Friday 19th, April 2024
canara news

ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಅನಿತಾ ಪಿ ಪೂಜಾರಿ ಕಾವ್ಯವಾಚನ

Published On : 14 Oct 2019   |  Reported By : Rons Bantwal


ಮುಂಬಯಿ; ಮೈಸೂರಿನ ಜಗನ್ಮೋಹನ ಅರಮನೆಯ ವೇದಿಕೆಯಲ್ಲಿ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಕ್ಟೋಬರ್ 6ರಂದು ಜರಗಿದ ವಿಖ್ಯಾತ ಕವಿಗೋಷ್ಠಿಯಲ್ಲಿ ಡೊಂಬಿವಲಿಯ ಅನಿತಾ ಪಿ ಪೂಜಾರಿ ತಾಕೊಡೆ ಅವರು ‘ಬುದ್ಧ’ ಕವನವನ್ನು ವಾಚಿಸಿ ಎಲ್ಲರ ಗಮನಸೆಳೆದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಕವಿ ಡಾ. ಎಚ್.ಎಲ್ ಪುಷ್ಪ, ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್, ಗೀತ ರಚನೆಕಾರ ಡಾ.ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವರು ‘ಬುದ್ಧ’ ಕವನದ ಇಂದಿನ ಪ್ರಸ್ತುತಿಯನ್ನು ಕುರಿತು ಉಲ್ಲೇಖಿಸಿ ಪ್ರಶಂಸಿಸಿದರು.

“ಕವಿತೆಗೆ ವಸ್ತು ಹೊಸದು ಹಳೆಯದೆಂಬುದೇನಿಲ್ಲ. ಅದನ್ನು ನೋಡುವ ಕವಿಗಳ ನೋಟ ಬದಲಾಗುತ್ತದೆ ಅಷ್ಟೇ. ಕವಿತೆ ಮತ್ತು ಬದುಕು ಬೇರೆ ಅಲ್ಲ. ಏನನ್ನು ಬದುಕುತ್ತೇವೋ ಅದನ್ನೇ ಬರೆಯುತ್ತೇವೆ. ಗಂಭೀರವಾದ ಕವಿತೆಗಳು ಯಾವ ಚಪ್ಪಾಳೆ ಇಲ್ಲದೆಯೂ ಸಹೃದಯರ ಮೆಚ್ಚುಗೆಯನ್ನು ಪಡೆಯುತ್ತವೆ. ಕವಿ ಎಲ್ಲಿ ನಿಲ್ಲಬೇಕು, ಏನನ್ನು ಬರೆಯಬೇಕು, ಏನನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಾದುದು ಅನಿವಾರ್ಯ” ಎಂದು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಡಾ.ಎಚ್.ಎಲ್ ಪುಷ್ಪ ಅಭಿಪ್ರಾಯಪಟ್ಟರು.

ಡಾ.ಮನು ಬಳಿಗಾರ್ ಅವರು, “ಕವಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ಇರುತ್ತದೆ. ಆದರೆ ಅದನ್ನು ಬರಹದ ರೂಪದಲ್ಲಿ ಕೊಡುವಾಗ ತನಗಿರುವ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಸುತ್ತಮುತ್ತಲಿನ ಘಟನಾವಳಿಗಳ ನೋವಿಗೆ ಕವಿ ಸ್ಪಂದಿಸಬೇಕು. ಸಮಾಜದಲ್ಲಿ ಸಹಬಾಳ್ವೆ ಸೌಹಾರ್ದ ಮುಖ್ಯ. ಇಂಥ ಮೌಲ್ಯದ ವಿಚಾರಗಳಿಗೆ ಕನ್ನಡ ಸಾಹಿತ್ಯದಲ್ಲಿ ಸಿಕ್ಕಿರುವಷ್ಟು ಪ್ರಾಧಾನ್ಯ ಜಗತ್ತಿನ ಯಾವ ಭಾಷೆಯಲ್ಲಿಯೂ ದೊರೆತಿಲ್ಲ” ಎಂದರು.

“ಕಾವ್ಯವೇ ವ್ಯಕ್ತಿತ್ವದ ವಿಕಸನಕ್ಕೆ ದಾರಿ. ನಾಟಕ, ಕಿರುತೆರೆ, ಹಿರಿತೆರೆಗೆ ಮಾರ್ಗ ಹಾಕಿಕೊಟ್ಟದ್ದೇ ಕಾವ್ಯ. ಕಾವ್ಯವೆಂದರೆ ನಮಗನಿಸಿದ್ದನ್ನು ಹೇಳ್ತಾ ಹೋಗುವುದರ ಜೊತೆಗೆ ನಮ್ಮತನವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಕವಿ ಪಂಥಗಳ ಗೋಡೆಯಾಚೆ ನಿಂತು ಯೋಚಿಸಬೇಕು ಮತ್ತು ಬರೆಯಬೇಕು” ಎಂದು ಗೀತರಚನೆಕಾರ ಡಾ. ನಾಗೇಂದ್ರ ಪ್ರಸಾದ್ ಸಲಹೆ ನೀಡಿದರು. ಮೈಸೂರಿನ ದಸರಾ ಕವಿಗೋಷ್ಠಿಯ ಹಲವು ಪತ್ರಿಕಾ ವರದಿಗಳಲ್ಲಿ ಉಲ್ಲೇಖಗೊಂಡ ಕೆಲವು ಕವಿತೆಗಳಲ್ಲಿ ಅನಿತಾ ಅವರ ‘ಬುದ್ಧ’ ಕವನದ ಸಾಲುಗಳು ವಿಶ್ಲೇಷಿಸಲ್ಪಟ್ಟು ವರದಿಗಾರರ ಮೆಚ್ಚುಗೆಗೂ ಪಾತ್ರವಾಯಿತು.

ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಮುಂಬಯಿಯ ಕವಿ ವಿ.ಎಸ್.ಶಾನ್‍ಭಾಗ್ ಸಹಿತ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 36 ಕವಿಗಳು ತುಳು, ಕನ್ನಡ, ಉರ್ದು, ಕೊಂಕಣಿ, ಬ್ಯಾರಿ ಮತ್ತು ಕೊಡವ ಭಾಷೆಗಳಲ್ಲಿ ಕಾವ್ಯವಾಚನ ಮಾಡಿದರು. ಈ ಮೂಲಕ ವಿಖ್ಯಾತ ಕವಿಗೋಷ್ಠಿಯಲ್ಲಿ ಸಾಮಾಜಿಕ ಕಳಕಳಿಯ ಜೊತೆಗೆ ಭಾಷಾಸಾಮರಸ್ಯವೂ ಮೇಳವಿಸಿತು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here