Friday 29th, March 2024
canara news

ಪ್ರತಿಷ್ಠಿತ `ನರಹಳ್ಳಿ ಪ್ರಶಸ್ತಿ'ಗೆ ಭಾನಜರಾದ ಡಾ| ಜಿ.ಎನ್ ಉಪಾಧ್ಯ

Published On : 27 Jan 2022   |  Reported By : Rons Bantwal


ಫೆ.06; ವರ್ಚ್ಯೂವಲ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

ಮುಂಬಯಿ (ಆರ್‍ಬಿಐ), ಜ.28: ಡಾ| ನರಹಳ್ಳಿ ಪ್ರತಿಷ್ಠಾನ ಬೆಂಗಳೂರು ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ ನರಹಳ್ಳಿ ಪ್ರಶಸ್ತಿಗೆ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್ ಉಪಾಧ್ಯ ಆಯ್ಕೆಯಾಗಿದ್ದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬರುವ ಫೆ.06ರಂದು ಆನ್‍ಲೈನ್ (ವರ್ಚ್ಯೂವಲ್ ಕಾರ್ಯಕ್ರಮ) ಮುಖಾಂತರ ನಡೆಯಲಿದೆ ಎಂದು ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಜನಶಕ್ತಿ ಕೇಂದ್ರ, ಡಾ| ನರಹಳ್ಳಿ ಪ್ರತಿಷ್ಠಾನ ಹಾಗೂ ಮೈಸೂರು ಅಸೋಸಿಯೇಶನ್ ಮುಂಬಯಿ ಇವುಗಳ ಸಯುಕ್ತ ಆಶ್ರಯದಲ್ಲಿ ಝೂಮ್ ವೇದಿಕೆಯಲ್ಲಿ ಡಾ| ನರಹಳ್ಳಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪ್ರಸಿದ್ಧ ಕವಿ ಆಗಿರುವ ಡಾ| ಹೆಚ್.ಎಸ್ ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಸುಪ್ರೀಮ್ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಖ್ಯಾತ ವಿದ್ವಾಂಸರಾದ ಜಸ್ಟೀಸ್ ಬಿ.ಎನ್ ಶ್ರೀಕೃಷ್ಣ ಅವರು ಪ್ರಶಸ್ತಿ ಪ್ರದಾನಿಸಲಿದ್ದಾರೆ.

ಐಲೇಸಾ, ದಿ ವಾಯ್ಸ್ ಆಫ್ ಓಶಿಯನ್ ಇವರು ತಾಂತ್ರಿಕ ಸಹಾಯ ನೀಡಲಿರುವರು ಎಂದು ಕಾರ್ಯಕ್ರಮದ ಆಯೋಜಕರಾದ ಸಿ.ಕೆ.ರಾಮೇಗೌಡ (ಅಧ್ಯಕ್ಷರು, ಕನ್ನಡ ಜನಶಕ್ತಿ ಕೇಂದ್ರ) ಹಾಗೂ ಡಾ. ಆನಂದರಾಮ ಉಪಾಧ್ಯ (ಕಾರ್ಯದರ್ಶಿ ಡಾ| ನರಹಳ್ಳಿ ಪ್ರತಿಷ್ಠಾನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರಹಳ್ಳಿ ಪ್ರತಿಷ್ಠಾನ: ಹಿರಿಯ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಬಂದ ಪ್ರಶಸ್ತಿ ಮತ್ತು ಗೌರವಗಳ ಮೊತ್ತದಿಂದ ಹುಟ್ಟಿಕೊಂಡ ಸಂಸ್ಥೆ `ಡಾ| ನರಹಳ್ಳಿ ಪ್ರತಿಷ್ಠಾನ' ಕಳೆದ ಎಂಟು ವರ್ಷಗಳಿಂದ ಪ್ರತಿವರ್ಷ ಒಬ್ಬ ಪ್ರತಿಭಾನ್ವಿತ ಬರಹಗಾರರನ್ನು ಗುರುತಿಸಿ `ನರಹಳ್ಳಿ ಪ್ರಶಸ್ತಿ'ಯನ್ನು ನೀಡಿ ಗೌರವಿಸುತ್ತದೆ. ಈಗಾಗಲೇ ನಾಡಿನ ಏಳು ಮಂದಿ ವಿದ್ವಾಂಸರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2021ರ ಸಾಲಿಗೆ ಪ್ರಸಿದ್ಧ ಸಂಶೋಧಕರಾದ ಡಾ| ಜಿ.ಎನ್.ಉಪಾಧ್ಯ ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.

