Friday 19th, April 2024
canara news

‘ಧರ್ಮಯಾನ’ ಗ್ರಂಥ ಸಮರ್ಪಣೆ

Published On : 25 Aug 2020   |  Reported By : Rons Bantwal


ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಹೆಗ್ಗಡೆಯವರಾಗಿ ಸಂದ 50 ವರ್ಷಗಳ ಸವಿನೆನಪಿಗಾಗಿ ಸುವರ್ಣ ಮಹೋತ್ಸವ ಸಮಿತಿಯಿಂದ ರಚಿಸಲಾದ ಅಭಿನಂದನಾ ಗ್ರಂಥ ‘ಧರ್ಮಯಾನ’ ಈ ಗ್ರಂಥವನ್ನು ಆಯ್ದ ಆಮಂತ್ರಿತರ ಎದುರು ಸಮಿತಿಯ ಅಧ್ಯಕ್ಷ ಶ್ರೀ ಡಿ. ಹರ್ಷೇಂದ್ರ ಕುಮಾರ್‍ರವರು, ಶ್ರೀಮತಿ ಮತ್ತು ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಸಮರ್ಪಿಸಿದರು. ಸುಮಾರು 750 ಪುಟಗಳುಳ್ಳ ಧರ್ಮಯಾನ ಅಭಿನಂದನಾ ಗ್ರಂಥದಲ್ಲಿ 180 ಬಿಡಿಲೇಖನಗಳಿದ್ದು, ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡ್ದು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಶುಭ ಸಂದೇಶಗಳಿವೆ. ಹೆಗ್ಗಡೆಯವರನ್ನು ದೀರ್ಘಕಾಲ ಕಂಡ ಅನೇಕ ದಾರ್ಶನಿಕರು, ಧಾರ್ಮಿಕರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಸ್ವಾತಂತ್ರ್ಯ ಹೋರಾಟಗಾರರು ಮುಂತಾದವರು ಗ್ರಂಥದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಈ ಬೃಹತ್ ಸಂಪುಟವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರ್ರಾಂತ ಉಪಕುಲಪತಿ ಶ್ರೀ ವಿವೇಕ್ ರೈಯವರು, ಜಾನಪದ ವಿಶ್ವವಿದ್ಯಾನಿಲಯದ ವಿಶ್ರ್ರಾಂತ ಉಪಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡರವರು ಮತ್ತು ಶ್ರೀ ತಾಳ್ತಾಜೆ ವಸಂತಕುಮಾರ್‍ರವರನ್ನೊಳಗೊಂಡ ಸಂಪಾದಕ ಮಂಡಳಿಯು ವಿಮರ್ಶಿಸಿರುತ್ತದೆ. 1968 ರಲ್ಲಿ ಧರ್ಮಸ್ಥಳದ ಪಟ್ಟಾಧಿಕಾರಿಯಾದ ಡಾ| ವೀರೇಂದ್ರ ಹೆಗ್ಗಡೆಯವರು ನಾಡಿನ ಸಾಂಸ್ಕøತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಅನನ್ಯವಾದ ಕಾಣಿಕೆಯನ್ನಿತ್ತಿದ್ದು, 2018 ರಲ್ಲಿ ಇವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಅನೇಕ ವಿನೂತನ ಕಾರ್ಯಕ್ರಮಗಳ ಬಗ್ಗೆ 23 ಪುಸ್ತಕಗಳ “ಸುವರ್ಣ ಸಂಚಯ” ಈಗಾಗಲೇ ಹೊರಗೆ ಬಂದಿದ್ದು, ನಾಡಿನಲ್ಲಿ ಸಾಕಷ್ಟು ಜನಪ್ರಿಯವಾಗಿವೆ.

