Wednesday 18th, May 2022
canara news

ಧರ್ಮಸ್ಥಳದಲ್ಲಿ ಯುಗಳ ಮುನಿಗಳ ಮಂಗಲ ಪ್ರವಚನ

Published On : 07 Mar 2022   |  Reported By : Rons Bantwal


ಮುನಿಗಳ ವಿಹಾರದಿಂದ ಧರ್ಮಜಾಗೃತಿ, ಧರ್ಮ ಪ್ರಭಾವನೆ

ಉಜಿರೆ: ತ್ಯಾಗದ ಪ್ರತೀಕವಾದ ಮುನಿಗಳ ವಿಹಾರದಿಂದ ಧರ್ಮಜಾಗೃತಿ ಮತ್ತು ಧರ್ಮ ಪ್ರಭಾವನೆಯೊಂದಿಗೆ ಸಾಮಾಜಿಕ ಸಂಘಟನೆಯಾಗುತ್ತದೆ. ನಿತ್ಯವೂ ಧರ್ಮದ ಪರಿಪಾಲನೆಯೊಂದಿಗೆ ಆರೋಗ್ಯಪೂರ್ಣ ಸಾತ್ವಿಕ ಸಮಾಜ ನಿರ್ಮಾಣವಾಗುತ್ತದೆ ಎಂದು ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಹೇಳಿದರು.

ಅವರು ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಾನುವಾರ ಮಂಗಲ ಪ್ರವಚನ ನೀಡಿದರು.

ಮುನಿಗಳು ನದಿಯಂತೆ ನಿರಂತರ ಚಲನೆಯಲ್ಲಿರುತ್ತಾರೆ. ದೇಹದಲ್ಲಿ ನಿರಂತರ ರಕ್ತ ಪರಿಚಲನೆ ಇರುವಂತೆ ಮುನಿಗಳು ನಿರಂತರ ವಿಹಾರ ಮಾಡುತ್ತಾ ಸಮಾಜ ಆರೋಗ್ಯಪೂರ್ಣವಾಗಿರಲು ಬೇಕಾದ ಆಧ್ಯಾತ್ಮಿಕ ಶಕ್ತಿ ಎಂಬ ಆಮ್ಲಜನಕವನ್ನು ನೀಡುತ್ತಾರೆ. ಆದರೆ ಗೃಹಸ್ಥರು ಸ್ಥಾಯಿಯಾಗಿದ್ದರೂ ಮುನಿಗಳ ಮಂಗಲ ಪ್ರವಚನದಿಂದ ಪ್ರೇರಿತರಾಗಿ ಧರ್ಮದ ಮರ್ಮವನ್ನರಿತು ಪರಿಪಾಲನೆ ಮಾಡಬೇಕು.

ಧರ್ಮಸ್ಥಳವು ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಪುಣ್ಯಭೂಮಿಯಾಗಿದೆ. ಧರ್ಮಸ್ಥಳಕ್ಕೆ ಕಷ್ಟದಿಂದ, ಸಮಸ್ಯೆಗಳಿಂದ ಅಳುತ್ತಾ ಬಂದವರು ಹೋಗುವಾಗ ನಗುತ್ತಾ ಶಾಂತಿ, ನೆಮ್ಮದಿಯಿಂದ ಹೋಗುತ್ತಾರೆ. ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುವಿರ್ಧ ದಾನಗಳು ಕಳೆದ ಎಂಟು ಶತಮಾನಗಳಿಂದ ನಿರಂತರವಾಗಿ ನಡೆಯುತ್ತಿವೆ. ದಾನ, ಧರ್ಮ ಹಾಗೂ ಸೇವಾ ಕಾರ್ಯಗಳು ಚಮತ್ಕಾರದಂತೆ ನಿತ್ಯವೂ ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸೇವೆ, ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದ್ದಾರೆ ಎಂದು ಮುನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳದಲ್ಲಿ ಶೋಷಣೆ ಇಲ್ಲ. ಎಲ್ಲರಿಗೂ ಪೋಷಣೆ ಮಾತ್ರ ಇದೆ.

