Friday 3rd, May 2024
canara news

ಮುಂಬಯಿ ಸಿನಿಜಗತ್ತಿನ ಕನ್ನಡದ ಪ್ರತಿಭೆ ಅಶ್ಮಿತ್ ಕುಂದರ್

Published On : 30 Jan 2018   |  Reported By : Rons Bantwal


ಮುಂಬಯಿ, ಜ.29: ಮುಂಬಯಿ ಸಿನೆಮಾ ಜಗತ್ತಿನ ವಿವಿಧ ರಂಗಗಳಲ್ಲಿ ಮಿಂಚಿರುವ ಕರುನಾಡ ಹುಡುಗ ಅಶ್ಮಿತ್ ಕುಂದರ್, ಇದೀಗ ನಟನಾಗಿ ಹೊಮ್ಮಿರುವ ಬಹುಮುಖಿ ಪ್ರತಿಭೆ. ಈ ವರೆಗೆ ಹಲವಾರು ಪ್ರಮುಖ ಚಲಚ್ಚಿತ್ರಗಳಲ್ಲಿ ಫಿಲ್ಮ್ ಎಡಿಟರ್ ಆಗಿ ಯಶಸ್ವಿಯಾದ ಅಶ್ಮಿತ್ ಸಂಕಲನಗೈದ ಚಿತ್ರಗಳಲ್ಲಿ ಕಮಲ ಹಾಸನ್‍ನ `ದಶಾವತಾರಮ್' ಮತ್ತು `ಮುಂಬೈ ಎಕ್ಸ್‍ಪ್ರೆಸ್', ಏಕತಾ ಕಪೂರ್ ಅವರ `ಶೋರ್ ಇನ್ ದ ಸಿ' ಮತ್ತು ಸಂಜಯ್ ದತ್ ನಟನೆಯ `ಲಮ್‍ಹಾ' ಹಾಗೂ ಫ್ರೆಂಚ್ ನಿರ್ಮಾಪಕತ್ವದ `ಮಾತೃಭೂಮಿ ನೇಶನ್ ವಿದೌಟ್ ವಿಮೆನ್' ಪ್ರಮುಖವಾದವು. ಕ್ರಮೇಣ ಜಾಹೀರಾತು ಕ್ಷೇತ್ರದತ್ತಲೂ ತಿರುಗಿದ ಅಶ್ಮಿತ್ ಕುಂದರ್, ಡೋವ್, ಪಿರಮಲ್, ಮ್ಯಾಟ್‍ಲ್ ಆಟಿಕೆಗಳು ಮತ್ತು ನೆಸ್ಲೆ ಮುಂತಾದ ಪ್ರಮುಖ ಉತ್ಪಾದನೆಗಳ ಪ್ರಚಾರಕ್ಕಾಗಿ ಆಡ್ ಫಿಲ್ಮ್‍ಗಳನ್ನೂ ನಿರ್ದೇಶಿಸಿದರು.

ಇತ್ತೀಚೆಗೆ ನಟ ನವಾಜುದ್ದೀನ್ ಸಿದ್ದಿಖಿ ನಟಿಸಿರುವ `ಬಾಬುಮೋಶಾಯ್ ಬಂದೂಕ್‍ಬಾಜ್' ಎಂಬ ಜನಪ್ರಿಯ ಹಿಂದೀ ಚಿತ್ರದ ನಿರ್ಮಾಪಕನಾಗಿಯೂ ಅವರು ಹೆಸರಾದರು. ಈ ಬಹುಮುಖ ಪ್ರತಿಭೆಯ ಕನ್ನಡಿಗ ಅಶ್ಮಿತ್ ಕುಂದರ್ ಈಗ ಹೊಸದಾಗಿ ನಟನಾಗಿಯೂ ತನ್ನ ಪ್ರತಿಭೆಯನ್ನು ಮೆರೆದಿದ್ದಾರೆ. ಅವರ ಪ್ರಪ್ರಥಮ ನಟನೆಯ ಚಲನಚಿತ್ರ `ಅಗಾಮ್' ಪ್ರತಿಷ್ಠಿತ ಕೈರೋ ಇಂಟರ್‍ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಬನಾರಸ್ ನಗರದಲ್ಲಿ ತೆರೆದುಕೊಳ್ಳುವ ಚಿತ್ರಕಥೆಯಿರುವ ಚಿತ್ರ, `ಅಗಾಮ್'. ಪರಶಿವನ, ಮೋಕ್ಷಕ್ಕಾಗಿ ಕಾದ ಹೆಣಗಳ ಮತ್ತು ತಾಂತ್ರಿಕರ ನಾಡು ಬನಾರಸ್! ಈ ನಗರಿಯಲ್ಲಿ ಮೂರು ವಿಭಿನ್ನ ಜೀವಗಳು ಅದೆಂತು ಪರಸ್ಪರ ತಳಕು ಹಾಕಿಕೊಳ್ಳುತ್ತವೆ, ಎಂಬುದನ್ನು ಬಿಡಿಸಿಡುವ ಚಿತ್ರ `ಅಗಾಮ್'. ಸತ್ಯಾನ್ವೇಷಣೆಯಲ್ಲಿ ಹಿಂದೂ ಮಠಗಳ ಶೃಂಖಲೆಯನ್ನು ಕಳಚಿ ಹೊರಬಂದ ಮನುಷ್ಯನೊಬ್ಬ; ಗಂಗಾ ತೀರದಲ್ಲಿ ಸದಾ ಉರಿಯುತ್ತಿರುವ ಅಸಂಖ್ಯ ಚಿತೆಗಳಿಗೆದುರಾಗಿ ಆ ದುಸ್ಸಹ ನೋಟ ಹಾಗೂ ಅಸಹನೀಯ ದುರ್ಗಂಧದ ನಿತ್ಯ ಅನುಭವವನ್ನೇ ನೀಡುವ ಮನೆಗೆ ವಿವಾಹವಾಗಿ ಬಂದ ನವವಿವಾಹಿತೆಯೊಬ್ಬಳು; ಮತ್ತು ತಾಂತ್ರಿಕ ವಿದ್ಯಾಪಾರಂಗತನಾಗಿ ಸಿಧ್ಧಿಯ ಪರಾಕಾಷ್ಠೆ ತಲುಪಿಯೂ, ದೈಹಿಕ ಆಕರ್ಷಣೆ ಹಾಗೂ ಪ್ರೇಮದ ಹೊಸ್ತಿಲಲ್ಲಿ ತನ್ನ ಸಿಧ್ಧಿಯೆಲ್ಲವನ್ನೂ ಬಲಿಕೊಡುವ ಸಾಧಕನೊಬ್ಬ! ಈ ಮೂವರ ಸುತ್ತ ಸುತ್ತುವ ಕಥೆಯಲ್ಲಿ ತಾಂತ್ರಿಕನಾಗಿ ಅಶ್ಮಿತ್ ನಟಿಸಿದ್ದಾರೆ.

