Monday 29th, April 2024
canara news

ಧರ್ಮಸ್ಥಳದಲ್ಲಿ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ಆರ್‍ಸೆಟಿ) ರಾಜ್ಯ ನಿರ್ದೇಶಕರುಗಳ ಪರಿಶೀಲನಾ ಸಭೆ

Published On : 31 May 2018   |  Reported By : Rons Bantwal


ಹೊಸ ಅವಕಾಶಗಳಿಂದ ಆರ್ಥಿಕ ಸ್ವಾವಲಂಬನೆ ಹಾಗೂ ಪ್ರಗತಿ ಸಾಧ್ಯ.


ಉಜಿರೆ: ಹಿಂದಿನ ವರ್ಷಗಳ ಸಾಧನೆ ಹಾಗೂ ಅನುಭವದ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ನಿರುದ್ಯೋಗಿ ಯುವ ಜನತೆಗೆ ಹೊಸ ಉದ್ಯೋಗಾವಕಾಶ ಕಲ್ಪಿಸುವುದರಿಂದ ಆರ್ಥಿಕ ಸ್ವಾವಲಂಬನೆ ಹಾಗೂ ಉತ್ತಮ ಪ್ರಗತಿ ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಎರಡು ದಿನ ನಡೆಯುವ ಆರ್‍ಸೆಟಿಗಳ ರಾಜ್ಯ ನಿರ್ದೇಶಕರುಗಳ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರತಿ ರಾಜ್ಯದಲ್ಲಿ ಸಮಸ್ಯೆಗಳು, ಸವಾಲುಗಳು ವಿಭಿನ್ನವಾಗಿರುತ್ತವೆ. ಆಯಾ ರಾಜ್ಯದ ಹವಾಮಾನ, ಪ್ರಾಕೃತಿಕ ಸಂಪನ್ಮೂಲ, ಪರಿಸರ, ಲಭ್ಯವಿರುವ ಕಚ್ಛಾ ಪರಿಕರಗಳನ್ನು ಹೊಂದಿಕೊಂಡು ಯೋಜನೆ ರೂಪಿಸಬೇಕು.

ಯುವಜನತೆಗಲ್ಲದೆ 25 ರಿಂದ 50 ವರ್ಷ ಪ್ರಾಯದ ಮಧ್ಯವಯಸ್ಕರಿಗೆ ಹಾಗೂ ಗೃಹಿಣಿಯರಿಗೂ ಸ್ವ-ಉದ್ಯೋಗದ ಬಗ್ಗೆ ಮಾಹಿತಿ, ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಕೃಷಿಯಲ್ಲಿ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿದಾಗ ಕೃಷಿ ಲಾಭದಾಯಕವಾಗುತ್ತದೆ. ಕೃಷಿಯೊಂದಿಗೆ ಹೈನುಗಾರಿಕೆ, ತೋಟಗಾರಿಕೆ, ಕೋಳಿ ಸಾಕಣೆ, ಜೇನು ಕೃಷಿ ಇತ್ಯಾದಿ ಉಪ ಕಸುಬುಗಳನ್ನು ಮಾಡಿದಾಗ ಹೆಚ್ಚು ಪ್ರಯೋಜನವಾಗುತ್ತದೆ. ಎಂಜಿನಿಯರ್ ಪದವೀಧರರು ಕೂಡಾ ಇಂದು ನೌಕರಿಗಿಂತ ಕೃಷಿ ಬಗ್ಗೆ ಒಲವು ತೋರುತ್ತಿರುವುದು ಆಶಾದಾಯಕವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಎಂ. ಮೋಹನ ರೆಡ್ಡಿ ಮಾತನಾಡಿ, ಆರ್‍ಸೆಟಿಗಳು ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಸಾಧಿಸಬೇಕು. ಪ್ರತಿ ವರ್ಷ ಒಂದು ಹೊಸ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು. ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಿತ ಪ್ರಾಯೋಜಿತ ಬ್ಯಾಂಕುಗಳ ಹಿರಿಯ ಅಧಿಕಾರಿಗಳನ್ನು ನಿರ್ದೇಶಕರುಗಳು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು. ಎಲ್ಲಾ ನಿರ್ದೇಶಕರುಗಳು ಬದ್ಧತೆ ಮತ್ತು ಪ್ರಾಮಾಣಿಕತೆಯೊಂದಿಗೆ ಸೇವಾ ಮನೋಭಾವದಿಂದ ತಮ್ಮ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕ ಕೆ.ಎನ್. ಜನಾರ್ದನ್, ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ, ಕೌಶಲಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಆರ್‍ಸೆಟಿಗಳು ಮಾಡಿದ ಸೇವೆ-ಸಾಧನೆಯ ವಿವರ ನೀಡಿದರು. ಆರ್‍ಸೆಟಿಗಳು ನೀಡುವ ತರಬೇತಿ ದೇಶದಲ್ಲೆ ಉತ್ಕøಷ್ಟ ಮಟ್ಟದ್ದಾಗಿದೆ ಎಂಬ ಮಾನ್ಯತೆ ಪಡೆದಿದೆ ಎಂದರು.