ಧರ್ಮಸ್ಥಳ :ನಾಮ್ ಸೆ ನಹಿ, ಕಾಮ್ ಸೆ” ಪ್ರಸಿದ್ಧಿ ವಾಗಿದೆ. (ಹೆಸರಿನಿಂದ ಅಲ್ಲ, ಕಾರ್ಯದ ಕಾಯಕದಿಂದ ಧರ್ಮಸ್ಥಳ ಪ್ರಸಿದ್ಧವಾಗಿದೆ)

ವಿಶ್ವದ ಎಲ್ಲಾ ಊರುಗಳೂ ಧರ್ಮಸ್ಥಳವಾಗಬೇಕು. ಇಡಿ ವಿಶ್ವವೇ ಧರ್ಮಸ್ಥಳವಾಗಲಿ ಎಂದು ಮುನಿಗಳು ಹಾರೈಸಿದರು.

ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಮಂಗಲ ಪ್ರವಚನ ನೀಡಿ, ಸಕಲ ಜೀವಿಗಳೂ ಪಾಪಕರ್ಮದ ಕೊಳೆ ಕಳೆದು ಮೋಕ್ಷ ಪ್ರಾಪ್ತಿಗೆ ಅರ್ಹವಾಗಿವೆ. ಎಲ್ಲರೂ ಪುಣ್ಯದ ಫಲ ಬಯಸುತ್ತಾರೆ. ಆದರೆ ಪುಣ್ಯ ಸಂಚಯದ ಸತ್ಕಾರ್ಯಗಳನ್ನು ಮಾಡುವುದಿಲ್ಲ. ಪಾಪವನ್ನು ಯಾರೂ ಬಯಸುವುದಿಲ್ಲ. ಆದರೆ ಕೆಟ್ಟ ಕೆಲಸಗಳನ್ನು ಮಾಡಿ ಪಾಪ ಸಂಚಯ ಮಾಡುತ್ತಾರೆ. ದೇವರು, ಗುರುಗಳು ಮತ್ತು ಶಾಸ್ತ್ರದಲ್ಲಿ ನಂಬಿಕೆ ಇಟ್ಟು ಸದಾ ಸತ್ಕಾರ್ಯಗಳನ್ನು ಮಾಡಿದರೆ ಆತ್ಮಕಲ್ಯಾಣದೊಂದಿಗೆ ಮೋಕ್ಷ ಪ್ರಾಪ್ತಿಯೂ ಆಗುತ್ತದೆ ಎಂದು ಅವರು ಹೇಳಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಜೈನಧರ್ಮದ ವಿಶಿಷ್ಟ ಆಚಾರ-ವಿಚಾರಗಳಿಂದಾಗಿ ಜೈನರಿಗೆ ಸಮಾಜದಲ್ಲಿ ವಿಶೇಷ ಸ್ಥಾನ-ಮಾನ, ಗೌರವ ದೊರಕುತ್ತದೆ. ಮುನಿಗಳ ದರ್ಶನ ಮತ್ತು ಪ್ರವಚನದಿಂದ ಧರ್ಮ ಪ್ರಭಾನೆಯಾಗುತ್ತದೆ. ಶ್ರಾವಕರು-ಶ್ರಾವಕಿಯರ ಸಂಶಯ, ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ದಿಗಂಬರ ಮುನಿಗಳು ತ್ಯಾಗದ ಪ್ರತೀಕವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಬಸದಿಗಳಲ್ಲಿ ಪಂಚಕಲ್ಯಾಣ ಮಹೋತ್ಸವ ಯುಗಳ ಮುನಿಗಳ ದಿವ್ಯ ಉಪಸ್ಥಿತಿಯಲ್ಲಿ ಮತ್ತು ಮಾರ್ಗದರ್ಶನದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಧರ್ಮವನ್ನು ನಾವು ನಿರಂತರ ಧಾರಣೆ ಮಾಡಿಕೊಂಡಿರಬೇಕು. ಅಂಗಿಯಂತೆ ಬೇಕಾದಾಗ ಧರಿಸಿ, ತೆಗೆದಿಡುವುದಿಲ್ಲ ಎಂದು ಹೆಗ್ಗಡೆಯವರು ಹೇಳಿದರು.
ಹೇಮಾವತಿ ವೀ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here