Saturday 27th, April 2024
canara news

ಬೆಂಗಳೂರುನಲ್ಲಿ ನೆರವೇರಿದ ಚುಟುಕು ಸಾಹಿತ್ಯ-ಸಾಂಸ್ಕೃತಿಕ ಪ್ರಥಮ ಸಮ್ಮೇಳನ

Published On : 19 Aug 2016   |  Reported By : Ronida Mumbai


ಶ್ಯಾಮ್ ಎನ್.ಶೆಟ್ಟಿ ಅವರಿಗೆ ರಾಷ್ಟ್ರೀಯ ವಿಭೂಷಣ ಪ್ರಶಸ್ತಿ ಪ್ರದಾನ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಅ.19: ಸುರ್ವೆ ಕಲ್ಚರಲ್ ಅಕಾಡೆಮಿ (ರಿ.) ಬೆಂಗಳೂರು ಇಂದಿಲ್ಲಿ ಬೆಂಗಳೂರುನ ರವೀಂದ್ರ ಕಲಾ ಕ್ಷೇತ್ರದ ನಯನ ರಂಗ ಮಂದಿರದಲ್ಲಿ ನಡೆಸಿದ ಅಖಂಡ ಕರ್ನಾಟಕ ಚುಟುಕು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಥಮ ಸಮ್ಮೇಳನದಲ್ಲಿ ಕರ್ನಾಟಕದ ಜಲ, ನೆಲ, ಭಾಷೆ ಹಾಗೂ ಜನಜೀವನಗಳ ಬಗ್ಗೆ ಕಾಳಜಿಯನ್ನಿರಿಸಿ ಹೊರನಾಡ ಮುಂಬಯಿಯಲ್ಲಿ ಸಲ್ಲಿಸಿದ ಅಭೂತಪೂರ್ವ ಸಾಧನೆಗಾಗಿ ಚುಟುಕು ಸಾಹಿತ್ಯ ಪರಿಷತ್‍ನ ರಾಜ್ಯ ಪ್ರಧಾನ ಸಂಚಾಲಕ ಡಾ| ಎಂ.ಜಿ.ಆರ್ ಅರಸ್ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಶ್ಯಾಮ್ ಎನ್. ಶೆಟ್ಟಿ ನವಿಮುಂಬಯಿ ಅವರಿಗೆ ರಾಷ್ಟ್ರೀಯ ವಿಭೂಷಣ ನೀಡಿ ಗೌರವಿಸಲಾಯಿತು.

ಸ್ಥಾಪಕಾಧ್ಯಕ್ಷ ರಮೇಶ್ ಸುರ್ವೆ, ಗೌರವಾಧ್ಯಕ್ಷ ಎಸ್.ವಿ ರಮೇಶ್, ಅಧ್ಯಕ್ಷ ದೇವೇಂದ್ರಕುಮಾರ್ ನಿಗಡೆ, ಗೌರವ ಪ್ರಧಾನ ಕಾರ್ಯದರ್ಶಿ ಕಿಶನ್ ಸುರ್ವೆ, ನಟ ಬ್ಯಾಂಕ್ ಜನಾರ್ದನ್, ಜೆ.ಗೋ ರಮೇಶ್, ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಕಲ್ಮೇಶ್ವರ ಸ್ವಾಮೀಜಿ, ಮಾಜಿ ಸಚಿವರುಗಳಾದ ರಾಮಚಂದ್ರ ಗೌಡ, ಶಿವರಾಜ್ ತಂಗಡಗಿ, ಮಾಜಿ ಶಾಸಕ ನರೇಂದ್ರ ಬಾಬು, ಎಂ. ಶಿವರಾಜ ಮುಂತಾದ ಗಣ್ಯರು ಉಪಸ್ಥಿತರಿದ್ದು ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನಿಸಿ ಶ್ಯಾಮ ಶೆಟ್ಟಿ ಅವರನ್ನು ಅಭಿನಂದಿಸಿದರು.


