Friday 26th, April 2024
canara news

ಇಂಡಿಯನ್ ಕರಾಟೆ ಚಾಂಪಿಯನ್‍ಶಿಪ್-2017 (ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‍ಶಿಪ್)

Published On : 03 Nov 2017   |  Reported By : Canaranews network



ಆಯೋಜಕರು: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೊ(ರಿ.)

ದಿನಾಂಕ: 2017ರ ನವೆಂಬರ್ 4 ಮತ್ತು 5 ರಂದು

ಸ್ಥಳ: ನೆಹರು ಸ್ಪೋಟ್ರ್ಸ್ ಮೈದಾನ, ಮಂಗಳೂರು

ಇಂಡಿಯನ್ ಕರಾಟೆ ಹಬ್ಬಕ್ಕೆ ಮಂಗಳೂರು ಸಜ್ಜು 84 ಸ್ಪರ್ಧೆ, 1000ಕ್ಕೂ ಅಧಿಕ ಸ್ಪರ್ಧಿಗಳು

ಮಂಗಳೂರು: ಜಿಲ್ಲೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಇಂಡಿಯನ್ ಕರಾಟೆಯ ರಾಷ್ಟ್ರಿಯ ಮುಕ್ತ ಚಾಂಪಿಯನ್‍ಶಿಪ್ ನಗರದ ನಹೆರೂ ಮೈದಾನದಲ್ಲಿ ನಡೆಯುತ್ತಿದ್ದು, ಐತಿಹಾಸಿಕ ಟೂರ್ನಿಗೆ ಸಕಲ ಸಿದ್ಧತೆಗಳು ನಡೆದಿವೆ.

ಶನಿವಾರ ಹಾಗೂ ಭಾನುವಾರ (ನವೆಂಬರ್ 4,5) ನಡೆಯುವ ಈ ಟೂರ್ನಿಯಲ್ಲಿ ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಸಾವಿರಕ್ಕೂ ಅಧಿಕ ಕರಾಟೆ ಪಟುಗಳು ಭಾರತೀಯ ಯುದ್ಧಕಲೆಯ ಕೌಶಲಗಳನ್ನು ಪ್ರದರ್ಶಿಸಲಿದ್ದು, ಜಿಲ್ಲೆಯ ಜನತೆಗೆ ವಾರಾಂತ್ಯದಲ್ಲಿ ರೋಚಕ ಕದನ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.

ಅಂತರರಾಷ್ಟ್ರೀಯ ಚಾಂಪಿಯನ್‍ಶಿಪ್‍ಗಳಲ್ಲಿ ಚಿನ್ನದ ಪದಕ ಗೆದ್ದಿರುವ ಮೇಯರ್ ಕವಿತಾ ಸನಿಲ್ ಸೇರಿದಂತೆ ದೇಶದ ಹಲವು ಮಂದಿ ಅತ್ಯುನ್ನತ ಕರಾಟೆ ಪಟುಗಳು ಭಾಗವಹಿಸುವ ಚಾಂಪಿಯನ್‍ಶಿಪ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಿಗ್ಗೆ 9.30ಕ್ಕೆ ಉದ್ಘಾಟಿಸುವರು.

ನಾಲ್ಕು ದಶಕಗಳಿಂದ ಜಿಲ್ಲೆಯಲ್ಲಿ ಈ ಅಪೂರ್ವ ಸಮರಕಲೆಯನ್ನು ಪೋಷಿಸಿಕೊಂಡು ಬಂದ ಸೆಲ್ಫ್‍ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೋ (ರಿ) ಈ ಚಾಂಪಿಯನ್‍ಶಿಪ್ ಆಯೋಜಿಸಿದ್ದು, 2020ರ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಕರಾಟೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಚಾಂಪಿಯನ್‍ಶಿಪ್‍ಗೆ ವಿಶೇಷ ಮಹತ್ವವಿದೆ. ದೇಶದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕರಾಟೆಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚಾಂಪಿಯನ್‍ಶಿಪ್ ಮಹತ್ವದ್ದಾಗಿದೆ.

