ಸಾಹಿತ್ಯಗಳಿಂದ ಸಮಾಜ ಸುಧಾರಣೆ ಸಾಧ್ಯ : ಎಸ್ಕೆ ಸುಂದರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.04: ಸಾಹಿತ್ಯಗಳಿಂದ ಸಮಾಜ ಸುಧಾರಣೆ ಸಾಧ್ಯ. ಅಂತಹ ಸಾಹಿತಿಗಳೊಭ್ಭರಾದ ರವಿ ಅಂಚನ್ ಅವರ ಸಾಹಿತ್ಯ ಬದುಕು ಕಾವ್ಯದಿಂದ ಆರಂಭವಾಗಿದೆ. ಮೊಗವೀರ ಮತ್ತು ತಾಯ್ನಾಡು ಪತ್ರಿಕೆಗಳಲ್ಲಿ ಅವರ ಮೊದಲ ಕವನಗಳು ಪ್ರಕಾಶಿತ ಗೊಂಡಿದ್ದವು. ಅವರ ಯಾವುದೇ ಬರವಣಿಗೆಗಳು ಸದಾ ಸತ್ಯವನ್ನೇ ಎತ್ತಿ ಹಿಡಿಯುತ್ತವೆ. ತನ್ನ ಬರವಣಿಗೆಯಲ್ಲಿ ಧೈರ್ಯದಿಂದ ಪ್ರತಿಪಾದಿಸುತ್ತಾರೆ. ಸಂಘ ಸಂಸ್ಥೆಗಳು ತನ್ನ ಚಾರಿತ್ರೆಯನ್ನು ದಾರಿ ತಪ್ಪಿಸುವ ಸಂದರ್ಭಗಳಲ್ಲಿ ಇವರು ತನ್ನ ಲೇಖನಗಳ ಮುಖೇನ ಸತ್ಯವನ್ನು ರುಜುವಾತು ಪಡಿಸಿ ಸಾಕಷ್ಟು ನಿಷ್ಟುರ ಕಟ್ಟಿಕೊಂಡಿರುವರು. ಕಲಾವಿದನಾಗಿ, ಪತ್ರಕರ್ತನಾಗಿ ಮತ್ತು ಲೇಖಕನಾಗಿ ರವಿ ಅಂಚನ್ ನಿರಂತರ ಅಧ್ಯಾಯನ ಶೀಲತೆಯಿಂದಲೇ ಮುಂದುವರಿದಿದ್ದಾರೆ ಎಂದು ಕನ್ನಡದ ಸೇನಾನಿ, ಸಮಾಜ ಸೇವಕ ಎಸ್.ಕೆ ಸುಂದರ್ ನುಡಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿ ಅಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ ನಾಯಕ್ ಭವನದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಲೇಖಕ, ಚಿಂತಕ, ವಾಗ್ಮಿ, ಅಂಕಣಕಾರ ರವಿ ರಾ.ಅಂಚನ್ ಅವರ ಇಪ್ಪತ್ತೈದ ನೇ ಕೃತಿ `ಜ್ಯೋತಿಬಾ : ಬೆಳಕು-ಬೆರಗು' ಬಿಡುಗಡೆ ಗೊಳಿಸಿ ಎಸ್.ಕೆ ಸುಂದರ್ ಅವರು ರವಿ ಅಂಚನ್ ಅವರ ಪ್ರಾರಂಭದ ಬರಹದ ದಿನಗಳನ್ನು ನೆನಪಿಸಿ ಅವರೊಡನೆ ಹಂಚಿಕೊಂಡ ದಿನಗಳನ್ನು ಸ್ಮರಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಎರಡು ಬೃಹದಾಕಾರದ ಕೃತಿಗಳು ಬಿಡುಗಡೆ ಗೊಳಿಸಲ್ಪಟ್ಟಿದ್ದು ಬಾಗಲಕೋಟೆಯ ಪ್ರಸಿದ್ಧ ಜಾನಪದ ಮತ್ತು ಆಶುಕವಿ ಸಿದ್ಧಪ್ಪ ಸಾಬಣ್ಣ ಬಿದರಿ ರಚಿತ `ಜಾನಪದ ಜವಾರಿ-ಸಮಗ್ರ ಕಾವ್ಯ ಭಾಗ-2' ಕೃತಿಯನ್ನು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಬಿಡುಗಡೆ ಗೊಳಿಸಿದರು. ಚಂದ್ರಶೇಖರ ಪಾಲೆತ್ತಾಡಿ ಹಾಗೂ ಮುಂಬಯಿ ವಿವಿ ಕನ್ನಡ ವಿಭಾಗದ ಸಂಶೋಧನ ವಿದ್ಯಾಥಿರ್üನಿ ಸುರೇಖಾ ನಾಯ್ಕ್ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು.
