Monday 11th, December 2023
canara news

ಕರವಾಳದ ಶಕ್ತಿಗಿಂತ ಕರುಣೆಯ ಶಕ್ತಿ ಹೆಚ್ಚು: ರಾಘವೇಶ್ವರ ಶ್ರೀ

Published On : 21 Aug 2022   |  Reported By : media release


ಗೋಕರ್ಣ: ಕರವಾಳದ ಶಕ್ತಿಗಿಂತ ಕರುಣೆಯ ಶಕ್ತಿ ಅಧಿಕ. ದುಷ್ಟತನ, ಕ್ರೌರ್ಯದ ಸಂಕೇತವೇ ಆಗಿದ್ದ ಅಂಗುಲಿಮಾಲನಂಥವನನ್ನೂ ಪರಿವರ್ತಿಸಿದ್ದು, ಬುದ್ಧನ ಅಪೂರ್ವ ಕರುಣಾ ಶಕ್ತಿ. ಇಂಥ ಶಕ್ತಿ ಜಗತ್ತನ್ನು ಆಳುವಂತಾಗಬೇಕು. ನಮ್ಮೆಲ್ಲರ ಹೃದಯವನ್ನು ಕರುಣೆ ಆಳುವಂತಾಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು ರಾಮನ ಕಾರ್ಮುಖ (ಧನಸ್ಸು), ಕೃಷ್ಣನ ಯುಕ್ತಿ ಮತ್ತು ಬುದ್ಧನ ಕಾರುಣ್ಯ ಭಾರತೀಯ ಸಂಸ್ಕøತಿಯಲ್ಲಿ ವಿಶೇಷ ಸ್ಥಾನವಿದೆ ಎಂದು ಬಣ್ಣಿಸಿದರು.

ಬುದ್ಧ ಹಾಗೂ ಅಂಗುಲಿಮಾಲ ಒಮ್ಮೆ ಪರಸ್ಪರ ಭೇಟಿಯಾಗುತ್ತಾರೆ. ಅಂಗುಲಿಮಾಲ ಕರವಾಳದ ಸಂಕೇತ. ಬುದ್ಧ ಕರುಣೆಯ ಸಂಕೇತ. ಬುದ್ಧ ಅಂಗುಲಿಮಾಲನ ಪ್ರದೇಶ ಪ್ರವೇಶಿಸುತ್ತಿದ್ದಂತೆಯೇ ಅಂಗುಲಿಮಾಲ ಆತನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ. ಕೊಲ್ಲಲು ಮುಂದಾದ ಅಂಗುಲಿಮಾಲ ಬುದ್ಧನಲ್ಲಿ ಕೊನೆಯ ಆಸೆ ಏನೆಂದು ಕೇಳುತ್ತಾನೆ. ಆಗ ಅಪೇಕ್ಷೆಯ ಎರಡು ಭಾಗವಿದೆ. ಒಂದನೆಯದಾಗಿ ಎದುರು ಇರುವ ಮರದ ಕೊಂಬೆಯ ಮುರಿಯಬೇಕು ಎನ್ನುತ್ತಾನೆ. ಆಗ ಅಂಗುಲಿಮಾಲ ಸುಲಭವಾಗಿ ಮುರಿಯುತ್ತಾನೆ. ಅಪೇಕ್ಷೆಯ ಎರಡನೇ ಭಾಗವಾಗಿ ಕೊಂಬೆಯನ್ನು ಮರಳಿ ಜೋಡಿಸುವಂತೆ ಕೋರುತ್ತಾನೆ. ಆಗದು ಎಂದು ಅಂಗುಲಿಮಾಲ ಹೇಳಿದಾಗ, ಶ್ರೇಷ್ಠತೆ ಇರುವುದು ಜೀವ ತೆಗೆಯುವುದರಲ್ಲಿ ಅಲ್ಲ; ಜೀವ ನೀಡುವುದರಲ್ಲಿ ಎಂದು ಬುದ್ಧ ಹೇಳುತ್ತಾನೆ. ಈ ಘಟನೆ ಅಂಗುಲಿಮಾಲನನ್ನು ಭಿಕ್ಷುವಾಗಿ ಪರಿವರ್ತಿಸುತ್ತದೆ.

