Wednesday 1st, May 2024
canara news

ಸುರತ್ಕಲ್‍ನಲ್ಲಿ ಅಡ್ಕ, ನೆಲ್ಯಾಡಿ ಅಭಿಮಾನಿಗಳ ಸಭೆ; ಕಲಾಸೇವೆ ಮುಂದುವರಿಸಲು ಒಕ್ಕೂರಲ ಆಗ್ರಹ

Published On : 01 Oct 2017   |  Reported By : Rons Bantwal


ಸುರತ್ಕಲ್: ಯಕ್ಷಗಾನ ಪ್ರದರ್ಶನದಲ್ಲಿ ಅಭಿನಯದ ದೃಶ್ಯವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಕಲಾವಿದರ ತೇಜೋವಧೆಗೆ ಮುಂದಾದ ವಿದ್ಯಮಾನದ ಹಿನ್ನೆಲೆಯಲ್ಲಿ ಕಲಾವಿದರಾದ ರಾಕೇಶ್ ರೈ ಅಡ್ಕ ಮತ್ತು ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅಭಿಮಾನಿ ಬಳಗವು ಸುರತ್ಕಲ್ ಬಂಟರಭವನದಲ್ಲಿ ಸಮಾಲೋಚನಾ ಸಭೆ ನಡೆಸಿ ಕಲಾವಿದರಿಬ್ಬರೂ ಮತ್ತೆ ಯಕ್ಷಗಾನದಲ್ಲಿ ಮುಂದುವರಿಯುವಂತೆ ನಿರ್ಣಯವನ್ನು ಕೈಗೊಂಡು ಅವರನ್ನು ಮತ್ತೆ ಯಕ್ಷಗಾನ ರಂಗದಲ್ಲಿ ಮುಂದುವರಿಸುವ ಜವಾಬ್ದಾರಿಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರಿಗೆ ನೀಡಲಾಯಿತು.

 

ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರ ಬಗ್ಗೆ ಕೀಳು ಮಟ್ಟದ ವಿಮರ್ಶೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಲಾವಿದರು ಯಕ್ಷಗಾನ ರಂಗದಿಂದ ನಿವೃತ್ತಿಗೆ ಮುಂದಾಗುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಇಂತಹ ಹೊತ್ತಿನಲ್ಲಿ ಕಲಾವಿದರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ನಾವು ಮಾಡಬೇಕಾಗಿದೆ. ಕಲಾವಿದರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಯಬಾರದು. ಅವರು ಯಕ್ಷಗಾನ ರಂಗದಲ್ಲೇ ಮುಂದುವರಿಯಬೇಕು. ವೃತ್ತಿ ವೈಷಮ್ಯದಿಂದ ಇಂತಹ ಘಟನೆಗಳು ನಡೆದಿರಬಹುದು. ಇಂದು 600ಕ್ಕೂ ಹೆಚ್ಚು ಶಿಷ್ಯವೃಂದದವರನ್ನು ಪಡೆದಿರುವ ರಾಕೇಶ್ ರೈ ಹಾಗೂ ಪ್ರಶಾಂತ್ ಶೆಟ್ಟಿಯವರ ಯಕ್ಷ ಬದುಕಿನಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ತಿಳಿಸಿದರು.

ವೃತ್ತಿಮಾತ್ಸರದಿಂದ ಕಲಾವಿದರಿಬ್ಬರನ್ನು ದಮಣಿಸಲು ಇಂತಹ ಷಡ್ಯಂತ್ರ ನಡೆದಿದೆ. ಕಲಾವಿದರ ಏಳಿಗೆಯನ್ನು ಸಹಿಸದೇ ಇಂತಹ ಕುತಂತ್ರ ನಡೆದಿದೆ. ಕಲಾವಿದರು ಇದಕ್ಕೆ ಎದೆಗುಂದದೆ ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕೆಂದು ಆರ್.ಕೆ. ಭಟ್ ತಿಳಿಸಿದರು. ಆರೋಪ- ಅಪವಾದ ಬರೋದು ಎಲ್ಲಾ ಕ್ಷೇತ್ರಗಳಲ್ಲಿ ಇದ್ದೇ ಇದೆ. ಅದನ್ನು ನಾವು ಮೆಟ್ಟಿನಿಂತು ಹೋರಾಟ ಮಾಡಬೇಕು. ಈ ವಿಚಾರದಲ್ಲಿ ಕಲಾವಿದರು ನೊಂದುಕೊಳ್ಳಬಾರದು. ಮತ್ತೆ ಯಕ್ಷರಂಗದಲ್ಲಿ ಮುಂದುವರಿಯಬೇಕೆಂದು ಹಿರಿಯ ಕಲಾವಿದ ಶೀನಪ್ಪ ರೈ ತಿಳಿಸಿದರು.

