Thursday 2nd, May 2024
canara news

ಮನೆಯಂಗಳದ ಬದಲಿಗೆ ಗದ್ದೆಯಲ್ಲೇ `ಪಡಿ' ಇಟ್ಟು ಭತ್ತ ಬೇರ್ಪಡಿಸುವಿಕೆ

Published On : 14 Jan 2018


ಮನೆಯಂಗಳದ ಬದಲಿಗೆ ಗದ್ದೆಯಲ್ಲೇ `ಪಡಿ' ಇಟ್ಟು ಭತ್ತ ಬೇರ್ಪಡಿಸುವಿಕೆ
: ಧನಂಜಯ ಗುರುಪುರ


ಮುಂಬಯಿ (ಗುರುಪುರ), ಜ.14: ಸುಮಾರು 25 ವರ್ಷಗಳ ಹಿಂದೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಕಟಾವು ಮಾಡಿ ಹೊತ್ತೊಯ್ದು ಮನೆಯಂಗಳಕ್ಕೆ ತಂದು ರಾಶಿ ಹಾಕಿದ ಮೇಲೆಯೇ `ಪಡಿ'ಗೆ (ಭತ್ತ ಬೇರ್ಪಡಿಸಲು ಬಳಸುವ ಸಾಧನೆ) ಬಡಿದು ಭತ್ತ ಬೇರ್ಪಡಿಸುವ ಕ್ರಮವಿತ್ತು. ಆದರೆ ಈಗ ಈ ಕ್ರಮದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಗದ್ದೆಗಳು ಮೈಲುಗಟ್ಟಲೆ ದೂರದಲ್ಲಿದ್ದರೂ, ಬೆಳೆದ ಭತ್ತದ ತೆನೆಯನ್ನು ಮಾತ್ರ ಮನೆಯಂಗಳಕ್ಕೆಯೇ ತರಲಾಗುತ್ತಿತ್ತು. ಆದರೆ ಈಗ ಗದ್ದೆಯಲ್ಲೇ ಪಡಿ ಇಟ್ಟು ಭತ್ತ ಬೇರ್ಪಡಿಸುವ ಕಾಲ ಬಂದೊದಿಗಿದೆ. ಇದಕ್ಕೆ ಕಾರಣಗಳು ಹಲವಿವೆ. ಪ್ರಸಕ್ತ ಕಾಲಮಾನದಲ್ಲಿ, ಹಳ್ಳಿಗಳಲ್ಲಿ ಗದ್ದೆಯಲ್ಲಿ ಕೂಲಿ ಕೆಲಸ ಮಾಡುವ ಸ್ತ್ರೀ-ಪುರುಷರ ಸಂಖ್ಯೆ ಕಡಿಮೆಯಾಗಿದೆ. ಗುರುಪುರದ ಕೃಷಿಕರು ಗಂಜಿಮಠ, ಕೈಕಂಬದ ಗೌಡ ಮಹಿಳೆಯರನ್ನು ಗದ್ದೆ ಕೆಲಸಕ್ಕೆ ಕರೆ ತರುವಂತಾಗಿದೆ.

``ಭತ್ತ ಕೊಯ್ದು, ಬೇರ್ಪಡಿಸುವ ಗೌಡ ಮಹಿಳೆಯರಿಗೆ ದಿನಕ್ಕೆ 320 ರೂ ಕೂಲಿಯೊಂದಿಗೆ ಒಂದೊತ್ತು ಊಟ ಮತ್ತು ಎರಡೊತ್ತು ಚಾಹ-ತಿಂಡಿ ನೀಡುತ್ತೇವೆ. ಇವರು ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ಗದ್ದೆ ಕೆಲಸ ಮಾಡುತ್ತಾರೆ. ಬಳಿಕ ಬಸ್ಸಿಡಿದು ಮನೆಗೆ ಹೋಗುತ್ತಾರೆ. ಹಳ್ಳಿಗಳಲ್ಲಿ ಗದ್ದೆ ಕೆಲಸ ಮಾಡುವ ಯುವಕ-ಯುವತಿಯರಿಲ್ಲ. ಹಿಂದಿನವರೆಲ್ಲ ವಯೋವೃದ್ಧರಾಗಿದ್ದಾರೆ. ಹಾಗಾಗಿ, ಸಾಗುವಳಿ ಸಮಯದಲ್ಲಿ ಉಪಾಯವಿಲ್ಲದೆ ದೂರದ ಊರಿನವರಿಗೆ ಮಣೆ ಹಾಕಬೇಕಾಗುತ್ತದೆ'' ಎಂದು ಗುರುಪುರದ ಕೃಷಿಕ ಸತೀಶ್ ಕಾವ ಹೇಳುತ್ತಾರೆ.