ಎಂಟು ವರ್ಷಕ್ಕಿಂತ ಕೆಳಗಿನ ಪುಟಾಣಿಗಳು, 10ರ ವಯೋಮಿತಿಯ ಪುಟಾಣಿಗಳು ಕೂಡಾ ತಮ್ಮ ಕೌಶಲವನ್ನು ಒರೆಗೆ ಹಚ್ಚಲು ಈ ಚಾಂಪಿಯನ್‍ಶಿಪ್ ಅವಕಾಶ ಕಲ್ಪಿಸಲಿದೆ. ವಿವಿಧ ಬಣ್ಣದ ಬೆಲ್ಟ್‍ನವರಿಗಾಗಿ 20 ಕೆಜಿ ತೂಕದಿಂದ ಹಿಡಿದು 65 ಕೆ.ಜಿಗಿಂತ ಮೇಲ್ಪಟ್ಟ ತೂಕದ, 10 ವರ್ಷ ಮೇಲ್ಪಟ್ಟವರಿಗೆ ಮಹಿಳಾ ವಿಭಾಗದಲ್ಲಿ ಕಾಟಾ ಹಾಗೂ ಕುಮಿಟೆ ವರ್ಗಗಳಲ್ಲಿ 11 ಸ್ಪರ್ಧೆಗಳು ನಡೆಯುತ್ತವೆ. ಪುರುಷರ ವಿಭಾಗದಲ್ಲಿ 20 ಕೆ.ಜಿ. ತೂಕದಿಂದ ಹಿಡಿದು 70 ಕೆ.ಜಿ. ಮೇಲ್ಪಟ್ಟ ತೂಕದ ವರೆಗಿನ ಸ್ಪರ್ಧಿಗಳಿಗೆ 12 ವಿಭಾಗಗಳಲ್ಲಿ ಸ್ಪರ್ಧೆಗಳಿರುತ್ತವೆ.

ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ 35 ಕೆ.ಜಿ.ಗಿಂತ ಕಡಿಮೆ ತೂಕದಿಂದ ಹಿಡಿದು 65 ಕೆ.ಜಿ.ಗಿಂತ ಅಧಿಕ ತೂಕದ ವರ್ಗದ ಮಹಿಳೆಯರಿಗೆ ಪ್ರತಿ ಐದು ಕೆ.ಜಿ. ತೂಕಕ್ಕೆ ಪ್ರತ್ಯೇಕ ವರ್ಗದಂತೆ ಎಂಟು ತೂಕವರ್ಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಪುರುಷರ ವಿಭಾಗದ ಬ್ಲ್ಯಾಕ್‍ಬೆಲ್ಟ್ ಪಟುಗಳಿಗಾಗಿ 35 ಕೆ.ಜಿ.ಗಿಂತ ಕಡಿಮೆ ತೂಕದ ವಿಭಾಗದಿಂದ ಆರಂಭವಾಗಿ 75 ಕೆ.ಜಿ. ಮೇಲ್ಪಟ್ಟ ದೇಹತೂಕದ ಸ್ಪರ್ಧಿಗಳಿಗೆ 10 ವರ್ಗಗಳಲ್ಲಿ ಪ್ರತ್ಯೇಕ ಸ್ಪರ್ಧೆಗಳಿರುತ್ತವೆ. ಇವೆಲ್ಲದರ ಜತೆಗೆ ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ಅವಕಾಶವಿರುತ್ತದೆ.

ತಂಡ ವಿಭಾಗದಲ್ಲಿ ಮೂವರ ಕಾಟಾ ತಂಡ ಹಾಗೂ ಐದು ಮಂದಿಯ ಕುಮಿಟ್ ತಂಡಗಳು ಭಾಗವಹಿಸಬಹುದು.

ಬಹುಮಾನ

ಎಲ್ಲ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಪ್ರಮಾಣಪತ್ರಗಳಿರುತ್ತವೆ. ತಂಡ ಸ್ಪರ್ಧೆಗಳಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಪ್ರಶಸ್ತಿಗಳಿವೆ. ಗ್ರ್ಯಾಂಡ್ ಚಾಂಪಿಯನ್‍ಶಿಪ್ ವಿಜೇತರಿಗೆ ಆಕರ್ಷಕ ನಗದು ಬಹುಮಾನ ಮತ್ತು ಟ್ರೋಫಿ ಇರುತ್ತದೆ. ಈ ವಿಭಾಗದಲ್ಲಿ ದ್ವಿತೀಯ ಅಥವಾ ತೃತೀಯ ಬಹುಮಾನ ಇರುವುದಿಲ್ಲ. ಚಾಂಪಿಯನ್‍ಶಿಪ್‍ನಲ್ಲಿ ಕರಾಟೆಯ ಯಾವುದೇ ಪ್ರಕಾರಗಳಲ್ಲಿ ತರಬೇತಿ ಪಡೆದವರು ಮುಕ್ತವಾಗಿ ಭಾಗವಹಿಸಬಹುದಾಗಿದೆ.