‘ಧರ್ಮಯಾನ’ ಸಂಪುಟ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಯಶೋವರ್ಮರವರು “ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತಮ್ಮ ನಂಬಿಕೆ ಮತ್ತು ಆಶಯದ ಮೂಲ ಕೇಂದ್ರವಾಗಿಟ್ಟುಕೊಂಡು ಧಾರ್ಮಿಕ ಕೇಂದ್ರವೊಂದು ಹೇಗೆ ಜನಸಾಮಾನ್ಯರ ಬದುಕಿನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬಹುದೆಂದು ಹೆಗ್ಗಡೆಯವರು ಹೊರಜಗತ್ತಿಗೆ ತೋರಿಸಿಕೊಟ್ಟಿದ್ದಾರೆ” ಎಂದು ನುಡಿದರು. ಹೆಗ್ಗಡೆಯವರು ಮಾಡಿರುವ ಕಾರ್ಯಗಳ ಬಗ್ಗೆ ವಿವರಿಸುತ್ತಾ ಹೋದಲ್ಲಿ ಪ್ರತಿಯೊಂದು ಸಾಧನೆಗೆ ಪ್ರತ್ಯೇಕ ಸಂಪುಟ ಮಾಡಬೇಕಾಗಬಹುದು. ಈ ಹಿನ್ನಲೆಯಲ್ಲಿ ಎಲ್ಲರ ನಿಲುವುಗಳನನ್ನು ಒಳಗೊಂಡಿರುವ ‘ಧರ್ಮಯಾನ’ ಒಂದು ಮಹತ್ವದ ಸಾಮೂಹಿಕ ಪ್ರಯತ್ನವಾಗಬಹುದು ಎಂದು ಅವರು ನುಡಿದರು.

ಸಂಪುಟವನ್ನು ಸ್ವೀಕರಿಸಿದ ಧರ್ಮಾಧಿಕಾರಿ ಶ್ರೀ ಹೆಗ್ಗಡೆಯವರು ಕ್ಷೇತ್ರವು “ಪರಂಪರಾನುಗತವಾಗಿ ಕಟ್ಟುಕಟ್ಟಳೆಯ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದರೂ, ಜನ ಸಾಮಾನ್ಯರೊಂದಿಗೆ ಬೆರೆತುಕೊಂಡಿದೆ. ಆದುದರಿಂದ ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ತನಗೆ ಸಾಧ್ಯವಾಯಿತು. ತಾನು ಮಾಡಿರುವ ಕೆಲಸಗಳಲ್ಲಿ ಹೆಚ್ಚಿನವು ಪರಂಪರೆಯಿಂದ ಬಂದವುಗಳಾದರೂ, ಕೆಲವೊಂದನ್ನು ತನ್ನ ಅನುಭವದಲ್ಲಿ ಜಾರಿಗೆ ತರಲು ಸಾಧ್ಯವಾಗಿದೆ. ಆದರೂ ನಾನು ಇದುವರೆಗೆ ಸಾಧಿಸಿದ್ದು ಕಡಿಮೆ ಎಂಬ ವಿನಮ್ರತೆ ನನ್ನಲ್ಲಿದೆ” ಎಂದು ಅವರು ನುಡಿದರು. ಶ್ರೀಯುತ ವಿವೇಕ್ ರೈಯವರ ಸಮ್ಮುಖದಲ್ಲಿ ಧರ್ಮಯಾನ ಗ್ರಂಥದ ಕರಡು ಪ್ರತಿಯನ್ನು ಕೆಲಸಮಯದ ಹಿಂದೆ ಬಿಡುಗಡೆ ಮಾಡಿದ್ದನ್ನು ಸ್ಮರಿಸಿಕೊಳ್ಳುತ್ತಾ ಈ ಪ್ರಯತ್ನದಲ್ಲಿ ತೊಡಗಿಕೊಂಡಿರುವವರೆಲ್ಲರನ್ನು ಅಭಿನಂದಿಸಿದರು. ಸುವರ್ಣ ಸಮಿತಿಯ ಸಂಚಾಲಕ ಶ್ರೀ ಶ್ರೀನಾಥ್‍ರವರು ಧನ್ಯವಾದ ಸಮರ್ಪಣೆಗೈದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here