Friday 26th, April 2024
canara news

ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಹೀಗಿದ್ದರೆ ಚೆನ್ನ

Published On : 23 Jun 2016   |  Reported By : Rayee Rajkumar


ಮಂಗಳೂರು-ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 13 ಇದೀಗ 66 ಆಗಿ ಪರಿವರ್ತನೆ ಆಗುತ್ತಿರುವದರೊಂದಿಗೆ ಚತುಷ್ಪಥದ ಮಾರ್ಗವಾಗಿ ಮಾಡಲು ಎಲ್ಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಮಾಹಿತಿಯ ಆಧಾರದಲ್ಲಿ ಮಾರ್ಗ ರಚನೆಗಾಗಿ ಸ್ಥಳ ವಶೀಲಿ ಕಾರ್ಯಕ್ಕೂ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದೂ ತಿಳಿದುಬಂದಿದೆ.

ಚತುಷ್ಪಥ ನಿರ್ಮಾಣ ಬಳಕೆದಾರನ ಪಾಲಿಗೆ ಬಹಳ ಸಂತೋಷಕರ ಸಂಗತಿ. ಆದರೆ ಯಾವುದೇ ರಸ್ತೆಯ ಅಗಲೀಕರಣದ ಸಂದರ್ಭದಲ್ಲಿ ಒಂದು ಕಿಲೋ ಮೀಟರ್ ಅಂತರದಲ್ಲಿ ನೂರಾರು ಮರ ಗಿಡಗಳು ನಾಶವಾಗುವದು ಸಂತಸಕರ ವಿಚಾರವೇ? ಯೋಚಿಸಿರಿ. ಈ ಪ್ರಕಾರ ಮಂಗಳೂರಿನಿಂದ ಸುಮಾರು 400-800 ಕಿ.ಮೀ. ದೂರದ ವ್ಯಾಪ್ತಿಯಲ್ಲಿ ನಾಶವಾಗುವ ಮರ-ಗಿಡ-ಕಾಡಿನ ನಾಶದ ವ್ಯಾಪ್ತಿಯನ್ನು ಯೋಚಿಸಿ. ಈ ರೀತಿ ಸಾವಿರಾರು ಮರ-ಗಿಡ-ಕಾಡು ನಾಶವಾಗುವದನ್ನು ನಾವು ಹೇಗೆ ಸಹಿಸಿಕೊಳ್ಳಬಹುದು??

ಪ್ರಕೃತಿಯ ಗಿಡ-ಮರಗಳ ನಾಶ ಸ್ವತ: ನಮ್ಮ ನಾಶವೆಂದರೂ ತಪ್ಪಾಗಲಾರದು. ಹಿಂದಿನ ಕಾಲದ ಮಂದಿ ರಸ್ತೆಯ ಎರಡೂ ಮಗ್ಗುಲುಗಳಲ್ಲಿ ಸಾಲು ಮರಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದರಿಂದ ಅಥವಾ ಕಡಿದು ಐಷಾರಾಮಿಯಾಗಿ ಬದುಕು ನಡೆಸದೇ ಇದ್ದುದರಿಂದ ಈ ಮೇಲಿನ ರಸ್ತೆಗುಂಟ ಸುಂದರವಾಗಿ, ಸುಪೋಷಿತವಾಗಿ, ಸುಪುಷ್ಟವಾಗಿ ಮರಗಳು ಬೆಳೆದು ಇಡೀ ಪರಿಸರಕ್ಕೆ ತಂಪಾದ ವಾತಾವರಣ ನೀಡುತ್ತಿವೆ. ಇಂತಹ ಸುಂದರವಾದ ಗಿಡ-ಮರಗಳಿಗೆ ಕೊಡಲಿ ಈಯುವ ಮನಸ್ಸು ಖಂಡಿತಕ್ಕೂ ಪರಿಸರವನ್ನು ಮೆಚ್ಚಿಕೊಳ್ಳುವ ಒಬ್ಬನಿಗೂ ಕೂಡಾ ಬರಲಾರದು.