ಹಲವು ಚಿತ್ರಗಳಲ್ಲಿ ಆರ್ಟ್ ಡೈರೆಕ್ಟರ್ ಆಗಿ ಹೆಸರು ಮಾಡಿದ ಸುಮಿತ್ ಮಿಶ್ರಾ ಈ ಚಿತ್ರದ ನಿರ್ದೇಶಕರು. ಕೈರೋ ಇಂಟರ್ನಾಶನಲ್ ಫಿಲ್ಮ್ ಫೆಸ್ಟಿವಲ್‍ನ ಸಮಾರೋಪ ಸಮಾರಂಭದ ರೆಡ್ ಕಾರ್ಪೆಟ್ ನಡೆಯಲ್ಲಿ ಅತ್ಯುತ್ತಮ ಉಡುಪಿನಿಂದಲಂಕೃತನೆಂಬ ಶ್ರೇಯವನ್ನು ಹಾಲಿವುಡ್ ತಾರೆಗಳಾದ ಆಡ್ರಿಯನ್ ಬಾರ್ಡಿ ಮತ್ತು ಹಿಲರಿ ಸ್ವಾಂಕ್ ಅವರೊಂದಿಗೆ ಹಂಚಿಕೊಂಡವರು, ಅಶ್ಮಿತ್ ಕುಂದರ್. ಶ್ರೇಯಸ್ಸಿನ ಪಥದಲ್ಲಿ ಸಾಗಿರುಚ ಅಶ್ಮಿತ್ ಕುಂದರ್, ಕನ್ನಡ ಚಿತ್ರರಂಗಕ್ಕೂ ಕಾಲಿರಿಸುವ ಆಶಯ ಹೊಂದಿದ್ದಾರೆ. ಅಲ್ಲೂ ಈ ಕರುನಾಡ ಪ್ರತಿಭೆ ತೆರೆಯನ್ನು ಬೆಳಗಲೆಂದೇ ನಮ್ಮ ಆಶಯ.

ಬಹುಮುಖ ಪ್ರತಿಭೆಯ ಕನ್ನಡಿಗ ಅಶ್ಮಿತ್ ಕುಂದರ್, ಮಂಗಳೂರಿನ ಭೋಜ ಕುಂದರ್-ಗೀತಾಂಜಲಿ ದಂಪತಿಯ ಸುಪುತ್ರ. ಅಶ್ಮಿತ್ ಸೋದರ ಶಿರೀಷ್ ಕುಂದರ್, ಪತ್ನಿ ಫರಾ ಖಾನ್‍ರೊಡನೆ ಸಿನಿ ಜಗತ್ತಿನಲ್ಲಿ ಚಿತ್ರ ಸಂಕಲನ, ನಿರ್ದೇಶನ ಕ್ಷೇತ್ರದಲ್ಲಿ ಈಗಾಗಲೇ ಹೆಸರಾದವರು. ಕಲಾರಂಗದಲ್ಲಿ ನಮ್ಮ ಕರುನಾಡ ಪ್ರತಿಭೆಗಳು ಹೀಗೇ ವಿಕಸಿಸುತ್ತಿರಲಿ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here