ಏನೇ ಇದ್ದರೂ ಹಿಂದೆ ಹಳ್ಳಿ ಮಂದಿಗೆ ದಿನಕ್ಕೆ ನಾಲ್ಕು ಸೇರು(ಆಗ ಸೇರಿಗೆ ಹೆಚ್ಚೆಂದರೆ 10 ರೂ ಇತ್ತು) ಅಕ್ಕಿ, ಒಂದೊತ್ತು ಊಟ, ಒಂದೊತ್ತು ಚಾಹ-ತಿಂಡಿ ಹಾಗೂ ಸಂಜೆ ಬರೇ ಚಾಹ ಕೊಡಲಾಗುತ್ತಿತ್ತು. ಅದೇ ಹೊತ್ತಿಗೆ ಕೆಲವು ಕಡೆಗಳಲ್ಲಿ ನಾಲ್ಕೈದು ಮಹಿಳೆಯರು ಸೇರಿ ಭತ್ತ ಕಟಾವಿನ ಗುತ್ತಿಗೆ ತೆಗೆದುಕೊಳ್ಳುತ್ತಿದ್ದರು. `ಹಿತ್ತಲ ಗಿಡ ಮದ್ದಲ್ಲ' ಎಂದು ತಿಳಿದುಕೊಂಡ ಸ್ಥಳೀಯ ಕೆಲವು ಕೃಷಿಕರು ದೂರದವರ ಕೆಲಸವೇ ಉತ್ತಮವೆಂದು ಹೇಳಲಾರಂಭಿಸಿದ ಬಳಿಕ, ಸ್ಥಳೀಯ ಕೂಲಿ ಮಹಿಳೆಯರು ಒಬ್ಬೊಬ್ಬರಾಗಿಯೇ ಗದ್ದೆ ಕೆಲಸದಿಂದ ದೂರ ಸರಿದಿದ್ದಾರೆಂಬುದು ನಗ್ನ ಸತ್ಯ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಎಕ್ರೆ ಜಾಗದಲ್ಲಿ ಭತ್ತದ ಕೃಷಿ ಮಾಡುವ ರೈತರು ದೂರದ ಊರುಗಳ ಗೌಡ ಮಹಿಳೆಯರನ್ನು ಕರೆತರುವಲ್ಲೂ ಸಮಸ್ಯೆ ಎದುರಿಸುವಂ ತಾಗಿದೆ. ಅವರು ತಮ್ಮ ದಿನಗೂಲಿ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ. ಆದ್ದರಿಂದ ಕೆಲವರು ಯಂತ್ರದ ಮೂಲಕ ಭತ್ತದ ಕಟಾವು ಮಾಡಿದ್ದುಂಟು. ಮಾನವಶಕ್ತಿಗಿಂತ ಯಂತ್ರದಿಂದ ಕೃಷಿ ಮಾಡುವುದು ಸುಲಭ ಮತ್ತು ಅಗ್ಗದ್ದಾಗಿದೆ ಎಂದು ಹೇಳುತ್ತಿದ್ದ ಕೃಷಿಕರು, ಯಂತ್ರದಿಂದ ಕಟಾವು ಮಾಡಿದ ಗದ್ದೆಯಲ್ಲಿ ಕಳಚಿಕೊಂಡಿರುವ ಭತ್ತದ ಪ್ರಮಾಣ, ಬೈಹುಲ್ಲಿನ ನಷ್ಟವನ್ನೊಮ್ಮೆ ಪ್ರಮಾಣೀಕರಿಸಿದರೆ, ಯಾವುದು ಉತ್ತಮ ಮತ್ತು ಅಗ್ಗ ಎಂಬುದು ತಿಳಿದು ಬರುವುದು.

ರಿಯಲ್ ಎಸ್ಟೇಟ್ ಹಾವಳಿ

ಆಧುನಿಕ ಯುಗದಲ್ಲಿ ಎಲ್ಲೆಡೆ ರಿಯಲ್ ಎಸ್ಟೇಟ್ ದಂಧೆ ವ್ಯಾಪಕವಾಗಿರುವುದರಿಂದ ಬಹುತೇಕ ಕಡೆಗಳಲ್ಲಿ ಕೃಷಿ ಭೂಮಿಯೂ ಈ ದಂಧೆಯವರ ಪಾಲಾಗಿದೆ. ನಮ್ಮೂರಿನಲ್ಲಿ ಈಗ ವರ್ಷಗಳಿಂದ ಹಸಿರು ಕಾಣದ ಎಕ್ರೆಗಟ್ಟಲೆ ಗದ್ದೆಗಳು ಪಾಳು ಬಿದ್ದಿದ್ದು, ಎಲ್ಲಿ ನೋಡಿದರೂ ಗದ್ದೆಗಳಲ್ಲಿ ಕಾಡಿನಂತಹ ದಟ್ಟ ಪೊದೆಗಳು ಕಾಣುಸುತ್ತಿವೆ. ನವಿಲು, ನರಿ, ಸರ್ಪಗಳ ಸಂತತಿ ಜಾಸ್ತಿಯಾಗಿದೆ. ಇನ್ನು ಕೆಲವು ಗದ್ದೆಗಳು ರಸ್ತೆಯಾಗಿ ಮಾರ್ಪಟ್ಟು, ಹತ್ತಿರದಲ್ಲಿ ಬಡಾವಣೆಗಳು ನಿರ್ಮಾಣ ಹಂತದಲ್ಲಿವೆ. ಹಿಂದೆ ಗುರುಪುರ ಫಲ್ಗುಣಿ ನದಿ ತಟದಲ್ಲಿಯೂ ಭತ್ತದ ಕೃಷಿ ಹೇರಳವಾಗಿತ್ತು. ಆದರೆ ಈಗ ಕೂಲಿಯಾಳುಗಳ ಕೊರತೆಯಿಂದ ಕೃಷಿಕರು ಕಂಗು-ತೆಂಗಿನ ತೋಟಕ್ಕೆ ಆದ್ಯತೆ ನೀಡುವಂತಾಗಿದೆ. ಏನೇ ಇದ್ದಾಗಲೂ ಆಧುನಿಕತೆಯ ಭರಾಟೆಯಲ್ಲಿ ನಮ್ಮೂರ ಭತ್ತದ ಗದ್ದೆಗಳು ಬಂಜರಾಗಿರುವುದೇ ಹೆಚ್ಚು. ಭವಿಷ್ಯದಲ್ಲಿ ಇಲ್ಲಿ ಬೃಹತ್ ಕೈಗಾರಿಕೋದ್ಯಮಗಳು ಬಂದರೆ ಅಚ್ಚರಿಪಡಬೇಕಾಗಿಲ್ಲ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here