Friday 26th, April 2024
canara news

`ಸಂಸ್ಕಾರ ಭಾರತಿ' ಪ್ರಶಸ್ತಿಗೆ ಜಾನಪದ ಪ್ರಸೂತಿ ತಜ್ಞೆ ಕತ್ತಾಲ್‍ಸಾರ್ ಸೂಲಗಿತ್ತಿ ಆಯ್ಕೆ

Published On : 08 Jul 2017   |  Reported By : Rons Bantwal


ಮಂಗಳೂರು, ಜು.08: ಸಾಮಾಜಿಕ ಕ್ಷೇತ್ರದ ಅತಿ ಗಣ್ಯರಿಗೆ ನೀಡುತ್ತಿರುವ ವಾರ್ಷಿಕ `ಸಂಸ್ಕಾರ ಭಾರತಿ' ಪ್ರಶಸ್ತಿಗೆ ಈ ಬಾರಿ ಐದು ಮಂದಿ ಆಯ್ಕೆಯಾಗಿದ್ದು, ಪಡು ಪೆರಾರದ ಕತ್ತಾಲ್‍ಸಾರಿನ ಸೂಲಗಿತ್ತಿ (ಜಾನಪದ ಪ್ರಸೂತಿ ತಜ್ಞೆ) ಸುಂದರಿ ಶೆಟ್ಟಿ (89) ಪುರಸ್ಕಾರ ವಿಜೇತರಾದ ಒಬ್ಬ ಗಣ್ಯರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಕುಳಾಯಿಯ ಚಿತ್ರಾಪುರದ `ದ್ವಾರಕಾ' ಹೋಟೆಲ್ ಸಭಾಭವನದಲ್ಲಿ ಜುಲೈ 9ರ ಆದಿತ್ಯವಾರ ನಡೆಯಲಿದೆ. ಪ್ರಶಸ್ತಿ ಮೊತ್ತ ತಲಾ 10,000/ ರೂಪಾಯಿ ಆಗಿದ್ದು, ಇದನ್ನು ನಿಟ್ಟೆ ವಿನಯ ಹೆಗ್ಡೆ ಪ್ರಾಯೋಜಿಸಿದ್ದಾರೆ. ರಾಮ ಸಜಿಪ(ಪಂಬದ), ಅಡ್ಡೂರು ಉಪೇಂದ್ರ ಆಚಾರ್ಯ(ಸ್ವರ್ಣ ಶಿಲ್ಫಿ), ವಿಠಲ ಶೆಟ್ಟಿಗಾರ (ಯಕ್ಷ ಕಲಾವಿದ) ಮತ್ತು ಲೋಕೇಶ್ ಪೂಜಾರಿ (ದೈವ ಪಾತ್ರಿ) ಪ್ರಶಸ್ತಿಗೆ ಆಯ್ಕೆಯಾದ ಉಳಿದ ನಾಲ್ವರು ಗಣ್ಯರಾಗಿದ್ದಾರೆ.

ಸುಂದರಿ ಶೆಟ್ಟಿ :
ಬಜಪೆಗೆ ಹತ್ತಿರದ ಪಡು ಪೆರಾರದ ಕತ್ತಲ್‍ಸಾರಿನ ಸುಂದರಿ ಶೆಟ್ಟಿ ತನ್ನ ಹಳ್ಳಿ ಹಾಗೂ ಸುತ್ತಲ ಪ್ರದೇಶದಲ್ಲಿ ಸೂಲಗಿತ್ತಿಯಾಗಿ ಈಗಲೂ ಜನಪ್ರಿಯ ಮಹಿಳೆ. ಸುಮಾರು ಐದು ದಶಕ ಬಾಣಂತಿಯರ ಹೆರಿಗೆಗೆ ನೆರವಾಗುತ್ತಿದ್ದ ಶೆಟ್ಟಿ, ಜಾತಿ-ಧರ್ಮ ಲೆಕ್ಕಿಸದೆ ಈ ಕ್ಷೇತ್ರದಲ್ಲಿ ತನ್ನದೇ ಆದ ಜ್ಞಾನದ ಮೂಲಕ ಲೆಕ್ಕವಿಲ್ಲದಷ್ಟು ಮಹಿಳೆಯರಿಗೆ ನೆರವಾಗಿದ್ದಾರೆ. ಕಾರಣ ಸುಂದರಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಯಾರಾದರೂ ಬಂದು ಇವರಲ್ಲಿ ಹೇಳಿದರೆ, ಹಿಡಿದ ಕೆಲಸ ಅಲ್ಲಿಗೆಯೇ ಬಿಟ್ಟು ನಿರ್ದಿಷ್ಟ ಮನೆಗೆ ತೆರಳುತ್ತಿದ್ದರು. ಆ ಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ನಡೆಸಲು ಸಾಧ್ಯವಿಲ್ಲದ ಎಲ್ಲ ಬಡವರ ಸುಂದರಿಯವರ ಸೇವೆಯನ್ನೇ ನಂಬಿದ್ದರು. ಇವರು ತನ್ನ ಕೆಲಸಕ್ಕಾಗಿ ಹೋಗುವ-ಬರುವ ವೆಚ್ಚ ಪಡೆಯುತ್ತಿದ್ದರಷ್ಟೆ. ಅವರ ಸೇವಾವಧಿಯಲ್ಲಿ ಯಾವುದೇ ಮಹಿಳೆ ಹೆರಿಗೆ ಕಷ್ಟಕ್ಕೆ ಸಿಲುಕಿದ್ದಿಲ್ಲ. ಎಲ್ಲಾದರೂ ಸಿಕ್ಕಿದಾಗ ತಮ್ಮ ಶಾಲಾ ಶಿಕ್ಷಕರಿಗೆ ವಿದ್ಯಾರ್ಥಿಗಳು ನೀಡುವ ಗೌರವದಂತೆ, ಸುಂದರಿಯವರ ಶ್ರಮದ ಮೂಲಕ ಈ ಜಗತ್ತು ಕಂಡ ಮಕ್ಕಳು ತಾಯಿಗೆ ಸಮಾನ ಗೌರವ ನೀಡುತ್ತಾರೆ.

