, ತುಳು ಚಲನಚಿತ್ರಗಳಲ್ಲೂ ಅಭಿನಯಿಸಿಮೆಚ್ಚುಗೆಗೆ ಪಾತ್ರರಾಗಿರುವ ಭವಾನಿ ಬದ್‍ಕ್‍ದ ಬಿಲೆ, ಚೋಮನ ದುಡಿ, ಕನ್ನಡದ ವರನಟ ಡಾ| ರಾಜ್‍ಕುಮಾರ್ ಹಾಗೂ ಜಯಪ್ರದ ಅಭಿನಯದ ಶಬ್ದವೇಧಿ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರದ ಜೊತೆಗೆ ದೂರದರ್ಶನ ಸಣ್ಣ ಪರದೆಯಮೇಲೂ ಕಾಣಿಸಿಕೊಂಡಿರುವ ಇವರು ದೆಹಲಿ ದೂರದರ್ಶನ ಪ್ರಸಾರಿತ ಏಕ್ ಕಹಾನಿ ಹಿಂದಿ ಮಾಲಿಕೆಯಲ್ಲಿ, ಬಲಿ ಹಾಗೂ ಕಮಲಾಪುರ್‍ಕಾ ಹೊಟೇಲ್ ಮೆ ಮಂಬ ನಾಟಕ ಜನಮನ ಗೆದ್ದಿದ್ದು, ಮುಂಬಯಿನ ಹಿರಿಯ ಪತ್ರಕರ್ತ ಶ್ರೀಧರ್ ಉಚ್ಚಿಲ್ ತನ್ನ ಕಲಾಕ್ಷೇತ್ರದಲ್ಲಿ ಇವರ ಜೀವನಚರಿತ್ರೆ ದಾಖಲಿಸಿದ್ದರು.

ಭವಾನಿ ಶಂಕರ್ ಅವರು ಮೂಲತಃ ದಕ್ಷಿಣ ಕನ್ನಡದ ಕಟೀಲು ಸಮೀಪದ ಐಕಳದವರು.ಗೋಪಾಲಶೆಟ್ಟಿ ಮತ್ತು ಸರಸ್ವತಿ ಶೆಟ್ಟಿ ದಂಪತಿಯ ಸುಪುತ್ರರಾಗಿದ್ದು, ಅನೇಕ ವರ್ಷಗಳಿಂದ ಮುಂಬಯಿ ಅಂಧೇರಿ ಪಶ್ಚಿಮದ ದಾದಾಬಾಯಿ ಕ್ರಾಸ್ ರಸ್ತೆಯ ಶ್ರೀಕೃಷ್ಣ ನಿವಾಸದಲ್ಲಿ ನೆಲೆಯಾಗಿದ್ದರು. ಪತ್ನಿ ಫಿಲೋಮೆನಾ ಶೆಟ್ಟಿ, ಸುಪುತ್ರ ವರುಣ ಮತ್ತು ಪುತ್ರಿ ನಿಖಿತಾ ಸೇರಿದಂತೆ ಅಪಾರ ಕಲಾಭಿಮಾನಿಗಳು, ಹಿತೈಷಿ, ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಅಂಧೇರಿ ಪಶ್ಚಿಮದ ರುದ್ರಭೂಮಿಯಲ್ಲಿ ನೆರವೇರಿದ್ದು ಅವರ ಆಪ್ತ ವಲಯದ ತೋನ್ಸೆ ವಿಜಯಕುಮಾರ್ ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಬಿ.ಭಂಡಾರಿ, ಅರವಿಂದ್ ಶೆಟ್ಟಿ ಕೊಜಕೊಳಿ, ಕೃಷ್ಣರಾಜ್ ಶೆಟ್ಟಿ, ಕಮಲಾಕ್ಷ ಸರಾಫ್, ರಾಜು ಶ್ರೀಯಾನ್, ಪಿ.ಬಿ ಚಂದ್ರಹಾಸ್ ಸೇರಿದಂತೆ ಹಲವಾರು ಕಲಾವಿದರು, ಗಣ್ಯರು, ಸಂಘಸಂಸ್ಥೆಗಳ ಪದಾಧಿಕಾರಿ, ಸದಸ್ಯರು, ಬಂಧುಬಳಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here