ನಾರದರ ಕಾರುಣ್ಯದಿಂದ ಬೇಡ ರತ್ನಾಕರ ವಾಲ್ಮೀಕಿಯಾಗಿ ಪರಿವರ್ತನೆಯಾಗುತ್ತಾನೆ. ನಿನ್ನ ಸಂಪಾದನೆ, ಸಂಪತ್ತಿನಲ್ಲಿ ಪಾಲು ಪಡೆಯುವ ನಿನ್ನ ಪತ್ನಿ ಮತ್ತು ಮಕ್ಕಳು ನಿನ್ನ ಪಾಪದಲ್ಲೂ ಪಾಲು ಪಡೆಯುತ್ತಾರೆಯೇ ಎಂದು ನಾರದರು ಕೇಳಿದ ಒಂದು ಪ್ರಶ್ನೆ ರತ್ನಾಕರನನ್ನು ವಾಲ್ಮೀಕಿಯಾಗಿ ಬದಲಿಸಿತು ಎಂದು ಹೇಳಿದರು.

ಕರುಣೆ ಎನ್ನುವುದು ದೌರ್ಬಲ್ಯವಲ್ಲ; ಅದು ಅದ್ಭುತ ಶಕ್ತಿ. ಇದಕ್ಕೆ ಮನಸ್ಸಿನ ಮೇಲೆ ನಿಗ್ರಹ ಅಗತ್ಯ. ಭೀತಿಯಿಂದ ಬಾಹ್ಯ ಪರಿವರ್ತನೆ ಮಾಡುವುದು ಸಾಧ್ಯವಾದರೆ, ಅಂತರ್ಯವನ್ನು ಗೆಲ್ಲಲು ಕೇವಲ ಪ್ರೀತಿಯಿಂದಷ್ಟೇ ಸಾಧ್ಯ ಎಂದು ವಿಶ್ಲೇಷಿಸಿದರು.

ರಾಜರಿಗಿಂತ ಋಷಿ ಮುನಿಗಳು ಶ್ರೇಷ್ಠರು. ರಾಜನ ಸೈನಿಕರ ಶಕ್ತಿಗಿಂತ ಋಷಿ ಮುನಿಗಳ ಕರುಣೆಯ ಸಾಮಥ್ರ್ಯ ಹೆಚ್ಚು. ಈ ಕಾರಣದಿಂದಲೇ ಎಂಥ ಶಕ್ತಿ ಸಾಮಥ್ರ್ಯ, ಸೇನಾ ಬಲ ಹೊಂದಿದ ರಾಜರಾದರೂ ಮುನಿಶ್ರೇಷ್ಠರಿಗೆ ತಲೆ ಬಾಗುತ್ತಿದ್ದರು ಎಂದು ವಿವರಿಸಿದರು.

ದಂಡನೆಯಿಂದ ಸಾಧ್ಯವಾಗದ್ದು ಕಾರುಣ್ಯದಿಂದ ಸಾಧ್ಯವಾಗುತ್ತದೆ. ಗುರುಸನ್ನಿಧಾನದಲ್ಲಿ ಮುಖ್ಯವಾಗಿರುವಂಥದ್ದು ಮರುಕ ತುಂಬಿದ, ಕರುಣ ರಸ ಹೊಂದಿದ ನೋಟ. ಇಂಥ ಕರುಣಾಪೂರ್ಣ ನೋಟ ಒಮ್ಮೆ ಬಿದ್ದರೆ ನಮ್ಮ ಜೀವನ ಪಾವನವಾಗುತ್ತದೆ. ಎಷ್ಟೋ ಜೀವಗಳನ್ನು ಇದು ಉದ್ಧರಿಸುತ್ತದೆ. ಕರುಣೆ ತುಂಬಿದಾಗ ನಿಜವಾಗಿ ಶ್ರೇಷ್ಠವ್ಯಕ್ತಿಗಳಾಗುತ್ತೇವೆ. ಉದಾಹರಣೆಗೆ ವಾಲ್ಮೀಕಿ ಇಡೀ ಜಗತ್ತಿನಲ್ಲಿ ವಿಶ್ವಮಾನ್ಯರಾಗಿದ್ದರೆ, ಅವರ ಹಿಂದಿನ ರೂಪವನ್ನು ಯಾರು ನೆನಪಿಸಿಕೊಳ್ಳಲೂ ಬಯಸುವುದಿಲ್ಲ. ದೇವರ ಇಂಥ ಒಂದೊಂದು ಸಹಜ ಗುಣಗಳನ್ನು ಬೆಳೆಸಿಕೊಂಡಷ್ಟೂ ನಾವೂ ದೇವರಾಗಿ ಪರಿವರ್ತನೆಯಾಗುತ್ತೇವೆ ಎಂದು ಹೇಳಿದರು.

ಮಂಗಳೂರು ಮಂಡಲದ ಕುಂದಾಪುರ, ಕೇಪು, ವಿಟ್ಲ, ಕಲ್ಲಡ್ಕ ವಲಯದ ವತಿಯಿಂದ ಸರ್ವಸೇವೆ ನೆರವೇರಿತು. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರು ಶುಕ್ರವಾರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here