ಶ್ಯಾಮ್ ಎನ್. ಶೆಟ್ಟಿ: ಕಳೆದ ಎರಡುವರೆ ದಶಕಗಳಿಂದ ನಾಡಿನ ಮತ್ತು ಹೊರನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತೆರೆಮರೆಯ ಸಮಾಜ ಸೇವಕ. ಮುಂಬಯಿಯ ಪ್ರತಿಷ್ಠಿತ ಹೊಟೇಲು ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಶ್ಯಾಮ್ ಎನ್. ಶೆಟ್ಟಿ ಅವರು ಹೊರನಾಡ ಕನ್ನಡಿಗರ ವಿಭಾಗದಲ್ಲಿ ಸಮಾಜ ಸೇವೆ ಕ್ಷೇತ್ರದ ಕೊಡುಗೆ ಮತ್ತು ಸಾಧನೆಗಾಗಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಕಾರ್ಕಳ ತಾಲೂಕಿನವರಾಗಿದ್ದ ಅವರು ಮುಂಬಯಿಯಲ್ಲಿ ಹಲವು ವರ್ಷಗಳಿಂದ ಹೊಟೇಲ್ ಉದ್ಯಮಿ ಮತ್ತು ಕ್ಯಾಟರಿಂಗ್ ಸರ್ವಿಸ್‍ನಲ್ಲಿ ತೊಡಗಿದ್ದ ಇವರು ಮುಂಬಯಿ ಪ್ರತಿಷ್ಠಿತ ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ನಾಡು ನುಡಿಗಾಗಿ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಸಂಬಂಧವನ್ನು ರಚಿಸಿಕೊಂಡು ಅವರೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ದುಡಿದು ತಮ್ಮ ಪೂರ್ಣ ಸಹಕಾರವನ್ನು ನೀಡಿದ್ದಾರೆ. ಬಡ ಮಕ್ಕಳಿಗೆ ವಿಧ್ಯಾಭ್ಯಾಸ, ಮದುವೆಯ ಖರ್ಚು, ಕಾರ್ಮಿಕರ ಏಳಿಗೆಗೆ ಸತತ ಸ್ಪಂದಿಸುತ್ತಿರುವ ಇವರು ರಂಗಭೂಮಿ, ಸಾಹಿತ್ಯ ಸಮ್ಮೇಳನ ಮೊದಲಾದ ಕಾರ್ಯಕ್ರಮಗಳಿಗೆ ಕೊಡುಗೈ ದಾನಿಯಾಗಿದ್ದಾರೆ. ಮುಂಬಯಿಯ ಕ್ಯಾಟರಿಂಗ್ ಉದ್ಯಮದಲ್ಲಿ ಶೆಟ್ಟಿ ಕ್ಯಾಟರರ್ಸ್‍ಗೆ ತನ್ನದೇ ಆದ ಒಂದು ಹೆಸರಿದೆ. ಕ್ಯಾಟರಿಂಗ್ ಕ್ಷೇತ್ರದಲ್ಲಿ ಮೂರು ದಶಕಗಳ ದಟ್ಟ ಅನುಭವವನ್ನು ಈ ಸಂಸ್ಥೆ ಹೊಂದಿದೆ. ಮುಂಬಯಿಯಲ್ಲಿ ಕನ್ನಡಿಗರ ವಲಯದಲ್ಲಿ ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ಪದ್ಧತಿಯನ್ನು ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಶೆಟ್ಟಿ ಕ್ಯಾಟರರ್ಸ್‍ನ ರೂವಾರಿಯಾಗಿರುವವರು ಶ್ಯಾಮ್ ಎನ್.ಶೆಟ್ಟಿ ಅವರನ್ನು ಕ್ಯಾಟರಿಂಗ್‍ನ ಜನಕ ಎಂದೂ ಕರೆಯುತ್ತಿದ್ದಾರೆ.

