Wednesday 24th, April 2024
canara news

ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮದ ಪರ್ವಕಾಲದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು

Published On : 20 Oct 2019


(ಶ್ಯಾಮಲಾ ಮಾಧವ)

ಮುಂಬಯಿ, ಅ.18: ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳಿಗಿದು ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮ. ವರ್ಷದ ಹಿಂದೆ ಆರಂಭಗೊಂಡ ಶತಮಾನೋತ್ಸವ ಕಾರ್ಯಕ್ರಮಗಳ ಸಂಭ್ರಮಕ್ಕೆ ಇದೇ 2019ರ ನ.5,16,17ರಂದು ಉದ್ಘಾಟನೆ, ಸಮಾರೋಪಗಳ ಪರ್ವಕಾಲ. ಶಾಲೆ ನಡೆದು ಬಂದ ದಾರಿಯನ್ನು ಜನತೆಯೆದುರು ತೆರೆದಿಡುವ ಚರಿತ್ರಕಾಲ.

ಶತಮಾನದ ಹಿಂದೆ ಅಕ್ಷರ ಜ್ಞಾನವಿಲ್ಲದೆ ದಾರಿದ್ರ್ಯ, ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದ ಸಮಾಜವೊಂದು ಪ್ರಥಮ ಜಾಗತಿಕ ಮಹಾಯುಧ್ಧದ ದಳ್ಳುರಿಯ ಬೇಗೆಯಿಂದೆದ್ದು ಬಂದು ವಿದ್ಯೆಯ ಹೊಂಬೆಳಕಿನಿಂದ ನಾಡನ್ನು ಬೆಳಗಿದ ಅನುಪಮ ಸಾಧನೆಯ ಕಥೆ ಇಲ್ಲಿ ತೆರೆದುಕೊಂಡಿದೆ.

ಮಂಗಳೂರುನ ಸೆರಗು ಹಾಸಿದಂತಿರುವ ಸೋಮೇಶ್ವರ ಉಚ್ಚಿಲದ ಈ ನಾಡಿನಲ್ಲಿ ವಿದ್ಯೆಯ ಶ್ರೀಕಾರ ಹಾಕಿದ ಉದ್ಯಾವರ ಬೀಚ ಬೆಳ್ಚಪ್ಪಾಡರು ಹಾಗೂ ಉಚ್ಚಿಲ ಮಂಜಪ್ಪನವರು ಹಚ್ಚಿದ ಜ್ಞಾನಜ್ಯೋತಿ, ಸಮಾಜವನ್ನೂ, ನಾಡನ್ನೂ ಬೆಳಗಿ ಪ್ರಗತಿಪಥದ ದಾರಿಯನ್ನು ತೆರೆದಿದೆ. 1918ರಲ್ಲಿ ಉಚ್ಚಿಲ ಮಂಜಪ್ಪನವರ ಬಂಗ್ಲೆ ಮನೆಯಲ್ಲಿ ಆರಂಭವಾದ ಶಾಲೆಯ ಸ್ಥಾಪನೆ, ಮಂಜೂರಾತಿ ಎಲ್ಲವೂ ಸಾಧ್ಯವಾದುದು, ಅವರ ಮಕ್ಕಳ ಶತಪ್ರಯತ್ನದಿಂದ. ನಾಡ ಹಿರಿಯರಾದ ನೀಲೇಶ್ವರ ದಾಮೋದರ ತಂತ್ರಿಯವರು ಉದಾರ ಹೃದಯದಿಂದ ಶಾಲೆಗಾಗಿ ಊರ ನಡುಮಧ್ಯೆ ನಿವೇಶನವನ್ನು ದಾನವಾಗಿತ್ತರು. ಇಲ್ಲಿ 1921ರಲ್ಲಿ ಸಮಾಜ ಬಾಂಧವರ ಸಹಕಾರದಿಂದ ಶಾಲೆಗಾಗಿ ಶಾಶ್ವತ, ಸುಂದರ, ಮಾದರಿ ಕಟ್ಟಡ ಒದಗಿ ಬಂತು. 1969ರಲ್ಲಿ ಶಾಲೆಯ ಸುವರ್ಣಮಹೋತ್ಸವವೂ, 1989ರಲ್ಲಿ ವಜ್ರ ಮಹೋತ್ಸವವೂ ಯಥೋಚಿತವಾಗಿ ನೆರವೇರಿದ್ದು, ಇದೀಗ ಶತವರುಷ ಸಂಭ್ರಮ ತೆರೆದುಕೊಳ್ಳುತ್ತಿದೆ:

ನೂರು ವರುಷ ಹಳೆಯದಾಗಿದ್ದ ಶಾಲಾ ಕಟ್ಟಡ ನವೀಕರಣಗೊಂಡು, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಲ್ಲೇ ಪುನರಾರಂಭವಾಗಿದೆ. ಕಾಲಮಾನದ ಬೇಡಿಕೆಯಂತೆ ಆಂಗ್ಲಮಾಧ್ಯಮ ಪ್ರೌಢಶಾಲೆಯೂ ಸಮೀಪದಲ್ಲೇ ನೂತನ ಕಟ್ಟಡದಲ್ಲಿ ತೆರೆದಿದ್ದು, ಈ ವರ್ಷದ ಎಸ್.ಎಸ್.ಎಲ್.ಸಿ. ಬ್ಯಾಚ್ ನೂರು ಶೇಕಡಾ ಫಲಿತಾಂಶ ತಂದಿದೆ. ಸುವರ್ಣ ಹಾಗೂ ವಜ್ರ ಮಹೋತ್ಸವಗಳ ಸ್ಮಾರಕವಾಗಿ ಫಿಶರೀಸ್ ಹೈಸ್ಕೂಲ್ ಹಾಗೂ ಸಭಾಭವನಗಳ ಸ್ಥಾಪನೆಯಾಗಿದೆ.ಶತಮಾನೋತ್ಸವ ಸ್ಮಾರಕ ಯೋಜನೆಯೂ ರೂಪುಗೊಳ್ಳುತ್ತಿದ್ದು, ಮಹತ್ವಪೂರ್ಣ ಸ್ಮರಣಸಂಚಿಕೆ ಸಿಧ್ಧಗೊಳ್ಳುತ್ತಿದೆ.

ಬೋವತನದಿಂದ ಘಟ್ಟವಿಳಿದು ಕರಾವಳಿಗೆ ಬಂದು ನೆಲೆನಿಂತ ಸಮಾಜವೊಂದು ಶಿಕ್ಷಣ, ಉದ್ಯೋಗ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿ, ಸಾಧನಾ ಪಥದಲ್ಲಿ ಸಾಗಿದೆ. ಈ ಭವ್ಯ ಚರಿತ್ರೆಯ ಶ್ರೀಕಾರ ಬರೆದ ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಶತಮಾನೋತ್ಸವ ಆಚರಣಾ ಸಮಿತಿ ವಿದ್ಯಾಭಿಮಾನಿಗಳಿಂದ ಉದಾರ ದೇಣಿಗೆಯ ನಿರೀಕ್ಷೆಯಲ್ಲಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here