Wednesday 18th, May 2022
canara news

ಭಾರತ್ ಕೋ.ಅಪರೇಟಿವ್ ಬ್ಯಾಂಕ್‍ನ ಸರದಾರ ಜಯ ಸಿ.ಸುವರ್ಣ ವಿಧಿವಶ

Published On : 21 Oct 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಅ.21: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ, ಹಾಲಿ ಅಜೀವ ಗೌರವ ಅಧ್ಯಕ್ಷ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಮಾಜಿ ಅಧ್ಯಕ್ಷ ಮತ್ತು ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ನಿಕಟಪೂರ್ವ ಕಾರ್ಯಧ್ಯಕ್ಷ, ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮದಲ್ಲಿನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ.ಸುವರ್ಣ (74.) ಇಂದಿಲ್ಲಿ ಬುಧವಾರ ಮುಂಜಾನೆ ತನ್ನ ಗೋರೆಗಾಂವ್ ಪೂರ್ವದಲ್ಲಿನ ನೀಲ್‍ಗಿರಿ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

15.05.1946 ರಂದು ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಅಡ್ವೆ ಇಲ್ಲಿ ಚಂದು ಪೂಜಾರಿ ಮತ್ತು ಶ್ರೀಮತಿ ಅಚ್ಚು ಪೂಜಾರ್ತಿ ದಂಪತಿ ಸುಪುತ್ರರಾಗಿ ಜನಿಸಿದ್ದ ಜಯ ಸುವರ್ಣ ಇವರು ಅಡ್ವೆಯಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿ ಹೊಟ್ಟೆಪಾಡನ್ನು ಹರಸಿ ಮುಂಬಯಿ ಸೇರಿ ಅಂಧೇರಿ ಇಲ್ಲಿನ ಚಿನಾಯ್ ಕಾಲೇಜ್‍ನಲ್ಲಿ ಉಚ್ಛ ಶಿಕ್ಷಣ ಪೂರೈಸಿ 1974ರಲ್ಲಿ ಗೋರೆಗಾಂವ್‍ನ ಜಯಪ್ರಕಾಶ್ ಹೊಟೇಲ್‍ನ್ನು ಖರೀದಿಸಿ ಅದನ್ನು ಪ್ರತಿಷ್ಠಿತ ಹೊಟೇಲನ್ನಾಗಿಸಿ ಯಶಸ್ವಿಯಾಗಿ ಓರ್ವ ಹೊಟೇಲು ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.

ಪತ್ನಿ ಲೀಲಾವತಿ ಜಯ ಸುವರ್ಣ, ನಾಲ್ವರು ಸುಪುತ್ರರು (ಸೂರ್ಯಕಾಂತ್ ಜೆ.ಸುವರ್ಣ, ಸುಭಾಶ್ ಜೆ.ಸುವರ್ಣ, ದಿನೇಶ್ ಜೆ.ಸುವರ್ಣ, ಯೋಗೇಶ್ ಜೆ.ಸುವರ್ಣ) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು (ಬುಧವಾರ) ಸಂಜೆ ಗೋರೆಗಾಂವ್ ಇಲ್ಲಿನ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಜಯ ಸುವರ್ಣ ಅವರ ಅಕಾಲಿಕ ನಿಧನಕ್ಕೆ ಅವರ ಪರಮಾಪ್ತರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ, ಮಾಜಿ ಅಧ್ಯಕ್ಷರಾದ ಎಲ್.ವಿ ಅವಿೂನ್, ನಿತ್ಯಾನಂದ ಡಿ.ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಮಾಜಿ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಿಲ್ಲವರ ಅಸೋಸಿಯೇಶನ್‍ನ ಕೇಂದ್ರ ಮತ್ತು ಸ್ಥಳೀಯ ಸಮಿತಿಗಳ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ (ಯು.ಎಸ್ ಪೂಜಾರಿ) ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷರಾದ ವಾಸುದೇವ ಆರ್.ಕೋಟ್ಯಾನ್, ಎಂ.ಬಿ ಕುಕ್ಯಾನ್, ಮತ್ತು ನಿರ್ದೇಶಕ ಮಂಡಳಿ, ಉನ್ನತಾಧಿಕಾರಿಗಳು, ನೌಕರವೃಂದ, ರಾಷ್ಟ್ರದಾದ್ಯಂತದ ನೂರಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಬ್ಯಾಂಕಿಂಗ್ ಸಾಮ್ರಾಟ, ಸಹಕಾರಿ ರಂಗದ ದಿಗ್ಗಜ, ಭಾರತ್ ಬ್ಯಾಂಕ್‍ನ ಭರತ, ದ ಗ್ರೇಟ್ ಬ್ಯಾಂಕರ್, ಜಯ ಸಿ.ಸುವರ್ಣ ಅಜರಾಮರ ಆಗಿದ್ದು ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ನೂರಾರು ಪರಮಾಪ್ತರು ನಿವಾಸದತ್ತ ಜಮಯಿಸಿದ್ದು ಅಭಿಮಾನಿಗಳ ಆಕ್ರಂದನ ಎದ್ದು ಕಾಣುತ್ತಿತ್ತು. ಸರ್ವದರ್ಮ ಸಮನ್ವಯಕ, ಐಕ್ಯತೆಯ ಜಯಣ್ಣರಾಗಿದ್ದು ಆಗಲಿದ ಸಹಕಾರಿ ಅಗ್ರಜಯನಿಗೆ ಅಪಾರ ಅಭಿಮಾನಿ ಬಳಗವು ಕಂಬನಿ ಸುರಿಸಿದೆ.