ಡಾ.ಜಿ.ಎನ್.ಉಪಾಧ್ಯ: ಡಾ| ಜಿಎ.ನ್ ಉಪಾಧ್ಯ ಅವರು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸದಾ ಅಧ್ಯಯನ, ಅಧ್ಯಾಪನ ಮಾತ್ರವಲ್ಲದೆ ಸಂಶೋಧನೆ, ಓದು ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಡಾ.ಉಪಾಧ್ಯ ಅವರು ಸಂಶೋಧನೆ, ವಿಮರ್ಶೆ, ವ್ಯಕ್ತಿಚಿತ್ರಗಳನ್ನು ರಚಿಸಿದ್ದಲ್ಲದೆ ಹಲವು ಪ್ರಮುಖ ಕೃತಿಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಮುಂಬಯಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಕಟ್ಟಿಕೊಡುವ ಬಲುದೊಡ್ಡ ಕೆಲಸವನ್ನು ಅವರು ಮಾಡಿದ್ದಾರೆ. ಸೊಲ್ಲಾಪುರದ ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರ ಕನ್ನಡ ಶಾಸನಗಳ ವರ್ಣನಾತ್ಮಕ ಸೂಚಿ, ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು, ಮಹಾರಾಷ್ಟ್ರ ಕನ್ನಡ ಆದಾನ ಪ್ರದಾನ, ಅನುಭವ ಸಾಹಿತ್ಯದ ವಿಭಿನ್ನ ನೆಲೆಗಳು, ಕನ್ನಡ ವೃತ್ತಾಂತ, ಸಾಹಿತ್ಯ ವಿಹಾರ, ಅನಿಕೇತನ ಪ್ರಜ್ಞೆ ಮತ್ತು ಕನ್ನಡ ಮೊದಲಾದ 77 ಕೃತಿಗಳು ಇದುವರೆಗೆ ಬೆಳಕು ಕಂಡಿವೆ. ಅಭಿಜಿತ್ ಪ್ರಕಾಶನದ ಸಂಚಾಲಕ ಆಗಿರುವ ಡಾ| ಜಿ.ಎನ್ ಉಪಾಧ್ಯ ಅವರು ಅನೇಕ ಹೊಸ ಪ್ರತಿಭೆಗಳ ಕೃತಿಗಳನ್ನು ಹೊರತಂದಿದ್ದು ಇದುವರೆಗೆ 120ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಡಾ| ಉಪಾಧ್ಯ ಮಾರ್ಗದರ್ಶನದಲ್ಲಿ ಇದುವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಹೆಚ್.ಡಿ ಪದವಿ ಪಡೆದಿದ್ದಾರೆ.

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳ ಆಯೋಜನೆ, ವಿಚಾರ ಮಂಡನೆಗಳನ್ನು ಮಾಡಿರುವ ಅವರು ಒಬ್ಬ ಉತ್ತಮ ವಾಗ್ಮಿಯೂ ಆಗಿದ್ದಾರೆ. ಶಿಕ್ಷಕ ವಿಭೂಷಣ ಪ್ರಶಸ್ತಿ, ಶಾಂತಿಲಾಲ್ ಪ್ರಶಸ್ತಿ, ಶ್ರೀಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಬಹುಮಾನ, ಕನ್ನಡ ಜ್ಯೋತಿ ಮೊದಲಾದ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here