Friday 26th, April 2024
canara news

ರಾಸಾಯನಿಕ ಸಿಂಪಡಿಸಿದ ವಿಷಯುಕ್ತ ಆಹಾರ ತಿನ್ನುತ್ತಿದ್ದೇವೆ.

Published On : 25 Apr 2016   |  Reported By : Rayee Rajkumar


ಪಂಚಭೂತಗಳ ಈ ಜಗತ್ತಿನ ವಸ್ತುಗಳನ್ನು ಉಪಯೋಗಿಸುತ್ತಿರುವ ಮನುಷ್ಯ / ಗ್ರಾಹಕ ತನ್ನ ಬದುಕಿಗಾಗಿ ಆ ಪಂಚಭೂತಗಳಲ್ಲಿ ಉತ್ಪತ್ತಿಯಾಗುವ ವಸ್ತುಗಳನ್ನು ಆಹಾರವಾಗಿ ಉಪಯೋಗಿಸುತ್ತಿದ್ದಾನೆ. ಆದರೆ ಮನುಷ್ಯ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಪಂಚಭೂತಗಳನ್ನೇ ಹಿಂಡಿ ಹಿಪ್ಪೆ ಮಾಡಿ ಮುಂದಿನ ಜನಾಂಗಕ್ಕೆ ಉಪಯೋಗರಹಿತ ಭೂಮಿಯನ್ನುಂಟು ಮಾಡುವ ಕಾಯಕಕ್ಕೆ ಇಳಿದಿರುವುದು ನಾಗರಿಕ, ಸುಸಂಸ್ಕøತ ಎಂದು ಕರೆಸಿಕೊಳ್ಳುವ ಮನುಷ್ಯ ಪುನರಪಿ ಯೋಚಿಸಬೇಕಾದ ಸಂಗತಿಯಾಗಿದೆ.

ಭೂಮಿ ತಾಯಿಯು ಭೂಮಿಯಲ್ಲಿರುವ ಪ್ರತಿಯೊಂದು ಜೀವಿಗೂ ಆಹಾರ ನೀಡುತ್ತಾಳೆ. ಆದ್ದರಿಂದಲೇ ದಾಸವರೇಣ್ಯರು ಕೇಳಿದ್ದು-ಹುಳು, ಹುಪ್ಪಟೆ, ಕಪ್ಪೆ ಇತ್ಯಾದಿಗಳಿಗೆ ಅಲ್ಲಲ್ಲೆ ಆಹಾರವನ್ನು ತಂದಿತ್ತವರು ಯಾರು? ಎಂದು. ಆದರೆ ಆ ಹುಳು ಹುಪ್ಪಟೆ, ಕ್ರಿಮಿ ಕೀಟಗಳು ತನಗೆ ಬೇಕÁದಷ್ಟೇ ಆಹಾರವನ್ನು ಉಪಯೋಗಿಸಿಕೊಂಡು , ತಿಂದುಕೊಂಡು ಉಳಿದುದನ್ನು ಇತರವುಗಳಿಗಾಗಿ ಬಿಟ್ಟು ಹೋಗುತ್ತವೆ. ಆದರೆ ಮನುಷ್ಯ ತನಗಷ್ಟೇ ಸಾಲದೆಂಬಂತೆ ಇತರರ ಅನ್ನಕ್ಕೂ ಕೈಯೊಡ್ಡಿ ಇತರರು ಪರಿತಪಿಸುವಂತೆ ಮಡುತ್ತಿದ್ದಾನೆ. ಹೀಗೆ ಮಾಡುತ್ತಿರುವುದು ಸರಿಯೇ? ಒಮ್ಮೆ ಯೋಚಿಸಿ. ಹುಚ್ಚನೊಂದಿಗೆ, ಹುಚ್ಚನಂತೆ ವರ್ತಿಸಲು ನಾವೇಕೆ ಹುಚ್ಚುತನದ ಪಟ್ಟವನ್ನು ಪಡೆಯಬೇಕು ಹೇಳಿ?