ಜಯ ಸಿ.ಸುವರ್ಣ:
ಜಯ ಸುವರ್ಣರು ನೂರಾರು ಪ್ರಶಸ್ತಿ, ಬಿರುದು ಗೌರವಗಳಿಗೆ ಭಾಜನರಾಗಿದ್ದು, 1996ರಲ್ಲಿ ವಿೂರಾ ಭಾಯಂದರ್ ಬಿಲ್ಲವರ ಸ್ಥಳೀಯ ಸಮಿತಿಯಿಂದ `ಬಿಲ್ಲವ ಸಹಕಾರ ಭೂಷಣ', 1997ರಲ್ಲಿ ಮುಂಬಯಿಯ ಎಲ್ಲಾ ಸಂಘ ಸಂಸ್ಥೆಗಳಿಂದ `ಸಮಾಜ ಸೇವಾ ಧುರೀಣ', 1997 ರಲ್ಲಿವಸಯಿ ಸ್ಥಳೀಯ ಸಮಿತಿ `ಬಿಲ್ಲವ ರತ್ನ', 1997 ರಲ್ಲಿ ಬಿಲ್ಲವರ ಥಾಣೆ ಸ್ಥಳೀಯ ಸಮಿತಿಯಿಂದ `ಬಿಲ್ಲವ ಕುಲ ಶಿರೋಮಣಿ', 1997 ರಲ್ಲಿ ಚೆಂಬೂರು ಸ್ಥಳೀಯ ಸಮಿತಿ ಮತ್ತು ಅಭಿಮಾನಿಗಳು `ಬಿಲ್ಲವ ಕಣ್ಮಣಿ', 2000ರಲ್ಲಿ ಸೇವಾಭಾರತಿ ಮುಂಬಯಿ `ಶತ ಮಾನದ ಶ್ರೇಷ್ಠ ಸಮಾಜ ಸೇವಕ', 2000 ರಲ್ಲಿ ಭಾರತ್ ಬ್ಯಾಂಕ್ ಸ್ಟಾಫ್ ವೆಲ್‍ಫೇರ್ ಕ್ಲಬ್ `ಭಾರತ್ ಕರ್ಮಯೋಗಿ', 2001ರಲ್ಲಿ ಕಲ್ವಾ ಪರಿಸರ `ಬಿಲ್ಲವಶ್ರೀ', 2002ರಲ್ಲಿ ಪರ್ಯಾಯ ಶ್ರೀ ಪರಿಮಾರು ಹೃಷಿಕೇಶ ಮಠ ಉಡುಪಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ಪ್ರಥಮ ಶ್ರೀ ಕೃಷ್ಣ ಪೂಜಾ ಪರ್ಯಾಯ ದರ್ಬಾರಿನಲ್ಲಿ `ಶ್ರೀ ಕೃಷ್ಣ ಕೃಪಾಪಾತ್ರ', 2005ರಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಇಕಾನಾಮಿಕ್‍ಸ್ ಸ್ಟಡೀಸ್ (IಇS) ಸಂಸ್ಥೆಯು `ಉದ್ಯೋಗ ರತ್ನ', 2005ರಲ್ಲಿ ಬಿಲ್ಲವ ಸಮಾಜ ಬಾಂಧವರೆಲ್ಲರ `ಸಮಾಜ ರತ್ನ', 2006ರಲ್ಲಿ ಎಸ್‍ಎನ್‍ಡಿಪಿ (ಧರ್ಮಪಾಲ್ ಯೋಗಮ್) ಸಂಸ್ಥೆಯು `ಗುರು ಚೈತನ್ಯ', 2007ರಲ್ಲಿ `ಜನಮನದ ನಾಯಕ', `ಅಪೂರ್ವ ಸಮಾಜ ಸೇವಕ', `ಕಲಾ ಪೆÇಷಕ', 2012ರಲ್ಲಿ `ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ',2013ರಲ್ಲಿ `ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಇನ್ನಿತರ ಪುರಸ್ಕಾರ, ಗೌರವಗಳಿಗೆ ಪಾತ್ರರಾಗಿದ್ದರು.

