Friday 19th, April 2024
canara news

ಸ್ವಚ್ಛತೆಯ ಸಂದೇಶ ಸಾರಿದ ಪಾದಯಾತ್ರೆ

Published On : 06 Dec 2018   |  Reported By : Rons Bantwal


ಉಜಿರೆ, ಡಿ.4 : ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳದವರೆಗೆ ಭಾನುವಾರ ನಡೆದ ಬೃಹತ್ ಪಾದಯಾತ್ರೆಯು ಕೇವಲ ಭಕ್ತಿ-ಭಾವಗಳನ್ನಷ್ಟೇ ಸಂಕೇತಿಸಲಿಲ್ಲ. ಸ್ವಚ್ಛತೆಯ ಪರಿಕಲ್ಪನೆಯನ್ನೂ ಬಿತ್ತಿತು.

‘ಸ್ವಚ್ಛತೆಯೆಡೆಗೆ ನಮ್ಮ ನಡಿಗೆ’ ಎಂಬ ಘೋಷವಾಕ್ಯದೊಂದಿಗೆ ಭಕ್ತಸಮೂಹ ಧರ್ಮಸ್ಥಳದೆಡೆಗೆ ಹೆಜ್ಜೆಯಿರಿಸುತ್ತಿದ್ದುದು ಬೈಕ್ ಸವಾರರು, ಬಸ್‍ಗಳಲ್ಲಿದ್ದ ಪ್ರಯಾಣಿಕರನ್ನು ಸೆಳೆಯಿತು. ಸ್ವಚ್ಛತೆಯ ಮೌಲ್ಯ ಎಲ್ಲೆಲ್ಲೂ ರಾರಾಜಿಸುತ್ತಿತ್ತು. ಸ್ವಚ್ಛತೆಯ ಸಂದೇಶ ಸಾರುವ ಬ್ಯಾನರ್‍ಗಳು ಗಮನ ಸೆಳೆದವು. ಅಲ್ಲದೇ ರಸ್ತೆಯುದ್ದಕ್ಕೂ ಸ್ವಚ್ಛತೆಯ ಮಹತ್ವ ಸಾರುವ ನಾಮಫಲಕಗಳು ಆಕರ್ಷಿಸಿದವು.

ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರು ಅಲ್ಲದೇ ವಯಸ್ಕರೂ ಕೂಡಾ ಸುಡುವ ಬಿಸಿಲನ್ನು ಲೆಕ್ಕಿಸದೇ ನಡೆಯುತ್ತಿದ್ದರು. ಸ್ವಚ್ಛತೆ ಸಂದೇಶದÀ ನಾಮಫಲಕಗಳನ್ನು ದಾರಿಯುದ್ದಕ್ಕೂ ಹಾಕಲಾಗಿತ್ತು. ‘ದೇಹ ಕಲ್ಯಾಣದಿಂದ ದೇಶ ಕಲ್ಯಾಣ, ತನ್ಮೂಲಕ ಸ್ವಾಸ್ಥ್ಯ ಹಾಗೂ ಸ್ವಚ್ಛ ಭಾರತ ನಿರ್ಮಾಣ’, ‘ಇದು ಕಸ ಮುಕ್ತ ಪ್ರದೇಶ ಇಲ್ಲಿ ಕಸ ಹಾಕಬೇಡಿ, ರಸ್ತೆಯ ಮೇಲೆ ಕಸ ಚೆಲ್ಲಬೇಡಿ’ ಹೀಗೆ ಹಲವಾರು ಫಲಕಗಳು ಜನರನ್ನು ಎಚ್ಚರಿಸಿದವು. ಸ್ವಚ್ಛತೆಗೆ ಕೈ ಜೋಡಿಸಲು ಪ್ರೇರಣೆಯಾದವು.

ಪಾದಯಾತ್ರೆಯಲ್ಲಿ ಪಾಲ್ಗೊಂಡವರೆಲ್ಲರೂ ಭಕ್ತಿಯಿಂದ ಶಿವನಾಮಸ್ಮರಣೆ ಮಾಡುತ್ತಿದ್ದರು. ವಿವಿಧೆಡೆಗಳಿಂದ ಆಗಮಿಸಿ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ಸಮಾವೇಶಗೊಂಡು ಧರ್ಮಸ್ಥಳದ ಕಡೆಗೆ ಹೆಜ್ಜೆಯಿರಿಸಿದರು. ಶ್ರದ್ಧಾಭಕ್ತಿಯೊಂದಿಗೆ ಮುನ್ನಡೆದರು.

ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ದಾರಿಯುದ್ದಕ್ಕೂ ಪ್ರತೀ ಒಂದುವರೆ ಕಿಲೋಮೀಟರ್‍ಗೆ ತಂಪುಪಾನೀಯ ಹಾಗೂ ಮಜ್ಜಿಗೆ ನೀಡಲಾಯಿತು. ಯಾತ್ರೆ ಆರಂಭವಾಗುವ ಮೊದಲೇ ಲಘು ಉಪಹಾರ ವ್ಯವಸ್ಥೆಯೂ ಇತ್ತು. ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರಿಗೆ ವಾತಾವರಣ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡ ಸ್ವಯಂ ಸೇವಕರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು. ಪ್ರಥಮ ಚಿಕಿತ್ಸೆಯನ್ನು ಕಲ್ಪಿಸಲಾಗಿತ್ತು.

ಹೀಗೆ ಉಚಿತ ತಂಪು ಪಾನೀಯ ಹಾಗೂ ಚಿಕಿತ್ಸಾ ವ್ಯವಸ್ಥೆಯಿಂದ ಆಗಮಿಸಿದ ಭಕ್ತಾದಿಗಳು ಯಾವುದೇ ರೀತಿಯ ಕುಂದು ಕೊರತೆಗಳು ಬಾರದೇ ಕ್ಷೇಮವಾಗಿ ಶ್ರೀ ಕ್ಷೇತ್ರವನ್ನು ತಲುಪಿ ಮಂಜುನಾಥನ ದರ್ಶನವನ್ನು ಪಡೆದರು. ಸ್ವಯಂಸೇವಕರ ಈ ಕಾರ್ಯಕ್ಕೆ ಸ್ಥಳೀಯ ಅಂಗಡಿ ಮಾಲಿಕರು ಸಹ ಕೈಜೋಡಿಸಿದ್ದು ಕಾರ್ಯಕ್ರಮದ ಯಶಸ್ಸಿನಿಂದ ತೃಪ್ತಿ ಹೊಂದಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here