Thursday 8th, May 2025
canara news

ಉಗ್ರ ಕೃತ್ಯ ಶಂಕೆ: ಮೂವರ ಮೇಲಿನ ಆರೋಪ ಸಾಬೀತು

Published On : 11 Apr 2017   |  Reported By : Canaranews Network


ಮಂಗಳೂರು: ೯ ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ಶಂಕಿತ ಉಗ್ರಗಾಮಿ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿದ 7 ಮಂದಿ ಆರೋಪಿಗಳ ಪೈಕಿ ಮೂವರ ಅಪರಾಧ ಸಾಬೀತಾಗಿದೆ ಹಾಗೂ ನಾಲ್ವರು ಬಿಡುಗಡೆಗೊಂಡಿದ್ದಾರೆ.1ನೇ ಆರೋಪಿ ಪಾಂಡೇಶ್ವರ ಸುಭಾಸ್ನಗರದ ಸೈಯದ್ ಮೊಹಮದ್ ನೌಶಾದ್ (25), 2ನೇ ಆರೋಪಿ ಹಳೆಯಂಗಡಿಯ ಅಹ್ಮದ್ ಬಾವಾ ಅಬೂಬಕರ್ (33) ಮತ್ತು 6ನೇ ಆರೋಪಿ ಪಡುಬಿದ್ರಿ ಉಚ್ಚಿಲದ ಫಕೀರ್ ಅಹ್ಮದ್ ಬಾವಾ (46) ಅಪರಾಧ ಸಾಬೀತಾದವರು.3ನೇ ಆರೋಪಿ ಮಹಮದ್ ಅಲಿ, 4ನೇ ಆರೋಪಿ ಜಾವೇದ್ ಅಲಿ, 5ನೇ ಆರೋಪಿ ಮಹಮದ್ ರಫೀಕ್ ಮತ್ತು 13ನೇ ಆರೋಪಿ ಶಬೀರ್ ಭಟ್ಕಳ ಯಾನೆ ಶಬೀರ್ ಮೌಲವಿ ಆರೋಪ ಮುಕ್ತಗೊಂಡವರು. ಸಾಕ್ಷಾಧಾರಗಳ ಕೊರತೆಯಿಂದ ಇವರನ್ನು ಖುಲಾಸೆಗೊಳಿಸಲಾಗಿದೆ. ಆರೋಪ ಸಾಬೀತಾದ ಮೂವರಿಗೆ ಶಿಕ್ಷೆಯ ಪ್ರಮಾಣ ಎ. 12ರಂದು ಪ್ರಕಟವಾಗಲಿದೆ.

