Friday 26th, April 2024
canara news

ಸರ್ವ ಧರ್ಮೀಯ ಭಕ್ತಾದಿಗಳ ಕಾರ್ಕಳದ ಸಂತ ಲಾರೇನ್ಸ್‍ರ ಪವಿತ್ರಾಲಯ

Published On : 29 Jul 2016   |  Reported By : Rons Bantwal


ಅತ್ತೂರು ಪುಣ್ಯಕ್ಷೇತ್ರದ ಜಾತ್ರೋತ್ಸವದ ಆ ಕ್ಷಣಗಳು....!
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಪ್ರಕೃತಿಯ ವರದಾನದಂತಿರುವ ಕಾರ್ಕಳ ತಾಲೂಕು ಅಲ್ಲಿನ ಅತ್ತೂರು ಪ್ರದೇಶದಲ್ಲಿ ನೆಲೆಗೊಂಡಿರುವ ಪ್ರಖ್ಯಾತ ಪುಣ್ಯಕ್ಷೇತ್ರ ಜನಜನಿತ ಕಾರ್ಕಳ ಅತ್ತೂರು ಸಂತ ಲಾರೇನ್ಸ್ಸ್‍ರ ಪವಿತ್ರಾಲಯಕ್ಕೆ ಇದೀಗ ಪರ್ವಕಾಲ. ಇಲ್ಲಿ 1759 ರಿಂದ ಭಕ್ತ ಜನತೆ ನಡೆಸಿದ ಪ್ರಾರ್ಥನೆ ಫಲಪ್ರದ ಆಗುತ್ತದೆ ಎಂದು ಜಾತಿ, ಮತ, ಧರ್ಮ ಭೇದವಿಲ್ಲದೆ ಭಾವುಕರಾಗಿ ಪೂಜೆಯಲ್ಲಿ ಪಾಲ್ಗೊಂಡು ಧನ್ಯರೆಣಿಸುವ ಕೇಂದ್ರವೆಣಿಸಿ ಹಲವು ಕಾರಣ ಹಾಗೂ ಪವಾಡಗಳಿಂದ ಸರ್ವ ಧರ್ಮೀಯ ಭಕ್ತಾದಿಗಳನ್ನು ಆಕರ್ಷಿಸುತ್ತಾ ಸರ್ವಧರ್ಮ ಸಮಭಾವದ ತಾಣವಾಗಿ ಮೆರೆದಿದೆ.

ಸರ್ವಧರ್ಮ ಸಮಭಾವ ಕಲ್ಪನೆ ಭಾರತಕ್ಕೆ ಹೊಸತೇನಲ್ಲ. ನಮ್ಮ ಸಂತರು, ಆರಂಭದಿಂದಲೇ ಎಲ್ಲಾ ನದಿಗಳು ಹೋಗಿ ಸಾಗರವನ್ನು ಸೇರುವಂತೆ ಎಲ್ಲಾ ಧರ್ಮಗಳು ನಮ್ಮನ್ನೂ ದೇವರತ್ತ ಒಯ್ಯುತ್ತದೆ ಎನ್ನುವ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ. ಈ ಮಹಾನ್ ಸಂದೇಶವನ್ನು ವಿಶ್ವಕ್ಕೆ ಮುಟ್ಟಿಸಿದವರು ಸಂತರು. ಆದರೆ ಕೋಮು ವೈಷಮ್ಯವನ್ನು ಹರಡಿ ದೇಶದ ಅಖಂಡತೆಗೆ ಭಂಗ ತರುವಂತಹ ದುಷ್ಕರ್ಮಗಳಲ್ಲಿ ತೊಡಗಿರುವವರಿಗೂ ನಮ್ಮಲ್ಲಿ ಕೊರತೆಯಿಲ್ಲ. ಆದರೆ ಇಂತಹದವರಿಂದ ಜನಸಾಮಾನ್ಯರನ್ನು ದೂರವಿಡುವ ಪ್ರಯತ್ನವನ್ನು ದೇಶದ ಎಲ್ಲೆಡೆ ಇರುವ ಸರ್ವ ಧರ್ಮ ಸಮಭಾವದ ಕೇಂದ್ರಗಳು ನಡೆಸುತ್ತಿವೆ. ಎಲ್ಲಾ ಧರ್ಮೀಯರನ್ನು ಆಕರ್ಷಿಸುತ್ತಿರು ವ ಕಾರ್ಕಳದ ಅತ್ತೂರು ಜಾತ್ರೆ ಇದಕ್ಕೆ ಹೊರತಾಗಿಲ್ಲ.