ಥಾಣೆ ಜಿಲ್ಲೆಯ ಪಾಲ್ಘರ್‍ನಲ್ಲಿ ಹೊಟೇಲು ಉದ್ಯಮಿಯಾಗಿದ್ದ ನಾರಾಯಣ್ ಶೆಟ್ಟಿಯವರ ಪುತ್ರ ಶ್ಯಾಮ್ ಶೆಟ್ಟಿ. ಅವರು ಹುಟ್ಟಿದ್ದು ಪಾಲ್ಘರ್‍ನಲ್ಲೇ ಆದರೂ ಆರಂಭದ ಶಿಕ್ಷಣವನ್ನು ಸ್ವಂತ ಊರಾದ ಕಾರ್ಕಳದಲ್ಲಿ ಪಡೆದುಕೊಂಡರು. ಕಾರ್ಕಳದ ಸಮೀಪದ ನಕ್ರೆ ಬಲಿಪುಗುತ್ತು ಅವರ ತಂದೆಯ ಊರು. 1952ನೇ ಇಸವಿಯಲ್ಲಿ ತಂದೆಯ ಹೊಟೇಲು ವ್ಯವಸಾಯದಲ್ಲಿ ಸಂಕಷ್ಟ ತಲೆದೋರಿದಾಗ ಶ್ಯಾಮ್ ಶೆಟ್ಟಿಯವರು ಊರಿನ ಹಾದಿ ಹಿಡಿಯಬೇಕಾಯಿತು. ಊರಿನಲ್ಲಿ ಕೃಷಿ ಕೆಲಸವನ್ನೂ ಮಾಡಿರುವ ಅವರು ಪ್ರಾಥಮಿಕ ಶಾಲಾ ಅಭ್ಯಾಸವನ್ನು ಅಲ್ಲಿ ಮಾಡಿದ ಬಳಿಕ ಮತ್ತೆ ಮುಂಬಯಿಗೆ ಬಂದರು. ಊರಿನಲ್ಲಿರುವಾಗಲೇ ಅವರಿಗೆ ಕಂಬಳ, ಕೋಲ, ಜಾತ್ರೆ, ನೇಮ, ಯಕ್ಷಗಾನ ಮತ್ತಿತರ ಸಾಂಸ್ಕøತಿಕ ಮತು ಧಾರ್ಮಿಕ ಕಲೆಗಳಲ್ಲಿ ವಿಪರೀತವಾದ ಆಸಕ್ತಿಯಿತ್ತು. ಆ ಆಸಕ್ತಿಯನ್ನು ಶ್ಯಾಮ್ ಶೆಟ್ಟಿಯವರು ಈಗಲೂ ಉಳಿಸಿಕೊಂಡಿದ್ದಾರೆ. ಮುಂಬಯಿಗೆ ಬಂದು ಶಾರದಾ ಫ್ರೀ ನೈಟ್ ಹೈಸ್ಕೂಲ್ ಎನ್‍ಕೆಇಎಸ್ ಹೈಸ್ಕೂಲುಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸಿ ಅಧ್ಯಾಪಕರಿಂದ ಬೆನ್ನುತಟ್ಟಿಸಿಕೊಂಡ ಚತುರ ಅವರು. ತಂದೆ ಪಂಜಾಬ್ ಅಸೋಸಿಯೇಶನ್‍ನಲ್ಲಿ ನಡೆಸುತ್ತಿದ್ದ ಕ್ಯಾಂಟೀನ್‍ನಲ್ಲೇ ಅವರು ಹೊಟೇಲ್ ಮತ್ತು ಕ್ಯಾಟರಿಂಗ್ ವ್ಯವಸಾಯದ ಓಂಕಾರವನ್ನು ಕಲಿತುಕೊಂಡರು. ಹಾಗೆಂದು ಶ್ಯಾಮ್ ಶೆಟ್ಟಿಯವರು ಕೇವಲ ಕ್ಯಾಟರಿಂಗ್ ಉದ್ಯಮಕ್ಕೆ ಮಾತ್ರ ಸೀಮಿತವಾದವರಲ್ಲ. ಟೆಂಪೊ ಹಾಗೂ ಟ್ರಕ್ ಖರೀದಿಸಿ ಸಾರಿಗೆ ನಿರ್ವಾಹಕನಾಗಿ, ಸ್ವಂತ ಬ್ಯಾನರ್ ಸ್ಥಾಪಿಸಿ ಅದರಡಿಯಲ್ಲಿ ಸಿನೇಮಾ ನಿರ್ಮಿಸಿ ಸಿನೇಮಾ ನಿರ್ಮಾಪಕನಾಗಿ, ಸ್ವಂತ ಹೊಟೇಲ್ ಸ್ಥಾಪಿಸಿ ಹೊಟೇಲ್ ಉದ್ಯಮಿಯಾಗಿ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಂಘಟಕನಾಗಿ ಹೀಗೆ ನಾನಾ ರೂಪಗಳಲ್ಲಿ ಅವರು ತನ್ನ ಆಸಕ್ತಿ ಮತ್ತು ಅಭಿರುಚಿಯನ್ನು ಹರಿಯಬಿಟ್ಟಿದ್ದಾರೆ. ಪುತ್ರ ರೋಹನ್ ಹೆಸರಲ್ಲಿ ಫಿಲಂ ಕಂಬೈನ್ಸ್ ಎಂಬ ಸ್ವಂತ ಬ್ಯಾನರ್ ಸ್ಥಾಪಿಸಿಕೊಂಡ ಶ್ಯಾಮ್ ಶೆಟ್ಟಿಯವರು ಈ ಬ್ಯಾನರ್‍ನಡಿ ಚಿತ್ರ ನಿರ್ಮಿಸಿದ ಅನುಭವವೇ ಇನ್ನೊಂದು ಸಿನೇಮಾಕ್ಕೆ ಬೇಕಾಗುವಷ್ಟು ಸರಕನ್ನು ಒದಗಿಸುಂತದ್ದು. ಅನಂತನಾಗ್, ಮಹಾಲಕ್ಷ್ಮಿ, ತಾರಾ ಮುಂತಾದ ಖ್ಯಾತ ತಾರೆಗಳನ್ನು ಹಾಕಿಕೊಂಡು 1990ರಲ್ಲಿ ಶ್ಯಾಮ್ ಶೆಟ್ಟಿಯವರು ಇವಳೆಂತ ಹೆಂಡತಿ ಎಂಬ ಸಿನೇಮಾವನ್ನು ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ತನಗಾದ ವಂಚನೆ, ಸಿನೇಮಾವನ್ನು ಪೂರ್ತಿ ಮಾಡಲು ತಾನು ಪಟ್ಟ ಪಾಡು, ಗಾಂಧಿ ನಗರದವರ ವಂಚನೆ, ಬೂಟಾಟಿಕೆ ಮತ್ತು ಸೋಗಲಾಡಿತನ, ನಂಬಿದವರೇ ಬೆನ್ನಿಗಿರಿದದ್ದು ಇವೆಲ್ಲವನ್ನು ಇಟ್ಟುಕೊಂಡು ಒಂದು ಸಿನೇಮಾ ಮಾಡಬಹುದು ಎನ್ನುತ್ತಾರೆ ಶ್ಯಾಮ್ ಶೆಟ್ಟಿ. ಇವಳೆಂತ ಹೆಂಡತಿ ಉತ್ತಮ ಚಿತ್ರವೇ ಸಿನೇಮಾಗಳನ್ನು ನಿರ್ಮಿಸಬೇದೆಂಬ ಇರಾದೆಯೂ ಇತ್ತು ಎಂದು ಚಲಾವಣೆಯಲ್ಲಿರುತ್ತಿದ್ದೆ. ಉತ್ತಮ ಸಿನೇಮಾಗಳನ್ನು ನಿರ್ಮಿಸಬೇಕೆಂಬ ಇರಾದೆಯೂ ಇತ್ತು ಎಂದು ವಿಷಾದದಿಂದ ಹೇಳುತ್ತಾರೆ ಶ್ಯಾಮ್‍ಶೆಟ್ಟಿ. ಆದರೂ ಬಂಟ ಸಮುದಾಯದ ಮೊದಲ ಕನ್ನಡ ಸಿನೇಮಾ ನಿರ್ಮಾಪಕ ಎಂಬ ಹೆಗ್ಗಳಿಕೆಯೊಂದು ಈಗಲೂ ಅವರದ್ದೇ. ಆ ಬಳಿಕ ಅವರ ಬ್ಯಾನರ್‍ನಲ್ಲಿ ಪೊಲೀಸ್ ಫೈಲ್ ಎಂಬ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಸಿನೇಮಾ ಸಹವಾಸದಿಂದ ಕೈಸುಟ್ಟುಕೊಂಡ ಬಳಿಕ ಮುಂಬಯಿಗೆ ವಾಪಸಾದ ಶ್ಯಾಮ್ ಶೆಟ್ಟಿಯವರು ಮತ್ತೆ ಕ್ಯಾಟರಿಂಗ್ ಮತ್ತು ಹೊಟೇಲ್ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ನವಿ ಮುಂಬಯಿಯಲ್ಲಿ ಶ್ವೇತಾ ಪ್ಯಾಲೇಸ್ ಹೊಟೇಲನ್ನೂ ಹೊಂದಿರುವರು. ನವಿ ಮುಂಬಯಿ ಹೊಟೇಲ್ ಓನರ್ಸ್ ಅಸೋಸಿಯೇಶನ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಕಳೆದ ಎಂಟು ವರ್ಷಗಳಿಂದ ಸತತವಾಗಿ ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಅಧಿಕಾರವಧಿಯಲ್ಲಿ ಹೊಟೇಲು ಮಾಲಕರ ಸಂಘಟನೆ ಹೊಸ ಆಯಾಮವೊಂದನ್ನು ನೀಡಬೇಕೆಂಬ ಉದ್ದೇಶದಿಂದ ಅವರು ಶ್ರಮಿಸಿದ್ದರು. ಸಂಘಟನೆ ವಿಶಂತಿ ಆಚರಿಸಿಕೊಂಡಾಗ ಹೊಟೇಲು ಉದ್ಯಮಿಗಳಿಗಾಗಿ ವ್ಯವಸಾಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ ಮತ್ತು ವಸ್ತು ಪ್ರದರ್ಶನವನ್ನು ಹಮ್ಮಿಕೊಂಡದ್ದೇ ಶ್ಯಾಮ್ ಶೆಟ್ಟಿ ಅವರ ಕ್ರೀಯಾಶೀಲತೆಗೆ ಸಾಕ್ಷಿ. ಮುಂಬಯಿ ಕ್ಯಾಟರರ್ಸ್ ಅಸೋಸಿಯೇಶನ್, ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಜೊತೆ ಕೋಶಾಧಿಕಾರಿ ಮತ್ತು ಬೊಂಬೆ ಬಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷರಾಗಿ ಆ ಹಿಂದೆ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾಗಿ, ಲಯನ್ಸ್ ಕ್ಲಬ್ ವಾಶಿನಾಕ ಇದರ ಸಕ್ರಿಯ ಸದಸ್ಯ ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ ಶ್ಯಾಮ್ ಶೆಟ್ಟಿ ಅವರು ಸೇವೆ ಸಲ್ಲಿಸಿದ್ದಾರೆ. ಪತ್ನಿ ಶಾರದಾ ಶೆಟ್ಟಿ ಮಕ್ಕಳಾದ ಚೇತನ್, ರೋಹನ್ ಮ್,ಅತ್ತು ಶ್ವೇತಾ ಅವರನ್ನೊಳಗೊಂಡ ಸಂತೃಪ್ತ ಕುಟುಂಬ ಶ್ಯಾಮ್ ಶೆಟ್ಟಿ ಅವರದ್ದು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here