1991ರಿಂದ ಇಪ್ಪತ್ತೊಂದು ವರ್ಷಗಳಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರಾಗಿ ಸದ್ಯ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ಜೀರ್ಣೋದ್ಧಾರ ಸಮಿತಿ ಮುಂಬಯಿ ಸಂಚಾಲಕರಾಗಿ ಕರ್ನಾಟಕದ ಧಾರ್ಮಿಕ ಕ್ಷಿತಿಜದಲ್ಲಿ ಗೋಕರ್ಣನಾಥ ದೇವಾಲಯಕ್ಕೂ ಒಂದು ಪ್ರಮುಖ ಸ್ಥಾನ ಕಲ್ಪಿಸಿಕೊಡುವಲ್ಲಿ ಇವರ ಪಾತ್ರ ಗಾಣನೀಯ. ಶ್ರೀ ಸುವರ್ಣರು ಮೂಲ್ಕಿ ರುಕ್ಕರಾಮ ಸಾಲ್ಯಾನ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾಗಿ, ಶ್ರೀ ನಾರಾಯಣ ಗುರು ಇಂಗ್ಲೀಷ್ ಹೈಸ್ಕೂಲು ಮೂಲ್ಕಿ ಇದರ ಪಾರುಪತ್ಯಗಾರರು. 1991ರಿಂದ 2020ರ ವರೆಗೆ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರಾಗಿ ಬ್ಯಾಂಕಿನ ಅಭಿವೃದ್ಧಿಯ ರೂವಾರಿಯಾಗಿ ಗಣನೀಯ ಸೇವೆ ಸೇವೆ ಸಲ್ಲಿಸಿ ಎಲ್ಲರಿಗೂ ಅಕ್ಕರೆಯ `ಜಯಣ್ಣ' ತನ್ನನ್ನೇ ನಂಬಿ ಬದುಕಿರುವ ಕಾರ್ಮಿಕ ಬಂಧುಗಳಿಗೆ, ನಂಬಿಗಸ್ಥರಿಗೆ ಇವರು ನೆಚ್ಚಿನ `ಸೇಠ್' ಎಂದೇ ಪರಿಚಯಿತರಾಗಿದ್ದರು.

ಓರ್ವ ವ್ಯವಹಾರ ಚತುರ, ಅತ್ಯುತ್ತಮ ಸಂಘಟಕಆಗಿದ್ದ ಜಯ ಸಿ.ಸುವರ್ಣ ಇವರದ್ದು ಧೀಮಂತ ವ್ಯಕ್ತಿತ್ವ. ಪಂಡಿತ ಪಾಮರರಿಂದ ಹಿಡಿದು ಮಕ್ಕಳಿಂದ ವಯೋವೃದ್ಧರ, ಅಪ್ಪಟ ಪ್ರಾಮಾಣಿಕ ಕೆಲಸಗಾರರನ್ನು ಆದರದಿಂದ ಸ್ವಾಗತಿಸುವ ಸಹೃದಯಿ ಆಗಿದ್ದು ತನ್ನ ಇಚ್ಛಾಶಕ್ತಿ, ದಿಟ್ಟತನ, ಛಲ ಸಹನೆಯಿಂದ ಅಲ್ಲದೆ ವೈಯಕ್ತಿಕ ಪ್ರಭಾವ ವಲಯವೆಲ್ಲವನ್ನು ಕ್ರೋಢೀಕರಿಸಿ ಮುಂಬಯಿ ಬಿಲ್ಲವ ಬಂಧುಗಳಿಗಾಗಿ ಬಿಲ್ಲವ ಭವನ ಎದ್ದು ನಿಲ್ಲಲು ಶ್ರಮಿಸಿದ ಪ್ರೇರಕ ಚಾಲಕ ಶಕ್ತಿ ಆಗಿದ್ದರು.

ಬಿಲ್ಲವರ ಅಸೋಸಿಯೇಶನ್ ಕಾರ್ಯಕರ್ತರನ್ನು, ಹಿತೈಷಿಗಳನ್ನು ಸದಸ್ಯರನ್ನು ಕೂಡಿಕೊಂಡು ಬಿಲ್ಲವ ಭವನ ನಿರ್ಮಿಸಿ ಬಿಲ್ಲವ ಬಂಧುಗಳಿಗೆ ಪುನಶ್ಚೇತನ ನೀಡಿದ ಓರ್ವ ಅಪೂರ್ವ ಸೇವಾಸಕ್ತ. ತನ್ನ ಸರಳತೆ, ವಿನಯತೆ, ಉದಾರತೆಗಳಿಂದ ಸರ್ವರಿಗೂ ಮೆಚ್ಚುಗೆಯಾದವರು ಇವರು. ಮುಂಬಯಿ ಕನ್ನಡಿಗ ಅಗ್ರಗಣ್ಯರಲ್ಲಿ ಹೆಸರಾಂತ ಶ್ರೀ ಸುವರ್ಣರು ಕರ್ನಾಟಕ ಮುಖ್ಯವಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉದ್ದಗಲಕ್ಕೂ ತನ್ನ ಜನಪರ ಕಾಳಜಿ, ಉದಾರತೆಗೆ ಪರಿಚಿತರು. ನಿರ್ವಾಜ್ಯ ಪ್ರೀತಿಯಿಂದ ಸಮಾಜ ಸೇವೆ ಮಾಡುವ ಜನರನ್ನು ಮೆಚ್ಚುತ್ತಿದ್ದರು.

1997ರಲ್ಲಿ ಸ್ಥಾಪನಗೊಂಡು ಸುಮಾರು 180ಕ್ಕೂ ಮೇಲ್ಪಟ್ಟ ಬಿಲ್ಲವರ ಸಂಘ ಸಂಸ್ಥೆಗಳ ಒಕ್ಕೂಟ ರಾಷ್ಟ್ರೀಯ `ಬಿಲ್ಲವರ ಮಹಾಮಂಡಲ' ಮೂಲ್ಕಿ ಇದರ ಸ್ಥಾಪನಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡÀು ಅಭೂತಪೂರ್ವ ಸೇವೆ ಸಲ್ಲಿಸಿದ್ದರು. ಮುಂಬಯಿ ಬಿಲ್ಲವರ ಅಸೋಸಿಯೇಶನ್ ತನ್ನ ಕಾರ್ಯ ಬಾಹುಳ್ಯವನ್ನು ತಾಯ್ನಾಡಿಗೂ ವಿಸ್ತರಿಸಿದಾಗ ಸುಮಾರು ಹತ್ತು ವರುಷಗಳಿಂದ ವಿದ್ಯಾ ಕ್ಷೇತ್ರದಲ್ಲಿ ಕಾರ್ಯ ಪ್ರವೃತ್ತವಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಎಜ್ಯುಕೇಶನ್ ಟ್ರಸ್ಟ್ ಬನ್ನಂಜೆ, ತನ್ನ ಸ್ವಾಮಿತ್ವದಲ್ಲಿದ್ದ ಶ್ರೀ ನಾರಾಯಣ ಗುರು ಪ್ರೌಢ ಶಾಲೆ, ಪಡುಬೆಳ್ಳೆ ಮತ್ತು ಅದಕ್ಕೆ ಸಂಬಂಧಪಟ್ಟ 15 ಎಕರೆ ಜಮೀನು ಸಮೇತ ಬಿಲ್ಲವರ ಅಸೋಸಿಯೇಶನಿನ ಸ್ವಾಮಿತ್ವಕ್ಕೆ ಬಿಟ್ಟು ಕೊಟ್ಟದ್ದು ಶ್ರೀ ಸುವರ್ಣರ ಧೀಮಂತ ಅಧ್ಯಕ್ಷತೆ ಮತ್ತು ಅವರ ವ್ಯಕ್ತಿತ್ವಕ್ಕೆ ಪುಟ ಕೊಟ್ಟಂತಿದೆ. ಇವರೋರ್ವ ಉತ್ತಮ ಓದುಗ, ಶ್ರದ್ಧಾವಂತ ಆಸ್ತಿಕರಾಗಿದ್ದು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಮ ಭಕ್ತರಾಗಿದ್ದು, ತನ್ನ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ ವಾರ್ಷಿಕವಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ `ಯಕ್ಷಗಾನ ಕಲಾ ಪ್ರಶಸ್ತಿ' ವಿತರಿಸುತ್ತಿದ್ದರು.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here