 

 

 

ಭಕ್ತ ಜನರ ಸಹಾಯಕ್ಕೆ ಸಂತ ಲಾರೇನ್ಸ್ ಬರುತ್ತಾರೆ ಎನ್ನುವ ನಂಬಿಕಸ್ಥರ ಈ ಕ್ಷೇತ್ರ ಪ್ರಸಿದ್ಧಿಯು ಕ್ರೈಸ್ತ ಧರ್ಮದ ಕೇಂದ್ರವಾದ ವ್ಯಾಟಿಕನ್‍ಗೂ ಪಸರಿಸಿ ಈಗ `ಮೈನರ್ ಬಸಿಲಿಕ' ವಿಶ್ವಮಾನ್ಯತೆಗೆ ಪಾತ್ರವಾಗಿರುವುದು ಅಭಿನಂದನೀಯ. ಭಕ್ತರ ಪಾಲಿಗೂ ಪಾವನ ಎಂದೆಣಿಸಿದೆ. ತುಳುನಾಡಿನ ಸ್ಥಳೀಯ ಜನರು `ಕಾರ್ಲದ ದೇವೆರ್' ಎಂದು ಅಕ್ಕರೆ ಹಾಗೂ ಭಕ್ತಿಯಿಂದ ಗುರುತಿಸಲ್ಪಟ್ಟ ಸಂತ ಲಾರೆನ್ಸರಿಗೆ ಸಮರ್ಪಿತ ಈ ದೇವಾಲಯಕ್ಕೆ ರೋಮನ್ ಕಾಥೋಲಿಕ್ ಕ್ರೈಸ್ತರ ಪರಮೋಚ್ಛ ಜಗದ್ಗುರು ಪೆÇೀಪ್ ಫ್ರಾನ್ಸಿಸರು `ಮಹಾ ದೇವಾಲಯ' (ಮೈನರ್ ಬಸಿಲಿಕ)ದ ಉನ್ನತಿಗೆ ಏರಿಸುವ ಘೋಷಣೆ ನಂಬಿಕಸ್ಥ ಭಕ್ತರಲ್ಲಿ ಮತ್ತಷ್ಟು ಸಂತಸ ಮೂಡಿಸಿ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಸಂತ ಲಾರೇನ್ಸ್ಸ್‍ರ ಪವಿತ್ರಾಲಯವು ಸರ್ವ ಧರ್ಮ ಸಮಭಾವದ ಮೂಲಕ ಸೌಹಾರ್ದಮಯ ವಾತಾವರಣಕ್ಕೆ ಪಾತ್ರವಾಗಿದ್ದು, ಇಲ್ಲಿ ಸರ್ವ ಧರ್ಮಗಳ ಅನುಯಾಯಿಗಳು ತಮ್ಮ ಆಶಯಗಳನ್ನು ಪೂರೈಸಲು ಹರಕೆ ಹೇಳುವ ಪರಿ ತುಂಬಾ ಹಳೆಯದ್ದು. ಹಸು, ದನಗಳು ಕಳವಾದರೆ, ಗೋಧೂಳಿ ಕಾಲಕ್ಕೆ ಅವುಗಳು ಹಟ್ಟಿ ಸೇರದಿದ್ದಲ್ಲಿ, ಮನೆ, ಅಂಗಡಿ, ವ್ಯಾಪಾರಗಳಲ್ಲಿ ನಷ್ಟ, ಸಂಕಷ್ಟಗಳು ಎದುರಾದಾಗ, ಅನಾರೋಗ್ಯ ಪೀಡಿತರೆಣಿಸಿದಾಗ, ತಮ್ಮ ಕೈಕಾಲು ಯಾ ದೇಹದ ಇತರ ಭಾಗದಲ್ಲಿ ಮೊಳೆಯುಗುರು (ಸಮ್ಖೊಳ್) ಆದಲ್ಲಿ ಹರಕೆಯನ್ನು ಹೊತ್ತು, ಸಾಮಾನ್ಯವಾಗಿ ಕಾಯಿಲೆ ಬಿದ್ದವರು ದೇಹದ ಯಾವ ಅಂಗಕ್ಕೆ ಖಾಯಿಲೆ ಬಾಧಿಸಿದೆಯೋ ಆ ಅಂಗದ ಮೇಣದ ಪ್ರತಿಕೃತಿ ಇಲ್ಲಿನ ಸಂತ ಲಾರೇನ್ಸ್ ಅವರಿಗೆ ಒಪ್ಪಿಸುವ ಹರಕೆಯನ್ನು ಹೊರುತ್ತಿದ್ದರು. ಹಾಗೆ ಅತ್ತೂರು ವಾರ್ಷಿಕ ಜಾತ್ರೆಯಲ್ಲಿ ಭಾಗವಹಿಸಿ ಅಲ್ಲಿನ ಪಾವಡಕೆರೆ ಎಂದೇ ಬಿಂಬಿತ ಕೆರೆಯಲ್ಲಿ ಕೈಕಾಲುಗಳನ್ನು ತೊಳೆದು ಶುದ್ಧಿಗೊಳ್ಳುತ್ತಾ, ಹರಕೆ ಸಮರ್ಪಿಸಿ ಧನ್ಯರೆಣಿಸುತ್ತಾರೆ. ಭಕ್ತಿಪೂರ್ವಕವಾಗಿ ಮೊಂಬತ್ತಿಗಳನ್ನು ಉರಿಸಿ ಹರಕೆ ತೀರಿಸಿ ಅಲ್ಲಿನ ಬಿಸಿಬಿಸಿ ಎಣ್ಣೆಯನ್ನು ಹಣೆಗೆ ಸವರಿ, ಮನೆಮಂದಿ, ಸಾಕುಪ್ರಾಣಿಗಳಿಗಾಗಿ ಬಾಟಲಿಗಳಲ್ಲಿ ತುಂಬಿಸಿ ತರುತ್ತಲೇ, ಕಪ್ಪು ಕಡಲೆ, ಬಣ್ಣಬಣ್ಣದ ಸಕ್ಕರೆ ಮಿಠಾಯಿ (ತಾಬ್ಡೆಗುಳೆ), ಸುಕ್ರುಂಡೆ, ಕಲ್ಲಂಗಡಿ (ಬಚ್ಚಂಗಾಯಿ), ಕೈನೂಲು (ಮಿಂಜಿತ್) ಉಂಡೆಗಳನ್ನು ಪಡೆದು ಹಿಂದಿರುಗುವ ಸಂಪ್ರದಾಯವೇ ಒಂದು ವೈಶಿಷ್ಟ್ಯಮಯವಾಗಿತ್ತು. ಅನೇಕರು ತಂಡಗಳನ್ನು ಕಟ್ಟಿ ಬರೇ ಕಾಲುಗಳಿಂದ (ಚಪ್ಪಳಿ, ಶೂ ಧರಿಸದೆ) ಮೈಲುಗಟ್ಟಲೆ ನಡೆದುಕೊಂಡು ಬಂದು ಹರಕೆ ಅರ್ಪಿಸುವುದು ಇಂದಿಗೂ ವಾಡಿಕೆಯಲ್ಲಿದೆ. ಕಾರ್ಕಳದ ದೇವ ಹಬ್ಬಕ್ಕೆ (ಕಾರ್ಲದ ದೇವೆರೆನ ಪರ್ಬೊಕ್) ಅಂತಲೇ ರಜೆಯನ್ನಾಕಿ ಪರಿವಾರ ಸಹಿತ ದೇಶವಿದೇಶಗಳಿಂದ ಬರುವವರೇ ಹೆಚ್ಚು. ಊರಪರವೂರ ಭಕ್ತ ಜನ ಸಾಗರದ ಮಧ್ಯೆ ಹಿಂದಿರುವಾಗ ಸಾಲಾಗಿರುವ ಸಂತೆಕಟ್ಟೆ ಅಂಗಡಿ ಮುಗ್ಗಟ್ಟುಗಳಲ್ಲಿನ ಖರೀದಿ, ಕಬ್ಬುರಸ, ಐಸ್‍ಕ್ರೀಂ ಸೇವನೆ ಮತ್ತೊಂದು ಸಂತಸದ ವಿಶೇಷ. ಇಲ್ಲಿ ತೊಟ್ಟಿಲಲ್ಲಿ ಕುಳಿತರೆ ಅದೇ ಅಂದಿನ ಆನಂದ... ಅಂಗಡಿಗಳಿಂದಲೂ ಭರಾಟೆಯ ವ್ಯಾಪಾರ. ಸಂತೆಯ ಮಧ್ಯೆ ಕಾಣೆಯಾದ ವ್ಯಕ್ತಿ, ಮಕ್ಕಳ ಹೆಸರು ಪದೇಪದೇ ಕರೆಯುತ್ತಿದ್ದಂತೆಯೇ ತಮ್ಮವರ ಜಾಗ್ರತೆ ವಹಿಸುವ ಕಾಳಜಿ, ಕಳೆದವರು ಸಿಕ್ಕಲ್ಲಿ ಇದು ಸಂತ ಲಾರೇನ್ಸರ ಪವಾಡವೇ ಸರಿ ಎಂದು ನಿಟ್ಟಿಸಿರು ಬಿಟ್ಟು ಹಪಾಹಪಿಸುತ್ತಾ ಪರರಲ್ಲಿ ಹೇಳಿಕೊಳ್ಳುವ ರೀತಿ, ಸಾಲುಗಟ್ಟಿ ಬರುವ ಭಕ್ತ ಜನರನ್ನು ನಿಯಂತ್ರಿಸುವ ಪೆÇೀಲಿಸರು ಸುಸ್ತಾಗುತ್ತಾರದರೂ, ಪಿಕಿಲಾಟ ನಡೆಸಿ ಪೆÇೀಲಿಸಕ ಕೈಗೆ ಸಿಕ್ಕಾಕೊಂಡವರನ್ನು ನೋಡುವ ಕಾತರ... ಹಬ್ಬದ ವಿಶೇಷತೆ ಸಾರುವಂತಿತ್ತು.
ಇದೇ ಹಿಂದಿನ ಜನತೆಯೆ ಹಳೆ ಸಂಪ್ರದಾಯ ಇಂದಿನ ಶೈಲಿಯ ಜಾತ್ರೆಗೆ ಪೂರಕವಾಗಬಲ್ಲದೇ ಎನ್ನುವ ಹಂಬಲ ಭಕ್ತರಲ್ಲಿದೆ.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here