Wednesday 8th, May 2024
canara news

ಬಂಟ್ವಾಳದಲ್ಲಿ ಸಿಡಿಲಬ್ಬರಕ್ಕೆ ಮೂವರು ಸಾವು

Published On : 13 Apr 2017   |  Reported By : Canaranews Network


ಮಂಗಳೂರು: ಸ್ನಾನ ಮಾಡಲೆಂದು ನೇತ್ರಾವತಿ ನದಿಗೆ ಇಳಿದಿದ್ದ ಬಾಲಕಿ ಸಹಿತ ಮೂವರು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮ ಜಕ್ರಿಬೆಟ್ಟಿನಲ್ಲಿ ಬುಧವಾರ ಅಪರಾಹ್ನ ಸಂಭವಿಸಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕು ದಾಗೇರ ಹಳ್ಳಿ ನಿವಾಸಿ ಜಯರಾಜ ಅವರ ಪತ್ನಿ ಜಯಮ್ಮ (28), ತಿಮ್ಮಯ್ಯ ಅವರ ಪತ್ನಿ ಕಣಕಮ್ಮ (28) ಮತ್ತು ಪದ್ಮಾವತಿ ಅವರ ಪುತ್ರಿ ಶಶಿಕಲಾ (6) ಮೃತಪಟ್ಟವರು. ಕನಕಮ್ಮ ಅವರ 2 ವರ್ಷದ ಮಗು ನಿಖೀತಾ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ: ನದಿಯಲ್ಲಿ ಸಣ್ಣದಾಗಿ ಹರಿದು ಬರುತ್ತಿದ್ದ ನದಿಯ ಕವಲಿನಲ್ಲಿ ಆರು ಮಂದಿ ಬಟ್ಟೆ ತೊಳೆದು ಸ್ನಾನ ಮಾಡುತ್ತಿದ್ದ ಸಂದರ್ಭ ಏಕಾಏಕಿ ಸಿಡಿಲು ಬಡಿದಿತ್ತು. ಈ ಸಂದರ್ಭ ಹೇಳಿಕೊಳ್ಳುವಂತಹ ಮೋಡ ಅಥವಾ ಮಳೆ ವಾತಾವರಣ ಇರಲಿಲ್ಲ. ಆದರೂ ಅಚಾನಕ್ ಸಿಡಿಲು ಬಡಿದಿರುವುದು ಹೇಗೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಸಿಡಿಲು ಬಡಿದ ಸ್ಥಳವು ಕಲ್ಲು ಬಂಡೆಗಳಿಂದ ಕೂಡಿದ್ದು ಒಡೆದ ಕಲ್ಲುಗಳನ್ನು ಒಟ್ಟಾಗಿಸಿ ನೀರು ನಿಲ್ಲುವಂತೆ ಮಾಡಲಾಗಿತ್ತು. ಸ್ಥಳದಲ್ಲಿ ಸ್ನಾನಕ್ಕೆ ಇಳಿಯುವ ಮುನ್ನ ಮಹಿಳೆಯರು ತೆಗೆದಿರಿಸಿದ್ದ ಬಟ್ಟೆಬರೆ, ಒಗೆದಿಟ್ಟಿದ್ದ ವಸ್ತ್ರಗಳು ಕಲ್ಲಿನ ಮೇಲೆ ದುರ್ಘಟನೆಗೆ ಸಾಕ್ಷಿ ಎಂಬಂತೆ ಅನಾಥವಾಗಿದ್ದವು.

ವಲಸೆ ಕಾರ್ಮಿಕರು: ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಕಾಮಗಾರಿ ಜಕ್ರಿಬೆಟ್ಟಿನಲ್ಲಿ ನಡೆಯುತ್ತಿದ್ದು ತುಮಕೂರು ಜಿಲ್ಲೆಯಿಂದ ಬಂದಿದ್ದ ಸುಮಾರು 20 ಮಂದಿಯ ಕೂಲಿ ಕಾರ್ಮಿಕರ ಕುಟುಂಬ ಪಂಪಿಂಗ್ ಯಾರ್ಡ್ನ ಸನಿಹವೇ ವಾಸ್ತವ್ಯವಿತ್ತು. ಅವರು ಮೇಸ್ತ್ರಿಯೊಬ್ಬನ ಮೂಲಕ ಇಲ್ಲಿಗೆ ಬಂದಿದ್ದು ವಾರದ ಹಿಂದೆ ಊರಿನ ಹಬ್ಬಕ್ಕೆ ಹೋದವರು ಐದು ದಿನದ ಹಿಂದೆಯಷ್ಟೇ ಕೆಲಸಕ್ಕೆ ಮರಳಿದ್ದರು.

1 ಲಕ್ಷ ರೂ. ಪರಿಹಾರ
ಸಿಡಿಲು ಬಡಿದು ಆಗುವ ದುರ್ಮರಣವು ಪ್ರಾಕೃತಿಕ ವಿಕೋಪದಡಿ ಬರುವುದರಿಂದ ಸರಕಾರದಿಂದ ತಲಾ 1 ಲಕ್ಷ ರೂ. ಪರಿಹಾರ ಲಭಿಸಲಿದೆ. ಆದರೆ ಪೊಲೀಸ್ ವರದಿ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ರವೀಶ್ ಸಿ.ಆರ್., ವೃತ್ತನಿರೀಕ್ಷಕ ಬಿ.ಕೆ. ಮಂಜಯ್ಯ, ನಗರ ಠಾಣಾಧಿಕಾರಿ ರಕ್ಷಿತ್ ಗೌಡ, ಸಂಚಾರ ಠಾಣಾಧಿಕಾರಿ ಚಂದ್ರಶೇಖರಯ್ಯ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್ ಶೋಭಲತಾ ಸ್ಥಳದಲ್ಲಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here