ಕರಾಟೆ ಸ್ಪರ್ಧೆಗಳಲ್ಲಿ ಇದುವರೆಗೆ ಸೋಲರಿಯದ ಬೆಂಗಳೂರಿನ ಶ್ರೀನಿವಾಸನ್ ಅವರು ಟೂರ್ನಿಯ ಮುಖ್ಯ ರೆಫ್ರಿಯಾಗಿ ಕಾರ್ಯ ನಿರ್ವಹಿಸುವರು. ಮಲೇಷ್ಯಾದ ವಸಂತನ್ ಅವರು ಇಡೀ ಟೂರ್ನಿಯ ತಾಂತ್ರಿಕ ನಿಯಂತ್ರಕರಾಗಿರುತ್ತಾರೆ. ಇಂಡಿಯನ್ ಕರಾಟೆಯ ಪಿತಾಮಹ ಗ್ರ್ಯಾಂಡ್ ಮಾಸ್ಟರ್ ಬಿ.ಎಂ.ನರಸಿಂಹನ್ ಟೂರ್ನಿಯ ಮೇಲ್ವಿಚಾರಕರಾಗಿ ಆಗಮಿಸುವರು.

ವಾರಾಂತ್ಯದಲ್ಲಿ ಕರಾವಳಿಯ ಸಾಹಸಪ್ರೇಮಿಗಳಿಗೆ ವಿಭಿನ್ನ ಹಾಗೂ ವೈವಿಧ್ಯಮಯ ಕರಾಟೆ ರಸದೌತಣ ಉಣಬಡಿಸಲು ಮಂಗಳೂರು ಸಜ್ಜಾಗಿದ್ದು, ದೇಶದ ಮೂಲೆಮೂಲೆಗಳಿಂದ ಆಗಮಿಸುತ್ತಿರುವ ಸಾವಿರಾರು ಕರಾಟೆ ಪಟುಗಳಿಗೆ ಕರಾವಳಿ ಶೈಲಿಯ ಆತಿಥ್ಯ ಒದಗಿಸಲು ಕೂಡಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಅಪೂರ್ವ ಟೂರ್ನಿಯ ನೇರ ಪ್ರಸಾರ ಹಲವು ಸ್ಥಳೀಯ ಮತ್ತು ಇತರ ಟಿವಿ ಚಾನಲ್‍ಗಳಲ್ಲಿ ಪ್ರಸಾರವಾಗಲಿದೆ.

ಕರಾವಳಿ ಮಣ್ಣಿನಲ್ಲಿ ಕರಾಟೆ ಕಲೆ

ಕರಾಟೆ ಅತ್ಯಂತ ಪ್ರಾಚೀನ ಸಮರಕಲೆಗಳಲ್ಲೊಂದು. ಭಾರತದಲ್ಲಿ ಕೂಡಾ ಪ್ರಾಚೀನ ಕಾಲದಿಂದಲೂ ಆತ್ಮರಕ್ಷಣೆಗೆ ಇದನ್ನು ಬಳಸುತ್ತಿದ್ದ ಬಗ್ಗೆ ಉಲ್ಲೇಖಗಳು ಸಿಗುತ್ತವೆ.

ಈ ಕಲೆಯನ್ನು ಸಿದ್ಧಿಸಿಕೊಂಡ ಅನೇಕ ಮಂದಿ ನಮ್ಮ ಕರಾವಳಿ ಭಾಗದಲ್ಲೂ ಇದ್ದಾರೆ. ಕರಾವಳಿಗೆ ಈ ಅಪೂರ್ವ ಯುದ್ಧಕೌಶಲ ಬಂದ ಹಿಂದೆ ಕುತೂಹಲದ ಕಥೆ ಇದೆ.

