Wednesday 8th, May 2024
canara news

ಮ್ಯಾಂಗಲೂರ್ ಇನ್ಮುಂದೆ ‘ಮಂಗಳೂರು’ ನವೆಂಬರ್ ೧ ರಿಂದ ಮಂಗಳೂರು ಹೆಸರು ಅಧಿಕೃತ

Published On : 20 Oct 2014   |  Reported By : Spoorthi, Mangalore   |  Pic On: P.Kotain


ಕರ್ನಾಟಕದ ಕರಾವಳಿ ತೀರ ಪ್ರದೇಶವಾದ ಮಂಗಳೂರು ನಿಸರ್ಗ ರಮಣೀಯ ಊರು. ಇಲ್ಲಿ ಹೆಜ್ಜೆಗೊಂದರಂತೆ ದೈವ ದೇವಸ್ಥಾನಗಳ ಸಾಲು ಇದೆ. ಮಾತ್ರವಲ್ಲ ಪ್ರವಾಸಿ ಕೇಂದ್ರಗಳಿಗೆ ಈ ನಗರಿ ಹೆಸರುವಾಸಿ. ಇಲ್ಲಿ ವಿಭಿನ್ನ ಧರ್ಮದ, ವಿಭಿನ್ನ ಜಾತಿಯ, ವಿಭಿನ್ನ ಭಾಷೆಯ ಜನರಿದ್ದಾರೆ. ಸಾಂಸ್ಕೃತಿಕ ವೈವಿಧ್ಯತೆ, ಜಾನಪದ, ಭೂತಾರಾಧನೆ, ಯಕ್ಷಗಾನ, ಕೋಲ, ಸಾಂತ್ ಮಾರಿ, ಉರೂಸ್, ಚರ್ಚ್, ಮಂದಿರ, ಮಸೀದಿಗಳು, ಹಿಂದೂ-ಮುಸ್ಲಿ-ಕ್ರೈಸ್ತ -ಜೈನರ ಸಹಬಾಳ್ವೆ ಇವೆಲ್ಲವೂ ಈ ನಗರದ ವಿಶೇಷತೆ .

ಕರುನಾಡ ಕನ್ನಡಿಗರಿಗೆ ಈ ನಗರ ಮಂಗಳೂರು, ಆಡು ಭಾಷೆಯಲ್ಲಿ ಮಂಗ್ಳೂರು, ತುಳುವರಿಗೆ ಕುಡ್ಲ, ಕೊಂಕಣಿಗರಿಗೆ ಕೊಡಿಯಾಳ್, ಬ್ಯಾರಿಗಳಿಗೆ ಮೈಕಲ, ಪಕ್ಕದ ಕೇರಳಿಗರಿಗೆ ಮಂಗಾಳಪುರಂ ಮತ್ತು ಯುವ ಪೀಳಿಗೆಯ ಬಾಯಲ್ಲಿ ಮ್ಯಾಂಗಲೋರ್!. ಆದ್ರೆ, ಇನ್ಮುಂದೆ ಮ್ಯಾಂಗಲೋರ್ ಮಂಗಳೂರು ಆಗಿ ಕರೆಯಲ್ಪಡುವ ಕಾಲ ಸನ್ನಿಹಿತವಾಗಿದೆ. ಕಳೆದ ವರ್ಷ ಬ್ಯಾಂಗಲೋರ್ ಬೆಂಗಳೂರು ಎಂದಾದ ಮೇಲೆ ಹೆಚ್ಚಿನ ಪತ್ರಿಕಗಳು, ಇಂಗ್ಲೀಷ್ ಚಾನೆಲ್ಗಳು ಬೆಂಗಳೂರು ಎಂದೇ ಪದ ಬಳಕೆ ಮಾಡುತ್ತಿವೆ.

ಹೀಗಿರುವಾಗ ಮ್ಯಾಂಗಲೋರ್ ಕೂಡ ಮಂಗಳೂರು ಆಗಬೇಕೆಂದು ಆಗಲೇ ಒತ್ತಾಯ ಶುರುವಾಗಿತ್ತು. ಸರಕಾರ ಆ ದಿಸೆಯಲ್ಲಿ ಕಾರ್ಯಪ್ರವೃತ್ತವಾಯಿತು. ಈ ಹೆಸರು ಬದಲಾವಣೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಕರ್ನಾಟಕ ರಾಜ್ಯದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ, ಅಂದರೆ 2006ರಲ್ಲಿ ಧರ್ಮ ಸಿಂಗ್ ಸರಕಾರ ಅಧಿಕಾರದಲ್ಲಿದ್ದಾಗ ಈ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆಯಾಗಿತ್ತು. ಇದರ ಫಲಶೃತಿಯಾಗಿ ನವೆಂಬರ್ ಒಂದರಂದು ಕರ್ನಾಟಕದ ಕೆಲವು ಊರುಗಳ ಹೆಸರುಗಳು ಸಂಪೂರ್ಣ ಕನ್ನಡೀಕರಣಗೊಳ್ಳುತ್ತಿದ್ದು ಅದರಲ್ಲಿ ಮಂಗಳೂರು ಕೂಡ ಸೇರಿದೆ. ಆ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಸರ್ಕಾರ ಹೊಸ ಕೊಡುಗೆ ನೀಡಲಿದೆ. ಕರ್ನಾಟಕದ 11 ನಗರಗಳ ಹೆಸರು ಬದಲಾವಣೆಗೆ ಸರಕಾರ ಮನಸ್ಸು ಮಾಡಿದೆ. ಚಿಕ್ಕಮಗಳೂರು ಎಂಬ ಸುಂದರ ಹೆಸರು ಇಂಗ್ಲೀಷರ ಬಾಯಲ್ಲಿ ಚಿಕ್ಮಗಲೂರ್ ಆಗಿತ್ತು. ಈಗ ಸರಕಾರ ಚಿಕ್ಮಗಲೂರ್ ಅನ್ನು ಅಧಿಕೃತವಾಗಿ ಚಿಕ್ಕಮಗಳೂರು ಎಂದು ಬದಲಾಯಿಸಿದೆ. ಬೆಳಗಾಂವ್ ಎಂಬ ಮರಾಠಿ ಹೆಸರು ಬೆಳಗಾವಿಯಾಗಿ, ಹುಬ್ಳಿ- ಹುಬ್ಬಳ್ಳಿ, ಗುಲ್ಬರ್ಗ-ಕಲಬುರ್ಗಿ, ಬೆಲ್ಲಾರಿ-ಬಳ್ಳಾರಿ, ಬಿಜಾಪೂರ್-ವಿಜಾಪುರ, ಹೊಸ್ಪೇಟ್-ಹೊಸಪೇಟೆ, ತುಮ್ಕೂರ್-ತುಮಕೂರು, ಮೈಸೂರ್-ಮೈಸೂರು, ಶಿವಮೊಗ-ಶಿವಮೊಗ್ಗ ಆಗಿ ಹೆಸರು ಬದಲಾಗಲಿದೆ.ಒಟ್ಟಿನಲ್ಲಿ ಬಹುಬೇಡಿಕೆಯಂತೆ ಮ್ಯಾಂಗ್ಲೂರ್ ಇನ್ಮುಂದೆ ಮಂಗಳೂರೆಂಬ ಅಚ್ಚ ಕನ್ನಡದಲ್ಲಿ ಕರೆಯಲ್ಪಡುತ್ತದೆ ಎಂಬ ಹೆಮ್ಮೆ ಈ ಭಾಗದ ಜನರದ್ದು.

 

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here