ಇಷ್ಟಿದ್ದೂ ಸರಕಾರ ಅಭಿವೃದ್ಧಿಯ ಹೆಸರಲ್ಲಿ ಈ ರೀತಿಯಲ್ಲಿ ಮರ-ಗಿಡಗಳ ಹನನಕ್ಕೆ ಮುಂದಾದುದು ಯುಕ್ತವಲ್ಲವೆಂದೇ ಪರಿಸರ ಪ್ರಿಯರ ಅಭಿಪ್ರಾಯ. ನಾವಾರೂ ಅಭಿವೃದ್ಧಿಯನ್ನು ಬೇಡವೆಂದು ದೂರ ವಿಡುತ್ತಿಲ್ಲ. ಬದಲಿಗೆ ಇರುವ ರಸ್ತೆಯನ್ನು ಅಗಲಗೊಳಿಸಲಿ. ಒಂದು ವೇಳೆ ಸಾಧ್ಯವೇ ಇಲ್ಲವೆಂದಾದಲ್ಲಿ ಅಲ್ಲೆಲ್ಲಾ ಆ ಮಾರ್ಗವನ್ನೇ ಬಿಟ್ಟು ಪರ್ಯಾಯ ಮಾರ್ಗವನ್ನು ಮಾಡಿಕೊಂಡು ಮುಂದುವರೆಯಲಿ. ಆದರೆ ಇಂತಹ ಸಂದರ್ಭದಲ್ಲಿ ರಸ್ತೆ ಇರುವಲ್ಲೆಲ್ಲಾ ಬೇಕೆಂದೇ ರಸ್ತೆಯ ತನಕ ತಮ್ಮ ಮನೆ, ಮುಂಗಟ್ಟುಗಳನ್ನು ಬೆಳೆಸಿ ಕೊಂಡ ಅತಿಕ್ರಮಿಗಳನ್ನು ಮೊತ್ತಮೊದಲು ನಿರ್ದಾಕ್ಷಿಣ್ಯವಾಗಿ ಮಹಜರುಗೊಳಿಸಿ ಒಕ್ಕಲೆಬ್ಬಿಸಲಿ. ಆಗ ತನ್ನಿಂದ ತಾನಾಗಿ ಇರುವ ರಸ್ತೆಗಳು ಸಾಕಷ್ಟು ಅಗಲಗೊಳ್ಳುತ್ತವೆ. ಸುಗಮ ಸಂಚಾರವೂ ಸಾಧ್ಯವಾಗುತ್ತದೆ. ಎಲ್ಲ ಕಡೆ ಈಗ ಏನಾಗಿದೆ ಎಂದರೆ ಹಿಂದೆ ಎಷ್ಟೇ ಸ್ಥಳವಿದ್ದರೂ, ರಸ್ತೆಯ ಅತಿಕ್ರಮಣ ಮಾಡುವಾಗ ಅಧಿಕಾರಿಗಳು ಸುಮ್ಮಗಿರುವುದರಿಂದ ತರುವಾಯ ವಿನಾಕಾರಣ ತಡೆ ಒಡ್ಡುವುದು ಮಾಮೂಲಾಗಿ ಬಿಟ್ಟಿದೆ. ಅಂತಹ ಎಲ್ಲಾ ಅತಿಕ್ರಮಣಗಳನ್ನೂ ತಿಳಿದಾಕ್ಷಣ ನಿವಾರಿಸುವ ಕ್ರಮ ಅಧಿಕಾರಿಗಳಿಂದ ಪ್ರಾರಂಭವಾಗಬೇಕು.

