Friday 26th, April 2024
canara news

ಧರ್ಮಸ್ಥಳದಲ್ಲಿ: ಯುವಾ ಬ್ರಿಗೇಡ್ ಕಾರ್ಯಕರ್ತರಿಂದ ನೇತ್ರಾವತಿ ನದಿ ಸ್ನಾನಘಟ್ಟದಲ್ಲಿ ಸ್ವಚ್ಛತಾ ಅಭಿಯಾನ

Published On : 04 Jun 2018   |  Reported By : Rons Bantwal


ಉಜಿರೆ: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ, ಅಸಂಖ್ಯಾತ ರೈತರ ಆಶಾಕಿರಣ. ಸಹಸ್ರಾರು ಭಕ್ತರ ಪಾಲಿಗೆ ಪಾಪನಾಶಿನಿ. ಬೆಂಗಳೂರಿನ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಭಾನುವಾರ ಬೆಳಿಗ್ಯೆ ಆರು ಗಂಟೆಯಿಂದ ಸಂಜೆ ಆರು ಗಂಟೆ ವರೆಗೆ ರಾಜ್ಯದೆಲ್ಲೆಡೆಯಿಂದ ಬಂದ 500ಕ್ಕೂ ಮಿಕ್ಕಿ ಕಾರ್ಯಕರ್ತರು ನದಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಸ್ವತಃ ಚಕ್ರವರ್ತಿ ಸೂಲಿಬೆಲೆ ನದಿ ನೀರಿಗೆ ಇಳಿದು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ನದಿ ನೀರಿನಲ್ಲಿ ಏನೆಲ್ಲ ಸಿಕ್ಕಿವೆ?: ತೆಂಗಿನ ಕಾಯಿ, ಸ್ನಾನ ಮಾಡಿ ಬಿಸಾಡಿದ ಬಟ್ಟೆಗಳು, ದೇವರ ಫೋಟೊಗಳು, ಸಾಬೂನು, ಕನ್ನಡಿ, ಬಾಚಣಿಕೆ, ಟೂತ್ ಬ್ರಶ್, ಚಪ್ಪಲಿಗಳು, ಮಕ್ಕಳ ಆಟಿಕೆಗಳು, ಇತ್ಯಾದಿ.

ಯುವಾ ಬ್ರಿಗೇಡ್ ಕರೆ: ಸ್ನಾನ ಮಾಡುವ ನೆಪದಲ್ಲಿ, ವಿಭಿನ್ನ ಆಚರಣೆಗಳ ಹಿನ್ನೆಲೆಯಲ್ಲಿ ಮೂಢ ನಂಬಿಕೆಯಿಂದ ನಾವೆಲ್ಲ ನೇತ್ರಾವತಿ ನದಿಯನ್ನು ಕಲುಷಿತಗೊಳಿಸಿದ್ದೇವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಹಾಗೂ ಅನುಮತಿಯೊಂದಿಗೆ ನಾವು ಇಂದು ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ ಮಾಡಿದ್ದೇವೆ. ದಯ ಮಾಡಿ ನದಿಯನ್ನು ಎಂದಿಗೂ ಕಲುಷಿತಗೊಳಿಸಬೇಡಿ, ಕೊಳಕು ಮಾಡಬೇಡಿ ಎಂದು ಯುವಾ ಬ್ರಿಗೇಡ್ ಕಾರ್ಯಕರ್ತರು ಭಕ್ತರಿಗೆ ಕರೆ ನೀಡಿದ್ದಾರೆ.

ಅನಿಸಿಕೆಗಳು, ಅಭಿಪ್ರಾಯಗಳು: ಹೊಸಪೇಟೆಯ ಖಾಸಗಿ ಕಂಪೆನಿ ಉದ್ಯೋಗಿ ಚಂದ್ರಶೇಖರ ಹೇಳುವಂತೆ ಇಂತಹ ಸೇವಾಕಾರ್ಯ ನಮಗೆ ಸಂತಸ ತಂದಿದೆ. ಪರಿಸರ ಸಂರಕ್ಷಣೆಯೊಂದಿಗೆ ಜಲ ಸಂರಕ್ಷಣೆಯೂ ನಮ್ಮೆಲ್ಲರ ಹೊಣೆಯಾಗಿದೆ. ಇಂತಹ ಕೆಲಸದಿಂದ ಮುಂದಿನ ಪೀಳಿಗೆಗೂ ನಾವು ಮಾರ್ಗದರ್ಶನ, ಪ್ರೇರಣೆ ನೀಡಿದಂತಾಗುತ್ತದೆ.

