Wednesday 8th, May 2024
canara news

ಧರ್ಮೋತ್ಥಾನ ಟ್ರಸ್ಟ್ ವತಿಯಿಂದ 241 ಸ್ಮಾರಕ ರಕ್ಷಣೆ

Published On : 12 Oct 2018   |  Reported By : Rons Bantwal


ಪರಂಪರೆಯ ಪುನರುತ್ಥಾನದ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಾಧಿಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 1991ರಲ್ಲಿ ಸ್ಥಾಪನೆಗೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಈವರೆಗೆ 241 ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಪುರಾತನ ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ರೂ.27.00 ಕೋಟಿಗಳ ವೆಚ್ಚದಲ್ಲಿ ಕೈಗೊಂಡಿದೆ.

ಧರ್ಮೋತ್ಥಾನ ಟ್ರಸ್ಟ್ ಈತನಕ ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯ ಸಹಭಾಗಿತ್ವದೊಂದಿಗೆ ವಾರ್ಷಿಕ ಕ್ರಿಯಾಯೋಜನೆಯಡಿಯಲ್ಲಿ ಕಳೆದ 15 ವರ್ಷಗಳಿಂದ 25 ಜಿಲ್ಲೆಗಳ ವ್ಯಾಪ್ತಿಯಲ್ಲಿ 170 ಪುರಾತನ ದೇವಾಲಯಗಳ ಜೀರ್ಣೋದ್ದಾರ ಕಾರ್ಯ ಕೈಗೊಂಡಿದೆ.

ಸರ್ಕಾರೇತರ ಸಾರ್ವಜನಿಕ ಸಂಸ್ಥೆಯಾದ ಜೆ.ಎಸ್.ಡಬ್ಲ್ಯೂ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ 2 ದೇವಸ್ಥಾನಗಳು ಹಾಗೂ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ 6 ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯವನ್ನು ಧರ್ಮೋತ್ಥಾನ ಟ್ರಸ್ಟ್ ಕೈಗೊಂಡಿದೆ.
ಶಿಥಿಲಗೊಂಡಿರುವ ದೇವಾಲಯಗಳ ಪುನರ್ ನಿರ್ಮಾಣ ಸಮರ್ಪಕ ರೀತಿಯಲ್ಲಿ ನಿರ್ವಹಿಸುವ ಉದ್ದೇಶದಿಂದ ಧರ್ಮೋತ್ಥಾನ ಟ್ರಸ್ಟ್ ಪುರಾತತ್ವ ಇಲಾಖೆಯ ಅಧಿಕೃತ ಸಂರಕ್ಷಣಾ ಕೈಪಿಡಿಯಲ್ಲಿ ನಮೂದಿಸಿದ ನಿಯಮಾವಳಿಗನುಗುಣವಾಗಿ ಹಿರಿಯ ತಜ್ಞರನ್ನೊಳಗೊಂಡ ಪ್ರತ್ಯೇಕ ಸಲಹಾ ಸಮಿತಿಯ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ.

ಟ್ರಸ್ಟ್ ಸಲಹಾ ಸಮಿತಿ ಸದಸ್ಯರ ಸಭೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‍ನ ಸಲಹಾ ಸಮಿತಿ ಸದಸ್ಯರ ಸಭೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.

ಸಭೆಯಲ್ಲಿ ಧರ್ಮೋತ್ಥಾನ ಟ್ರಸ್ಟ್‍ನ ಕಾರ್ಯಕ್ಷೇತ್ರದ ವಿವರಗಳನ್ನು ಅವಲೋಕಿಸಿ, ಜೀರ್ಣೋದ್ದಾರಗೊಂಡಿರುವ ಸ್ಮಾರಕಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಗಳು ಹಾಗೂ ಕಟ್ಟಡ ನಿರ್ವಹಣೆಯ ನಿಟ್ಟಿನಲ್ಲಿ ಸ್ಥಳೀಯರನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವ ಬಗ್ಗೆ ಸದಸ್ಯರಿಂದ ಸಲಹೆಗಳನ್ನು ಪಡೆಯಲಾಯಿತು.

ಧರ್ಮೋತ್ಥಾನ ಟ್ರಸ್ಟ್‍ನ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಡಿ. ಸುರೇಂದ್ರಕುಮಾರ್‍ರವರು, ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಸಿ.ಎಸ್. ಕೇದಾರ್, ಇತಿಹಾಸ ತಜ್ಞೆ ಡಾ. ಚೂಡಾಮಣಿ ನಂದಗೋಪಾಲ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ.ಜಿ. ಅಶ್ವತ್ಥನಾರಾಯಣ, ಹಿರಿಯ ಸಾಹಿತಿ ನಾಡೋಜ ಹಂ.ಪ. ನಾಗರಾಜಯ್ಯ, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ನಿವೃತ್ತ ನಿರ್ದೇಶಕ ಡಾ.ಎ.ಎಸ್. ಹಲಕಟ್ಟಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್. ರಂಗರಾಜು, ಪ್ರಾಚೀನ ದೇವಾಲಯಗಳ ಹವ್ಯಾಸಿ ಸಂಶೋದಕ ಶ್ರೀ ಕೆಂಗೇರಿ ಚಕ್ರಪಾಣಿಯವರು ಉಪಸ್ಥಿತರಿದ್ದರು.

ಟ್ರಸ್ಟ್‍ನ ನಿರ್ದೇಶಕ ಹರಿರಾಮಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಎ.ವಿ. ಶೆಟ್ಟಿ ಟ್ರಸ್ಟ್‍ನ ಪ್ರಗತಿಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.

 

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here