ಹಲವಾರು ರೈತರು ಇತರರ ಗದ್ದೆಗಳನ್ನು ವಹಿಸಿಕೊಂಡು ವಿವಿಧ ಗಿಡಗಳನ್ನು ನೆಡುತ್ತಾರೆ. ನೆಡುವಾಗಲೇ ಕ್ರಿಮಿನಾಶಕ ಇತ್ಯಾದಿಗಳಲ್ಲಿ ಮುಳುಗಿಸಿಟ್ಟು ಪ್ರಾರಂಭದಲ್ಲೇ ಗಿಡಕ್ಕೆ ರಾಸಾಯನಿಕವನ್ನು ತುಂಬಿಸಿರುತ್ತಾರೆ. ಇದರಿಂದಾಗಿ ಸಾವಯವದ ಲವಲೇಶ ರಾಹಿತ್ಯ ಗಿಡ ತರುವಾಯ ನೀಡಲಾಗುವ ಎಲ್ಲಾ ರಾಸಾಯನಿಕ ಗೊಬ್ಬರಗಳಿಂದ ಮೈದುಂಬಿಸಿಕೊಂಡು ಸುಪುಷ್ಟವಾಗಿ ಬೆಳೆದು ಬಹಳ ಸುಂದರವಾಗಿ ಹೊರಹೊಮ್ಮುತ್ತದೆ. ಇತರರ ಭೂಮಿಯನ್ನು ಪಡೆದ ರೈತ, ಪಡೆದ ಭೂಮಿಗೆ ಸಾವಯವ ಗೊಬ್ಬರ ಹಾಕಿ ಭೂಮಿಯ ಸಾರ ಸದಾಕಾಲ ಉಳಿಯುವಂತೆ ನೋಡಿಕೊಳ್ಳುವ ಬದಲು ತಾನು ಪಡೆದ 2-3 ವರ್ಷದ ಅವಧಿಯಲ್ಲಿ ಸಾಧ್ಯವಿದ್ದಷ್ಟು ರಾಸಾಯನಿಕ ಗೊಬ್ಬರ ತುಂಬಿ ದುಪ್ಪಟ್ಟು ಬೆಳೆ ತೆಗೆದು ತನ್ನ ಕಾಲಾನಂತರ ಉಪಯೋಗ ರಾಹಿತ್ಯ ಭೂಮಿಯನ್ನಾಗಿ ವಾರೀಸುದಾರರಿಗೆ ಹಿಂತಿರುಗಿಸುತ್ತಾನೆ.

ಈ ರೀತಿ ಹಿಂಪಡೆದ ತರುವಾಯದಲ್ಲಿ ಆ ಭೂಮಿಯಲ್ಲಿ ನಂತರ ಸ್ವಲ್ಪವೂ ಬೆಳೆ ಬಾರದೇ ಕೈ ಸುಟ್ಟು ಕೊಂಡ ಹಲವಾರು ಉದಾಹರಣೆಗಳಿವೆ. ಇದರಿಂದಾಗಿ ಕೆಲವಾರು ಸ್ವ ಕೃಷಿಕರು ಆ ರೀತಿ ಬೇರೆಯವರಿಗೆ ಕೊಡುವುದನ್ನೇ ಬಿಟ್ಟು ಬಿಟ್ಟು ತಾವೇ ಮಾಡುವದಿದ್ದಲ್ಲಿ ಮಾತ್ರ ಮಾಡುತ್ತಿದ್ದಾರೆ ಅಥವಾ ಹಡೀಲು/ ಸುಮ್ಮಗೆ ಬಿಡುತ್ತಿದ್ದಾರೆ. ಆದ್ದರಿಂದ ಭೂಮಾಲಕರು ತಮ್ಮ ಬೂಮಿಯನ್ನು ಪರಭಾರೆಗೆ ನೀಡುವ ಮೊದಲು ರಾಸಾಯನಿಕ ಗೊಬ್ಬರ, ಕೀಟನಾಶಕ ಗಳನ್ನು ಉಪಯೋಗಿಸದಿರುವಂತೆ ಕಡ್ಡಾಯ ಗೊಳಿಸಿದಲ್ಲಿ ಮಾತ್ರ ಮಾಲಕರು ತಮ್ಮ ಭೂಮಿಯ ಫಲವತ್ತತೆಯನ್ನು ಸ್ವಲ್ಪವಾದರೂ ಉಳಿಸಿಕೊಂಡಾರು.

