Wednesday 18th, May 2022
canara news

ಮರೆಯಾದ ‘ರವಿ’ಯಣ್ಣ !

Published On : 21 Nov 2020


ರವಿ ಬೆಳಗರೆ ಸ್ಮøತಿ

ಮಾಧ್ಯಮ ಲೋಕದ ದೈತ್ಯ:


‘ರವಿ’ ಮರೆಯಾದ, ಕತ್ತಲಾವರಿಸಿದಂತೆ ಆಗಿದೆ. ನಿಜಾರ್ಥದ ‘ರವಿ’, ಬೆಳಕು ಹರಿಸುವ ರವಿ, ಇನ್ನು ನೆನೆಪು ಮಾತ್ರ. ರವಿ ಮರೆಯಾದದ್ದು ದೀಪಾವಳಿಯ ಬೆಳಕನ್ನು ಸಂಭ್ರಮಿಸುವ ದಿನಗಳಲ್ಲಿ. ‘ರವಿ’ ನೀನೇಕೆ ಹೋದೆ? ದೂರಾಗಿಬಿಟ್ಟೆಯಲ್ವ? ನೀನಿಲ್ಲವೆನ್ನುವುದನ್ನು ಜೀರ್ಣಿಸಿಕೊಳ್ಳಲು ಕಷ್ಟ. ರವಿ ಬೆಳಗರೆ ಎಂಬ ಹೆಸರೇ ಚುಂಬಕ ಶಕ್ತಿ. ಮಾಧ್ಯಮ ಲೋಕದ ದೈತ್ಯ ಪ್ರತಿಭೆ. ಸಾಹಿತ್ಯದ ಕಣಜ, ಜ್ಞಾನದ ಗಣಿ, ನೇರ ನುಡಿ, ದಿಟ್ಟ ನಡೆಯ ಬರಹಗಾರ. ಕಳೆದ ವಾರದ ಅಂಕಣದ ತನಕ ನಮ್ಮ ಜೊತೆ ಮಾತನಾಡಿದ ರವಿ ಮೌನಕ್ಕೆ ಜಾರಿದ ಎಂದರೆ ನಂಬಲಸಾಧ್ಯ.