ಘಟನೆಯ ಹಿನ್ನೆಲೆ
ದೇಶದ ವಿವಿಧೆಡೆ ನಡೆದ ಬಾಂಬ್ ಸ್ಫೋಟದಂತಹ ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ 2008 ಅಕ್ಟೋಬರ್ 3ರಂದು ಮುಂಜಾನೆ ಮಂಗಳೂರು ಮತ್ತು ಮುಂಬಯಿ ಪೊಲೀಸರು ಕರ್ನಾಟಕ ನಕ್ಸಲ್ ನಿಗ್ರಹ ಪಡೆಯ ಸಹಕಾರದಲ್ಲಿ ಮುಂಜಾನೆ ವೇಳೆಗೆ ದಾಳಿ ಕಾರ್ಯಾಚರಣೆ ನಡೆಸಿದ್ದರು. ಪ್ರಥಮವಾಗಿ ಉಳ್ಳಾಲದ ಮುಕ್ಕಚ್ಚೇರಿಯ ಮಹಮದ್ ಅಲಿ ಮತ್ತು ಅವರ ಪುತ್ರ ಜಾವೇದ್ ಅಲಿ ಅವರ ಮನೆಗೆ ದಾಳಿ ಮಾಡಿ ಅವರಿಬ್ಬರನ್ನು ಬಂಧಿಸಿದ್ದರು.ಬಳಿಕ ಮಹಮದ್ ಅಲಿ ಮತ್ತು ಜಾವೇದ್ ಅಲಿ ಅವರ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿರುವ ರಿಯಾಜ್ ಭಟ್ಕಳನ ಬಾಡಿಗೆ ಮನೆಗೆ ದಾಳಿ ನಡೆಸಿದ್ದರು. ಆದರೆ ಅಷ್ಟರಲ್ಲಿ ಮಾಹಿತಿ ಲಭಿಸಿದ್ದರಿಂದ ರಿಯಾಜ್ ಭಟ್ಕಳ ಅಲ್ಲಿಂದ ತಪ್ಪಿಸಿಕೊಂಡಿದ್ದನು. ಅನಂತರ ಮಂಗಳೂರಿನ ಪಾಂಡೇಶ್ವರದ ಸುಭಾಸ್ ನಗರ ಹಾಗೂ ಇತರ ಕಡೆಗೆ ದಾಳಿ ಮಾಡಿ ಫಕೀರ್ ಅಹ್ಮದ್, ಶಬೀರ್ ಮೌಲಾನಾ, ಮಹಮದ್ ರಫೀಕ್, ಅಹ್ಮದ್ ಬಾವಾ ಯಾನೆ ಅಬೂಬಕರ್ ಮತ್ತು ಸೈಯದ್ ಮಹಮದ್ನನ್ನು ಬಂಧಿಸಿದ್ದರು. ಬಂಧಿತ 7 ಮಂದಿಯಲ್ಲಿ 4 ಮಂದಿ ಕ್ರಮೇಣ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಶಬೀರ್ನ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಸುಳಿವು:
ದಾಳಿ ಕಾರ್ಯಾಚರಣೆ ಸಂದರ್ಭದಲ್ಲಿ ಮಹಮ್ಮದ್ ಅಲಿ, ಆತನ ಪುತ್ರ ಜಾವೇದ್ ಅಲಿ, ನೌಶಾದ್ ಮತ್ತು ಅಹ್ಮದ್ ಬಾವಾ ಅವರಿಂದ 5 ಬಾಂಬ್, 11.39 ಲಕ್ಷ ರೂ. ನಗದು, 1 ಬೈಕ್, ಗುಜರಾತ್ನ ನಕ್ಷೆ, 21 ಮೊಬೈಲ್ ಫೋನ್ ಸೆಟ್, ಅನೇಕ ಸಿಮ್ ಕಾರ್ಡ್ಗಳು, ಜೆಹಾದ್ ಸಾಹಿತ್ಯ, ಲಾಪ್ಟಾಪ್, ಹಾರ್ಡ್ ಡಿಸ್ಕ್, 4 ಪಾಸ್ಪೋರ್ಟ್ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕಾರ್ಯಾಚರಣೆಯು ಮಂಗಳೂರಿನಲ್ಲಿ ಶಂಕಿತ ಉಗ್ರರ ನೆಲೆ ಇತ್ತೆಂಬುದನ್ನು ಬಹಿರಂಗಪಡಿಸಿತ್ತು. ಮಂಗಳೂರು ಮತ್ತು ಸುತ್ತಮುತ್ತ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಸುಳಿವು ಲಭ್ಯವಾಗಿತ್ತು. ಇಂಡಿಯನ್ ಮುಜಾಹಿದೀನ್ನ ಸಹ ಸ್ಥಾಪಕ ರಿಯಾಜ್ ಭಟ್ಕಳ ಮತ್ತು ಇತರ ಶಂಕಿತ ಉಗ್ರರ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸಿತ್ತು. ಆಗ ಪಶ್ಚಿಮ ವಲಯದ ಐಜಿಪಿ ಆಗಿದ್ದ ಎ.ಎಂ. ಪ್ರಸಾದ್ ಮಾರ್ಗದರ್ಶನದಲ್ಲಿ ದ.ಕ. ಜಿಲ್ಲಾ ಎಸ್ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ನೂರಕ್ಕೂ ಮಿಕ್ಕಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಡಿಸಿಐಬಿ ಇನ್ಸ್ಪೆಕ್ಟರ್ ಆಗಿದ್ದ ಡಾ| ಎಚ್.ಎನ್. ವೆಂಕಟೇಶ ಪ್ರಸನ್ನ ಪ್ರಕರಣ ದಾಖಲಿಸಿದ್ದರು. ಆಗ ಉಳ್ಳಾಲ ಪಿಎಸ್ಐ ಆಗಿದ್ದ ಶಿವ ಪ್ರಕಾಶ್ ಪ್ರಾಥಮಿಕ ತನಿಖೆಯನ್ನು ಹಾಗೂ ಅನಂತರದ ತನಿಖೆಯನ್ನು ಪಣಂಬೂರು ಡಿವೈಎಸ್ಪಿ ಆಗಿದ್ದ ಜಯಂತ್ ವಿ. ಶೆಟ್ಟಿ ಅವರು ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ನಾರಾಯಣ ಶೇರಿಗಾರ್ ವಾದ ಮಂಡಿಸಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here