Friday 29th, March 2024
canara news

ಉಡುಪಿ ಕೃಷ್ಣಾಪುರ ಮಠದ ಅಕ್ಕಿ ಮುಹೂರ್ತದಧಾರ್ಮಿಕ ಸಭೆ

Published On : 20 Feb 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಫೆ.18: ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಇಂದಿಲ್ಲಿ ಗುರುವಾರ ಅಕ್ಕಿ ಮುಹೂರ್ತದ ಅಂಗವಾಗಿ ಧಾರ್ಮಿಕ ಸಭೆ ನಡೆಸಲ್ಪಟ್ಟಿತು. ಪಲಿಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಶ್ರೀವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದು, ಎಲ್ಲಾ ಶ್ರೀಪಾದರುಗಳಿಗೆ ಕೃಷ್ಣಾಪುರ ಮಠದಿಂದ ಗೌರವಾರ್ಪಣೆ ನಡೆಸಲಾಯಿತು.

ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು ಮಾತನಾಡಿ, ಕೃಷ್ಣಾಪುರ ಶ್ರೀಪಾದರು ದಾಖಲೆಯ 4ನೇ ಬಾರಿಗೆ ಪರ್ಯಾಯ ಪೀಠವನ್ನು ಏರಲಿದ್ದು, ಈ ಹಿಂದಿನ ಮೂರೂ ಪರ್ಯಾಯಗಳನ್ನು ಯಶಸ್ವಿಯಾಗಿ ಸಂಪ್ರದಾಯ ಬದ್ಧವಾಗಿ ಪೂರೈಸಿದ್ದಾರೆ. ವಿಶ್ವಪ್ರಿಯ ಪರ್ಯಾಯ ಮಾಡುವುದಕ್ಕಿಂತ ಕೃಷ್ಣಪ್ರಿಯ ಪರ್ಯಾಯ ನಡೆಸುವ ಮೂಲಕ ನಮಗೆಲ್ಲಾ ಪರ್ಯಾಯ ನಡೆಸುವಲ್ಲಿ ಮಾರ್ಗದರ್ಶಕರಾಗಿದ್ದಾರೆ. ಅನ್ನದಾನಕ್ಕೆ ಪ್ರಸಿದ್ಧವಾಗಿರುವ ಕೃಷ್ಣಮಠದಲ್ಲಿನ ಊಟ ಕೇವಲ ಅನ್ನವಾಗಿರದೆ, ಕೃಷ್ಣದೇವರ ನೈವೇದ್ಯ ಎಂಬ ಭಾವನೆಯಲ್ಲಿ ಭಕ್ತರು ಸ್ವೀಕಾರ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಕೊಂಡಿರುವ ದೃಷ್ಟಾಂತಗಳಿ ಸಾಕಷ್ಟು ಇವೆ ಎಂದರು. ಕೃಷ್ಣ ಮುಖ್ಯಪ್ರಾಣರ, ಶ್ರೀ ವಾದಿರಾಜರಅನುಗ್ರಹದಿಂದ ಮುಂದಿನ ಪರ್ಯಾಯ ಸಾಂಗವಾಗಿ ನೆರವೇರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಪಲಿಮಾರು ಶ್ರೀ ವಿದ್ಯಾರಾಜೇಶ್ವರತೀರ್ಥರು ಆಶೀರ್ವಚನ ನೀಡಿ ಉಡುಪಿಯ ಕೃಷ್ಣ ಅನ್ನ ಬ್ರಹ್ಮನೆಂದು ಖ್ಯಾತನಾಗಿದ್ದಾನೆ. ಇವನ ಪೂಜಾಧಿಕಾರವಾದ ಪರ್ಯಾಯದಲ್ಲಿ ನಿರಂತರ ಅನ್ನದಾನಕ್ಕೆ ಅನುಕೂಲವಾಗುವ ಅಕ್ಕಿಯ ಸಂಗ್ರಹದ ದೂರಾಲೋಚನೆ ಈ ಮುಹೂರ್ಥದ ಹಿಂದೆ ಇದೆ ಎಂದರು.

