Wednesday 8th, May 2024
canara news

ಧರ್ಮಸ್ಥಳದಲ್ಲಿ ಸ್ವಚ್ಛತಾ ಸೇನಾನಿಗಳಿಗೆ ತರಬೇತಿ ಕಾರ್ಯಾಗಾರ

Published On : 11 Oct 2018   |  Reported By : Rons Bantwal


ನಾಗರಿಕ ಪ್ರಜ್ಞೆಯೊಂದಿಗೆ ಜೀವನ ಶೈಲಿಯಲ್ಲಿ ಸುಧಾರಣೆ ಆಗಬೇಕು : ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ

ಉಜಿರೆ: ಜನಸಂಖ್ಯಾ ನಿಯಂತ್ರಣದೊಂದಿಗೆ ಕಳೆದ ಅರುವತ್ತು ವರ್ಷಗಳಲ್ಲಿ ಭಾರತದಲ್ಲಿ ಅದ್ಭುತ ಪ್ರಗತಿಯಾಗಿದೆ. ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆಯಲ್ಲಿ ನಮ್ಮ ದೇಶವು ಜಾಗತಿಕಮಟ್ಟದಲ್ಲಿ ವಿದೇಶಗಳೊಂದಿಗೆ ಸ್ಪರ್ಧಿಸುವ ಅರ್ಹತೆ ಹೊಂದಿದೆ. ಸುಂದರ ಬದುಕು ಹಾಗೂ ಸುಖೀ ಜೀವನಕ್ಕಾಗಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಸಾಮಾಜಿಕ ಕಾಳಜಿ ಹಾಗೂ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು, ನಮ್ಮ ಜೀವನ ಶೈಲಿಯಲ್ಲಿ ಸುಧಾರಣೆಯಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವಚ್ಛತಾ ಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾದ ಸ್ವಚ್ಛತಾ ಸೇನಾನಿಗಳಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಿದೇಶಗಳಲ್ಲಿ ವಿಮಾನದಲ್ಲಿ, ಹೋಟೆಲ್‍ಗಳಲ್ಲಿ, ಶೌಚಾಲಯಗಳಲ್ಲಿ ಸ್ವಚ್ಛತೆ ಹಾಗೂ ಜನರ ನಾಗರಿಕ ಪ್ರಜ್ಞೆಯನ್ನು ಶ್ಲಾಘಿಸಿದ ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ನಾವು ಎದುರಿಸಬೇಕಾದರೆ ಸಾಮಾಜಿಕ ಕಳಕಳಿ, ಬದ್ಧತೆ ಹಾಗೂ ಹೊಣೆಗಾರಿಕೆಯನ್ನು ಹೊಂದಿರಬೇಕು. ಕರ್ತವ್ಯ ಪ್ರಜ್ಞೆಯೊಂದಿಗೆ, ನಮ್ಮ ಜೀವನ ಶೈಲಿಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ ಜ್ಞಾನದೀಪ ಮತ್ತು ಜ್ಞಾನವಿಕಾಸ ರ್ಕಾಕ್ರಮದಡಿಯಲ್ಲಿ ಮಹಿಳಾ ಸಬಲೀಕರಣವಾಗಿದೆ. ಮಹಿಳೆಯರು ಕೂಡಾ ಇಂದು ವ್ಯವಹಾರ ತಜ್ಞರಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.

ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ. ಶುಭಾಶಂಸನೆ ಮಾಡಿ, ವೈಯಕ್ತಿಕ ಸ್ವಚ್ಛತೆಯೊಂದಿಗೆ ಮನೆಯಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಸ್ವಚ್ಛತೆ ಕಾಪಾಡಬೇಕು. ತ್ಯಾಜ್ಯ ನಿರ್ವಹಣೆ ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.

ಹೇಮಾವತಿ ವಿ. ಹೆಗ್ಗಡೆ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಮಡಂತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಅಂಡಿಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ ಅಂಡಿಂಜೆ ಮತ್ತು ಹೊಸಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ವಸಂತ್ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್.ಮಂಜುನಾಥ್ ಸ್ವಾಗತಿಸಿದರು. ಯೋಜನಾಧಿಕಾರಿ ಜಯಕರ ಶೆಟ್ಟಿ ಧನ್ಯವಾದವಿತ್ತರು. ಶ್ರೀನಿವಾಸ್‍ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು:

1. ಗ್ರಾಮ ಮಟ್ಟದಲ್ಲಿ ಸ್ವಚ್ಛತೆ ಕಾಪಾಡಲು ಸ್ಥಳೀಯ ಸ್ವಯಂ ಸೇವಕರ ತಂಡ (ಸೇನಾನಿಗಳು) ರಚನೆ.
2. ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ “ಸ್ವಚ್ಛತಾಜಾಗೃತಿ ವೇದಿಕೆ” ಯನ್ನು ಮುಂದೆ ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು.
3. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 124 ಕೆರೆಗಳ ಹೂಳೆತ್ತಿ ಸ್ವಚ್ಛ ಗೊಳಿಸಲಾಗಿದೆ.
4. ನೂರು ಮಂದಿ ಸ್ವಚ್ಛತಾ ಸೇನಾನಿಗಳಿಗೆ ತರಬೇತಿ.
5. ಕಳೆದ ಮೂರು ವರ್ಷಗಳಿಂದ ಮಕರ ಸಂಕ್ರಾಂತಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ.
6. ಸೇನಾನಿಗಳಿಗೆ ಸ್ವಚ್ಛತಾ ಪರಿಕರಗಳನ್ನು ವಿತರಿಸಲಾಯಿತು.
7. ನಮ್ಮ ನಡಿಗೆ, ಸ್ವಚ್ಛತೆ ಕಡೆಗೆ.
8. ನಾವು ಇರುವ ಭೂಮಿ ಹಾಗೂ ಪ್ರಶಾಂತ ಪರಿಸರವನ್ನು ಮುಂದಿನ ಜನಾಂಗಕ್ಕೆ ಸುಸ್ಥಿತಿಯಲ್ಲಿ ಬಿಟ್ಟು ಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

 

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here