ಎಲ್ಲೇ ಆಗಲಿ ಮಾರ್ಗವನ್ನು ನಿರ್ಮಿಸುವಾಗ ಸಾಧ್ಯವಾದಷ್ಟೂ ಉತ್ತಮವಾಗಿ ಬೆಳೆದ ಮರ-ಗಿಡ-ಕಾಡನ್ನು ಉಳಿಸಿ ಬರಡು-ಬಂಜರು ಭೂಮಿಯ ಮೂಲಕ ರಸ್ತೆ ಮುಂದುವರೆಯುವಂತೆ ಮಾಡಲಿ ಇದರಿಂದಾಗಿ ಸುಂದರ ಪರಿಸರವೂ ಉಳಿದಂತಾಗುತ್ತದೆ. ಅಲ್ಲದೆ ಬರಡು-ಬಂಜರು ಭೂಮಿಯೂ ರಸ್ತೆಗಾಗಿ ಬಳಕೆ ಆದಂತಾಗುತ್ತದೆ. ಆದರೆ ಇಂತಹ ಉಪಕ್ರಮ ಪ್ರಾರಂಭಿಸುವ ಮೊದಲು ಆಯಾ ಪ್ರದೇಶದ ಜನರಿಗೆ ಸಾಕಷ್ಟು ಮುಂಚಿತವಾಗಿ ಪ್ರಚಾರ-ಪ್ರಸಾರ ಮಾಧ್ಯಮಗಳ ಮೂಲಕ ಎಲಾ ಮಾಹಿತಿಗಳನ್ನೂ ತಿಳಿಯಪಡಿಸಿ ಅವರ ಅಭಿಪ್ರಾಯ ವನ್ನು ಪಡೆದ ಬಳಿಕವೇ ಎಲ್ಲಾ ಕೋನಗಳಿಂದ ಅಭಿಪ್ರಾಯದ ಕ್ರೋಢೀಕರಣ ಮಾಡಿ ಅಭಿಪ್ರಾಯ ಸೂಚಿಸಿದ ಎಲ್ಲರನ್ನೂ ನಿರ್ದಿಷ್ಟ ದಿನದಂದು ಒಮ್ಮೆ ಒಟ್ಟುಗೂಡಿಸಿ ಸಾರ್ವತ್ರಿಕ ವಿಚಾರವನ್ನು ಸ್ವೀಕರಿಸಿದರೆ ಹೆಚ್ಚು ಪ್ರಾಸಂಗಿಕವೂ, ಪ್ರಭಾವ ಪೂರ್ಣವೂ ಆಗಲು ಸಾಧ್ಯವಿದೆ.

ಪ್ರಸ್ತುತದ ದ್ವಿಪಥ ರಾಷ್ಟ್ರೀಯ ಹೆದ್ದಾರಿ, ಚತುಷ್ಪಥ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರುವಾಗ ಇರುವ ದ್ವಿಪಥವನ್ನು ಹಾಗೇ ಉಳಿಸಿಕೊಂಡು ಅದರ ಅತ್ಯಂತ ಸಮೀಪದಲ್ಲಿ ಇನ್ನೊಂದು ದ್ವಿಪಥವನ್ನು ಮೇಲ್ಕಂಡಂತೆ ಪರಿಸರ ಉಳಿಸುವ ಕಾರ್ಯದೊಂದಿಗೆ ಸಮೀಕರಿಸಿಕೊಂಡು ನಿರ್ದಿಷ್ಟ ಪಡಿಸಬೇಕು. ಈ ರೀತಿ ಮಾಡಿದರೆ ಈಗಾಗಲೇ ಇರುವ ರಸ್ತೆ ಇದ್ದಲ್ಲೇ ಅಗಲ ಗÉೂಳಿಸಲ್ಪಡುತ್ತದೆ, ರಸ್ತೆಯ ಇಕ್ಕೆಲಗಳಲ್ಲಿ ಆಚ್ಛಾದಿತವಾಗಿ ಬೆಳೆದ ಮರಗಳೂ ಉಳಿಯಲ್ಪಡುತ್ತವೆ, ಮಾತ್ರವಲ್ಲ ಅತ್ಯಂತ ಸಮೀಪದಲ್ಲಿ ಪರ್ಯಾಯ ರಸ್ತೆಯೂ ನಿರ್ಮಾಣಗೊಳ್ಳುವದರಿಂದ ಒಂದು ವೇಳೆ ಯಾವುದೇ ತೊಂದರೆಗಳು ಒಂದು ರಸ್ತೆಯಲ್ಲಿ ಉಂಟಾದರೆ ಪರ್ಯಾಯ ಮಾರ್ಗವೂ ತಾತ್ಕಾಲಿಕವಾಗಿ ದ್ವಿಪಥ ರೀತ್ಯಾ ಸಂಚಾರಕ್ಕೆ ದೊರಕಲು ಸಾಧ್ಯವಿದೆ. ಹೀಗಾಗಿ ಈ ರೀತಿಯ ಚಿಂತನೆಗೆ ರಸ್ತೆ ಪ್ರಾಧಿಕಾರ ಹೆಚ್ಚು ಮನಗೊಡುವುದು ಒಳಿತೆಂದೇ ಹೆಚ್ಚಿನವರ ಅಭಿಪ್ರಾಯ.