ಶಿವಮೊಗ್ಗಾದ ಕಾಲೇಜು ವಿದ್ಯಾರ್ಥಿನಿ ಅಂಕಿತಾ, ಸಮಾಜ ಸೇವಕಿ ಭಾಗೀರತಿ ಮತ್ತು ಸ್ನೇಹಾ ಹೇಳುವಂತೆ ಇಂತಹ ಸೇವಾ ಕಾರ್ಯಗಳು ನಮಗೆ ಹೆಚ್ಚಿನ ಉತ್ಸಾಹ ನೀಡುತ್ತವೆ. ಜಾತಿ-ಮತ ಬೇಧವಿಲ್ಲದೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಭಾಗವಹಿಸುವುದರಿಂದ ಸಮಾಜದ ಸಂಘಟನೆಯೊಂದಿಗೆ ಕೋಮು ಸಾಮರಸ್ಯ ಉಂಟಾಗುತ್ತದೆ.

ಯುವಾ ಬ್ರಿಗೇಡ್ ಕಾರ್ಯಕರ್ತ ಮಂಗಳೂರಿನ ಶರತ್ ಹೇಳುವಂತೆ ಭಕ್ತರು ಮೂಢನಂಬಿಕೆಯಿಂದ ಬಟ್ಟೆ, ತೆಂಗಿನ ಕಾಯಿ, ದೇವರ ಫೋಟೋಗಳನ್ನು ನದಿಗೆ ಎಸೆಯುತ್ತರೆ. ಅರ್ಚಕರು ಹಾಗೂ ಜೋತಿಷಿಗಳು ಸಕಾಲಿಕ ಮಾಹಿತಿ, ಮಾರ್ಗದರ್ಶನದಿಂದ ಇದನ್ನು ತಡೆಗಟ್ಟಬಹುದು.

ಯುವಾ ಬ್ರಿಗೇಡ್ ರಾಜ್ಯ ಸಂಚಾಲಕರಾದ ಬೆಂಗಳೂರಿನ ಚಂದ್ರಶೇಖರ್, ರಾಜ್ಯದ ಅನೇಕ ಕಡೆಗಳಲ್ಲಿ ನದಿಗಳು ಹಾಗೂ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರಿಂದಾಗಿ ಗದಗದಲ್ಲಿ ಬತ್ತಿ ಹೋದ ಕೆರೆಯಲ್ಲಿ ಈಗ ನೀರಿನ ಮಟ್ಟ ಏರಿಕೆಯಾಗಿದೆ ಎಂದು ಹೇಳಿದರು. ರಾಜ್ಯದೆಲ್ಲೆಡೆ ಯುವಾ ಬ್ರಿಗೇಡ್‍ನ ಮೂರು ಸಾವಿರ ಕಾರ್ಯಕರ್ತರು ನದಿಗಳ ಸ್ವಚ್ಛತಾ ಅಭಿಯಾನದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಸರ್ಕಾರ ಕಡ್ಡಾಯ ಆದೇಶ ನೀಡಬೇಕು,. (ಬಾಕ್ಸ್ ಐಟಂ)

ಸ್ನಾನ ಮಾಡಿ ನದಿ ನೀರಿನಲ್ಲೆ ಬಟ್ಟೆ ಒಗೆಯುವುದರಿಂದ, ತ್ಯಾಜ್ಯಗಳನ್ನು ಹಾಕುವುದರಿಂದ ಪಾವಿತ್ರ್ಯಕ್ಕೆ ಧಕ್ಕೆಯಾಗುವುದಲ್ಲದೆ ಅನಾರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ತೀರ್ಥಕ್ಷೇತ್ರದಲ್ಲಿರುವ ನದಿಗಳಲ್ಲಿ ಬಟ್ಟೆ ಒಗೆಯದಂತೆ ಸರ್ಕಾರವೆ ಕಡ್ಡಾಯ ಕಾನೂನು ಜಾರಿ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