ಸುದ್ದಿಮನೆಯ ಗೆಳೆಯ:
ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ 1992 ರಲ್ಲಿ ಉಪಸಂಪಾದಕನಾಗಿದ್ದಾಗ ನಮ್ಮದು ಜಿಗರ್‍ದೋಸ್ತ್. ಅವರು ಕರ್ಮವೀರದಲ್ಲಿ ನಾನು ಸಂಯುಕ್ತ ಕರ್ನಾಟಕದಲ್ಲಿ. ನಿತ್ಯ ಒಟ್ಟಿಗೆ ಒಡನಾಟ. ‘ರವಿಯಣ್ಣ’ ಎಂದೇ ಕರೆಯುತ್ತಿದ್ದೆ. ‘ಏ ಪೆರ್ಲ’ಎಂದರೆ ಅದೇನೋ ಪ್ರೀತಿ-ವಿಶ್ವಾಸ. ಪ್ರೀತಿಕೊಟ್ಟು ಬೆಳೆಸಿದರು. ಮಾರ್ಗದರ್ಶನ ನೀಡಿದರು. ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದರು. ಸಂಯುಕ್ತ ಕರ್ನಾಟಕದ ಬೆಂಗಳೂರಿನ ರೆಸಿಡೆನ್ಸಿ ಕಚೇರಿಯ ಹಿಂದಿನ ಹಾಸ್ಟಲ್ ಎಂಬ ಬರಾಕ್‍ನಲ್ಲಿ ನಮ್ಮಿಬ್ಬರ ಜೀವನ. ಅಲ್ಲೇ ವಾಸ್ತವ್ಯ. ಮಂಗಳೂರಿನ ಕುಚ್ಚಲು ಅಕ್ಕಿ ಊಟ ಅಂದರೆ ರವಿಯಣ್ಣನಿಗೆ ಪಂಚಪ್ರಾಣ. ಬೇಕೆಂದಾಗ ಊಟಕ್ಕೆ ಹಾಜರ್. ಒಟ್ಟಿಗೆ ಊಟ, ಕುಶಲೋಪರಿ,ನಿದ್ರೆ ಎಲ್ಲವೂ, ಹಿರಿಯರಾದ ಶ್ಯಾಮರಾಯರು ಪತ್ರಿಕೆಯ ಸಂಪಾದಕರಾಗಿದ್ದರು. ಅವರದು ಮಿಲಿಟರಿ ಪದ್ಧತಿಯ ಶಿಸ್ತು, ಕಚೇರಿ, ಸುದ್ದಿಮನೆ ಒಡಾಟ ಎಲ್ಲದಕ್ಕೂ ಬಿಗು ಕ್ರಮ. ಕೆಲಸದ ನಂತರ ಜೊತೆಯಾಗಿ ಹರಟೆ, ಚಿಂತನೆ ವಾಗ್ಯುದ್ಧ, ಯೋಜನೆ ಯೋಚನೆ ನಡೆಯುತ್ತಿತ್ತು. ಗಣೇಶ ಕಾಸರಗೋಡು, ಉದಯ ಮರಕ್ಕಿಣಿ, ಸನತ್ ಬೆಳಗಲಿ ಜೊತೆ ನಮ್ಮದು ಒಂದು ಅನುಭವ ಮಂಟಪ. ಶೂನ್ಯ ಸಿಂಹಾಸನ ರವಿಯಣ್ಣನಿಗೆ ಮಾತಿನ ವೈಖರಿ, ಸಮಯದ ಮಿತಿಯಿಲ್ಲದೆ ಹರಿದದ್ದೂ ಇದೆ. ಜನಾರ್ಧನ ಪೂಜಾರಿಯವರ ಸಾಲಮೇಳದ ‘ರಾಜದೂತ್’ ಬೈಕ್ ರವಿಯಣ್ಣನ ಕುದುರೆ. ‘ ಏ ಪೆರ್ಲ ಬಾರೋ ಕೂಡು, ನಡಿಯೋಣ’ ಅಂದರೆ ಸಾಕು ಕುದುರೆ ಹತ್ತಲೇ ಬೇಕು.ರೆಸಿಡೆನ್ಸಿ ರಸ್ತೆ , ಕಬ್ಬನ್‍ಪಾರ್ಕ್ ದಾಟಿ ಪ್ರೆಸ್‍ಕ್ಲಬ್ ದಾರಿ ಹಿಡಿಯುತ್ತದೆ. ಸವಾರಿಗೆ ಒಂದೇ ಸ್ಟಾಪ್. ಪ್ರೆಸ್‍ಕ್ಲಬ್‍ನಲ್ಲಿ ದಿಗ್ಗಜರ ಸಮಾಗಮ. ಲಂಕೇಶ್ ಆದಿಯಾಗಿ ಹಿರಿಯರ ಜೊತೆ ಕೂಡುವ ಭಾಗ್ಯ ಕಲ್ಪಿಸಿದ ನಿಷ್ಕಲ್ಮಶ ಪ್ರೀತಿಯ ರವಿಯಣ್ಣ. ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ದಿಗ್ಗಜರ ಜೊತೆ ಭೇಟಿ ಮಾಡಿಸಿ ಬೆಂಗಳೂರಿನ ಭಯ ಓಡಿಸಿದ ರವಿಯಣ್ಣ. ತನ್ನಂತೆ ಇತರರೂ ಬೆಳೆಯಬೇಕು ಎಂಬ ಏಕೈಕ ಆಸೆ. ಗುಂಪಿನೊಳಗೆ ಕೂತಾಗ ಸಮಯದ ಪರಿವೆಯೇ ಇಲ್ಲ. ಸ್ಮೋಕ್ ಮತ್ತು ಗ್ಲಾಸ್ ಜೊತೆ ಕಾಲಕಳೆದದ್ದೇ ಗೊತ್ತಾಗದು. ನಾನು ಮಾತ್ರ ‘ಡ್ರೈ’. ರವಿಯಣ್ಣನ ಭಾಷೆಯಲ್ಲಿ ‘ಪ್ರಯೋಜನ ಇಲ್ಲ ಈ ಮಾರಾಯ’ ಎಂಬುದಾಗಿ ಮಂಗಳೂರು ಶೈಲಿಯಲ್ಲಿ ಉದ್ಗಾರವೆತ್ತಿ ತಬ್ಬಿಕೊಂಡು ಇತರರಿಗೆ ಪರಿಚಯಿಸುವ ಮುಕ್ತ ಮನಸ್ಸಿನ ಅಣ್ಣ. ಕೈ ಹಿಡಿದುಕೊಂಡು ನಮ್ಮ ರೆಸಿಡೆನ್ಸಿ ರಸ್ತೆಯ ವಾಸ್ತವ್ಯದ ಮನೆಗೆ ಬರುವಾಗ ರಾತ್ರಿ 12 ಗಂಟೆ. ಎಷ್ಟೇ ಆದರೂ ‘ರಾಜದೂತ್’ ಏರಿದರೆ ರಾಜ ಸವಾರಿಯೇ. ಧೈರ್ಯದಿಂದ ಹಿಂದೆ ಕೂತು ಸೇಫ್ ರಿಟರ್ನ್. ರಾತ್ರಿ 12 ಕ್ಕೆ ಬಂದರೂ ಬೆಳ್ಳಿಗ್ಗೆ 3 ರಿಂದ 5 ರೊಳಗೆ ಕರ್ಮವೀರ ಸಂಪಾದಕೀಯ ರೆಡಿ. ಅದರ ಮೊದಲ ಓದುಗ ನಾನೇ. ರವಿಯಣ್ಣನ ಲೇಖನಿಯಿಂದ ಹೊರಸೂಸುವುದು ಅಕ್ಷರಗಳಲ್ಲ ಮುತ್ತುಗಳು. ಅಷ್ಟು ಸುಂದರ. ವಿಚಾರ ಪ್ರತಿಪಾದನೆಯಲ್ಲಿ ಎರಡು ಮಾತಿಲ್ಲ. ‘ಏ ಪೆರ್ಲ ಓದೋ’ ಎಂದು ಕೈಗಿಟ್ಟು ಓದಿಸಿಕೊಂಡು ‘ಹ್ಯಾಗಿದೆಯೋ?’ ಅನ್ನುವಷ್ಟು ಸಹೃದಯ. ದೊಡ್ಡ ಬರಹಗಾರ, ಜ್ಞಾನದ ಗಣಿ, ವಿಚಾರಗಳು ಸರಣಿಯಾಗಿ ಹರಿಯಬಲ್ಲ, ಹಾಗೆ ಸೃಷ್ಟಿಸÀಬಲ್ಲ ಅಕ್ಷರಬ್ರಹ್ಮ. ಆದರೂ ನಿಗರ್ವಿ. ಓದಿ ಮೆಚ್ಚಿ ಚರ್ಚಿಸಿ ಮುದ್ರಣಕ್ಕೆ ಕಳುಹಿಸುವ ಜಾಯಮಾನ. ಕರ್ಮವೀರ ಪ್ರತಿಕೆ ಸಿನಿಮಾಂಕಣಕ್ಕೆ ಉದಯ ಮರಕ್ಕಿಣಿಯವರಿಗೆ ನಾನೊಬ್ಬ ಸ್ಟೆಪ್ಪಿನ್ ಇದ್ದ ಹಾಗೆ. ಮರಕ್ಕಿಣಿ ಶೂಟಿಂಗ್‍ಗೆ ಹೋದಾಗಲೆಲ್ಲ ರವಿಯಣ್ಣನ ಬುಲಾವ್ “ಏ ಪೆರ್ಲ ಮರಕ್ಕಿಣಿ ಇಲ್ಲ- ಈ ವಾರ ಸಿನಿಮಾ ಪೇಜ್‍ಗೆ ಏನ್ಮಾಡುತ್ತಿಯಾ?” ಎಂದರೆ ಬರೆದುಕೊಡೋ ಜವಾಬ್ದಾರಿ ನನಗೆ. ಹಾಗೆಲ್ಲ ನನ್ನನ್ನು ಬರಹಕ್ಕೆ ಹಚ್ಚಿದ ಪ್ರೀತಿಯ ರವಿಯಣ್ಣ ಸಿನಿಮಾ ಸುದ್ದಿ ಬರಹಗಾರÀನಾಗಿ ಮಾಡಿದರು. ತಿದ್ದಿ ತೀಡಿ ಪತ್ರಕರ್ತನೆಂಬ ನನ್ನನ್ನು ಸಾಗಣೆಗೆ ಹಿಡಿದ ಸುದ್ದಿ ಮನೆಯ ಗೆಳೆಯನಾದರು.


