Tuesday 20th, August 2019
canara news

ಹಲವು ಚಿಂತನಾತ್ಮಕ ವಿಷಯ ಹುಟ್ಟುಹಾಕಿದ `ಗೊಳಿದಡಿ ಗುತ್ತು'

Published On : 29 Dec 2018   |  Reported By : Rons Bantwal


ತುಳುನಾಡ ಗುತ್ತುಗಳ ಪರಂಪರೆ ಉಳಿಸುವ ವಿಚಾರಗೋಷ್ಠಿ-ಪರ್ಬೊದ ಸಿರಿ
(ಚಿತ್ರ / ಮಾಹಿತಿ: ಧನಂಜಯ ಗುರುಪುರ)

ಮುಂಬಯಿ, ಡಿ.27: ಕಳೆದ ಹತ್ತು-ಹದಿನೈದು ವರ್ಷಗಳಿಂದ ತುಳುನಾಡಿಗೆ ಸಂಬಂಧಿಸಿದ ಸೃಜನಶೀಲ, ರಚನಾತ್ಮಕ ಮತ್ತು ಚಿಂತನಶೀಲ ಚಟುವಟಿಕೆಗೆ ಗುರುಪುರದ ಗೋಳಿದಡಿಗುತ್ತು ಹೆಸರಾಗುತ್ತಿದೆ. ಕೆಲವು ವಷಗಳ ಹಿಂದೆ ಇಲ್ಲಿ ಮೊತ್ತಮೊದಲ ಬಾರಿಗೆ ಶಾಲಾ ಮಕ್ಕಳಿಗಾಗಿ ಭತ್ತದ ಗದ್ದೆಯಲ್ಲಿ ನಾಟಿ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಇಂದು ಜಿಲ್ಲೆಯ ಹಲವೆಡೆ ಭತ್ತದ ಗದ್ದೆಯಲ್ಲಿ ಶಾಲಾ ಮಕ್ಕಳು ಖುದ್ದು ನಾಟಿ ಅನುಭವ ಗಳಿಸುವ ದೃಶ್ಯ ಕಾಣುವಂತಾಗಿದೆ. ವರ್ಷಗಳ ಹಿಂದೆ ಗ್ರಾಮೀಣ ಜಾತ್ರೆಗಳ ಸಂದರ್ಭಗಳಲ್ಲಿ ತುಳುನಾಡಿನಲ್ಲಿ ನಡೆಯುತ್ತಿದ್ದ `ಸಂತೆ' ಅಥವಾ ಮಾರಾಟ ಮಳಿಗೆಯ ಸೊಬಗು ಈಗ ಕಣ್ಮರೆಯಾಗಿದ್ದು, ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಈ ಸಂತಸದ ಕ್ಷಣ ಮರುಸ್ಥಾಪಿಸುವ ಪರಿಕಲ್ಪನೆಯಡಿ ಕಳೆದ ವರ್ಷ ಗೋಳಿದಡಿಗುತ್ತುವಿನಲ್ಲಿ `ಪರ್ಬೊದ ಸಿರಿ' ಮೂಲಕ ಸಂಭ್ರಮದ `ಸಂತೆ' ಜರುಗಿತ್ತು. ಇದು ಜಿಲ್ಲೆಯ ಹಲವು ತುಳು ವಿದ್ವಾಂಸರಿಂದ ಮೆಚ್ಚುಗೆ ಗಳಿಸಿತ್ತು.