ಇಂತಹ ನೂತನ ಉಪಕ್ರಮದಿಂದ ಪರಿಸರ ರಕ್ಷಣೆ, ನೂತನ ರಸ್ತೆ ನಿರ್ಮಾಣ, ಪರ್ಯಾಯ ಮಾರ್ಗ ರಚನೆ, ಗಿಡ-ಮರ-ಕಾಡು ಉಳಿಯುವಿಕೆ, ಬರಡು-ಬಂಜರು ಬೂಮಿಯ ಯುಕ್ತ ಬಳಕೆ ಎಲ್ಲವೂ ಏಕ ಕಾಲದಲ್ಲಿ ಆಗಲು ಸಾಧ್ಯವಿದೆ. ಇದರಿಂದಾಗಿ ಹೊಸ-ಹೊಸ ಪ್ರದೇಶಗಳು ಅಭಿವೃದ್ಧಿಗೊಳ್ಳಲು, ಹೆಚ್ಚಿನ ವ್ಯಕ್ತಿಗಳಿಗೆ ಪ್ರಯೋಜನ ದೊರಕಲು, ಅವಕಾಶ ದೊರೆಯುತ್ತದೆ. ಏಕೆಂದರೆ ಈಗಿನ ಮಾರ್ಗದ ಅತ್ಯಂತ ಸಮೀಪದ ಇನ್ನೊಂದು ಪ್ರದೇಶದಲ್ಲಿ ರಸ್ತೆ ನಿರ್ಮಿಸಲ್ಪಡುವುದರಿಂದ ಆ ಪ್ರದೇಶವೂ ಅಭಿವೃದ್ಧಿಯಾಗಲು ಅನುಕೂಲ ಒದಗುತ್ತದೆ. ಒಂದೇ ಕಡೆ ಅಥವಾ ಈಗ ಇರುವಲ್ಲೇ ಚತುಷ್ಪಥದ ಮಾರ್ಗ ನಿರ್ಮಾಣದಿಂದ ರಾತ್ರೆಯ ಹೊತ್ತು ಆಗಮಿಸುವ -ನಿರ್ಗಮಿಸುವ ವಾಹನದವರಿಗೆ ಪ್ರಖರ ಹೆಡ್ ಲೈಟಿನ ತೊಂದರೆ ಎದುರಾಗುತ್ತದೆ. ಇಷ್ಟರ ತನಕ ಅಭಿವೃದ್ಧಿ ಪಡಿಸಿದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಚತುಷ್ಪಥದ ಮಧ್ಯದಲ್ಲಿ ಸಾಕಷ್ಟು ಮರ-ಗಿಡ/ ತಡೆ ಇಲ್ಲದುದರಿಂz ರಾತ್ರೆಯ ಹೊತ್ತು ಹೋಗಿಬರುವದೆಂದರೆ ಬಹಳ ಕಷ್ಟಕರವಾಗಿ ಪರಿಣಮಿಸುತ್ತಿದೆ. ಅಂತಹ ಯಾವ ತೊಂದರೆಯೂ ಈ ರಸ್ತೆಯಲ್ಲಿ ಸಾಧ್ಯವಿಲ್ಲ.

ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲೂ ಈಗಿರುವ ರಾಷ್ಟೀಯ ಹೆದ್ದಾರಿ ರಸ್ತೆಗೆ ಸಮಾನಾಂತರವಾಗಿ ಒಳ ಪ್ರದೇಶದಲ್ಲಿ ರಸ್ತೆಗ:ಳಿವೆ. ಆ ರಸ್ತೆಯನ್ನೇ ಅಗಲ ಗೊಳಿಸಿದಲ್ಲಿ ಹೆಚ್ಚುವರಿ ಖರ್ಚಾಗಲೀ, ಅತಿಹೆಚ್ಚು ಜನರ ಮನೆ ಇತ್ಯಾದಿ ನಷ್ಟವಾಗಲೀ ಆಗದೆ ಬಹಳ ಸುಲಲಿತವಾಗಿ ಚತÀುಷ್ಪಥ ಮಾರ್ಗ ಕೈಗೂಡಲಿದೆ. ಈ ಸಂದರ್ಭದಲ್ಲಿ ಎಲ್ಲೆಲ್ಲಿ ತಿರುವು-ಮುರುವು ಹೆಚ್ಚಿದೆಯೋ ಅಲ್ಲೆಲ್ಲಾ ಇರುವ ತಿರುವನ್ನು ಸಮಾಂತರಗೊಳಿಸಲು ಎಷ್ಟು ಬೇಕೋ ಅಷ್ಟು ಮಾತ್ರ ಸ್ಥಳವನ್ನು ವಶಪಡಸಿಕೊಂಡರೆ ಸಾಕಾಗುತ್ತದೆ. ಸಮಾಂತರವಾಗಿ ಈಗಾಗಲೇ ಇರುವ ರಸ್ತೆಯಲ್ಲೂ ಇದೇ ನಿಯಮವನ್ನು ಅನುಸರಿಸಿ ನೇರ ರಸ್ತೆ ನಿರ್ಮಿಸಲು ಅಡೆತಡೆ ಇರುವಲ್ಲಿ ಮಾತ್ರ ಭೂಮಿವಶಪಡಿಸಿಕೊಂಡರೆ ಅತ್ಯಂತ ಕಡಿಮೆ ಒಕ್ಕಲ್ಲೆಬ್ಬಿಸುವಿಕೆ ಮಾಡಿದಂತಾಗಿ ಅನಗತ್ಯ ತೊಂದರೆ, ನಷ್ಟ, ಹಾನಿ ಎಲ್ಲವನ್ನೂ ತಗ್ಗಿಸಿದಂತಾಗುತ್ತದೆ. ಮಾತ್ರವಲ್ಲ ಈ ಸಮಾಂತರ ರಸ್ತೆಯ ಬದಿಗಳಲ್ಲಿ ಸ್ಥಳ ಹೊಂದಿರುವವರೂ ಬದುಕಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡು ಅಭಿವೃದ್ಧಿಗೊಳ್ಳಲು ಅವಕಾಶ ಮಾಡಿಕೊಳ್ಳಲು ಅನುವು ಮಾಡಿಕೊಂಡಂತಾಗುತ್ತದೆ.

