Friday 29th, March 2024
canara news

ಭಗವಂತನ ಅನುಗ್ರಹ ಪ್ರಾಪ್ತಿಯಾಗದೆ ಕರ್ಮಬಂಧಗಳಿಂದ ಪಾರಾಗಲು ಸಾಧ್ಯ: ಶ್ರೀಮದ್ ಎಡನೀರು ಮಠಾಧೀಶರು

Published On : 08 Dec 2018   |  Reported By : Rons Bantwal


ಬದಿಯಡ್ಕ: ಭಗವಂತನ ಅನುಗ್ರಹ ಪ್ರಾಪ್ತಿಯಾಗದೆ ಕರ್ಮಬಂಧಗಳಿಂದ ಪಾರಾಗಲು ಸಾಧ್ಯವಾಗದು. ಈ ನಿಟ್ಟಿನಲ್ಲಿ ಸದಾ ಸನ್ಮಂಗಳಕಾರಕನಾದ ಬ್ರಹ್ಮ ಚೈತನ್ಯದ ಮೇಲೆ ಅಛಲ ವಿಶ್ವಾಸವಿರಿಸಿ ಕರ್ತವ್ಯಗಳನ್ನು ಲೋಪವಿಲ್ಲದೆ, ಧನಾತ್ಮಕ ಚಿಂತನೆಗಳೊಂದಿಗೆ ಜೀವನ ನಿರ್ವಹಣೆ ಮಾಡುವ ಮನಸ್ಸು ಬೆಳೆದುಬರಲಿ. ಸತ್ ಚಿಂತನೆಯ ಗುರುಗಳ ಆರಾಧನೆಯಿಂದ ಸಂಕಷ್ಟಗಳ ನಿವಾರಣೆ ಸಾಧ್ಯವಾಗಿ ನೆಮ್ಮದಿ ಲಭಿಸುವುದು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನಗೈದು ಆಶೀರ್ವದಿಸಿದರು.

ಶ್ರೀಮದ್ ಎಡನೀರು ಮಠದ ಪೂರ್ವ ಯತಿಶ್ರೇಷ್ಠರಾದ ಶ್ರೀಮದ್ ಈಶ್ವರಾನಂದ ಭಾರತೀ ಶ್ರೀಗಳ ಆರಾಧನೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಆರಾಧನೋತ್ಸವ ಮಹಾಸಭೆ-ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನಗೈದು ಮಾತನಾಡಿದರು.

ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು ಮಾತನಾಡಿದ ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು, ಇಂದಿನ ವ್ಯಾವಹಾರಿಕ ಮತ್ತು ಯಾಂತ್ರಿಕ ಯುಗದಲ್ಲಿ ಆಧ್ಯಾತ್ಮಿಕ-ಧಾರ್ಮಿಕ ಚಿಂತನೆಗಳಿಂದ ಸಮಾಜ ದೂರ ಸಾಗುತ್ತಿದೆ. ಇದರಿಂದ ಒಟ್ಟು ವ್ಯವಸ್ಥೆಗಳು ಹಳಿತಪ್ಪಿ ಗೊಂದಲ ಹಾಗೂ ದುರಿತಗಳು ಹೈರಾಣಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಚೌಕಟ್ಟಿನ ಸಂಸ್ಕಾರಯುತ ಸಂಸ್ಕøತಿ ಬೋಧನೆಯಲ್ಲಿ ಶ್ರೀಮದ್ ಎಡನೀರು ಮಠ ಸ್ತುತ್ಯರ್ಹ ಕೊಡುಗೆ ನೀಡುವ ಮೂಲಕ ಕೀರ್ತಿಗಳಿಸಿದೆ ಎಂದು ತಿಳಿಸಿದರು. ಕರಾವಳಿಯ ಪ್ರಸಿದ್ದ ಕಲಾಪ್ರಕಾರವಾದ ಯಕ್ಷಗಾನವನ್ನು ಆರಾಧನೆಯ ರೂಪದಲ್ಲಿ ನಾಡಿನೆಲ್ಲೆಡೆ ಪ್ರಸರಿಸುವ ಮೂಲಕ ಧಾರ್ಮಿಕ-ಪುರಾಣಗಳ ಜ್ಞಾನ ಪಸರಿಸುವಲ್ಲಿ ಶ್ರೀಮಠದ ಪರಿಶ್ರಮ ಅನಿರ್ವಚನೀಯ ಎಂದು ಅವರು ಶ್ಲಾಘಿಸಿದರು. ಮನೋರಂಜನೆಯೊಂದಿಗೆ ಧಾರ್ಮಿಕ ಶಿಕ್ಷಣ ನೀಡುವ ಯಕ್ಷಗಾನ ಕಲೋಪಾಸನೆಗೆ ಶ್ರೀಮಠದ ಅಪೂರ್ವ ಕಾಣ್ಕೆಗಳು ಇತರೆಡೆಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುರ್ಮಾಸ್ಯ ಸಮಾರಂಭಧ ಸ್ಮøತಿ ಸಂಪದ ಕೃತಿಯನ್ನು ಹಿರಿಯ ಸಾಮಾಜಿಕ, ಧಾರ್ಮಿಕ ಮುಂದಾಳು, ಕ.ಸಾ.ಪ. ಅಖಿಲ ಕರ್ನಾಟಕ ಮಾಜೀ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ, ಹೊಸ ತಲೆಮಾರಿಗೆ ಆಧ್ಯಾತ್ಮಿಕ, ಧಾರ್ಮಿಕ, ನೈತಿಕ ಬೆಂಬಲ ನೀಡುತ್ತ ನಾಡಿನ ಪ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮಠದ ಸಮಾಜಮುಖಿ ಚಿಂತನೆಗಳು ಅಪೂರ್ವವಾದುದು. ಧರ್ಮ, ಸಂಸ್ಕøತಿ, ಸಂಸ್ಕಾರ, ಶಿಕ್ಷಣದಂತಹ ಸೇವೆಯಲ್ಲಿ ನಿರತವಾಗಿರುವ ಎಡನೀರು ಮಠ ನಾಡಿನ ಹೆಮ್ಮೆ ಎಂದು ತಿಳಿಸಿದರು.