ಕರ್ಮವೀರ ರವಿ :
ನಿಜಕ್ಕೂ ರವಿಯಣ್ಣ ‘ಕರ್ಮವೀರ’ನೇ. ಪತ್ರಿಕೆಯ ಸಂಪಾದಕನ ಹೊಣೆಗಾರಿಕೆಯ ಮುನ್ನ ಏಜೆಂಟ್, ಉಪನ್ಯಾಸಕ ನಂತರ ಕಸ್ತೂರಿ ಮ್ಯಾಗಜಿನ್ ಹೀಗೆ ಹಲವು ಹೆಜ್ಜೆಗಳನ್ನು ದಾಟಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದವರು. ಕರ್ಮವೀರದ ‘ಪಾಪಿಗಳ ಲೋಕದಲ್ಲಿ’ ಸರಣಿ ಲೇಖನವು ಪತ್ರಿಕೆಯನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸಿತು. ಅದು ಕನ್ನಡಿಗರ ಮನೆ ಮಾತಾಯಿತು. ಬಿಸಿದೋಸೆಯಂತೆ ಪತ್ರಿಕೆ ಮಾರಾಟವಾಯಿತು. ಅದಕ್ಕಾಗಿ ಹಗಲಿರುಳು ದುಡಿದರು. ಪರಪ್ಪನಹಳ್ಳಿ ಅಗ್ರಹಾರಕ್ಕೆ ಹೋಗುವಾಗಲೆಲ್ಲ ‘ಏ ಪೆರ್ಲ ಬರ್ತಿಯಾ?’ ಎಂದು ಬುಲಾವ್ ಕೊಡುತ್ತಿದ್ದವರು.