ಇಂತಹ ಉಪಕ್ರಮದಿಂದ ಈಗಾಗಲೇ ಬೆಳೆದಿರುವ ಎಲ್ಲಾ ಮರ-ಗಿಡಗಳು ಉಳಿದು ಪರಿಸರ ರಕ್ಷಿಸಲ್ಪಡಲಿದೆ. ಒಂದು ವೇಳೆ ಸರಕಾರ ಈಗಿರುವ ರಸ್ತೆಯಲ್ಲೇ ಚತುಷ್ಪಥ ಮಾಡಲೇ ಬೇಕೆಂಬ ಹಠ ಹಿಡಿದರೆ ರಸ್ತೆಯ ಬದಿ ಬೆಳೆದು ನಿಂತಿರುವ ಯಾವದೇ ಮರ-ಗಿಡಗಳಿಗೆ ಕೊಡಲಿ ಪೆಟ್ಟು ಹೊಡೆಯದೇ ಆ ಎಲ್ಲಾ ಬೆಳೆದ ಮರ-ಗಿಡಗಳ ಕಾಂಡವನ್ನು ಸುಮಾರು ಐದು ಅಡಿಗಳಷ್ಟು ಎತ್ತರಕ್ಕೆ ಸಿಮೆಂಟು ರಿಂಗಿನಿಂದ ರಕ್ಷಿಸಿ ಅದರ ಇನ್ನೊಂದು ಬದಿಯಲ್ಲಿ ಚತುಷ್ಪಥದ ಇನ್ನೊಂದು ಮಾರ್ಗಬರುವಂತೆ ನಿರ್ಮಿಸಿಲಿ. ಆಗ ಇರುವ ಮರ-ಗಿಡಗಳು ಉಳಿಯುತ್ತª,É ರಸ್ತೆಯ ನಿರ್ಮಾಣವೂ ಆಗುತ್ತದೆ. ಆದರೆ ಎಲ್ಲೂ ಮರ ನಾಶವಾಗದಂತೆ ಜಾಗೃತೆ ವಹಿಸಬೇಕು.

ಮೊದಲೇ ಸಾಕಷ್ಟು ಮರ-ಗಿಡ-ಕಾಡು ನಾಶವಾಗಿ ಓಝೋನ್ ಪದರ ಹರಿಯಲ್ಪಟ್ಟು ಭೂಮಿಯ ತಾಪಮಾನ ಏರುತ್ತಿರುವಾಗ, ಋತುಮಾನ ಯದ್ವಾತದ್ವಾ ಆಗುತ್ತಿರುವಾಗ, ಜನವರಿ-ಫೆಬ್ರವರಿ ತಿಂಗಳಲ್ಲೇ ನೀರಿಗೆ ಹಾಹಾಕಾರ ಆಗುತ್ತಿರುವಾಗ, ಮಾರ್ಚ ತಿಂಗಳಲ್ಲೇ ಬಿಸಿಲಿಗೆ ಹೊರಹೋಗಲು ಅಸಾಧ್ಯವಾಗುತ್ತಿರುವಾಗ, ಇನ್ನೂ ಇನ್ನೂ ನಾವು ಇರುವ ಕೆಲವಾದರೂ ಮರ-ಗಿಡ-ಕಾಡುಗಳನ್ನು, ಹಸಿರನ್ನು ಉಳಿಸದಿದ್ದಲ್ಲಿ ನಮ್ಮ ನಾಳಿನ ದಿನಗಳು ಹೇಗಿದ್ದಾವು?? ಊಹಿಸಬಲ್ಲಿರಾ?? ಪರಿಸ್ಥಿತಿ ಹೀಗಿರುವಾಗ ಇನ್ನಷ್ಟು, ಮತ್ತಷ್ಟು ಹಸಿರಿಗೆ ಕೊಡಲಿಯೇಟು ಇಕ್ಕುವುದು ಸಮಂಜಸವಾದೀತೇ? ಎಲ್ಲಾ ಕಡೆಯಲ್ಲೂ ಕೆಟ್ಟ ತನಗಳೇ ಮೆರೆದಾಡುತ್ತಿರುವಾಗ, ಕೆಟ್ಟ ಸಂಸ್ಕøತಿಯೇ ತಾಂಡವವಾಡುತ್ತಿರುವಾಗ ಒಳ್ಳೆಯದನ್ನು ಉಳಿಸಲು ನಾಲ್ಕು ಕೈಗಳಾದರೂ ಒಟ್ಟಾಗಲು ಅಸಾಧ್ಯವೇ?? ನೀವೇನಂತೀರಿ??

ರಾಯೀ ರಾಜ ಕುಮಾರ್




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here