ಹಿರಿಯ ಧಾರ್ಮಿಕ ಮುಂದಾಳು ಪಂಜ ಭಾಸ್ಕರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಗುರುವಿನ ಅನುಗ್ರಹವು ಭಗವದನುಗ್ರಹಕ್ಕೆ ಪುಷ್ಠಿ ನೀಡುತ್ತದೆ. ಗುರುವಿನ ಅನುಗ್ರಹ ಅನಂತ ಪುಣ್ಯ ಪ್ರಾಪ್ತಿ ಮಾಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಲುಕೋಟೆ ಸಂಸ್ಕøತ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ವಿದ್ವಾನ್.ಉಮಾಕಾಂತ ಭಟ್ ಕೆರೆಕೈ ಹಾಗೂ ಕುಂಬಳೆ ಸೀಮೆಯ ಪ್ರಧಾನ ವೈದಿಕ ಮನೆತನವಾದ ಕಿಳಿಂಗಾರಿನ ವೇದಮೂರ್ತಿ ಗೋಪಾಲಕೃಷ್ಣ ಭಟ್ ಅವರುಗಳಿಗೆ ವಿಶೇಷ ಗೌರವಾಭಿನಂದನೆಗಳೊಂದಿಗೆ ಸನ್ಮಾನಿಸಲಾಯಿತು. ವಿದ್ವಾನ್.ಹಿರಣ್ಯ ವೆಂಕಟೇಶ ಭಟ್ ಅಭಿನಂದನಾ ಭಾಷಣಗೈದರು. ಪ್ರೊ.ಎ.ಶ್ರೀನಾಥ್ ಹಾಗೂ ಸೂರ್ಯನಾರಾಯಣ ಭಟ್ ಎಡನೀರು ಅಭಿನಂದನಾ ಪತ್ರ ವಾಚಿಸಿದರು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಬಾಲಕೃಷ್ಣ ವೊರ್ಕೂಡ್ಲು ಗುರುವಂದನೆ ಸಲ್ಲಿಸಿ ಶ್ರೀಈಶ್ವರಾನಂದ ಭಾರತಿಗಳ ಬಗ್ಗೆ ನೆನಪುಗಳನ್ನು ಬಿಚ್ಚಿಟ್ಟರು.

ಶ್ರೀಮಠದ ಪ್ರಬಂಧಕ ನ್ಯಾಯವಾದಿ ಐ.ವಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜೇಂದ್ರ ಕಲ್ಲೂರಾಯ ಎಡನೀರು ವಂದಿಸಿದರು. ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಪೈ ಕುಮುಟ, ವಿಷ್ಣು ಭಟ್ ಆನೆಮಜಲು, ರಮೇಶ್ ಜೋಯಿಸ ಬೆಂಗಳೂರು, ಮಂಜುನಾಥ ಬೆಂಗಳೂರು, ಜಯರಾಮ ಮಂಜತ್ತಾಯ ಎಡನೀರು, ರಾಘವೇಂದ್ರ ಕೆದಿಲಾಯ ಎಡನೀರು, ವೆಂಕಟ್ ಭಟ್ ಎಡನೀರು, ರಮೇಶ್ ಭಟ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.ಸ್ಮøತಿ ಸಂಪದ ಹೊತ್ತಗೆ ಮುದ್ರಕರಾದ ಕಾಸರಗೋಡು ಸಿರಿಗನ್ನಡ ಮುದ್ರಣಾಲಯದ ಕೆ.ವಿ.ರಮೇಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಆರಾಧನೋತ್ಸವದ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ, ಮೆರವಣಿಗೆ, ಮಧ್ಯಾಹ್ನ ಮಹಾಪೂಜೆ, ವೃಂದಾವನ ಪೂಜೆ, ತೀರ್ಥಪ್ರಸಾದ ವಿತರಣೆ ಮೊದಲಾದ ವೈದಿಕ ವಿಧಿವಿಧಾನಗಳು ನೆರವೇರಿದವು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ವಿದುಷಿಃ ಡಾ.ಸುಮಾ ಸುಧೀಂದ್ರ ಅವರಿಂದ ವೀಣಾ ವಾದನ, ಕು.ದೀಪ್ತಿ ಸುಧೀಂದ್ರ ಅವರಿಂದ ಭರತನಾಟ್ಯ ಪ್ರದರ್ಶನದೊಂದಿಗೆ ಉತ್ಸವ ಸಂಪನ್ನಗೊಂಡಿತು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here