ಇಂದು ಯಕ್ಷಗಾನ ಬಹಳಷ್ಟು ಸುಧಾರಣೆಯಾಗಿದೆ. ಯಕ್ಷಗಾನಕ್ಕೆ ವಿದ್ಯಾವಂತರ ಪ್ರವೇಶವಾಗಿದೆ. ಅಂದಿನ ಯಕ್ಷಗಾನಕ್ಕೂ ಇಂದಿನ ಯಕ್ಷಗಾನಕ್ಕೂ ತುಂಬಾ ವ್ಯತ್ಯಾಸವಿದೆ. ಪ್ರಬುದ್ಧ ಕಲಾವಿದರಿಬ್ಬರ ಮೇಲೆ ಆರೋಪಗಳು ಬಂದಾಗ ಅದನ್ನು ಎದುರಿಸಬೇಕೇ ಹೊರತು ರಂಗದಿಂದ ನಿರ್ಗಮಿಸುತ್ತೇವೆ ಎಂದು ಪಲಾಯನ ಮಾಡೋದು ಸರಿಯಲ್ಲ ಎಂದು ಹಿರಿಯ ಕಲಾವಿದ ಶಿವರಾಮ ಪಣಂಬೂರು ತಿಳಿಸಿದರು.

ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಇಂದಿನ ಯುವ ಕಲಾವಿದರು ಮಾಡುತ್ತಿದ್ದಾರೆ. ಯಕ್ಷಗಾನದ ಮೂಲಕ ಶಾಂತಿಸಾಮರಸ್ಯವನ್ನು ಜನತೆಗೆ ತಲುಪಿಸುವ ಕೆಲಸಗಳು ನಡೆಯುತ್ತಿವೆ. ಯಕ್ಷಗಾನ ಮೌಲ್ಯಯುತವಾದ ಕಲೆ. ಅವಿವೇಕಿಯೊಬ್ಬನ ಕಿತಾಪತಿಯಿಂದ ಇಂತಹ ಅಪವಾದವನ್ನು ಕಲಾವಿದರು ಎದುರಿಸುವಂತಾಯಿತು. ಇದಕ್ಕೆ ಕಲಾವಿದರು ಕಿವಿಗೊಡದೆ ಮುಂದೆಯೂ ಯಕ್ಷಗಾನ ರಂಗದಲ್ಲಿ ಮುಂದುವರಿಯಬೇಕೆಂದು ಶಾಸಕ ಮೊೈದಿನ್ ಬಾವ ತಿಳಿಸಿದರು.

ಸಮಾರಂಭದಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜಾ, ಕಾರ್ಪೋರೇಟರ್ ಗುಣಶೇಖರ ಶೆಟ್ಟಿ, ಪದ್ಮನಾಭ ಎಲ್. ಶೆಟ್ಟಿ, ಶರತ್ ಶೆಟ್ಟಿ ಪಡು, ಮುಂಡೋಟ್ಟು ರಾಧಾಕೃಷ್ಣ ಭಟ್, ರವಿಶೆಟ್ಟಿ ಅಶೋಕನಗರ ಮೊದಲಾದವರು ಉಪಸ್ಥಿತರಿದ್ದರು.

ರವೀಂದ್ರನಾಥ ಶೆಟ್ಟಿ, ಅಶ್ವಿನ್ ತೇಜಸ್, ಬಿಂದಿಯಾ ಶೆಟ್ಟಿ, ವೃಂದಾ ಕೊನ್ನಾರ್ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಲಾವಿದರಿಬ್ಬರು ಮತ್ತೆ ಯಕ್ಷಗಾನರಂಗದಲ್ಲಿ ಮುಂದುವರಿಯುವಂತೆ ನಿರ್ಣಯ ಕೈಗೊಳ್ಳಲಾಯಿತು. ಅವರನ್ನು ಮತ್ತೆ ರಂಗಕ್ಕೆ ಕರೆ ತರಿಸುವ ಜವಾಬ್ದಾರಿಯನ್ನು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಗೆ ನಿರ್ಣಯದ ಪ್ರತಿಯನ್ನು ಕಳುಹಿಸಿಕೊಡಲಾಯಿತು. ಮಾಧವ ಶೆಟ್ಟಿ ಬಾಳ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಘಟಕ ಲೀಲಾಧರ ಶೆಟ್ಟಿ ಕಟ್ಲ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here