ಇವರಿಗೆ ನಾಲ್ವರು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ತಾಯಿ ಮೂಲಕವೇ ಸಮಾಜ ಈ ಮಕ್ಕಳನ್ನು ಗುರುತಿಸುತ್ತಿದೆ. ಇದನ್ನು ಮಕ್ಕಳೂ ಪ್ರೀತಿಪೂರ್ವಕವಾಗಿ ನೆನಪಿಸಿಕೊಳ್ಳುತ್ತಾರೆ. ಒಬ್ಬ ಪುತ್ರ ಚಿತ್ರಾಪುರದಲ್ಲಿ, ಇನ್ನೊಬ್ಬರು ಗುರುಪುರದಲ್ಲಿ ಹೋಟೆಲ್ ಉದ್ಯಮಿಯಾಗಿದ್ದಾರೆ. ತಾಯಿಯ ಬಗ್ಗೆ ಅತೀವ ಪ್ರೀತಿ ವ್ಯಕ್ತಪಡಿಸುವ ಪುತ್ರ ಜಗದೀಶ್ ಶೆಟ್ಟಿ, ಒಂದು ಘಟನೆ ಹಂಚಿಕೊಂಡಿದ್ದು ಹೀಗೆ, `ಒಂದು ಬಾರಿ ಬಜಪೆಯ ಪ್ರಸಿದ್ಧ ಪ್ರಸೂತಿ ತಜ್ಞ ಡಾ| ಗೋಪಿನಾಥ್ ಭಟ್ ಚಿಕಿತ್ಸಾಲಯದಲ್ಲಿ ಹೆರಿಗೆಗಾಗಿ ಮೂವರು ಮಹಿಳೆಯರು ಆಗಮಿಸಿದ್ದರು. ಇನ್ನೇನು ಇವರಿಗೆ ಚಿಕಿತ್ಸೆ ಮುಂದುವರಿಸ ಬೇಕು ಎನ್ನುವಷ್ಟರಲ್ಲಿ ಕಟೀಲಿನ ಆಸ್ರಣ್ಣರಿಗೆ ಅನಾರೋಗ್ಯ ಎಂಬ ಕರೆ ಬಂತು. ಆ ಹೊತ್ತಿಗೆ ಚಿಕಿತ್ಸಾಲಯದಲ್ಲಿದ್ದ ಸುಂದರಿ ಶೆಟ್ಟಿಯೊಂದಿಗೆ ಮಾತುಕತೆ ನಡೆಸಿದ ಡಾ| ಭಟ್, ಕಟೀಲಿಗೆ ಹೋಗಿ ಬರುವವರೆಗೆ ಈ ಮೂವರು ಮಹಿಳೆಯ ಉಪಚಾರ ಮಾಡಿ ಎಂದು ಸೂಚಿಸಿದರು. ಅಚ್ಚರಿಯೆಂದರೆ, ಅವರು ಕಟೀಲಿಗೆ ಹೋಗಿ ಬರುವುದರೊಳಗೆ ಅದಾಗಲೇ ನೋವು ಕಾಣಿಸಿಕೊಂಡಿದ್ದ ಆ ಮೂವರು ಮಹಿಳೆಯರಿಗೆ ಸುಲಲಿತ ಹೆರಿಗೆ ನಡೆಸಿದ್ದರು' ಎಂದರು. ಬಳಿಕ ಇವರ ಜನಪ್ರಿಯತೆ ಹೆಚ್ಚಾಗಿತ್ತು ಮತ್ತು ದೂರದ ಊರುಗಳ ಜನರಿಗೂ ಇವರು ಹೆಚ್ಚು ಆಪ್ತರಾಗಿದ್ದಾರೆ. ಕಳೆದ 10 ವರ್ಷದಿಂದ ವೃದ್ಧಾಪ್ಯದ ಕಾರಣದಿಂದ ಇವರು ಸೂಲಗಿತ್ತಿ ಸೇವೆಯಿಂದ ದೂರು ಸರಿದಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here