ಬಳಿಕ ಸೋದೆ ಶ್ರೀಪಾದರು ಅನುಗ್ರಹ ಸಂದೇಶ ನೀಡಿ ಉಡುಪಿಯಲ್ಲಿ ಕೃಷ್ಣನಿಗೆ ಗರ್ಭಗುಡಿಯಲ್ಲಿ ಎಷ್ಟು ವೈಭವದಿಂದ ಪೂಜಾಧಿಗಳು ನೆರವೇರುತ್ತವೆಯೋ ಅಷ್ಟೇ ವೈಭವದಿಂದ ಗರ್ಭಗುಡಿಯ ಹೊರಗೆ ಕೂಡ ಉತ್ಸವ, ಅನ್ನದಾನಾದಿಗಳು ನಡೆಯುತ್ತವೆ. ಅನ್ನದಾನಕ್ಕೆ ವಿಶಿಷ್ಠ ಸ್ಥಾನವನ್ನು ಕೊಟ್ಟು ಅದಕ್ಕೆ ಅನುಕೂಲ ಆಗುವಂತೆ ಮುಹೂರ್ತಾದಿಗಳ ಕಲ್ಪನೆ ಇರುವ ಏಕೈಕ ಸ್ಥಳ ಉಡುಪಿ ಎಂದು ಹೇಳಿದರು.

ಕಾಣಿಯೂರು ವಿದ್ಯಾವಲ್ಲಭತೀರ್ಥರು ಅನುಗ್ರಹಿಸಿ ಉಡುಪಿಯಲ್ಲಿ ಅನ್ನದಾನದ ಮಹತ್ವವನ್ನು ತಿಳಿಸಿ ಹಸಿದು ಬಂದ ಯಾರಿಗೇ ಆಗಲಿ ಅನ್ನಇಲ್ಲ ಎಂದ ಸನ್ನಿವೇಶ ಇವತ್ತಿನ ವರೆಗೂ ಬಂದಿಲ್ಲ. ಕೇವಲ ಹೊಟ್ಟೆಯ ಹಸಿವು ಮಾತ್ರವಲ್ಲ, ಜಿಜ್ಞಾಸುಗಳ ಜ್ಞಾನದ ಹಸಿವನ್ನೂ ಸಹ ತಣಿಸಲು ಉಡುಪಿಯಲ್ಲಿ ನಿರಂತರ ಪಾಠ, ಪ್ರವಚನಾದಿಗಳು ನಡೆಯುತ್ತಿದೆ ಎಂದು ಹೇಳಿದರು.

ಪೇಜಾವರ ವಿಶ್ವಪ್ರಸನ್ನತೀರ್ಥರು ಮಾತನಾಡಿ, ಭತ್ತ ಸೃಷ್ಠಿಯ ಸಂಕೇತ. ಭತ್ತದಿಂದ ಹೊಸ ಹುಟ್ಟೂ ಸಾಧ್ಯ. ಭತ್ತದ ಹೊಟ್ಟನ್ನು ಬೇರ್ಪಡಿಸಿ ಸಿಗುವ ಅಕ್ಕಿ ಮೋಕ್ಷದ ಸಂಕೇತ. ನಮ್ಮ ಜೀವನವೂ ಕೂಡಾ ಮೋಕ್ಷವನ್ನು ಪಡೆಯುವತ್ತ ಸಾಗಲಿ ಎಂದು ಆಶಿಸಿದರು.

ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥರು ಮಾತನಾಡಿ ಉಪಸ್ಥಿತರಿರುವ ಎಲ್ಲಾ ಶ್ರೀಪಾದರ ಸಹಕಾರದ ಮಾತು ಹಾಗೂ ಭಕ್ತರ ಸಹಕಾರದಿಂದ ಪರ್ಯಾಯವನ್ನು ನಡೆಸುವ ಹುರುಪು ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ದೇವರಿಗೆ ಪ್ರೀತಿ ಆಗುವ ಯಾವುದೇ ಕಾರ್ಯಗಳನ್ನು ಹಿಂದಿನ ಪರ್ಯಾಯಗಳಲ್ಲಿ ನಡೆಸಿದ್ದರೆ, ಅದನ್ನು ತಾವೂ ಕೂಡಾ ಮುಂದುವರೆಸುವುದಾಗಿ ಹೇಳಿದರು.

ಮಠದ ವಿದ್ವಾಂಸ ಡಾ| ಗುರುರಾಜಾಚಾರ್ಯ ನಿಪ್ಪಾಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಕೃಷ್ಣಾಪುರ ಶ್ರೀಪಾದರು ಫಲ ಮಂತ್ರಾಕ್ಷತೆ ಕೊಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here