Friday 26th, April 2024
canara news

ಶ್ರೀ ಚೌಡೇಶ್ವರಿ ದೇವಿಯ ದೇವಾಲಯದ ಲೋಕಾರ್ಪಣೆ

Published On : 17 May 2016   |  Reported By : Rons Bantwal


ಕೃಷ್ಣರಾಜಪೇಟೆ. ಜನರ ಮಾನ ಮುಚ್ಚಲು ತಮ್ಮ ವೃತ್ತಿ ಕೌಶಲ್ಯದ ಮೂಲಕ ಬಟ್ಟೆಯನ್ನು ನೇಯ್ದುಕೊಡುತ್ತಿರುವ ನೇಕಾರರ ಬದುಕು ಇಂದು ಸಂಕಷ್ಠದಲ್ಲಿದೆ. ನೇಕಾರರ ಕಲ್ಯಾಣಕ್ಕಾಗಿ ಸರ್ಕಾರವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಜೊತೆಗೆ ಜಿಲ್ಲೆಗೊಂದರಂತೆ ನೇಕಾರ ಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಬಿಸುವ ಮೂಲಕ ನೇಪಥ್ಯಕ್ಕೆ ಸರಿಯುತ್ತಿರುವ ನೇಯ್ಗ ವೃತ್ತಿಯನ್ನು ಕಾಪಾಡಲು ಮುಂದಾಗಬೇಕು ಎಂದು ನೇಕಾರ ಸಮೂದಾಯದ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯರಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ.ಸಿ.ಕೊಂಡಯ್ಯ ಸರ್ಕಾರವನ್ನು ಆಗ್ರಹಿಸಿದರು.

ಅವರು ಇಂದು ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿ ನೇಕಾರ ತೊಗಟವೀರ ಸಮಾಜದ ಕುಲಭಾಂಧವರು ನೂತವನಾಗಿ ನಿರ್ಮಿಸಿರುವ ತಾಯಿ ಶ್ರೀ ಚೌಡೇಶ್ವರಿ ದೇವಿಯ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನೇಕಾರ ಎಂಬುದು ಒಂದು ಜಾತಿಯಲ್ಲ, ಸಮಾಜದಲ್ಲಿ ಇಂದು ನೇಕಾರಿಕೆ ಜೀವನ ಧರ್ಮದ ಒಂದು ಭಾಗವಾಗಿದೆ. ಮಾನವನ ಮೈಮುಚ್ಚಿ ಮಾನವನ್ನು ಕಾಪಾಡಲು ತಮ್ಮ ವೃತ್ತಿಕೌಶಲ್ಯದ ಮೂಲಕ ಮಗ್ಗಗಳಲ್ಲಿ ಬಟ್ಟೆಯನ್ನು ನೇಯುವುದನ್ನು ಸಮಾಜಕ್ಕೆ ತೋರಿಸಿಕೊಟ್ಟ ನೇಕಾರರ ಬದುಕು ಇಂದು ತೀವ್ರವಾದ ಸಂಕಷ್ಠದಲ್ಲಿದೆ. ಅತ್ಯಾಧುನಿಕ ಉಂತ್ರೋಪಕರಣಗಳ ಮೂಲಕ ವಿದ್ಯುತ್ ಮಗ್ಗಗಳು ಅಡಿಯಿಟ್ಟ ನಂತರ ಕೈಮಗ್ಗಗಳು ನೇಪಥ್ಯಕ್ಕೆ ಸರಿದು ಕಣ್ಮರೆಯಾಗುತ್ತಿವೆ. ಅದೇ ಅಲ್ಲದೇ ನೇಯ್ಗೆಯಲ್ಲಿಯೇ ಬದುಕನ್ನು ಕಂಡುಕೊಂಡಿದ್ದ ನೇಕಾರರ ಬದುಕು ಅತಂತ್ರವಾಗಿದ್ದು ತ್ರಿಶಂಕು ಸ್ಥಿತಿಯಲ್ಲಿದೆ. ನೇಕಾರರು ನೆಮ್ಮದಿಯ ಬದುಕು ನಡೆಸಲು ಅನುಕೂಲವಾಗುವಂತೆ ಸರ್ಕಾರವು ರೈತರ ಕಲ್ಯಾಣಕ್ಕೆ ರೂಪಿಸಿರುವಂತೆ ವಿಶೇಷ ಕಾರ್ಯಕ್ರಮಗಳನ್ನು ನೇಕಾರ ಬಂಧುಗಳಿಗೂ ರೂಪಿಸುವ ಮೂಲಕ ನೇಕಾರರ ಬದುಕಿಗೆ ಆಸರೆಯಾಗಬೇಕು ಎಂದು ಕೈಮುಗಿದು ಮನವಿ ಮಾಡಿದ ಕೆ.