ಕರಾಟೆ ಎಂದ ತಕ್ಷಣ ಬ್ಲ್ಯಾಕ್‍ಬೆಲ್ಟ್ ಪದವಿ ಪಡೆದ ಎಷ್ಟೋ ಮಂದಿ ಇದ್ದಾರೆ ಎಂದು ಮೂಗು ಮುರಿಯಬಹುದು. ಆದರೆ ಕರಾಟೆಯಲ್ಲಿ ವೈವಿಧ್ಯಮಯ ಪ್ರಕಾರಗಳಿವೆ.

ಡಕಾನ್, ಶೊಟಕಾನ್, ಶಿಟಿರಿಯಾ, ಮಲೇಷ್ಯನ್ ಬುಡಕಾನ್, ಆಸ್ಟ್ರೇಲಿಯನ್ ಬುಡಕಾನ್, ಥೈಕಂಡೊ, ಮುಥಾಯಿ ಹೀಗೆ ಹಲವು ಶಾಖೆಗಳಿದ್ದರೂ, ಭಾರತೀಯ ಕರಾಟೆ ಅಥವಾ ಇಂಡಿಯನ್ ಕರಾಟೆಗೆ ವಿಶಿಷ್ಟ ಸ್ಥಾನವಿದೆ. ಅತ್ಯಂತ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಬೇಡುವ ಇಂಡಿಯನ್ ಕರಾಟೆಯಲ್ಲಿ ಪ್ರಾವೀಣ್ಯ ಸಾಧಿಸುವುದು ಸುಲಭದ ಮಾತಲ್ಲ. ನಮ್ಮ ಜಿಲ್ಲೆಯ ಕರಾಟೆ ಕ್ಷೇತ್ರವನ್ನು ತೆಗೆದುಕೊಂಡರೆ ಇತರ ಪ್ರಕಾರಗಳಲ್ಲಿ ಬ್ಲ್ಯಾಕ್‍ಬೆಲ್ಟ್ ಪಡೆದವರು ಸಾವಿರಾರು ಮಂದಿ ಇದ್ದರೆ, ಇಂಡಿಯನ್ ಕರಾಟೆಯಲ್ಲಿ ಈ ಗೌರವಕ್ಕೆ ಪಾತ್ರರಾಗಿರುವವರು ಎರಡು ಡಜನ್ ಮಂದಿ ಮಾತ್ರ. ಬದ್ಧತೆ, ಅರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮದಿಂದ ಇಂಡಿಯನ್ ಕರಾಟೆ ಕಲಿತರೆ ಬ್ಲ್ಯಾಕ್ ಬೆಲ್ಟ್ ಗೌರವ ಸಂಪಾದಿಸಬೇಕಾದರೆ ಕನಿಷ್ಠ ಎಂಟರಿಂದ ಹತ್ತು ವರ್ಷ ಬೇಕಾಗುತ್ತದೆ. ಇತರ ಪ್ರಕಾರಗಳಲ್ಲಿ 3-4 ವರ್ಷಕ್ಕೂ ಬ್ಲ್ಯಾಕ್‍ಬೆಲ್ಟ್ ಸಿಗುತ್ತದೆ.

ಜಿಲ್ಲೆಯಲ್ಲಿ ಇತರ ಪ್ರಕಾರಗಳ ಕರಾಟೆ ಬೋಧಿಸುತ್ತಿರುವವರು ಕೂಡಾ ಒಂದಲ್ಲ ಒಂದು ಕಾಲದಲ್ಲಿ ಇಂಡಿಯನ್ ಕರಾಟೆಯ ಹಿನ್ನೆಲೆಯಿಂದಲೇ ಬಂದವರು ಎನ್ನುವುದು ಈ ಕರಾಟೆಯ ಶ್ರೇಷ್ಠತೆಗೆ ಸಾಕ್ಷಿ.

ಇಂಡಿಯನ್ ಕರಾಟೆಯ ಗ್ರಾಂಡ್‍ಮಾಸ್ಟರ್ ಮಾರ್ಗದರ್ಶನದಲ್ಲಿ 1976-77ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಕಲೆ ಕಾಲಿಟ್ಟಿತು. ಕ್ವಾಲಿಟಿ ಹೋಟೆಲ್‍ನ ಮೇಲೆ ಮೊಟ್ಟಮೊದಲ ಕರಾಟೆ ತರಬೇತಿ ಆರಂಭವಾಯಿತಿಇ. ಸದಾನಂದ ಶೆಟ್ಟಿಯವರು ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೊ (ರಿ) ಸಂಸ್ಥಾಪಕ ಅಧ್ಯಕ್ಷರಾಗಿ ಅಂದಿನಿಂದ ಇಂದಿನವರೆಗೂ ಜಿಲ್ಲೆಯಲ್ಲಿ ಕರಾಟೆ ಕಾರ್ಯಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ.