ಈ ವರ್ಷ ಮತ್ತೊಂದು ಹೊಸ ಚಿಂತನಾತ್ಮಕ ವಿಷಯದೊಂದಿಗೆ ಗೋಳಿದಡಿಗುತ್ತಿನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ತುಳುವರ ಮುಂದೆ ಬಂದಿದ್ದಾರೆ. `ಗುತ್ತುಗಳ ಬಗ್ಗೆ ನಿಮಗೆಷ್ಟು ಗೊತ್ತು ?' ಎಂಬುದು ಈ ವರ್ಷದ `ಪರ್ಬೊದ ಸಿರಿ'ಯ ಕೇಂದ್ರ ವಿಷಯವಾಗಿದೆ. ಜನವರಿ 19ರಂದು ಗುತ್ತು, ಬೀಡು, ಬಾವ, ಬಾರಿಕೆ(ಬರ್ಕೆ) ಮತ್ತು ಪರಡಿ ಮನೆತನಗಳ ಸತ್ಯ-ನ್ಯಾಯ-ಧರ್ಮಬದ್ಧವಾದ ದೈವಿಕ ತಳಹದಿಯ ಪ್ರಾಚೀನ ಭಾರತದ ಆಡಳಿತ ವ್ಯವಸ್ಥೆ ಬಗ್ಗೆ ಮೂರು ವಿಚಾರಗೋಷ್ಠಿಗಳು ನಡೆಯಲಿವೆ. ಮರುದಿನ (ಜ.20) `ಪರ್ಬೊದ ಸಿರಿ ನಡೆಯಲಿದೆ.

`ಗುತ್ತು-ಹುಟ್ಟು-ಪರಂಪರೆ-ಆಶಯ'ದ ಗೋಷ್ಠಿಯಲ್ಲಿ ಸಾಮಾಜಿಕ ಚಿಂತನೆ ಕುರಿತು ಡಾ. ವೈ ಎನ್ ಶೆಟ್ಟಿ ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದ ಬಗ್ಗೆ ಕೆ.ಎಲ್ ಕುಂಡಂತ್ತಾಯ ವಿಚಾರ ಮಂಡಿಸಲಿದ್ದಾರೆ. ನಂತರದ ಗೋಷ್ಠಿಯಲ್ಲಿ `ಗುತ್ತುಗಳ ಗಡಿಕಾರರ ಗಡಿ ನಿರ್ವಹಣೆ ಮತ್ತು ನಡೆ-ನುಡಿ' ಕುರಿತು ತಿಂಗಳ ವಿಕ್ರಮಾರ್ಜುನ ಹೆಗ್ಡೆ, ಡಾ. ಯಾಜಿ ನಿರಂಜನ ಭಟ್ ವಿಚಾರ ಮಂಡಿಸಲಿದ್ದಾರೆ. ಕೊನೆಯದಾಗಿ, `ಭವಿಷ್ಯದ ಗುತ್ತುಗಳು-ಬೀಡು-ಬಾರಿಕೆ-ಬಾವ-ಪರಡಿಗಳು-ಒಂದು ಚಿಂತನೆ' ಗೋಷ್ಠಿಯಲ್ಲಿ ಮಹೇಶ ಶೆಟ್ಟಿ ತಿಮರೋಡಿ ಬೀಡು, ಬನ್ನಂಜೆ ಬಾಬು ಅಮೀನ್ ಪ್ರಬಂಧ ಮಂಡಿಸಲಿದ್ದಾರೆ. ಮೂರೂ ಗೋಷ್ಠಿಯಲ್ಲಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಗುತ್ತು ಎಂದರೇನು ?
ಸಮಾಜದ ಜನರ ಕಷ್ಟ-ಕಾರ್ಪಣ್ಯ ಭಾರ ಹೊರುವವರು ಎಂಬ ಅರ್ಥದಲ್ಲಿ `ಗುತ್ತು' ಎಂಬ ಪದ ಬಳಕೆಗೆ ಬಂತು. ಭಾರವಾಹಕವೆಂದರೆ ಹಿಂದೆ ತಲೆಹೊರೆಯಲ್ಲಿ ಸರಕು ಸಾಗಣೆಗಿದ್ದ ಕಾಲುದಾರಿ ಬದಿಯಲ್ಲಿ ಗಟ್ಟಾಣೆ ಅಥವಾ ಕಟ್ಟೆ ಅಥವಾ ಗುತ್ತಿನ ಕಂಬ ಎಂಬ ವ್ಯವಸ್ಥೆ ಇತ್ತು. ಈ ಕಂಬಗಳು/ಕಟ್ಟೆಗಳು ವ್ಯಕ್ತಿಗಿಂತ ಎತ್ತರಕ್ಕೆ ಇರುತ್ತಿತ್ತು. ಇಲ್ಲಿ ಇಳಿಸಿದ ಹೊರೆಯನ್ನು ಯಾರ ಸಹಾಯವೂ ಇಲ್ಲದೆ ಪುನಾ ಹೊತ್ತುಕೊಂಡು ಮುಂದುವರಿಯುವ ಪ್ರತೀತಿ ಇತ್ತು. ಅದೇ ರೀತಿ ಸಮಾಜಕ್ಕೆ ಆಧಾರವಾಗಿದ್ದು, ಜನರ ಕಷ್ಟಗಳಿಗೆ ಸ್ಪಂದಿಸುವ ಮನೆಯು `ಗುತ್ತಿನ ಮನೆ' ಎಂದು ಕರೆಯಲ್ಪಡುತ್ತಿತ್ತು.