ಸಿ.ಕೊಂಡಯ್ಯ ಸಮಾಜದಲ್ಲಿ ನೇಯ್ಗೆ ಕಸುಬನ್ನು ನಡೆಸುತ್ತಿರುವ ಜನಾಂಗದ ಬಂಧುಗಳು ಒಗ್ಗೂಡಿ ಒಂದಾಗಿ ಪ್ರೀತಿ ವಿಶ್ವಾಸದಿಂದ ಬದುಕು ನಡೆಸುವುದನ್ನು ಕಲಿಯಬೇಕು. ನೇಕಾರರು ಸಂಘಟಿತರಾಗಿ ತಮಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯಬೇಕು. ನೇಯ್ಗೆ ವೃತ್ತಿಯನ್ನು ಕುಲ ಕಸುಬನ್ನಾಗಿಸಿಕೊಂಡಿದ್ದ ಪದ್ಮಶಾಲಿ, ಕುರುಹಿನಶೆಟ್ಟಿ, ದೇವಾಂಗ, ಪಟ್ಟಸಾಲಿ, ಕುಸುಳಸಾಲಿ, ತೊಗಟವೀರ ಜನಾಂಗಗಳು ಸೇರಿದಂತೆ ರಾಜ್ಯಾಧಾಧ್ಯಂತ 50ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಎಲ್ಲಾ ನೇಕಾರ ಉಪ ಪಂಗಡಗಳು ಒಂದಾಗಿ ಶಿಕ್ಷಣದ ಜ್ಞಾನವನ್ನು ಪಡೆದುಕೊಂಡು ಸಂಘಟಿತ ಹೋರಾಟದ ಮೂಲಕ ರಾಜಕೀಯ ಸ್ಥಾನಮಾನಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕೇಳಿ ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಬೇಕು ಎಂದು ವಿಧಾನಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ ಕರೆ ನೀಡಿದರು.

ಶ್ರೀ ಚೌಡೇಶ್ವರಿ ತಾಯಿಯ ನೂತನ ದೇವಾಲಯವನ್ನು ಲೋಕಾರ್ಪಣೆ ಮಾಡಿದ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ ನೇಕಾರರ ಕಲ್ಯಾಣಕ್ಕೆ ಬದ್ಧವಾಗಿರುವ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮವು ನೇಕಾರರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ನೇಕಾರ ಬಂಧುಗಳ ವೃತ್ತಿ ಕೌಶಲ್ಯದ ಜ್ಞಾನವು ಅಪಾರವಾಗಿದೆ. ಆದರೆ ಕಾಲಕ್ಕೆ ತಕ್ಕಂತೆ ಯಾಂತ್ರಿಕತೆಯ ಕಡೆಗೆ ಅನಿವಾರ್ಯವಾಗಿ ಬದಲಾಗಬೇಕಾಗಿರುವುದರಿಂದ ಕೈಮಗ್ಗ ಉತ್ಪನ್ನಗಳಿಗೆ ಬೇಡಿಕೆಯು ಕಡಿಮೆಯಾಗುತ್ತಿದ್ದು ಬೃಹತ್ ಯಂತ್ರೋಪಕರಣಗಳ ಮೂಲಕ ತಯಾರಿಸಿದ ಬಟ್ಟೆಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡು ಮಾರಾಟವಾಗುತ್ತಿರುವುದರಿಂದ ಕೈಮಗ್ಗಗಳು ನೇಪಥ್ಯಕ್ಕೆ ಸರಿದು ಮರೆಯಾಗುತ್ತಿವೆ. ನೇಕಾರ ಬಂಧುಗಳು ಕಾಲಕ್ಕೆ ತಕ್ಕಂತೆ ಬದಲಾಗುವ ಮೂಲಕ ಯಾಂತ್ರೀಕರಣ ಜಗತ್ತಿನಲ್ಲಿ ಹೆಜ್ಜೆ ಹಾಕಿ ವೃತ್ತಿಯನ್ನು ಮಾಡುವ ಮೂಲಕ ನೂರಾರತು ಜನರಿಗೆ ಜೀವನದ ಮಾರ್ಗಕ್ಕೆ ಆಸರೆಯಾಗಬೇಕು ಎಂದು ಮನವಿ ಮಾಡಿದರು.

ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿಅಧ್ಯಕ್ಷರು ಹಾಗೂ ಅಖಿಲಭಾರತ ತೊಗಟವೀರ ಕ್ಷತ್ರಿಯ ಮಹಾಮಂಡಳಿಯ ಅಧ್ಯಕ್ಷರಾದ ಸಿ.ಅಶ್ವತ್ಥನಾರಾಯಣ ಮಾತನಾಡಿ ರಾಜ್ಯದಾದ್ಯಂತ ಜಾತಿ, ಪಂಗಡಗಳು ಹಾಗೂ ಉಪಪಂಗಡಗಳಾಗಿ ಹರಿದು ಹಂಚಿಹೋಗಿರುವ ನೇಕಾರ ಜನಾಂಗದ ಬಂಧುಗಳು ಒಂದಾಗಿ ಸಂಘಟಿತರಾಗುವ ಮೂಲಕ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಸಂವಿಧಾನಬದ್ಧವಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು. ಶಿಕ್ಷಣದ ಜ್ಞಾನವನ್ನು ಶ್ರದ್ಧಾ ಭಕ್ತಿಯಿಂದ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಅಭಿವೃದ್ಧಿಯ ಪಥದತ್ತ ಸಾಗಬೇಕು. ನೇಕಾರ ಬಂಧುಗಳು ಒಂದಾದರೆ ತಮ್ಮ ಶಕ್ತಿಯ ಅನಾವರಣವಾಗುವುದರಿಂದ ಎಲ್ಲಾ ರಾಜಕೀಯ ಪಕ್ಷಗಳಿಗೂ ನಮ್ಮ ಶಕ್ತಿಯ ಪರಿಚಯವಾಗುವ ಜೊತೆಗೆ ನಮ್ಮ ಸಮಸ್ಯೆಗಳೂ ದೂರಾಗುತ್ತವೆ. ಆದ್ದರಿಂದ ನೇಜಾರ ಬಂದುಗಳು ಸ್ವಾಭಿಮಾನಿಗಳಾಗಿ, ಆತ್ಮವಿಶ್ವಾಸದಿಂದ ಇತರರಿಗೆ ಮಾದರಿಯಾದ ಬದುಕು ನಡೆಸಬೇಕು ಎಂದು ಕರೆ ನೀಡಿದರು.

ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪಟ್ಟಣದಲ್ಲಿ ವ್ಯಾಪಾರ, ವ್ಯವಹಾರ ಮಾಡಿಕೊಂಡು ತಮ್ಮ ಶ್ರಮದ ದುಡಿಮೆಯ ಮೂಲಕ ಉತ್ತಮವಾದ ಬದುಕು ನಡೆಸುತ್ತಿರುವ ನೇಕಾರ ಬಂಧುಗಳ 30 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಕುಲದೇವತೆ ತಾಯಿ ಚೌಡೇಶ್ವರಿಯ ದೇವಾಲಯವನ್ನು ನಿರ್ಮಿಸಬೇಕೆಂಬ ಸಂಕಲ್ಪಕ್ಕೆ ಫಲ ಸಿಕ್ಕಿದೆ. ಅತ್ಯಂತ ಸುಂದರವಾದ ಭವ್ಯ ದೇವಾಲಯ ನಿರ್ಮಾಣವಾಗಿದ್ದು ನೇಕಾರ ತೊಗಟವೀರ ಜನಾಂಗದ ಬಂಧುಗಳ ಆತ್ಮಾಭಿಮಾನವನ್ನು ಹೆಚ್ಚಿಸಿದೆ. ಇಲ್ಲಿನ ವಿಶಾಲವಾದ ಜಾಗದಲ್ಲಿ ಸಮೂದಾಯ ಭವನವನ್ನು ನಿರ್ಮಿಸುವ ಮೂಲಕ ಬಡಜನರು ಮದುವೆ ಮುಂತಾದ ಶುಭ ಸಮಾರಂಭಗಳನ್ನು ಮಾಡಿಕೊಳ್ಳಲು ನೆರವಾಗಲಿ ಈ ದಿಕ್ಕಿನಲ್ಲಿ ಭವನದ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ದೊರಕಿಸಿಕೊಡುವುದಾಗಿ ಚಂದ್ರಶೇಖರ್ ಭರವಸೆ ನೀಡಿದರು.

ಚಿಕ್ಕಬಳ್ಳಾಪುರದ ತಪಸೀಹಳ್ಳಿಯ ಶ್ರೀ ಪುಷ್ಪಾಂಡಜಮುನಿ ಆಶ್ರಮದ ಪೀಠಾಧಿಪತಿ ಶ್ರೀ ದಿವ್ಯಜ್ಞಾನಾನಂಧಗಿರಿ ಸ್ವಾಮೀಜಿಗಳು ಮತ್ತು ಬಳ್ಳಾರಿಯ ಮೈಲಾರ ಕ್ಷೇತ್ರದ ಪೀಠಾಧಿಪತಿ ಶ್ರೀ ವೆಂಕಪ್ಪಯ್ಯ ಒಡೆಯರ್ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ತಾಯಿ ಶ್ರೀ ಚೌಡೇಶ್ವರಿ ದೇವಿಯ ವಿಗ್ರಹವನ್ನು ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ಮೈಸೂರು ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿಅಧ್ಯಕ್ಷ ಆರ್.ಮೂರ್ತಿ, ತೊಗಟವೀರ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ್, ತೊಗಟವೀರ ಯುವವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಸ್ವಾಮಿ, ವಾಸ್ತು ತಜ್ಞರಾದ ನಾರಾಯಣಶೆಟ್ಟಿ, ತೊಗಟವೀರ ಕ್ಷತ್ರಿಯ ಸಂಘದ ಉಪಾದ್ಯಕ್ಷ ಅಚ್ಚಪ್ಪ ನಾಗರಾಜು, ಉಧ್ಯಮಿ ಜಿ.