ಮೋಹನ್, ಅಂಥೋನಿ ಪಾಲ್, ಜನಾರ್ದನ ನಾಯಕ್ ಅವರು ಆರಂಭಿಕ ವರ್ಷಗಳಲ್ಲಿ ಜಿಲ್ಲೆಯಲ್ಲಿ ಇಂಡಿಯನ್ ಕರಾಟೆ ಜನಪ್ರಿಯಗೊಳಿಸಲು ಶ್ರಮಿಸಿದರು. ಇವರ ಗರಡಿಯಲ್ಲಿ ಪಳಗಿದ ರಂಜನ್ ಪೂಂಜಾ, ಅರೂನ್ ನಾಯಕ್, ತೇಜೋಮಯಿ, ಡಾ.ದೇವಿಪ್ರಸಾದ್ ಶೆಟ್ಟಿಯವರಂಥ ಅಪೂರ್ವ ಕರಾಟೆಪಟುಗಳು ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದರು. ಬೆಂಗಳೂರಿನಲ್ಲಿ ಇಂಡಿಯನ್ ಕರಾಟೆ ತರಬೇತಿ ಪಡೆದ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಅರುಣ್ ಭಂಡಾರಿ ಸತತ 10 ವರ್ಷ ಕಾಲ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು ಎನ್ನುವುದು ಜಿಲ್ಲೆಗೆ ಹೆಮ್ಮೆಯ ವಿಷಯ.

1980ರ ದಶಕದಲ್ಲಿ ಜಿಲ್ಲೆಯಲ್ಲಿ ಕರಾಟೆ ಪಟುಗಳ ದೊಡ್ಡ ಪಡೆಯೇ ನಿರ್ಮಾಣವಾಯಿತು. ಸುರೇಂದ್ರ ಅವರ ಮಾರ್ಗದರ್ಶನದಲ್ಲಿ ಸುರೇಶ್, ಈಶ್ವರ ಕಟೀಲ್, ಕವಿತಾ ಸನಿಲ್, ಕಿಶೋರ್ ಶೆಟ್ಟಿ, ರಾಜೇಶ್ ಆಚಾರ್, ಸೌರಭ್, ನಿಹಾರ ಹೀಗೆ ಸಂಸ್ಥೆಯಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರೂ ರಾಷ್ಟ್ರಮಟ್ಟದ ಕೂಟಗಳಲ್ಲಿ ಮಿಂಚಿದರು. ಕವಿತಾ ಸನಿಲ್ ಅವರಂತೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿ ಗೆದ್ದು, ಕಡಲತಡಿಯ ಕೀರ್ತಿ ಪತಾಕೆಯನ್ನು ವಿದೇಶಗಳಲ್ಲೂ ಹಾರಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.

ಇಂಡಿಯನ್ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ಜಿಲ್ಲೆಯ ಗಣ್ಯರೆಂದರೆ, ಸುರೇಂದ್ರ, ಸುರೇಶ್ ಶೆಟ್ಟಿ, ಈಶ್ವರ್ ಕಟೀಲ್, ಕಿಶೋರ್ ಶೆಟ್ಟಿ, ರಾಜೇಶ್ ಆಚಾರ್, ಸುಧೀರ್ ಕೂಳೂರು, ರಾಜೇಶ್ ನೆತ್ತರ್, ಸೌರಭ್ ಚಿಪ್ಳೂಣ್‍ಕರ್, ಬಿಪಿನ್‍ರಾಜ್ ರೈ, ಸಚಿನ್‍ರಾಜ್ ರೈ, ಮನೀಶ್ ಆಚಾರ್, ಪ್ರದ್ಯುತ್ ದನುಷ್, ನಿಹಾರಾ, ಕವಿತಾ ಸನಿಲ್, ರವಿರಾಜ್ ಆಚಾರ್, ಕೃಷ್ಣಪ್ರಸಾದ್ ಖಂಡಿಗೆ, ಕೇಶವ್, ದಿನೇಶ್, ಜಯಪ್ರಕಾಶ್, ಜಯಾ, ಸೂರಜ್, ಧೀರಜ್ ಹಾಗೂ ಮತ್ತಿತರರು.