ನಾಡಿನ ನಾಮಾಂಕಿತ ಪ್ರಕಾಶಕರಾದ ಸ್ವಪ್ನ ಪ್ರಕಾಶನವು ಪ್ರಕಾಶಿತ ರವಿ ಅಂಚನ್‍ರ ಬಾಳಸಂಗಾತಿ ಸ್ವರ್ಗಸ್ಥ ಶೈಲಜಾ ರವಿ ಅಂಚನ್ ಸ್ಮರಣಾರ್ಥ ಪ್ರಕಟಿಸಿ ಬಿಡುಗಡೆಗೊಳಿಸಿ ಕೃತಿ ಪರಿಚಯಿಸಿದ ಪಾಲೆತ್ತಾಡಿ ಅವರು ಮಹಾರಾಷ್ಟ್ರದಲ್ಲಿ ಶೋಷಿತ ವರ್ಗದ ಅದರಲ್ಲೂ ಶೂದ್ರ ಮತ್ತು ಶೂದ್ರತಿ ಶೂದ್ರರೂ ಹಾಗೂ ಮಹಿಳೆಯರಲ್ಲಿ ಸಮಾನತೆ ಮತ್ತು ಶಿಕ್ಷಣ ಕ್ರಾಂತಿಯ ಬೆಳಕು ಹರಿಸಿದ ಸಾಮಾಜಿಕ ಕ್ರಾಂತಿಕಾರರೇ ಜ್ಯೋತಿಭಾ ಫುಲೆ ಅವರು. ಫುಲೆ ಅವರ ಸಾಮಾಜಿಕ ಸಮತೆಯ ಹೋರಾಟದ ಅಂಶಗಳನ್ನು ತೆರೆದಿಡುವ ಕೃತಿ ಇಂದು ಕನ್ನಡ ಸರಸ್ವತ ಲೋಕಕ್ಕೆ ಅರ್ಪಣೆಗೊಂಡಿದೆ ಎಂದರು.
ಜವಾರಿ ಕೃತಿ ಪರಿಚಯಿಸಿದ ಸುರೇಖಾ, ಕನ್ನಡ ನಾಡು ಕಂಡ ಅಪರೂಪದ ಕವಿ. ಹಳಗೆ ಬಳಪ ಹಿಡಿಯದ ಹೆಗ್ಗಳಿಕೆಯ ಕವಿ. ಇವರು ನಡೆದದ್ದೆ ಕಾವ್ಯ. ಅಂತಹ ಕವಿ ಸಿದ್ಧಪ್ಪ ಸಾಬಣ್ಣ ಅವರು ಜಾನಪದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ಮಹತ್ವದ ಕವಿಯಾಗ ಬಲ್ಲರು ಎಂದು ಆಶಯ ವ್ಯಕ್ತ ಪಡಿಸಿದರು.
ಜ್ಯೋತಿ ಫುಲೆ ತಾನು ಬರೆದದ್ದು ಮಾತ್ರವಲ್ಲ ಇತರರನ್ನೂ ಬರೆಸಿದ್ದಾರೆ. ಇದಕ್ಕೆ ಬಂಡಾಯದ ಮೊದಲ ಕವಯತ್ರಿ ಸಾವಿತ್ರಿಭಾೈ ಫುಲೆ ಮಾದರಿ. ಮೊದಲ ಬಂಡಾಯದ ಲೇಖಕಿ ಮುಕ್ತ ಸಾಳ್ವೆ, ಅದೇ ರೀತಿ ಮೊದಲ ಬಂಡಾಯದ ಪ್ರಬಂಧ, ಸ್ತ್ರೀಪುರುಷ ತುಲನ ಕೃತಿ ತಾರಾಭಾೈ ಶಿಂಧೆ ಅವರಿಂದ ಬಂದಿದೆ. ಇವರು ಸಾವಿತ್ರಿಭಾೈ ಫುಲೆ ಶಿಷ್ಯೆ. ಅದೇ ರೀತಿ ಪ್ರಥಮ ಮುಸ್ಲಿಂ ಶಿಕ್ಷಕಿ ಫಾತಿಮಾ ಖಾನ್ ಅವರನ್ನು ನೀಡಿದ ಶ್ರೇಯಸ್ಸು ಫುಲೆ ದಂಪತಿಗೆ ಸಲ್ಲುತ್ತದೆ. ಅಂತಹ ಪ್ರೇರಣೆ ನನ್ನ ಈ ಕೃತಿಗೆ ಪೂರಕವಾಯಿತು ಎಂದು ರವಿ ಅಂಚನ್ ನುಡಿದರು.
ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದೆ. ವಿದ್ಯಾಲಯಗಳು ಪಾಠಪ್ರವಚನಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರಕ್ಕೂ ವಿಸ್ತಾರಗೊಂಡು ಶೈಕ್ಷಣಿಕ ಪಾಲುದಾರರಾಗಿ ಬೆಳೆಯಬೇಕು. ನಮ್ಮ ವಿಭಾಗವು ಸದ್ಯ ಬರೇ ಶೈಕ್ಷಣಿಕ ದ್ವೀಪವಾಗಿರದೆ ಜನಮುಖಿ ಆಗಿ ಸ್ಪಂದಿಸುತ್ತಿದೆ. ಇಂದಿಲ್ಲಿ ಮೂರು ಗ್ರಂಥಗಳು ಬಿಡುಗಡೆ ಗೊಂಡಿರುವುದು ಸಂತೋಷದ ಸಂಗತಿ. ನಮಗೆ ಯಾವತ್ತು ಇತಿಹಾಸದ ಪ್ರಜ್ಞೆಯ ಅಗತ್ಯವಿದೆ. ರವಿ ಅಂಚನ್ ಮುಂಬಯಿಯಲ್ಲಿ ಅರಳಿದ ಶ್ರೇಷ್ಠ ಪ್ರತಿಭೆ. ಡಾ| ಜೀವಿ ಅವರು ತಮ್ಮ ಮಹಾಪ್ರಬಂಧವನ್ನು 20 ವರ್ಷಗಳ ನಂತರ ಪ್ರಕಟಿಸುತ್ತಿದ್ದಾರೆ ಹಾಗೂ ಸಿದ್ಧಾಪ್ಪ ಬಿದರಿ ನಮ್ಮ ಜೊತೆಗಿರುವ ಅರುಕ್ ಕವಿಯ ಕೊನೆಯ ಕೊಂಡಿಯಾಗಿದ್ದಾರೆ ಎಂದರು.
ಇದೇ ಶುಭಾವಸರದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗದ ವಿದ್ಯಾಥಿರ್üಗಳಾಗಿದ್ದು ತಮ್ಮ ಸಂಪ್ರಬಂಧಕ್ಕೆ ಎಂಫಿಲ್ ಪದವಿ ಪುರಸ್ಕೃತ ಸುಗಂಥಾ ಸತ್ಯಮೂರ್ತಿ, ಆರ್.ಎಂ ಗಣಚಾರಿ ಅವರಿಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಪರವಾಗಿ ಸ್ವರ್ಣಪದಕವನ್ನಿತ್ತು ಶಾಲು ಹೊದಿಸಿ, ಕೃತಿ ನೀದಿ ಸನ್ಮಾನಿಸಿ ಅಭಿನಂದಿಸಲಾಯಿತು. ಅಂತೆಯೇ ಕೃತಿಕಾರರಿಗೂ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶೈಲಜಾ ರವಿ ಅಂಚನ್ ಫೌಡೇಶನ್‍ನ ಡಾ| ಅಕ್ಷರಿ ರ.ಅಂಚನ್, ಶಕುಂತಳಾ ಆರ್.ಪ್ರಭು, ಪಯ್ಯಾರು ರಮೇಶ್ ಶೆಟ್ಟಿ, ಡಾ| ವಿಶ್ವನಾಥ್ ಕಾರ್ನಾಡ್, ರಂಗ ಎಸ್.ಪೂಜಾರಿ, ಮದುಸೂಧನ ರಾವ್, ಸಿಎ| ನವೀನ್‍ಚಂದ್ರ ಸುವರ್ಣ ಗೋರೆಗಾಂ, ಪೇತ್ರಿ ವಿಶ್ವನಾಥ್ ಶೆಟ್ಟಿ, ತೋನ್ಸೆ ಸಂಜೀವ ಪೂಜಾರಿ, ಚಿತ್ರಾಪು ಕೆ.ಎಂ ಕೋಟ್ಯಾನ್, ಸದಾನಂದ ಅಂಚನ್ ಥಾಣೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಹೆಸರಾಂತ ಕಲಾವಿದ, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿದ್ಯಾಥಿ೯ ಜಯ್ ಸಿ.ಸಾಲ್ಯಾನ್ ರೇಖಾಚಿತ್ರವಾಗಿ ರಚಿಸಿದ ಭಾವಚಿತ್ರಗಳನ್ನು ರಮ್ಯಾ ವಸಿಷ್ಠ ಮತ್ತು ಹಿರಿಯ ಲೇಖಕ ಡಾ| ಕೆ.ಎಸ್ ಶರ್ಮಾ ಅವರಿಗೆ ಹಸ್ತಾಂತರಿಸಿದರು. ಡಾ| ರಮಾ ಉಡುಪ ಸುಖಾಗಮನ ಬಯಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರ್ವಾಹಿಸಿದರು. ಸುಶೀಲಾ ಎಸ್.ದೇವಾಡಿಗ ಧನ್ಯವದಿಸಿದರು.