ಸೋಮಶೇಖರ್, ಜಿಲ್ಲಾ ಪಡೆಇತರ ವಿತರಕರ ಸಂಘದ ಅಧ್ಯಕ್ಷ ಅಂಚನಹಳ್ಳಿ ಸುಬ್ಬಣ್ಣ, ಮುಖ್ಯಮಂತ್ರಿಗಳ ಈ ಹಿಂದಿನ ವಿಶೇಷಾಧಿಕಾರಿ ಷಣ್ಮುಖಪ್ಪ, ತೊಗಟವೀರ ದಿವ್ಯವಾಠಣಿ ಪತ್ರಿಕೆಯ ಸಂಪಾದಕ ರಾಮಚಂದ್ರ, ನೇಯ್ಗೆನುಡಿ ಪತ್ರಿಕೆಯ ಸಂಪಾದಕ ವೀರೇಂದ್ರ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಲೋಕೇಶ್, ಸಮಾಜದ ಮುಖಂಡರಾದ ಚಿತ್ರದುರ್ಗದ ಗೋವಿಂದಪ್ಪ, ತಿಪ್ಪೇಸ್ವಾಮಿ, ಕುಣಿಗಳ್ ನಾಗರಾಜಪ್ಪ, ಕಾಮಾಕ್ಷಿಪಾಳ್ಯದ ಶಿವಪ್ಪ, ಯಲಹಂಕದ ರಾಜಣ್ಣ, ಬೂದಿಗೆರೆ ಲಕ್ಷ್ಮೀನಾರಾಯಣಪ್ಪ, ಯಲಹಂಕ ರಾಜಣ್ಣ, ಕೆ.ಆರ್.ಪುರಂ ಪರಂಧಾಮಯ್ಯ, ತುಮಕೂರು ಗಂಗಪ್ಪ, ಹೂಡಿ ಪಿಳ್ಳಪ್ಪ, ಬಳ:ಳಾರಿಯ ದೇವಾನಂದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಲವಕುಮಾರ್, ಸರಗೂರಿನ ಚ.ಬಾಲಸುಬ್ರಹ್ಮಣ್ಯ, ಡಾ.ಶ್ರೀನಿವಾಸಶೆಟ್ಟಿ, ದಾವಣಗೆರೆಯ ಬಸವರಾಜಪ್ಪ, ಹೊನ್ನಾವಾರದ ಸುರೇಶ್, ಅರಳಕುಪ್ಪೆಯ ಗವಿಯಣ್ಣ, ತಗಡೂರಿನ ರವೀಂದ್ರ, ದುಂಡದ ಗಂಗಾಧರ್, ಕೈಗೋನಹಳ್ಳಿಯ ಈರಪ್ಪ, ನಿವೃತ್ತ ವಿಜ್ಞಾನಿ ರಾಜಣ್ಣ, ರಾಯಚೂರಿನ ಡಿಡಿಪಿಐ ರಾಮಾಂಜನೇಯ, ಪಟ್ಟದಕಲ್ಲಿನ ಶಂಕಭಂಢಾರಿ, ಉಧ್ಯಮಿ ಬಿ.ರಾಜಶೇಖರ್, ಮನ್‍ಮುಲ್ ನಿರ್ದೇಶಕ ಎಸ್.ಅಂಬರೀಶ್, ಪುರಸಭೆಯ ಮಾಜಿಅಧ್ಯಕ್ಷರಾದ ಕೆ.ಸಿ.ವಾಸು, ಕೆ.ಹೆಚ್.ರಾಮಕೃಷ್ಣ, ಮುಖಂಡರಾದ ಹಂಸರಮೇಶ್, ಹೆಚ್.ಎಂ.ಚಂದ್ರಶೇಖರ್, ಶ್ರೀರಂಗಪಟ್ಟಣದ ಮಲ್ಲಿಕಾರ್ಜುನ ಮತ್ತಿತರರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ದೇವಾಲಯ ನಿರ್ಮಾಣಕ್ಕಾಗಿ 1ಕೋಟಿ ರೂ ಬೆಲೆ ಬಾಳುವ 10ಗುಂಟೆ ಭೂಮಿಯನ್ನು ದಾನವಾಗಿ ನೀಡಿದ ದಾನಿ ಕೆ.ಆರ್.ನಾಗರಾಜಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಚೌಡೇಶ್ವರಿ ದೇವಾಲಯ ನಿರ್ಮಾಣ ಟ್ರಸ್ಟಿನ ಅಧ್ಯಕ್ಷ ಕೆ.ಜೆ.ರಾಜಶೇಖರ್ ಸ್ವಾಗತಿಸಿದರು, ಖಜಾಂಚಿ ಕೆ.ಆರ್.ಮಹೇಶ್ ವಂದಿಸಿದರು, ಶ್ರೀರಂಗಪಟ್ಟಣದ ಶಿಕ್ಷಕ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಮೋಹನಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here