=====================
ಬೆಲ್ಟ್ ಪದವಿ
ಇಂಡಿಯನ್ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆಯುವ ಮುನ್ನ ಹದಿನಾರು ಹಂತಗಳನ್ನು ಅಭ್ಯರ್ಥಿ ದಾಟಬೇಕಾಗುತ್ತದೆ. ಆರಂಭದಲ್ಲಿ ಬಿಳಿ ಬೆಲ್ಟ್, ಹಳದಿ, ಹಸಿರು-2 ಹಾಗೂ 1, ಕಿತ್ತಳೆ-2 ಹಾಗೂ 1, ನೀಲಿ-2 ಹಾಗೂ 1, ನೇರಳೆ- 4,3,2,1, ಕಂದು- 4,3,2,1 ಹಂತಗಳನ್ನು ದಾಟಿ ಕಪ್ಪು ಬೆಲ್ಟ್ ಪಡೆಯುತ್ತಾರೆ. ಕಪ್ಪುಬೆಲ್ಟ್ ಪಡೆದ ವ್ಯಕ್ತಿಗೆ ಒಂದು ವರ್ಷ ಕಾಲ ಪ್ರೊಬೆಷನರಿ ಅವಧಿ ಇದ್ದು, ಈ ಹಂತದಲ್ಲಿ ಯಾವುದೇ ಗಂಭೀರ ಆರೋಪಗಳು ಬಂದರೆ ಬ್ಲ್ಯಾಕ್ ಬೆಲ್ಟ್ ಸ್ಥಗಿತಗೊಳಿಸಲಾಗುತ್ತದೆ.

ಪ್ರತಿ ಆರು ತಿಂಗಳಿಗೊಮ್ಮೆ ಕರಾಟೆ ಪರೀಕ್ಷೆ ನಡೆಯುತ್ತದೆ. ಗ್ರಾಂಡ್‍ಮಾಸ್ಟರ್ ಸ್ವತಃ ಆಗಮಿಸಿ, ಅಭ್ಯರ್ಥಿಗಳ ಕೌಶಲಗಳನ್ನು ಮೌಲ್ಯಮಾಪನ ಮಾಡಿ ಬೆಲ್ಟ್ ನೀಡುತ್ತಾರೆ.
====================
ಎಲ್ಲೆಲ್ಲಿ ತರಬೇತಿ?
ನಗರದ ಮಧುಸೂಧನ ಕುಶೆ ಶಾಲೆ ಹಾಗೂ ಗುಜರಾತ್ ಶಾಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಕುಶೆ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಕರಾಟೆ ಕಲಿಯುವುದು ಕಡ್ಡಾಯ. ಆದರೆ ಬಾಲಕಿಯರು ಇನ್ನೂ ಕರಾಟೆ ಕಲಿಯಲು ಮುಂದೆ ಬರುತ್ತಿಲ್ಲ.

ಬಂದರೂ ಅರ್ಧದಿಮದ ವಾಪಸ್ಸಾಗುತ್ತಾರೆ. ಕವಿತಾ ಸನಿಲ್ ಅವರಂತೆ ಬ್ಲ್ಯಾಕ್‍ಬೆಲ್ಟ್‍ವರೆಗೆ ಬಾಲಕಿಯರು ತಲುಪಿದ ನಿದರ್ಶನ ವಿರಳಾತಿವಿರಳ. ಇಂದಿಗೂ ಇಡೀ ಭಾರತದಲ್ಲಿ ಇಂಡಿಯನ್ ಕರಾಟೆಯಲ್ಲಿ ಬ್ಲ್ಯಾಕ್‍ಬೆಲ್ಟ್ ಪಡೆದ ಮಹಿಳೆಯರ ಸಂಖ್ಯೆ ಕೇವಲ ಮೂರು!
======================
ತರಬೇತಿ ದುಬಾರಿಯೇ?
ಖಂಡಿತಾ ಅಲ್ಲ. ತಿಂಗಳಿಗೆ 250 ರೂಪಾಯಿ ಶುಲ್ಕ ಹಾಗೂ 1000 ರೂಪಾಯಿ ಪ್ರವೇಶ ಮತ್ತು ಕರಾಟೆ ಡ್ರೆಸ್ ಶುಲ್ಕ ಪಾವತಿಸಿ ಯಾರೂ ಕರಾಟೆ ಕಲಿಯಲು ಅವಕಾಶವಿದೆ. ಗುಜರಾತಿ ಶಾಲೆಯಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 6.30ರಿಂದ 9ರವರೆಗೆ ತರಬೇತಿ ನಡೆಯುತ್ತದೆ.
=======================
ಅಪೂರ್ವ ಟೂರ್ನಿ
ಇಂಡಿಯನ್ ಕರಾಟೆ ಚಾಂಪಿಯನ್‍ಶಿಪ್ ಈ ತಿಂಗಳ 4 ಹಾಗೂ 5ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಎರಡು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದು ಕರಾಟೆಯ ರೋಚಕ ಅನುಭವ ನೀಡುವ ಜತೆಗೆ ಉತ್ಸಾಹಿ ತರುಣರಿಗೆ ಸ್ಫೂರ್ತಿಯಾಗಲಿದೆ. 84 ಸ್ಪರ್ಧೆಗಳು ಈ ಟೂರ್ನಿಯಲ್ಲಿ ನಡೆಯಲಿವೆ.
=================================
ಸಂಪರ್ಕ
ಕರಾಟೆ ಕಲಿಯಲು ಆಸಕ್ತರು ಮುಖ್ಯಬೋಧಕ ಸುರೇಂದ್ರ (9448549521) ಅವರನ್ನು ಸಂಪಕಿಸಬಹುದು.
===============

