Thursday 25th, April 2024
canara news

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ

Published On : 05 Feb 2022   |  Reported By : Rons Bantwal


ಚಿತ್ರಶೀರ್ಷಿಕೆ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಪಾದಾಭಿಷೇಕ ನೆರವೇರಿಸಿದರು.

ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನೇ ವರ್ಧಂತ್ಯುತ್ಸದ ಅಂಗವಾಗಿ ಬುಧವಾರ ಬೆಳಿಗ್ಯೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.

ನೀರು, ಹಾಲು, ಎಳನೀರು, ಕಬ್ಬಿನ ರಸ, ಅರಿಶಿನ ಶ್ರೀಗಂಧ, ಚಂದನ, ಮೊದಲಾದ ಮಂಗಲ ದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು.

ಉಜಿರೆಯ ಎಸ್.ಡಿ.ಎಂ. ಕಾಲೇಜು ಮತ್ತು ಸಿದ್ಧವನ ಗುರುಕುಲದ ವಿದ್ಯಾರ್ಥಿಗಳು ಹಾಗೂ ಬಾಹುಬಲಿ ಸೇವಾ ಸಮಿತಿಯ ಸದಸ್ಯರಿಂದ ಪೂಜಾ ಮಂತ್ರ ಪಠಣ, ಪಂಚನಮಸ್ಕಾರ ಮಂತ್ರ ಪಠಣ ಹಾಗೂ ಜಿನಭಕ್ತಿ ಗೀತೆಗಳ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.

ಪೂರ್ಣಕುಂಭಾಭಿಷೇಕ, ಪುಷ್ಪವೃಷ್ಟಿ, ಶಾಂತಿಮಂತ್ರಪಠಣ ಹಾಗೂ ಮಹಾ ಮಂಗಳಾರತಿಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

ವ್ರತ-ನಿಯಮಗಳ ಪಾಲನೆಯಿಂದ ಮನೆಯೇ ಮಂದಿರವಾಗುತ್ತದೆ: ಧರ್ಮಕ್ಷೇತ್ರದಲ್ಲಿ ಧರ್ಮಧ್ಯಾನದಿಂದ ಪುಣ್ಯ ಸಂಚಯವಾಗುತ್ತದೆ. ಶ್ರದ್ಧಾ-ಭಕ್ತಿಯಿಂದ, ದೃಢ ಸಂಕಲ್ಪದೊಂದಿಗೆ ವ್ರತ-ನಿಯಮಗಳ ಪಾಲನೆಯಿಂದ, ಮನೆಯಲ್ಲೆ ದೇವಗತಿ ಬಂಧವಾಗುತ್ತದೆ. ಮನೆಯೇ ಮಂದಿರವಾಗುತ್ತದೆ ಎಂದು ಮಂಗಲ ಪ್ರವಚನ ನೀಡಿದ ಕಾರ್ಕಳ ಜೈನ ಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಜೈನ ಧರ್ಮದ ತಿರುಳಾದ ಅಹಿಂಸೆಯೇ ಶ್ರೇಷ್ಠ ತತ್ವವಾಗಿದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ಬಾಹುಬಲಿಯ ಜೀವನ ಸಂದೇಶ ಸಾರುತ್ತದೆ. ತ್ಯಾಗ ಮತ್ತು ವೈರಾಗ್ಯದ ಸಂಕೇತವಾದ ಬಾಹುಬಲಿ ಮೂರ್ತಿಯ ದರ್ಶನ, ಪೂಜೆ, ಆರಾಧನೆಯೊಂದಿಗೆ ಆತನ ಗುಣಗಳನ್ನೂ ನಮ್ಮ ಜೀವನದಲ್ಲಿ ಅಳವಡಿಸಿದಾಗ ಜೀವನ ಪಾವನವಾಗುತ್ತದೆ. ಗೃಹಾಲಯವೇ ಜಿನಾಲಯವಾಗಬೇಕು. ಜಪ, ತಪ, ಧ್ಯಾನ, ಸ್ವಾಧ್ಯಾಯ, ಗುರುಗಳ ಸೇವೆ ಮೊದಲಾದ ಶ್ರಾವಕರ ಷಟ್‍ಕ್ರಿಯೆಗಳನ್ನು ನಿಷ್ಠೆಯಿಂದ ಮಾಡಿದಾಗ ಪಾಪಕರ್ಮಗಳ ಕೊಳೆ ಕಳೆದು ಆತ್ಮನೇ ಪರಮಾತ್ಮನಾಗುತ್ತಾನೆ. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು. ಗೃಹಾಲಯವನ್ನು ಜಿನಾಲಯವನ್ನಾಗಿ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಕ್ಷುಲ್ಲಕ ನಿರ್ವಾಣ ಸಾಗರ ಮುನಿಮಹಾರಾಜರು ಮಾತನಾಡಿ, ಮೋಕ್ಷ ಪ್ರಾಪ್ತಿಗೆ ಮಾನವ ಜನ್ಮವೇ ಶ್ರೇಷ್ಠ ಮಾಧ್ಯಮವಾಗಿದೆ. ಪಾಪಕರ್ಮಗಳ ನಾಶದೊಂದಿಗೆ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಬೇಕು ಎಂದು ಹೇಳಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಶ್ರದ್ಧಾ ಅಮಿತ್, ಅಮಿತ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ. ನೀತಾ ರಾಜೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ಸಂಹಿತಾ ಶ್ರೇಯಸ್ ಕುಮಾರ್, ಡಿ. ನಿಶ್ಚಲ್ ಕುಮಾರ್, ಜಿತೇಶ್ ಮತ್ತು ಶ್ರುತಾ ಜಿತೇಶ್, ಮೈತ್ರಿ ಉಪಸ್ಥಿತರಿದ್ದರು.
ಡಾ. ಶಶಿಕಾಂತ ಜೈನ್ ಮತ್ತು ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here