ಇಂದಿನ ರೈತ ಇಷ್ಟೆಲ್ಲಾ ವೈರುಧ್ಯಗಳ ನಡುವೆಯೂ ತನ್ನ ಬೆಳೆ ಬೆಳೆಯುವ ಕಾಯಕವನ್ನು ನಡೆಸುತ್ತಿದ್ದಾನೆ. ಆದರೆ ಎಷ್ಟು ಸಾಧ್ಯವೋ ಅಷ್ಟು ರಾಸಾಯನಿಕಗಳನ್ನು ದೂರವಿಟ್ಟು ಬೆಳೆ ಬೆಳೆದರೆ, ಅದು ಎಲ್ಲರಿಗೂ ಶ್ರೇಯಸ್ಕರ. ಏಕೆಂದರೆ ಈ ಮೇಲೆ ತಿಳಿಸಿದಂತೆ ನೆಡುವಿಕೆಯ ಮೊದಲೇ ಪ್ರಾರಂಭಗೊಳ್ಳುವ ರಾಸಾಯನಿಕ ಉಪಯೋಗ ತರುವಾಯವಂತೂ ಪ್ರತಿಯೊಂದೂ ಹಂತದಲ್ಲಿ ಉಪಯೋಗಿಸಲ್ಪಡುತ್ತದೆ. ಎಂದರೆ ಚಿಗುರು ಬಿಟ್ಟ ತಕ್ಷಣ, ಯಾವದೇ ಕೀಟಾಣು ಬಾರದಿರಲೆಂದು ರಾಸಾಯನಿಕ ಔಷಧಿ ಸಿಂಪಡಣೆ, ಬೆಳವಣಿಗೆಯ ಹಂತಕ್ಕೆ ಬರುತ್ತಲೇ ರಾಸಾಯನಿಕ ಗೊಬ್ಬರದ ಒದಗಣೆ, ಕಾಯಿ ಬಲಿಸುವುದಕ್ಕೆ, ಕಾಯಿ ಬಲಿತಂತೆ ಅವುಗಳನ್ನು ಕೀಟಗಳು ಧಾಳಿ ಮಾಡದಂತೆ ರಾಸಾಯನಿಕ ಸಿಂಪಡಣೆ, ಫಲ ಬರುವ ಹಂತದಲ್ಲಿ ಇನ್ನೊಮ್ಮೆ, ಫಲ ಮಾಗುವ ಮೊದಲೇ ಗಿಡದಿಂದ ಕಿತ್ತು ಬೇರ್ಪಡಿಸಿ ಬಹಳ ಬೇಗ ಹಣ್ಣು ಮಾಡಲು ಮತ್ತೆ ರಾಸಾಯನಿಕ, ಬಣ್ಣಕ್ಕಾಗಿ ಇನ್ನೊಂದು, ಹಣ್ಣು ಹೆಚ್ಚು ದಿನ ಉಳಿಯುವಂತೆ ಮಾಡಲು ಇನ್ನೊಂದು ಹೀಗೇ ರಂಗಿನ ಬಣ್ಣದ ರಾಸಾಯನಿಕ ಎಂದು ಹತ್ತಾರು ಬಾರಿ ರಾಸಾಯನಿಕದಲ್ಲಿ ಅದ್ದಿದ ಫಲ ಎಷ್ಟು ಆರೋಗ್ಯಕರ ಅಂಶವನ್ನು ಹೊಂದಿರುತ್ತದೆ ಹೇಳಿ?