ಯುವಾ ಬ್ರಿಗೇಡ್ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದ ಅವರು ಭಕ್ತರು ಕೂಡಾ ಮೂಢನಂಬಿಕೆಗೆ ಒಳಗಾಗದೆ ಎಚ್ಚರಿಕೆ ಮತ್ತು ಹೊಣೆಗಾರಿಕೆಯಿಂದ ನದಿಯ ಪಾವಿತ್ರ್ಯ ಕಾಪಾಡಬೇಕು. ಇದು ರಾಷ್ಟ್ರ ವ್ಯಾಪಿ ಆಂದೋಲನವಾಗಬೇಕು ಎಂದು ಅವರು ಸಲಹೆ ನೀಡಿದರು.

ಶಾಲಾ-ಕಾಲೇಜುಗಳಲ್ಲಿರುವ ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು ಕೂಡಾ ಸ್ವಚ್ಛತೆ ಮತ್ತು ಪಾವಿತ್ರ್ಯತೆ ಕಾಪಾಡುವ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.

ಧರ್ಮಸ್ಥಳ ದೇವಸ್ಥಾನದ ವತಿಯಿಂದ ಕಾರ್ಯಕರ್ತರಿಗೆಲ್ಲ ಉಚಿತ ಊಟ, ವಸತಿ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಯಿತು.

ಮುಖ್ಯಾಂಶಗಳು:
• ಮೂಢನಂಬಿಕೆಯಿಂದ ನದಿಗೆ ತೆಂಗಿನಕಾಯಿ, ದೇವರ ಫೋಟೊ ಬಿಸಾಡಬಾರದು.
• ದೇವಸ್ಥಾನದ ವತಿಯಿಂದ ಸ್ನಾನಘಟ್ಟದಲ್ಲಿ ಸ್ವಚ್ಛತೆ ಕಾಪಾಡಲು ವ್ಯವಸ್ಥೆ ಮಾಡಿದ್ದರೂ, ಭಕ್ತರು ಅದನ್ನು ಪಾಲಿಸದಿರುವುದು ಖೇದಕರವಾಗಿದೆ.
• ನದಿಯಲ್ಲಿ ಸ್ನಾನ ಮಾಡಿ ಅಲ್ಲಿಯೇ ಬಟ್ಟೆ ಒಗೆಯುವುದರಿಂದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ.
• ನೌಕರರು, ಮಹಿಳೆಯರು, ವಿದ್ಯಾರ್ಥಿಗಳು – ಜಾತಿ-ಮತ ಬೇಧವಿಲ್ಲದೆ ಸ್ವಚ್ಛತಾ ಅಭಿಪಯಾನದಲ್ಲಿ ಭಾಗವಹಿಸಿದರು.
• 150ಕ್ಕೂ ಹೆಚ್ಚು ಕೆರೆಗಳನ್ನು ಸ್ವಚ್ಛಗೊಳಿಸಿದ್ದು, ನೀರಿನ ಮಟ್ಟ ಏರಿಕೆಯಾಗಿದೆ.
• ನದಿ ಸ್ವಚ್ಛತಾ ಅಭಿಯಾನ ಪುಣ್ಯದ ಕೆಲಸ.
• 500ಕ್ಕೂ ಮಿಕ್ಕಿ ಯುವಾ ಬ್ರಿಗೇಡ್ ಕಾರ್ಯಕರ್ತರು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
• ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ ಕೂಡಾ ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿದರು.
• ನದಿ ನೀರಿಗೆ ಬಟ್ಟೆ ಎಸೆಯುವುದರಿಂದ ಪುಣ್ಯಕ್ಕಿಂತ ಜಾಸ್ತಿ ಪಾಪ ಸಂಚಯವಾಗುತ್ತದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here