ಟೂರ್ನಿ ವೈಶಿಷ್ಠ್ಯಗಳು
• ಪುರುಷ ಮತ್ತು ಮಹಿಳೆಯರಿಗಾಗಿ ಗ್ರಾಂಡ್ ಚಾಂಪಿಯನ್‍ಶಿಪ್- ಅಂತರರಾಷ್ಟ್ರೀಯ ಗುಣಮಟ್ಟದ ಸೆಚಿಟ್ರಲ್ ಬೌಟ್/ರಿಂಗ್.
• ಸಾಂಪ್ರದಾಯಿಕ ಪದಕ ಮತ್ತು ಪ್ರಮಾಣಪತ್ರದೊಂದಿಗೆ ಆಕರ್ಷಕ ಟ್ರೋಫಿ ಹಾಗೂ ಬಹುಮಾನಗಳು.
• ಚಾಂಪಿಯನ್‍ಶಿಪ್ ಆವರಣದ ಸುತ್ತ ಮತ್ತು ಸೆಂಟರ್‍ಬೌಟ್‍ನ ಮೇಲೆ ಎಲ್‍ಇಡಿ ವ್ಯವಸ್ಥೆ.
• ಎಲೆಕ್ಟ್ರಾನಿಕ್ ಸ್ಕೋರ್ ಡಿಸ್‍ಪ್ಲೇ (ಅಂಕ ಫಲಕ)
• ಒಲಿಂಪಿಕ್ಸ್‍ಗೆ ಕರಾಟೆ- 2020ರ ಜಪಾನ್ ಒಲಿಂಪಿಕ್ಸ್‍ನಲ್ಲಿ ಕರಾಟೆ ಮೊಟ್ಟಮೊದಲ ಬಾರಿಗೆ ಸೇರ್ಪಡೆಯಾಗಲಿದೆ.
• ಸ್ಥಳೀಯ ಮತ್ತು ಇತರ ಚಾನಲ್‍ಗಳಲ್ಲಿ ನೇರ ಪ್ರಸಾರ (ಕರ್ನಾಟಕವನ್ನು ಜಾಗತಿಕ ವೇದಿಕೆಯಲ್ಲಿ ಬಿಂಬಿಸುವ ಅಪೂರ್ವ ಅವಕಾಶ ಮತ್ತು ದೇಶದ ಅತ್ಯುತ್ತಮ ವ್ಯವಸ್ಥೆನ್ನು ನಮ್ಮ ತಾಯ್ನಾಡಿಗೆ ತರುವ ಪ್ರಯತ್ನ).
• ಎಲ್ಲ ವಯೋಮಿತಿಯವರಿಗೆ ಅವಕಾಶ. 6 ವರ್ಷದಿಂದ ಹಿಡಿದು ಪುರುಷ, ಮಹಿಳೆ, ಬಾಲಕ & ಬಾಲಕಿಯರಿಗೆ ಅವಕಾಶ.
• ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಗಳು.

 

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here