ಈ ಎಲ್ಲಾ ಹಂತಗಳಲ್ಲಿ ರಾಸಾಯನಿಕದಿಂದ ಆಚ್ಛಾದಿಸಲ್ಪಟ್ಟ ಆ ವಸ್ತುವಿನ ಅಥವಾ ಫಲದ ಒಳ ತಿರುಳಲ್ಲಿ ಎಷ್ಟು ರಾಸಾಯನಿಕ ಅಂಶ/ ಔಷಧಿ ಸೇರಿಕೊಂಡಿರಲಾರದು? ಅಷ್ಟೂ ರಾಸಾಯನಿಕ ಅಂಶಗಳನ್ನು ದೇಹದೊಳಗೆ ಪ್ರತಿದಿನವೂ ಸೇರಿಸಿಕೊಳ್ಳುವ ನಾವು ಎಷ್ಟು ಸಮಯ ತಾನೇ ಬದುಕಿಯೇವು? ಇಷ್ಟೊಂದು ರಾಸಾಯನಿಕಗಳನ್ನು ಒಳಗೊಳಿಸಿಕೊಂಡ ನಮ್ಮ ಜೀವ ಎಷ್ಟರಮಟ್ಟಿಗೆ ಸಾಮಾನ್ಯ ಖಾಯಿಲೆಗಳನ್ನು ತಡೆದುಕೊಂಡೀತು? ಇಂದಿನ ನಮ್ಮ ಹಲವಾರು ಖಾಯಿಲೆಗಳು ನಮ್ಮ ಕೈಮೀರಿಹೋಗುತ್ತಿರುವುದಕ್ಕೆ ಮುಖ್ಯ ಕಾರಣ ನಾವು ಸೇವಿಸುವ ರಾಸಾಯನಿಕಯುಕ್ತ ವಸ್ತು, ಫಲಗಳÀು,. ಒಂದು ವೇಳೆ ಸಾವಯವ ಉಪಯೋಗಿಸಿಯೇ ಬೆಳೆದ ವಸ್ತು, ಫಲಗಳಾಗಿರುತ್ತಿದ್ದಲ್ಲಿ ಹಿಂದಿನವರಂತೆ ನಾವೂ ಗಟ್ಟಿ-ಮುಟ್ಟಾಗಿ ನೂರಾರು ವರ್ಷ ಬದುಕುತ್ತಿದ್ದೆವೇನೊ. ಆದರೆ ಈ ರಾಸಾಯನಿಕ ಭರಿತ ವಸ್ತು, ಫಲಗಳಿಂದಾಗಿ ಅತಿಚಿಕ್ಕ ಪ್ರಾಯದಲ್ಲಿಯೇ ಕನ್ನಡಕವನ್ನು ಕಣ್ಣಿಗೇರಿಸಿಕೊಂಡ, ಅಂಗಗಳು ಊನಗೊಂಡ, ನಡೆಯಲು ಆಗದೇ ಒದ್ದಾಡುವ ಮಕ್ಕಳನ್ನು, ಕೇವಲ 20-25-30 ವರ್ಷಕ್ಕೇ ಮಧುಮೇಹ, ಬಿ.ಪಿ., ಕ್ಯಾನ್ಸರ್ ನಂತಹ ಭಯಂಕರ ಖಾಯಿಲೆಯಿಂದ ತುತ್ತಾಗಿ ಜೀವಮಾನ ಇಡೀ ನರಳಬೇಕಾದ ಮಧ್ಯ ವಯಸ್ಕರನ್ನು ಕಾಣುತ್ತಿದ್ದೇವೆ. ಇವರೆಲ್ಲರ ಎದುರು ದುವ್ರ್ಯಸನ ರಹಿತ, ಮಾರುಕಟ್ಟೆ, ಹೊಟೇಲಿನ ವಸ್ತು ಮುಟ್ಟದ 80-90 ರ ದೃಧಕಾಯ ಮುದುಕರು ನಡೆದಾಡುತ್ತಿರುವುದು ಏನನ್ನು ಸೂಚಿಸುತ್ತದೆ? ಎಲ್ಲರೂ ಯೋಚಿಸಬೇಕಾದ ಸಂಗತಿಯೇ ಅಲ್ಲವೇ? ಹಾಗಾದರೆ ರಾಸಾಯನಿಕ ಸಿಂಪಡಿಸಿದ ವಿಷಯುಕ್ತ ಆಹಾರವನ್ನು ಆದಷ್ಟೂ ತ್ಯಜಿಸಿ ಸ್ವತ: ಸಾವಯವದಲ್ಲೇ ಬೆಳೆದ ಆಹಾರ ಪದಾರ್ಥವನ್ನು ಸೇವಿಸಿ ಗ್ರಾಹಕರಾದ ನಾವು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳೋಣವೇ? ಏನಂತೀರಿ??
ಲೇಖನ : ರಾಯೀ ರಾಜ ಕುಮಾರ, ಮೂಡುಬಿದಿರೆ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here