ಆರ್‍ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಸಂತೋಷ್ ಪಿ. ಸ್ವಾಗತಿಸಿದರು.

ವಾಸುದೇವ ಕೆ. ಕಲ್ಕುಂದ್ರಿ ಧನ್ಯವಾದವಿತ್ತರು. ಎಂ. ವಾಸುದೇವ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.

ಎರಡು ದಿನ ನಡೆಯುವ ಸಭೆಯಲ್ಲಿ ದೇಶದ 24 ರಾಜ್ಯಗಳ ಆರ್‍ಸೆಟಿ ನಿರ್ದೇಶಕರುಗಳು ಭಾಗವಹಿಸುತ್ತಿದ್ದಾರೆ.

ಎ.ಜಿ.ಎಂ. ಗೆ ಸನ್ಮಾನ
ಸನ್ಮಾನ: ಆರ್‍ಸೆಟಿಗಳ ರಾಷ್ಟ್ರೀಯ ನಿದೇಶಕ ಕೆ.ನ್. ಜನಾರ್ದನ್ ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕರಾಗಿ ವರ್ಗಾವಣೆಗೊಂಡಿದ್ದು ಅವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.

ರುಡ್‍ಸೆಟಿ ಮತ್ತು ಆರ್‍ಸೆಟಿಗಳ ಪ್ರಗತಿಯಲ್ಲಿ ಜನಾರ್ದನ್‍ರ ಸೇವೆಯನ್ನು ಶ್ಲಾಘಿಸಿ ಅವರು ಅಭಿನಂದಿಸಿದರು.

ಸುದ್ದಿಗೋಷ್ಠಿ

ಉಜಿರೆ: ಪ್ರಸ್ತುತ ದೇಶದಲ್ಲಿ 586 ಆರ್‍ಸೆಟಿಗಳು ಕಾರ್ಯನಿರ್ವಹಿಸುತ್ತಿದ್ದು ಕೇಂದ್ರ ಸರ್ಕಾರದ ಗ್ರಾಮಾಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಕಳೆದ ಆರು ವರ್ಷಗಳಲ್ಲಿ ಇಪ್ಪತೇಳು ಲಕ್ಷ ಮಂದಿ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ. ಇವರಲ್ಲಿ ಹದಿನೆಂಟು ಲಕ್ಷ ಮಂದಿ ಯಶಸ್ವಿಯಾಗಿ ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರ್‍ಸೆಟಿಗಳಲ್ಲಿ 61 ಬಗೆಯ ವಿವಿಧ ತರಬೇತಿಗಳನ್ನು ನೀಡುತ್ತಿದ್ದು ಇವು ಸರ್ಕಾರದಿಂದ ಮಾನ್ಯತೆ ಹೊಂದಿವೆ. ಆರ್‍ಸೆಟಿಗಳ ಸಾಧನೆಯನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಮೂರು ಪ್ರತಿಷ್ಠಿತ ಪ್ರಶಸಿಗಳನ್ನು ನೀಡಿ ಗೌರವಿಸಲಾಗಿದೆ ಎಂದು ಅವರು ತೀಲಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here