ಗುತ್ತಿನ ಮನೆಯಲ್ಲಿ ಗುತ್ತಿನ ಯಜಮಾನ ಅಥವಾ ಗಡಿಕಾರರಿಗೆ ತಮ್ಮದೇ ಜವಾಬ್ದಾರಿಗಳು ಇತ್ತು. ಆದರೆ ಒಡೆದು ಆಳುವ ಬ್ರಿಟಿಷರ ಆಡಳಿತ ವ್ಯವಸ್ಥೆ ಹಾಗೂ ಗುತ್ತಿನ ಮನೆಯವರ ಕೆಲವೊಂದು ಸಂಕುಚಿತ ಮನೋಭಾವನೆ ಅಥವಾ ಸ್ವಯಂಕೃತ ತಪ್ಪುಗಳಿಂದ ಗುತ್ತಿನ ಮನೆಯು ತನ್ನ ಔಚಿತ್ಯ ಕಳೆದುಕೊಳ್ಳುತ್ತ ಬಂತು. ಮುಂದೆ ನಡೆದಿರುವುದು, ನಾವೀಗ ಕಾಣುತ್ತಿರುವ ಕೇವಲ ಗುತ್ತಿನ ಮನೆಗಳಿಗೆ ಸೀಮಿತವಾಗಿರುವ ಗುತ್ತುಗಳು.

``ಗುತ್ತಿನ ಮನೆಯು ಯಾವುದೇ ಒಂದು ಜಾತಿ ಅಥವಾ ಪಂಗಡಕ್ಕೆ ಸೀಮಿತವಾದುದಲ್ಲ. ಸಮಾಜದ ಎಲ್ಲ ವರ್ಗದ ಜನರೂ ಗುತ್ತಿನ ಮನೆಯ ಆಡಳಿತಕ್ಕೆ ಬದ್ಧರಾಗಿದ್ದಾರೆ. ಸತ್ಯ, ನ್ಯಾಯ, ಧರ್ಮಬದ್ಧವಾದ ನಿರ್ವಹಣಾ ಭಾಗ ಹಾಗೂ ಸಮಾಜಮುಖಿ ತ್ಯಾಗ ಗುತ್ತಿನ ಮನೆಗೆ ಪ್ರಧಾನವಾಗಿದೆಯೇ ಹೊರತು ಜಾತಿ ಮತ್ತು ಪಂಗಡ ಮುಖ್ಯವಲ್ಲ. ಇದು ಗುತ್ತಿನ ಆಡಳಿತದ ಅತ್ಯಂತ ವಿಶೇಷವಾದ ನಿಬಂಧನೆಯೂ ಆಗಿದೆ'' ಎಂದು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹೇಳುತ್ತಾರೆ.

 
More News

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ

Comment Here