Thursday 2nd, May 2024
canara news

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಸಮಾರೋಪ ಸಮಾರಂಭ ಭಜನೆಯಿಂದ ವ್ಯಕ್ತಿತ್ವ ವಿಕಸನ, ದೇವರ ಸಾಕ್ಷಾತ್ಕಾರ

Published On : 18 Sep 2017   |  Reported By : Rons Bantwal


ಭಜನೆಯ ಮೂಲಕ ಭಕ್ತಿಯಿಂದ ದೇವರನ್ನು ಆರಾಧಿಸಿ ಅವರ ಅನುಗ್ರಹಕ್ಕೆ ಪಾತ್ರರಾಗುವ ಸಂಪ್ರದಾಯ ಭಾರತೀಯ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ ಎಂದು ಸಕ್ಕರೆ ಮತ್ತು ಸನ್ಣ ಕೈಗಾರಿಕಾ ಸಚಿವೆ ಡಾ. ಎಂ.ಸಿ. ಮೋಹನ ಕುಮಾರಿ ಹೇಳಿದರು.

ಅವರು ಭಾನುವಾರ ಧರ್ಮಸ್ಥಳದಲ್ಲಿ 19ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಭಜನಾ ತರಬೇತಿಯೊಂದಿಗೆ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾದ ಯೋಗಾಭ್ಯಾಸ, ಪ್ರಾರ್ಥನೆ, ಧ್ಯಾನದ ಬಗ್ಗೆಯೂ ಮಾಹಿತಿ, ಮಾರ್ಗದರ್ಶನ ನೀಡುವ ವಿಶಿಷ್ಟ ಪ್ರಯತ್ನವನ್ನು ಶ್ಲಾಘಿಸಿದರು. ವಿವಿಧ ಕ್ಷೇತ್ರಗಳಲ್ಲಿ ಹೆಗ್ಗಡೆಯವರು ಮಾಡುತ್ತಿರುವ ಸೇವಾ ಕಾರ್ಯಗಳ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಸರ್ಕಾರದಿಂದ ಅವರ ಸೇವಾಕಾರ್ಯಗಳಿಗೆ ಪೂರ್ಣ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿ ಆದಷ್ಟು ಹೆಚ್ಚು ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿ ಅವರು ಪ್ರಕಟಿಸಿದರು. ಜಿಲ್ಲೆಯಲ್ಲಿ ಪ್ರಸ್ತುತ 16 ಸಣ್ಣ ಕೈಗಾರಿಕೆಗಳು, 11 ಬೃಹತ್ ಕೈಗಾರಿಕೆಗಳು, 2 ಬಹು ತಾಂತ್ರಿಕ ಕೈಗಾರಿಕೆಗಳಿವೆ. ಜಿಲ್ಲೆಯ ಸಮಗ್ರ ಪ್ರಗತಿಗಾಗಿ ತನ್ನ ಇಲಾಖೆ ವತಿಯಿಂದ ಸಣ್ಣ ಕೈಗಾರಿಕೆಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರಿನ ಖ್ಯಾತ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಭಕ್ತಿಯ ಅಂತರಗಂಗೆ ಭಜನೆ ಮೂಲಕ ಜಲಪಾತವಾಗಿ ಧುಮುಕುತ್ತದೆ. ಭಜನಾ ಸಂಸ್ಕøತಿಯ ಮೂಲಕ ಪ್ರತಿ ಮನೆಯಲ್ಲಿ ಉತ್ತಮ ಸಂಸ್ಕಾರ ಮೂಡಿಸುತ್ತಿರುವ ಹೆಗ್ಗಡೆಯವರ ಸೇವೆಯನ್ನು ಅವರು ಶ್ಲಾಘಿಸಿದರು. ತನ್ಮೂಲಕ ಪ್ರೀತಿ-ವಿಶ್ವಾಸ ಪಸರಿಸುವ ಮೌನ ಕ್ರಾಂತಿ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಮಾಡದ ಕೆಲಸವನ್ನು ಹೆಗ್ಗಡೆಯವರು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಭಜನೆಯಿಂದ ಶಿಸ್ತು, ಕ್ರಿಯಾಶೀಲತೆ, ಕೌಶಲ, ಸಾಧನೆ ಹೆಚ್ಚಾಗುವುದರೊಂದಿಗೆ ಇಹ-ಪರದಲ್ಲಿ ಸುಖ-ಶಾಂತಿ ಸಿಗುತ್ತದೆ. ನಿಷ್ಕಾಮ ಪ್ರೀತಿಯಿಂದ, ಮುಗ್ದ ಭಕ್ತಿಯಿಂದ ಭಜನೆ ಹಾಡಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಭಜನಾಪಟುಗಳಿಗೆ ಸಮಾಜದಲ್ಲಿ ವಿಶೇಷ ಗೌರವ, ಮಾನ್ಯತೆ ಇದೆ. ಭಜನಾ ಸಂಸ್ಕøತಿಯ ಪುನರುತ್ಥಾನದೊಂದಿಗೆ ಭಜಕರು ನವಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು ಎಂದು ಅವರು ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನೆಯ ಸತ್ಸಂಗದ ಮೂಲಕ ಸಮಾಜದ ಸಂಘಟನೆಯಾಗಬೇಕು. ಸಾಮರಸ್ಯ ಮೂಡಿ ಬರಬೇಕು. ಪರಿಸರ ಮಾಲಿನ್ಯ ತಡೆಗಟ್ಟುವುದರೊಂದಿಗೆ ಭಜನೆಯಿಂದ ಮಾನಸಿಕ ಮಲಿನತೆಯನ್ನೂ ದೂರ ಮಾಡಬೇಕು. ಭಜನಾ ಮಂಡಳಿಗಳ ಮೂಲಕ ದುಶ್ಚಟ ಮುಕ್ತವಾದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಬೇಕು. ನಾವು ಸುಖ-ಭೋಗದ ದಾಸರಾಗದೆ ಇಂದ್ರಿಯಗಳ ಸಂಯಮ, ಹತೋಟಿಯೊಂದಿಗೆ ಭಗವಂತನ ದಾಸರಾಗಿ ಸುಖ-ಶಾಂತಿ, ನೆಮ್ಮದಿಯ ಸಾರ್ಥಕ ಜೀವನ ನಡೆಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಮಮತಾ ರಾವ್ ಕಮ್ಮಟದ ವರದಿ ಸಾದರಪಡಿಸಿ ತರಬೇತಿಯಲ್ಲಿ 119 ಭಜನಾ ಮಂಡಳಿಗಳಿಂದ 211 ಮಂದಿ ಸದಸ್ಯರು ಭಾಗವಹಿಸಿದ್ದಾರೆ ಎಂದರು. ಪುರುಷರು:148. ಮಹಿಳೆಯರು:63

ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಎ.ವಿ. ಶೆಟ್ಟಿ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಶಿಬಿರಾರ್ಥಿಗಳಿಂದ ನೃತ್ಯ ಭಜನೆ ನಡೆಯಿತು.

ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here