ಸೋದರ ಭಾವ :

ಒಡಹುಟ್ಟದಿದ್ದರೂ, ಸೋದರ ಭಾವ ತೋರಿದ ನಿಜಾರ್ಥದ ಅಣ್ಣ. ತನ್ನ ಎಲ್ಲ ಚಟುವಟಿಕೆಗಳನ್ನು ಮುಕ್ತವಾಗಿ ಹೇಳಿ ಬಿಡುವ ಜಾಯಮಾನ ಸಂಯುಕ್ತ ಕರ್ನಾಟಕ ಬಿಟ್ಟು ಕನ್ನಡಪ್ರಭ ಪತ್ರಿಕೆಯ ಸಂದರ್ಶನಕ್ಕೆ ಹೋದಾಗಲೂ ಒಟ್ಟಿಗೆ ಇದ್ದವರು.

ನಾನು 1994 ರಲ್ಲಿ ಸಂಯುಕ್ತ ಕರ್ನಾಟಕ ಬಿಟ್ಟಾಗ ರವಿಯಣ್ಣ ಆಗಲೇ ಗುಡ್‍ಬೈ ಹೇಳಿ ಆಗಿತ್ತು. “ಹಾಯ್ ಬೆಂಗಳೂರು” ಪತ್ರಿಕೆ ಆರಂಭಕ್ಕೆ ಬುನಾದಿ ಹಾಕಿ ಬಿಟ್ಟಿದ್ದರು. ನಾನು ಆಕಾಶವಾಣಿ ಸೇರಿ ಕಲಬುರಗಿ ಮಂಗಳೂರು ಇದ್ದಾಗಲೂ ಸ್ನೇಹ ಮುಂದುವರಿದಿತ್ತು. ಅವರ ದಿಢೀರ್ ಬೆಳವೆಣಿಗೆ, ಜನಪ್ರಿಯತೆ, ಸಾಹಿತ್ಯ, ಪತ್ರಿಕೆಯಲ್ಲಿ ಮಾಡಿದ ಅದ್ವಿತೀಯ ಸಾಧನೆ ಛಲದಂಕ ಮಲ್ಲನಾಗಿ ಏರಿದ ಎತ್ತರ ಅದ್ಭುತ ಅಚ್ಚರಿಕೂಡ. ಇಷ್ಟೆಲ್ಲ ಎತ್ತರಕ್ಕೇರಿದರೂ ಫೋನ್ ಕರೆಗೆ ‘ಓ’ ಎನ್ನುವ ಮನಸ್ಸು. ಒಂದು ಸಲ ಬೆಂಗಳೂರಿಗೆ ಹೋದಾಗ ಅವರ ಕಚೇರಿಯಲ್ಲಿ ಭೇಟಿ ಮಾಡಲು ಹೋಗಿದ್ದೆನು. ಆಗ ಅವರು ತೋರಿದ ಪ್ರೀತಿಯನ್ನು ಕಂಡು ಜೊತೆಗಿದ್ದ ನನ್ನ ಹಿರಿಯ ಅಧಿಕಾರಿ ಎಚ್. ಶ್ರೀನಿವಾಸ್ ಮೈಸೂರು ಹೇಳಿದರು “ರವಿ ಬೆಳಗರೆಯನ್ನು ನೋಡಲು ಮಾತನಾಡಲು ಭಾಗ್ಯ ಒದಗಿಸಿಕೊಟ್ಟೆ, ನಿನ್ನ ಅವರ ಜೊತೆಗಿನ ಪ್ರೀತಿಗೆ ದಂಗಾದೆ’ ಎಂದಾಗ ನನಗೂ ಅಚ್ಚರಿ. ಆ ಟೇಬಲ್ ಮುಂದೆ ಮೊದಲಿನ ದಿನ ಮುಂಜಾವದ ವರೆಗೆ ಬರºಕ್ಕಾಗಿ ಹರಡಿದ ಪುಸ್ತಕ, ಪೆನುÀ್ನ , ಕಾಗದಗಳಿದ್ದÀವು. ಆದರೂ ತಮ್ಮನೆಂಬ ಆದರದಿಂದ ಬರಮಾಡಿಕೊಂಡ ಮತ್ತು ಆತಿಥ್ಯ ನೀಡಿದ ದಿನ ಅಚ್ಚಳಿಯದೆ ಉಳಿದಿದೆ. ಆಗಷ್ಟೆ ‘ಪ್ರಾರ್ಥನಾ’ ಶಾಲೆ ಆರಂಭಿಸಿದ ಬಗ್ಗೆ ಚರ್ಚೆ, ಅವರ ಯೋಚನೆ, ಯೋಜನೆ ಸಾಕಾರಗಳÀ ಬಗ್ಗೆ ಹೃದಯತುಂಬಿ ಮಾತನಾಡಿದರು. ಎರಡು ವರ್ಷಗಳ ಹಿಂದೆ ಮಂಗಳೂರು ಕಾರ್ಯಕ್ರಮಕ್ಕೆ ಬಂದಾಗ “ರವಿಯಣ್ಣ ಇಲ್ಲಿ ವರೆಗೆ ಬಂದೆ, ಮನೆಗೆ ‘ಬಾ’ ಎಂದಾಗ “ಇನ್ನೊಮ್ಮೆ ನಿನ್ನ ಮನೆಗೆ ಬರುತ್ತೇನೆ” ಎಂದು ಹೇಳಿ ಹೋದ ರವಿಯಣ್ಣ ಬಾರದೊರಿಗೆ ನಡೆದೇ ಬಿಟ್ಟರು. ನೀವು ಕಲಿಸಿದ ಪಾಠ, ನಿಮ್ಮ ಒಡನಾಟ ಮರೆಯಲುಂಟೆ. ಹೃದಯ ಭಾರವಾಗುತ್ತಿದೆ, ಕಣ್ಣು ತೇವಗೊಳ್ಳುತ್ತಿದೆ.

ರವಿಗೆ ರವಿಯೆ ಸಾಟಿ, ನಿಮ್ಮ ಪ್ರೀತಿ, ವಿಶ್ವಾಸ ಆದರ್ಶ, ರವಿಯ ನೆರಳಲಲ್ಲಿ ಕಳೆದ ಆ ಮಧುರ ಸ್ಮøತಿ ಎಂದೆಂದೂ ಅಮರ............. ರವಿ ಅಮರ್ ರಹೇ............

ಡಾ.ಸದಾನಂದ ಪೆರ್ಲ                       
ಕಾರ್ಯಕ್ರಮ ನಿರ್ವಾಹಕರು
ಆಕಾಶವಾಣಿ ಕಲಬುರಗಿ.
ಮೊಬೈಲ್: 9448127672
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here